ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಮಿತಿ ಮೀರಿದ ಆಟೋ ರಿಕ್ಷಾ ಹಾವಳಿ

ಪರ್ಮಿಟ್‌ ಇರುವುದು ಆರು ಸಾವಿರ; ಸಂಚರಿಸುತ್ತಿರುವುದು ಒಂಬತ್ತು ಸಾವಿರ!
Published 24 ಜೂನ್ 2024, 4:52 IST
Last Updated 24 ಜೂನ್ 2024, 4:52 IST
ಅಕ್ಷರ ಗಾತ್ರ

ವಿಜಯಪುರ: ದಿನದಿಂದ ದಿನಕ್ಕೆ ನಾಲ್ಕು ದಿಕ್ಕುಗಳಿಗೂ ವಿಸ್ತರಿಸುತ್ತಿರುವ ವಿಜಯಪುರ ನಗರದ ಜನ ಒಂದೆಡೆಯಿಂದ ಇನ್ನೊಂದೆಡೆಗೆ ತೆರಳಲು ಬಸ್‌, ಆಟೊ ರಿಕ್ಷಾ ಅವಲಂಬನೆ ಅಧಿಕವಾಗಿದೆ.

ಅನುಕೂಲ ಇರುವವರು ಬೈಕು, ಸ್ಕೂಟಿ, ಕಾರು ಬಳಸುತ್ತಿದ್ದಾರೆ. ಆದರೆ, ಶಾಲೆ, ಕಾಲೇಜು ವಿದ್ಯಾರ್ಥಿಗಳು, ಕೂಲಿಕೆಲಸಕ್ಕೆ ತೆರಳುವವರು, ಮಹಿಳೆಯರು ಸೇರಿದಂತೆ ಅನೇಕರು ಆಟೊ ರಿಕ್ಷಾ, ಟಂಟಂ, ನಗರ ಸಾರಿಗೆ ಬಸ್‌ಗಳನ್ನು ಆಧರಿಸಿದ್ದಾರೆ. 

ಸಾರಿಗೆ ಬಸ್ಸುಗಳು ನಗರದ ಎಲ್ಲ ಕಡೆಗೂ ಲಭ್ಯವಿಲ್ಲ. ಅಲ್ಲದೇ, ಎಲ್ಲ ಸಮಯಕ್ಕೂ ಸಂಚರಿಸುತ್ತಿಲ್ಲ. ಪರಿಣಾಮ ಎಲ್ಲ ಸಮಯಕ್ಕೂ, ಎಲ್ಲೆಡೆಗೂ ತೆರಳುವ ಆಟೋ ರಿಕ್ಷಾಗಳು ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಒದಗಿಸಿವೆ. ಜೊತೆ ಜೊತೆಗೆ ನಗರದಲ್ಲಿ ಸಂಚಾರ ದಟ್ಟಣೆಗೂ ಕಾರಣವಾಗಿದ್ದಾರೆ. 

ವಿಜಯಪುರ ನಗರವೊಂದರಲ್ಲೇ ಸುಮಾರು 6 ಸಾವಿರ ಆಟೋ ರಿಕ್ಷಾಗಳು ಪರ್ಮಿಟ್‌ ಪಡೆದು ಸಂಚರಿಸುತ್ತಿವೆ. ಆದರೆ, ಇವುಗಳ ಹೊರತಾಗಿ ಸುಮಾರು 2 ರಿಂದ 3 ಸಾವಿರಕ್ಕೂ ಅಧಿಕ ಆಟೊ ರಿಕ್ಷಾಗಳು ಯಾವುದೇ ಪರ್ಮಿಟ್‌ ಇಲ್ಲದೇ, ಕಾನೂನು ಬಾಹಿರವಾಗಿ ಸಂಚರಿಸುತ್ತಿರುವ ಪರಿಣಾಮ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವುದು, ಎಲ್ಲೆಂದರಲ್ಲಿ ಏಕಾಏಕಿ ನಿಲ್ಲಿಸು ಮೂಲಕ  ಸಂಚಾರ ನಿಯಮ ಪಾಲಿಸದೇ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿದ್ದಾರೆ.

ಕೆಲ ಆಟೋ ರಿಕ್ಷಾ ಚಾಲಕರು ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ದೂರುಗಳು ಬರುತ್ತಿವೆ. ಅಲ್ಲದೇ, ನಿಗದಿಗಿಂತ ಅಧಿಕ ಹಣ ವಸೂಲಿ ಮಾಡುವುದು ಮಾಡುತ್ತಿದ್ದಾರೆ. ಬಹುತೇಕ ಆಟೋ ಚಾಲಕರು ಸಮವಸ್ತ್ರ ಧರಿಸದೇ ಆಟೋ ಓಡಿಸುತ್ತಾರೆ. ಸಮವಸ್ತ್ರ ಎಂಬುದು ಕೇವಲ ಬಸ್‌ ನಿಲ್ದಾಣ, ಗಾಂಧಿಚೌಕ ವ್ಯಾಪ್ತಿಗೆ ಸೀಮಿತವಾಗಿ ಧರಿಸುತ್ತಾರೆ. ಈ ಬಗ್ಗೆ ಪೊಲೀಸರು ಎಷ್ಟೇ ಎಚ್ಚರಿಕೆ, ಸೂಚನೆ ನೀಡಿದರೂ ಪಾಲಿಸುತ್ತಿಲ್ಲ.

ವಿಜಯಪುರ ನಗರಕ್ಕೆ ಹೊರಗಿನಿಂದ ಬರುವ ಪ್ರವಾಸಿಗರು, ಪ್ರಯಾಣಿಕರಿಗೆ ಆಟೋ ಚಾಲಕರಿಂದ ಬಹಳಷ್ಟು ಕಹಿ ಅನುಭವ ಆಗಿರುವ ಬಗ್ಗೆ ದೂರುಗಳು ದಾಖಲಾಗಿವೆ. ಟ್ರಾಫಿಕ್‌ ಪೊಲೀಸರು ಕೈಗೊಳ್ಳುವ ಕ್ರಮಗಳು ನಿಯತ್ತಾಗಿ ಆಟೋ ಓಡಿಸಿ ಜೀವನ ಸಾಗಿಸುವವರಿಗೆ ತೊಂದರೆಯಾಗುತ್ತಿವೆ. ಟ್ರಾಫಿಕ್‌ ಪೊಲೀಸರ ಕಣ್ಣು ತಪ್ಪಿಸಿ ಕಾನೂನು ಬಾಹಿರವಾಗಿ ಆಟೋ ಓಡಿಸುವವರ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಅಗತ್ಯವಾಗಿದೆ.

ಆಟೋ ರಿಕ್ಷಾಗಳಿಗೆ ಕಡಿವಾಣ ಅಗತ್ಯ

ವಿಜಯಪುರ ನಗರದೊಳಗೆ ಆಟೋ ರಿಕ್ಷಾಗಳ ಸಂಖ್ಯೆ ಮಿತಿ ಮೀರಿದೆ. ಸುಮಾರು 3 ಸಾವಿರ ಆಟೋ ರಿಕ್ಷಾಗಳು ಅಧಿಕವಾಗಿದೆ. ಹೊಸದಾಗಿ 150ಕ್ಕೂ ಅಧಿಕ ಇ–ರಿಕ್ಷಾಗಳ ಸೇರ್ಪಡೆಯಾಗಿವೆ. ಇತ್ತೀಚಿನ ದಿನಗಳಲ್ಲಿ ಯಾರಾರೊ ಬಂದು ಆಟೋ ಓಡಿಸುತ್ತಿರುವುದರಿಂದ ಮೊದಲಿನಿಂದ ಆಟೋ ಓಡಿಸುವವರಿಗೆ ಸಮಸ್ಯೆಯಾಗಿದೆ. ದುಡಿಮೆ ಕಡಿಮೆಯಾಗಿದ್ದು ಸಂಸಾರ ನಡೆಸುವುದು ಕಷ್ಟವಾಗಿದೆ. ಅಲ್ಲದೇ ಒಂದು ವರ್ಷದಿಂದ ಉಚಿತ ಬಸ್‌ ಸಂಚಾರ ಯೋಜನೆ(ಶಕ್ತಿ) ಜಾರಿಯಾದ ಬಳಿಕ ಆಟೋ ರಿಕ್ಷಾ ಹತ್ತುವವರ ಸಂಖ್ಯೆ ಕಡಿಮೆಯಾಗಿದೆ. ಈ ಮೊದಲು ದಿನವೊಂದಕ್ಕೆ ₹1 ಸಾವಿರದಿಂದ ₹1500 ದುಡಿಮೆ ಆಗುತ್ತಿತ್ತು. ಈಗ ₹500 ದುಡಿಮೆ ಆಗುವುದು ಕಷ್ಟವಾಗಿದೆ.  ಟಿಪ್ಪು ಸುಲ್ತಾನ್‌ ಸರ್ಕಲ್‌–ಗಾಂಧಿ ಚೌಕ ಬಸವೇಶ್ವರ ಸರ್ಕಲ್‌–ಟಿಪ್ಪು ಸುಲ್ತಾನ್‌ ಸರ್ಕಲ್‌ ವರೆಗೆ ಆಟೋ ರಿಕ್ಷಾಗಳಿಗೆ ಏಕ ಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ ಕೆ.ಸಿ.ಮಾರ್ಕೆಟ್‌ನಲ್ಲಿ ಒಂದೇ ಕಡೇ ಆಟೋಗಳು ಜಮಾಯಿಸುತ್ತಿರುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗಿದೆ. ಜೊತೆಗೆ ಆಟೋ ಚಾಲಕರಿಗೂ ಸಮಸ್ಯೆಯಾಗಿದೆ.  ಬಹುತೇಕ ಆಟೋ ಚಾಲಕರು ಬಡವರು ಇದ್ದಾರೆ ಮನೆಗಳು ಇಲ್ಲ ಮಹಾನಗರ ಪಾಲಿಕೆಯಿಂದ ಆಟೋ ರಿಕ್ಷಾ ಚಾಲಕರಿಗಾಗಿ ಆಟೋ ಕಾಲೊನಿ ಮಾಡಿ ಮನೆ ನಿವೇಶನಗಳನ್ನು ಕೊಟ್ಟು ಸಹಾಯ ಮಾಗಬೇಕು. ಕೆಲ ಪೊಲೀಸರಿಂದಲೂ ಆಟೊ ಚಾಲಕರಿಗೆ ಅನಗತ್ಯ ಕಿರಿಕಿರಿ ಸಮಸ್ಯೆ ಆಗುತ್ತಿದೆ. ಆಟೋಗಳನ್ನು ನಗರದಲ್ಲಿ ಎಲ್ಲಿ ನಿಲ್ಲಿಸಬೇಕು ಎಂಬ ಸಮಸ್ಯೆ ಇದೆ. ಟ್ರಾಫಿಕ್‌ ಪೊಲೀಸರು ಆಟೋ ರಿಕ್ಷಾ ಚಾಲಕರೊಂದಿಗೆ ಸಭೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು –ನೂರ್‌ ಅಹ್ಮದ್‌ ಇನಾಂದಾರ‌ ಅಧ್ಯಕ್ಷ  ಆಜಾದ್‌ ಹಿಂದ್‌ ಆಟೊ ರಿಕ್ಷಾ ಯುನಿಯನ್‌ ಅಂಢ್‌ ಸೋಸಿಯಲ್‌ ಗ್ರೂಫ್‌ ವಿಜಯಪುರ

ದುಡಿದು ತಿನ್ನುವವರಿಗೆ ಸಮಸ್ಯೆ

ವಿಜಯಪುರ ನಗರದಲ್ಲಿ ನಿಯತ್ತಿನಿಂದ ಆಟೋ ಓಡಿಸಿ ದುಡಿದು ತಿನ್ನುವರಿಗೆ ಇತ್ತೀಚಿನ ವರ್ಷಗಳಲ್ಲಿ ಸಮಸ್ಯೆಯಾಗಿದೆ. ಟ್ರಾಫಿಕ್‌ ಪೊಲೀಸರು ರೂಲ್ಸ್‌ ರೆಗ್ಯುಲೇಷನ್‌ ಎಂದು ಹೇಳಿ ತಪಾಸಣೆ ಮಾಡಿ ಸಣ್ಣ‍ಪುಟ್ಟ ತಪ್ಪುಗಳಿಗೆ ಶಿಕ್ಷೆ ನೀಡಿ ನಾವು ದಿನವೊಂದಕ್ಕೆ ದುಡಿಯುವ ₹400 ₹500 ಕಸಿದುಕೊಂಡು ಹೋಗುತ್ತಿದ್ದಾರೆ.ಇದನ್ನೇ ನಂಬಿ ಸಂಸಾರ ನಡೆಸೋದು ಕಷ್ಟವಾಗಿದೆ. ಪರ್ಮಿಟ್‌ ಇಲ್ಲದವರು ಬಹಳ ಜನ ನಗರದಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದಾರೆ. ಅವರಿಂದ ಇತರೆ ಆಟೋ ಚಾಲಕರಿಗೆ ಸಮಸ್ಯೆಯಾಗಿದ್ದು ಇದಕ್ಕೆ ಕಡಿವಾಣ ಬೇಕಿದೆ. ಅನೇಕರು ಸಮವಸ್ತ್ರ ಧರಿಸದೇ ಸಂಚಾರ ನಿಮಯ ಪಾಲಿಸದೇ ಆಟೋ ಓಡಿಸುತ್ತಾರೆ. ನಗರದ ಹೊರಗಡೆಯಿಂದ ಬಂದು ಆಟೋ ಓಡಿಸುವವರು ಹೆಚ್ಚಾಗಿದ್ದಾರೆ. ಕೆಲವರು ಪ್ರಯಾಣಿಕರಿಂದ ಹೆಚ್ಚು ದುಡ್ಡು ವಸೂಲಿ ಮಾಡಿ ಮೋಸ ಮಾಡುತ್ತಿದ್ದಾರೆ. ಕೆಲವರು ಮಾಡುವ ತಪ್ಪುಗಳಿಂದ ಇಡೀ ಆಟೋ ಚಾಲಕರಿಗೆ ಕೆಟ್ಟ ಹೆಸರು ಬರುತ್ತಿದೆ.ಇವುಗಳಿಗೆ ಕಡಿವಾಣ ಅಗತ್ಯ. ಕೇವಲ ಕೇಸ್‌ ಹಾಕಿದರೆ ಪ್ರಯೋಜನವಿಲ್ಲ. ದಾಖಲೆಗಳನ್ನು ಪರಿಶೀಲನೆ ಮಾಡುವಾಗ ಸಂಚಾರ ನಿಮಯಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು.   –ಉಮೇಶ ರುದ್ರಮನಿ ಅಧ್ಯಕ್ಷ ಮಹಾತ್ಮ ಗಾಂಧಿ ಆಟೋ ಚಾಲಕರ ಯೂನಿಯನ್‌ ವಿಜಯಪುರ

ಆಟೋ ರಿಕ್ಷಾಗಳ ಸುಗಮ ಸಂಚಾರಕ್ಕೆ ಕ್ರಮ: ಎಸ್‌ಪಿ

ವಿಜಯಪುರ ನಗರದಲ್ಲಿ ಮಿತಿ ಮೀರಿರುವ ಆಟೋ ರಿಕ್ಷಾಗಳ ಹಾವಳಿಗೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ. ನಮ್ಮ ಟ್ರಾಫಿಕ್‌ ಪೊಲೀಸರು ಆಗಾಗ ವಿಶೇಷ ಅಭಿಯಾನ ಮಾಡುವ ಮೂಲಕ ಆಟೋ ರಿಕ್ಷಾ ಚಾಲಕರಿಗೆ ಜಾಗೃತಿ ಮೂಡುವ ಜೊತೆಗೆ ದಾಖಲೆ ಪತ್ರಗಳಿಲ್ಲದ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುತ್ತಿದ್ದಾರೆ. ಆಟೋ ರಿಕ್ಷಾ ಚಾಲಕರು ಸಂಚಾರ ನಿಯಮ ಪಾಲಿಸಬೇಕು ಸಾರ್ವಜನಿಕರಿಗೆ ಪ್ರಯಾಣಿಕರಿಗೆ ತೊಂದರೆ ನೀಡಬಾರದು. ಪ್ರಯಾಣಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು.  –ಋಷಿಕೇಶ ಸೋನಾವಣೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT