ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಶುಸಂಗೋಪನೆ ಡಿಪ್ಲೊಮಾ ಕೋರ್ಸ್‌

ಬೇದ್ರೆ ಮಂಜುನಾಥ, ಮೈಸೂರು
Published 21 ಜುಲೈ 2024, 23:51 IST
Last Updated 21 ಜುಲೈ 2024, 23:51 IST
ಅಕ್ಷರ ಗಾತ್ರ

ಯುವಜನತೆಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಪಶುಸಂಗೋಪನೆ ಡಿಪ್ಲೊಮಾ ಕೋರ್ಸ್ ಅಗತ್ಯ ತರಬೇತಿ ನೀಡಲಿದೆ.

ಪಶುವೈದ್ಯರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸಲು ಮತ್ತು ಪಶುಸಂಗೋಪನೆಯಲ್ಲಿ ನೆರವಾಗಲು ನುರಿತ ತಾಂತ್ರಿಕ ಕೌಶಲಗಳುಳ್ಳ ಡಿಪ್ಲೊಮಾ ಕೋರ್ಸ್ ಮಾಡಿದ ಅಭ್ಯರ್ಥಿಗಳ ಅಗತ್ಯವಿದೆ. ಈ ಡಿಪ್ಲೊಮಾ ತರಬೇತಿ ನೀಡಲು ಕರ್ನಾಟಕದ ಐದು ಸ್ಥಳಗಳಲ್ಲಿ ಪಶುಸಂಗೋಪನಾ ಪಾಲಿಟೆಕ್ನಿಕ್‌ಗಳನ್ನು ಆರಂಭಿಸಲಾಗಿದೆ. 

ಪ್ರತಿಯೊಂದು ಪಾಲಿಟೆಕ್ನಿಕ್ ತನ್ನದೇ ಸಂಶೋಧನಾ ಕೇಂದ್ರವನ್ನು ಹೊಂದಿದ್ದು ಪಶುಸಂಗೋಪನೆಯಲ್ಲಿ ಹೊಸ ತಳಿಗಳ ಸಂಶೋಧನೆ ಮತ್ತು ಪರಂಪರಾಗತ ತಳಿಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿವೆ. 

ಬೋಧನೆ ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗಾಗಿಯೇ ನಡೆಸಲಾಗುತ್ತಿರುವುದು ಇದರ ವಿಶೇಷ.

ಬೀದರಿನಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಪಶುಸಂಗೋಪನಾ ಪಾಲಿಟೆಕ್ನಿಕ್‌ಗಳಲ್ಲಿ ಎರಡು ವರ್ಷ ಅವಧಿಯ ಪಶುಸಂಗೋಪನಾ ಡಿಪ್ಲೋಮಾ ಕೋರ್ಸಿನ ಪ್ರವೇಶಕ್ಕಾಗಿ ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ ಶೇ 45ರಷ್ಟು ಅಂಕಗಳಿಸಿರುವ,  1 ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ, ಗ್ರಾಮೀಣ ಪ್ರದೇಶದಲ್ಲಿ, ವ್ಯಾಸಂಗ ಮಾಡಿರುವ ಮತ್ತು 20 ವರ್ಷ ವಯೋಮಿತಿ ಮೀರಿರದ, ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಸರ್ಕಾರದ ನಿಯಮಾವಳಿಯಂತೆ ಮೀಸಲಾತಿಯನ್ನು ನಿಗದಿಗೊಳಿಸಲಾಗಿರುತ್ತದೆ ಮತ್ತು ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ 50ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ.  ಪ.ಜಾ./ಪ.ಪಂ./ಪ್ರ.ವರ್ಗ-1 ರ ಅಭ್ಯರ್ಥಿಗಳು ಶೇ 40ರಷ್ಟು ಅಂಕಗಳಿಸಿ ತೇರ್ಗಡೆಯಾಗಿರಬೇಕು.

ಪಶುಸಂಗೋಪನಾ ಪಾಲಿಟೆಕ್ನಿಕ್ ಎಲ್ಲೆಲ್ಲಿವೆ?

ತಿಪಟೂರು ತಾಲ್ಲೂಕಿನ ಕೊನೆಹಳ್ಳಿ, ಶಿಗ್ಗಾಂವ ತಾಲ್ಲೂಕಿನ ಕುನ್ನೂರು, ಹಾಸನ ತಾಲ್ಲೂಕು ಕೋರವಂಗಲ ಕ್ರಾಸ್, ಗುಂಡ್ಲುಪೇಟೆ ತಾಲ್ಲೂಕು ಬರ್ಗಿ ಹಾಗೂ ಶಹಪೂರ ತಾಲ್ಲೂಕು ಡರ‍್ನಹಳ್ಳಿಯ ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಈ ಪಶುಸಂಗೋಪನಾ ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತಿದೆ. 

ಪ್ರತಿ ಪಾಲಿಟೆಕ್ನಿಕ್‌ನಲ್ಲಿ 50ರಂತೆ ಒಟ್ಟು 250 ಸೀಟುಗಳು ಲಭ್ಯವಿವೆ.  ಈ ಬಾರಿ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಅಭ್ಯರ್ಥಿಗಳು ತಮ್ಮ ಆಯ್ಕೆ ಕೇಂದ್ರದ ಆದ್ಯತೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗಿರುತ್ತದೆ.  ಜುಲೈ 31 ಕೊನೆಯ ದಿನವಾಗಿರುತ್ತದೆ.

ವೆಬ್ ವಿಳಾಸ ಹೀಗಿದೆ: www.kvafsu.edu.in/admission.html

 ಮೆರಿಟ್-ಕಂ-ರೋಸ್ಟರ್ ಪದ್ಧತಿಯ ಆಧಾರದಲ್ಲಿ ಆನ್‌ಲೈನ್ ಮೂಲಕವೇ ಸೀಟು ಹಂಚಿಕೆ ನಡೆಯಲಿದೆ.  ದಾಖಲೆಗಳ ಪರಿಶೀಲನೆಯನ್ನು ಬರುವ ಆಗಸ್ಟ್‌  6 ರಿಂದ  8 ರವರೆಗೆ ಬೀದರ್, ಬೆಂಗಳೂರು, ಗದಗ, ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯಗಳು ಮತ್ತು ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ನಡೆಸಲಾಗುವುದು.  ಪ್ರಥಮ ಆಯ್ಕೆ ಪಟ್ಟಿಯನ್ನು ಆಗಸ್ಟ್ 23ರಂದು ಪ್ರಕಟಿಸಲಾಗುವುದು. ಪ್ರವೇಶ ಪಡೆದ ಎಲ್ಲಾ ಅಭ್ಯರ್ಥಿಗಳಿಗೆ ಮಾಸಿಕ ₹ 1000 - ಶಿಷ್ಯವೇತನ ನೀಡಲಾಗುತ್ತದೆ. 

ವಿಶೇಷ ಸೂಚನೆ:  ಪಶುಸಂಗೋಪನೆ ಡಿಪ್ಲೊಮಾ ಕೋರ್ಸ್ ಯುವ ಜನತೆಗೆ ಸ್ವಯಂ ಉದ್ಯೋಗವನ್ನು ಕೈಗೊಳ್ಳುವಂತೆ ಅಗತ್ಯ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ. ಸತತವಾಗಿ ಪಶುಸಂಗೋಪನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಪಶು ಸಂಬಂಧಿತ ಉತ್ಪಾದನೆಯನ್ನು ಹೆಚ್ಚಿಸುವ ಕುರಿತು ಜ್ಞಾನವನ್ನು ಪಡೆಯುವಲ್ಲಿ ನೆರವಾಗುತ್ತದೆ. ನೋಂದಾಯಿತ ಪಶುವೈದ್ಯಕೀಯ ವೈದ್ಯರ ಮೇಲ್ವಿಚಾರಣೆ ಮತ್ತು ನಿರ್ದೇಶನದ ಅಡಿಯಲ್ಲಿ ‘ಅಪ್ರಧಾನ ಪಶುವೈದ್ಯಕೀಯ ಸೇವೆಗಳಿಗೆ’ಸೀಮಿತವಾದ ಸೇವೆಗಳನ್ನು ನಿರ್ವಹಿಸಲು ಮಾತ್ರ ಅವಕಾಶವಿರುತ್ತದೆ. ಈ ಕೋರ್ಸ್‌ ಮುಗಿಸಿದ ಅಭ್ಯರ್ಥಿಗಳಿಗೆ ಯಾವುದೇ ಖಚಿತ ಸರ್ಕಾರಿ ಉದ್ಯೋಗದ ಕುರಿತು ಭರವಸೆ ಇರುವುದಿಲ್ಲ.

ಹೆಚ್ಚಿನ ವಿವರಗಳಿಗೆ ನೋಡಿ: www.kvafsu.edu.in 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT