ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಲೀಪ್ ಟ್ರೋಫಿ: ಭಾರತ ಬಿ ತಂಡದ ಜಯಭೇರಿ

ದುಲೀಪ್ ಟ್ರೋಫಿ: ಯಶ್ ದಾಳಿ, ಆಕಾಶ್‌ ದೀಪ್ ಆಲ್‌ರೌಂಡ್ ಆಟ, ರಾಹುಲ್ ಅರ್ಧಶತಕ
Published : 8 ಸೆಪ್ಟೆಂಬರ್ 2024, 23:07 IST
Last Updated : 8 ಸೆಪ್ಟೆಂಬರ್ 2024, 23:07 IST
ಫಾಲೋ ಮಾಡಿ
Comments

ಬೆಂಗಳೂರು: ಕನ್ನಡಿಗ ಕೆ.ಎಲ್. ರಾಹುಲ್ ತವರಿನಂಗಳದಲ್ಲಿ ತಾಳ್ಮೆಯ ಅರ್ಧಶತಕ ಗಳಿಸಿದರು. ಆದರೆ ಭಾರತ ಎ ತಂಡವು ಬಿ ತಂಡದ ಎದುರು ಜಯಿಸಲು ಅವರ ಹೋರಾಟ ಸಾಕಾಗಲಿಲ್ಲ. ಅವರಿಗೆ ತಮ್ಮ ಸಹಆಟಗಾರರಿಂದ ತಕ್ಕ ಬೆಂಬಲವೂ ಲಭಿಸಲಿಲ್ಲ. 

ಇದರಿಂದಾಗಿ ಭಾರತ ಎ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ 76 ರನ್‌ಗಳಿಂದ ಪರಾಭವಗೊಂಡಿತು. ಪಂದ್ಯದ ಕೊನೆಯ ದಿನವಾದ ಭಾನುವಾರ 275 ರನ್‌ಗಳ ಗುರಿ ಬೆನ್ನತ್ತಿದ್ದ ಎ ತಂಡವನ್ನು ಎಡಗೈ ವೇಗಿ ದಯಾಳ್ (50ಕ್ಕೆ3) 198 ರನ್‌ಗಳಿಗೆ ನಿಯಂತ್ರಿಸಿದರು. ದಯಾಳ್ ಅವರಿಗೆ ಮುಕೇಶ್ ಕುಮಾರ್ (50ಕ್ಕೆ2) ಮತ್ತು ನವದೀಪ್ ಸೈನಿ (41ಕ್ಕೆ2) ಉತ್ತಮ ಜೊತೆ ನೀಡಿದರು. 

ಎ ತಂಡದ ಇನಿಂಗ್ಸ್‌ನಲ್ಲಿ ರಾಹುಲ್ (57; 121ಎ, 4X7) ಅವರು ಗರಿಷ್ಠ ವೈಯಕ್ತಿಕ ಸ್ಕೋರರ್ ಆದರು. ಅವರನ್ನು ಬಿಟ್ಟರೆ ಕೊನೆಯ ಹಂತದಲ್ಲಿ ಆಕಾಶ್ ದೀಪ್ (43; 42ಎ, 4X3, 6X4) ಅಬ್ಬರಿಸಿದರು. ಟಿ20 ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಬೀಸಿದ ಅವರು ಮೈದಾನದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿದರು. 40ನೇ ಓವರ್‌ನಲ್ಲಿ ರಾಹುಲ್ ಔಟಾದ ನಂತರವೂ ಆಕಾಶ್ ಭರವಸೆಯ ಆಟವಾಡಿದರು. ಅರ್ಧಶತಕದತ್ತ ಸಾಗಿದ್ದ ಅವರನ್ನು ಮುಷೀರ್ ಖಾನ್ ರನ್‌ಔಟ್ ಮಾಡಿದರು. ಇದರೊಂದಿಗೆ ತಂಡದ ಇನಿಂಗ್ಸ್‌ಗೆ ತೆರೆ ಬಿತ್ತು. 

ಪಂದ್ಯದ ಮೊದಲ ದಿನ ಬ್ಯಾಟಿಂಗ್ ಆರಂಭಿಸಿದ್ದ ಬಿ ತಂಡವು 94 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಆ ಹಂತದಲ್ಲಿ ಮುಷೀರ್ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಅವರೊಂದಿಗೆ ನವದೀಪ್ ಸೈನಿ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಇದರಿಂದಾಗಿ ತಂಡವು ಉತ್ತಮ ಮೊತ್ತ ಗಳಿಸಿತ್ತು. ನವದೀಪ್ ಬೌಲಿಂಗ್‌ನಲ್ಲಿಯೂ ಮೆರೆದಾಡಿದ್ದರು. 

ಆದರೆ ಮೊದಲ ಇನಿಂಗ್ಸ್‌ನಲ್ಲಿ ಎ ತಂಡವು 90 ರನ್‌ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ (61; 47ಎ ) ಮತ್ತು ಸರ್ಫರಾಜ್ ಖಾನ್ (46; 36ಎ) ಅವರ ಬ್ಯಾಟಿಂಗ್ ಬಲದಿಂದ ಬಿ ತಂಡವು 184 ರನ್ ಗಳಿಸಿತು. ಎ ತಂಡದ ವೇಗಿ ಆಕಾಶದೀಪ್ 5 ವಿಕೆಟ್ ಗಳಿಸಿದರು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಬಿ: 116 ಓವರ್‌ಗಳಲ್ಲಿ 321. ಭಾರತ ಎ: 72.4 ಓವರ್‌ಗಳಲ್ಲಿ 231. ಎರಡನೇ ಇನಿಂಗ್ಸ್: ಭಾರತ ಬಿ ತಂಡ: 42 ಓವರ್‌ಗಳಲ್ಲಿ 184 (ಸರ್ಫರಾಜ್ ಖಾನ್ 46, ರಿಷಭ್ ಪಂತ್ 61, ನಿತೀಶ್ ರೆಡ್ಡಿ 19, ಖಲೀಲ್ ಅಹಮದ್ 69ಕ್ಕೆ3, ಆಕಾಶದೀಪ್ 56ಕ್ಕೆ5) ಭಾರತ ಎ ತಂಡ: 53 ಓವರ್‌ಗಳಲ್ಲಿ 198 (ಶುಭಮನ್ ಗಿಲ್ 21, ರಿಯಾನ್ ಪರಾಗ್ 31, ಕೆ.ಎಲ್. ರಾಹುಲ್ 57, ಆಕಾಶ್ ದೀಪ್ 43, ಮುಕೇಶ್ ಕುಮಾರ್ 50ಕ್ಕೆ2, ಯಶ್ ದಯಾಳ್ 50ಕ್ಕೆ3, ನವದೀಪ್ ಸೈನಿ 41ಕ್ಕೆ2) ಫಲಿತಾಂಶ: ಭಾರತ ಬಿ ತಂಡಕ್ಕೆ 76 ರನ್‌ಗಳ ಜಯ. ಪಂದ್ಯದ ಆಟಗಾರ: ಮುಷೀರ್ ಖಾನ್. 

ಮಾನವ್‌ ಸುತಾರ್‌ಗೆ 7 ವಿಕೆಟ್: ಸಿ ತಂಡ ಜಯಭೇರಿ

ಅನಂತಪುರ (ಪಿಟಿಐ): ಎಡಗೈ ಸ್ಪಿನ್ನರ್ ಮಾನವ್ ಸುತಾರ್ (49ಕ್ಕೆ7) ಅವರ ಬೌಲಿಂಗ್ ನೆರವಿನಿಂದ ಭಾರತ ಸಿ ತಂಡವು ಭಾನುವಾರ ಇಲ್ಲಿ ನಡೆದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಭಾರತ ಡಿ ವಿರುದ್ಧ 4 ವಿಕೆಟ್‌ಗಳಿಂದ ಜಯಿಸಿತು. 232 ರನ್‌ಗಳ ಗುರಿ ಬೆನ್ನಟ್ಟಿದ ಸಿ ತಂಡವು 61 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 233 ರನ್ ಗಳಿಸಿ ಗೆದ್ದಿತು. ನಾಯಕ ಋತುರಾಜ್ ಗಾಯಕವಾಡ (46 ರನ್) ಹಾಗೂ ಆರ್ಯನ್ ಜುಯಾಲ್ (47 ರನ್) ತಂಡದ ಜಯವನ್ನು ಸುಗಮಗೊಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಡಿ: 48.3 ಓವರ್‌ಗಳಲ್ಲಿ 164. ಭಾರತ ಸಿ: 62.2 ಓವರ್‌ಗಳಲ್ಲಿ 168. ಎರಡನೇ ಇನಿಂಗ್ಸ್: ಭಾರತ ಡಿ: 58.1 ಓವರ್‌ಗಳಲ್ಲಿ 236 (ಶ್ರೇಯಸ್ ಅಯ್ಯರ್ 54 ದೇವದತ್ತ ಪಡಿಕ್ಕಲ್ 56 ರಿಕಿ ಭುಯ್ 44 ಅಕ್ಷರ್ ಪಟೇಲ್ 28 ವೈಶಾಖ ವಿಜಯಕುಮಾರ್ 61ಕ್ಕೆ2 ಮಾನವ್ ಸುತಾರ್ 49ಕ್ಕೆ7) ಭಾರತ ಸಿ: 61 ಓವರ್‌ಗಳಲ್ಲಿ 6ಕ್ಕೆ233 (ಋತುರಾಜ್ ಗಾಯಕವಾಡ 46 ಸಾಯಿ ಸುದರ್ಶನ್ 22 ಆರ್ಯನ್ ಜುಯಾಲ್ 47 ರಜತ್ ಪಾಟೀದಾರ್ 44 ಅಭಿಷೇಕ್ ಪೊರೆಲ್ ಔಟಾಗದೆ 35 ಸಾರಾಂಶ್ ಜೈನ್ 92ಕ್ಕೆ4) ಫಲಿತಾಂಶ: ಭಾರತ ಸಿ ತಂಡಕ್ಕೆ 4 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ಮಾನವ್ ಸುತಾರ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT