ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವರಹಿಪ್ಪರಗಿ: ಬದುಕು ನೀಡಿದ ಸಾವಯವ ಕೃಷಿ: ಸಮಗ್ರ ಬೆಳೆಯಿಂದ ಸ್ವಾವಲಂಬಿ ಜೀವನ

ಸಮಗ್ರ ಬೆಳೆಯಿಂದ ಸ್ವಾವಲಂಬಿ ಜೀವನ ನಡೆಸುವ ಮೆಕ್ಯಾನಿಕ್ ಮುಪ್ಪಯ್ಯ
Published 12 ಜುಲೈ 2024, 7:31 IST
Last Updated 12 ಜುಲೈ 2024, 7:31 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಭವಿಷ್ಯದಲ್ಲಿ ಭೂಮಿ ಬರಡಾಗದಂತೆ ತಡೆಯಲು ಸಾವಯವ ಕೃಷಿ ಪದ್ಧತಿ ಅನಿವಾರ್ಯ ಎನ್ನುತ್ತಲೇ ತಮ್ಮ ಕಬ್ಬು, ನಿಂಬೆ ಸೇರಿದಂತೆ ವಿವಿಧ ಬೆಳೆಗಳ ಕೃಷಿ ನೀತಿ ಹಾಗೂ ಪ್ರೀತಿಯ ಕುರಿತು ಮಾಹಿತಿ ನೀಡಿದರು ಮುಪ್ಪಯ್ಯ ಭೂಸ್ಥಳೀಮಠ.

ಪಟ್ಟಣದ ಬಸವನಬಾಗೇವಾಡಿ ರಸ್ತೆಯ ತಮ್ಮ 17 ಎಕರೆ ಜಮೀನಿನಲ್ಲಿ ಕಳೆದ ಹತ್ತು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಮುಪ್ಪಯ್ಯ ಹೇಳುವಂತೆ, ತಾವು 4 ಎಕರೆಯಲ್ಲಿ ಸಾವಯವ ಕೃಷಿಯ ಮೂಲಕ ಕಬ್ಬು, 4 ಎಕರೆಯಲ್ಲಿ 400 ನಿಂಬೆಗಿಡಗಳು, 2 ಎಕರೆಯಲ್ಲಿ ಮೆಕ್ಕೆಜೋಳ, 06 ಎಕರೆಯಲ್ಲಿ ತೊಗರಿ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಉಳಿದ ಒಂದು ಎಕರೆ ಜಾಗೆಯಲ್ಲಿ 40X60 ಸ್ಥಳವನ್ನು ಜಿಯೋ ಕಂಪನಿಗೆ ಮೊಬೈಲ್ ಟಾವರ್‌ಗೆ ನೀಡಲಾಗಿದ್ದು ಇದರಿಂದ ಪ್ರತಿ ತಿಂಗಳು ₹ 5 ಸಾವಿರ ಬಾಡಿಗೆ ಬರುತ್ತದೆ. ಇನ್ನೂಳಿದ ಜಾಗೆಯಲ್ಲಿ ಭಾವಿ, ಮನೆ ನಿರ್ಮಿಸಲಾಗಿದೆ.

‘ಕೃಷಿಯಲ್ಲಿ ನಾನು ಕಳೆದ 10 ವರ್ಷಗಳಿಂದ ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಕೆ ಮಾಡಿಲ್ಲ. ಅತಿಯಾದ ರಾಸಾಯನಿಕ ಬಳಕೆಯ ಭೂಮಿಯಲ್ಲಿ ಎರೆಹುಳುಗಳ ಬದುಕಲು ಸಾಧ್ಯವಿಲ್ಲ. ಭೂಮಿ ಫಲವತ್ತತೆಗೆ ಎರೆಹುಳುಗಳ ಅಗತ್ಯತೆ ಬಹಳವೇ ಇದೆ. ಡಿಎಪಿ, ಯೂರಿಯಾ ಸೇರಿದಂತೆ ವಿವಿದ ಗೊಬ್ಬರಗಳ ಬಳಕೆಯಿಂದ ಸಾಕಷ್ಟು ಫಸಲು ಪಡೆಯಬಹುದು. ಆದರೆ ಕ್ರಮೇಣ ಎರೆಹುಳುಗಳು ಬದುಕದೇ ಭೂಮಿ ಹಾಳಾಗುತ್ತದೆ’ ಎನ್ನುತ್ತಾರೆ ಅವರು. 

‘ಇಂದು ನಮ್ಮ ದೇಶದ ಪ್ರತಿಶತಃ 50ರಷ್ಟು ಭೂಮಿಯನ್ನುತಪ್ಪಾದ ಕೃಷಿನೀತಿಯಿಂದ ಹಾಳು ಮಾಡಿಕೊಂಡಿದ್ದೇವೆ. ನಾವು ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೃಷಿ ಮಾಡಬೇಕೆ ಹೊರತು ಕೇವಲ ಇಂದು ನಮಗೆ ದೊರಕುವ ಲಾಭಗಳಿಗಲ್ಲ‘ ಎನ್ನುತ್ತಾರೆ.

ಕಳೆದ 10 ವರ್ಷಗಳಿಂದ ನಿಂಬೆಗೆ ಪ್ರತಿ ಎಕರೆಗೆ 1 ಲಕ್ಷದಂತೆ 4 ಎಕರೆಗೆ ₹4 ಲಕ್ಷ ಆದಾಯ ಬರುತ್ತಿದೆ. ಇನ್ನೂ ಕಬ್ಬು ಕಳೆದ ವರ್ಷ 177 ಟನ್ ಬೆಳೆದಿದ್ದು ಸುಮಾರು 4 ಲಕ್ಷ 70 ಸಾವಿರ ಹಣ ತಂದಿದೆ ಎಂದು ತಿಳಿಸಿದರು.

ಕಬ್ಬು, ನಿಂಬೆ, ತೊಗರಿ ಕೃಷಿಯ ಜೊತೆಗೆ ತೋಟದಲ್ಲಿ 10 ತೆಂಗು, 02 ಮಾವಿನ ಮರಗಳಿವೆ. ಜೊತೆಗೆ ಮನೆಯಲ್ಲಿ 3 ಆಕಳು, 01 ಎಮ್ಮೆಯಿದ್ದು ಇವು ದಿನಬಳಕೆಗೆ ಅಗತ್ಯವಾದ ಹೈನುಗಾರಿಕೆ ಉತ್ಪನ್ನಗಳಿಗೆ ಸಹಕಾರಿಯಾಗಿವೆ ಎಂದು ತಮ್ಮ ಕೃಷಿ ನೀತಿಯ ಕುರಿತು ಮಾಹಿತಿ ನೀಡುವ ಮುಪ್ಪಯ್ಯ ಬಿ.ಕಾಂ ಪದವೀಧರ. ಟಿವಿ. ರೆಪ್ರೀಜರೇಟರ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೆಕ್ಯಾನಿಕ್ ಆಗಿ ಅರೆಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಮೂವರು ಮಕ್ಕಳು, ಪತ್ನಿ, ತಾಯಿ, ತಮ್ಮನೊಂದಿಗೆ ಕೃಷಿಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ಖುಷಿಯಾಗಿದ್ದಾರೆ.

ದೇವರಹಿಪ್ಪರಗಿ ಪಟ್ಟಣದ ರೈತ ತಮ್ಮ ತೋಟದಲ್ಲಿ ತೊಡಿದ ಭಾವಿಯ ಕುರಿತು ವಿವರ ನೀಡಿದರು.
ದೇವರಹಿಪ್ಪರಗಿ ಪಟ್ಟಣದ ರೈತ ತಮ್ಮ ತೋಟದಲ್ಲಿ ತೊಡಿದ ಭಾವಿಯ ಕುರಿತು ವಿವರ ನೀಡಿದರು.

ಕೃಷಿಗೆ ಆಧಾರವಾಗಲಿ ಎಂದು ₹4 ಲಕ್ಷ ವೆಚ್ಚದಲ್ಲಿ 40X40 ಸುತ್ತಳತೆಯ 45 ಅಡಿ ಆಳದ ಭಾವಿ ತೊಡಲಾಗಿದೆ. ಜೊತೆಗೆ ಎರಡು ಬೊರೆವೆಲ್‌ಗಳಿವೆ

–ಮುಪ್ಪಯ್ಯ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT