ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಕೋಟಾ: ಭಂಡಾರದಲ್ಲಿ ಮಿಂದೆದ್ದ ಭಕ್ತರು

ಭಂಡಾರದೊಡೆಯ ಅಮೋಘಸಿದ್ದನ ಅದ್ಧೂರಿ ಜಾತ್ರೆ
Published 12 ಡಿಸೆಂಬರ್ 2023, 15:26 IST
Last Updated 12 ಡಿಸೆಂಬರ್ 2023, 15:26 IST
ಅಕ್ಷರ ಗಾತ್ರ

ತಿಕೋಟಾ: ತಾಲ್ಲೂಕಿನ ಜಾಲಗೇರಿ ಹಾಗೂ ಅರಕೇರಿ ನಡುವಿನ ಮುಮ್ಮೆಟ್ಟಿ ಗುಡ್ಡದಲ್ಲಿರುವ ಅಮೋಘಸಿದ್ದೇಶ್ವರನ ಜಾತ್ರೆಯು, ಛಟ್ಟಿ ಅಮಾವಾಸ್ಯೆ ದಿನದಂದು ಅದ್ಧೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಭಂಡಾರದಲ್ಲಿ ಮಿಂದೆದ್ದು, ದೇವರ ದರ್ಶನ ಪಡೆದು ಪಾವನರಾದರು.

ಎಂಟು ನೂರು ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರಕ್ಕೆ ಅಪಾರ ಸಂಖ್ಯೆಯ ಭಕ್ತರು ಪಾದಯಾತ್ರೆ, ಎತ್ತಿನಗಾಡಿ, ಟ್ರ್ಯಾಕ್ಟರ್‌ ಹಾಗೂ ಇತರೆ ವಾಹನಗಳ ಮೂಲಕ ಆಗಮಿಸುತ್ತಾರೆ. ಕರ್ನಾಟಕ ಅಷ್ಟೇ ಅಲ್ಲದೇ, ಮಹಾರಾಷ್ಯ, ತೆಲಂಗಾಣ, ಆಂಧ್ರಪ್ರದೇಶದಿಂದಲೂ ಭಕ್ತರು ಆಗಮಿಸಿದ್ದರು.

ಅದ್ಧೂರಿ ಪಲ್ಲಕ್ಕಿ ಭೇಟಿ: ನೂರಾರು ಸಿದ್ದರ (ಅಮೋಘಸಿದ್ದ ದೇವರ ವಂಶಾವಳಿಯ ದೇವರು) ಪಲ್ಲಕ್ಕಿಗಳ ಸಮಾಗಮ ನೋಡುಗರ ಕಣ್ಮನ ಸೆಳೆಯಿತು.

ಬಂದ ಭಕ್ತರು ಭಂಡಾರ ಎರಚಿ ಪಲ್ಲಕಿ ಭೇಟಿಯ ನೋಟ ಕಣ್ತುಂಬಿಕೊಂಡರು. ಸುಮಾರು ಎರಡು ಟನ್‌ ನಷ್ಟು ಭಂಡಾರ ಅರ್ಪಿಸಿದ್ದರಿಂದ ನೂರಾರು ಎಕರೆ ಪ್ರದೇಶ ಭಂಡಾರಮಯವಾಗಿತ್ತು. ದೇವರ ಸ್ಪರ್ಶದ ಪ್ರಸಾದ ರೂಪದ ಭಂಡಾರವನ್ನು ಭಕ್ತರು ಮನೆಗೆ ಒಯ್ಯುತ್ತಾರೆ. ರೈತರು ತಮ್ಮ ತೋಟದ ಬೆಳೆಗಳಿಗೆ, ಕೃಷಿ ಹೊಂಡಕ್ಕೆ, ಸಾಕು ಪ್ರಾಣಿಗಳಿಗೆ ಹಚ್ಚುತ್ತಾರೆ. ಈ ಭಂಡಾರದಿಂದ ಉತ್ತಮ ಆರೋಗ್ಯ, ಸಂಪತ್ತು ದೊರೆಯುವುದು ಎಂಬ ನಂಬಿಕೆ ಭಕ್ತರಲ್ಲಿ ಇದೆ.

ಇಡೀ ರಾತ್ರಿ ಜಾಗರಣೆ: ಜಾತ್ರೆ ಅಂಗವಾಗಿ ಜಾಗರಣೆಗಾಗಿ ದೇವರ ನಾಟಕ, ಡೊಳ್ಳಿನ ಹಾಡು ಇತರೆ ಮನರಂಜನೆ ಕಾರ್ಯಕ್ರಮಗಳು ಇರುವುದರಿಂದ ಭಕ್ತರು ಇಡೀ ರಾತ್ರಿ ಭಕ್ತಿಯ ಭಾವದಲ್ಲಿ ತೇಲಿ ಜಾಗರಣೆ ಮಾಡುತ್ತಾರೆ.

ಅನ್ನಪ್ರಸಾದ: ದಾರಿಯುದ್ದಕ್ಕೂ ಬರುವ ಭಕ್ತರಿಗೆ ಅನ್ನದಾಸೋಹ, ಚಹಾ, ವೈದ್ಯಕೀಯ ತಪಾಸಣೆ, ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸ್ಥಳೀಯ ಅರಕೇರಿ ಗ್ರಾಮದ ಸರ್ಕಾರಿ ನೌಕರರು ಸೇರಿ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದೇವೆ ಎಂದು ಅಶೋಕ ಚನಬಸಗೋಳ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮಕ್ಕಳ ಆಟಿಕೆ ಸಾಮಾನು, ತೊಟ್ಟಿಲು ಆಟ, ಟ್ರೇನ್, ಜಂಪಿಂಗ್, ಬೈಕ್‌ ಓಡಿಸುವುದು ಸೇರಿದಂತೆ ವಿವಿಧ ಆಟಿಕೆಗಳು ಹಾಗೂ ಆಟಿಕೆ ಸಾಮಾನುಗಳು ಮಕ್ಕಳ ಕಣ್ಮನ ಸೆಳೆದವು. 

ಅಮೋಘಸಿದ್ದೇಶ್ವರನ ಜಾತ್ರೆಯಲ್ಲಿ ನೂರಾರು ಸಿದ್ದರ ಪಲ್ಲಕ್ಕಿಗಳ ಸಮಾಗಮ ನೋಡುಗರ ಕಣ್ಮನ ಸೆಳೆಯಿತು  -ಪ್ರಜಾವಾಣಿ ಚಿತ್ರ:ಆನಂದ ರಾಠೋಡ
ಅಮೋಘಸಿದ್ದೇಶ್ವರನ ಜಾತ್ರೆಯಲ್ಲಿ ನೂರಾರು ಸಿದ್ದರ ಪಲ್ಲಕ್ಕಿಗಳ ಸಮಾಗಮ ನೋಡುಗರ ಕಣ್ಮನ ಸೆಳೆಯಿತು  -ಪ್ರಜಾವಾಣಿ ಚಿತ್ರ:ಆನಂದ ರಾಠೋಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT