ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2: ತಾರೆಯರ ಸಮಾಗಮ, ಮೇಳೈಸಿದ ನೃತ್ಯ ಸಂಭ್ರಮ

Published : 29 ಜೂನ್ 2024, 0:07 IST
Last Updated : 29 ಜೂನ್ 2024, 0:07 IST
ಫಾಲೋ ಮಾಡಿ
Comments

ಬೆಂಗಳೂರು: ಚಂದನವನದ ತಾರೆಯರು ಸಿನಿ ಸಾಧನೆಗೆ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದರೆ, ನಟ-ನಟಿಯರು ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ನೃತ್ಯದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಬಹು ನಿರೀಕ್ಷಿತ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಎರಡನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆಯಿತು. ಜೀವಮಾನ ಸಾಧನೆ ಸೇರಿ 28 ವಿಭಾಗಗಳಲ್ಲಿ ಸಿನಿ ಸಾಧಕರಿಗೆ ಚಿತ್ರರಂಗದ ಜತೆಗೆ ಸಾಹಿತ್ಯ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಜೆ 4 ಗಂಟೆಗೆ ಕೆಂಪು ಹಾಸಿನ ಮೇಲೆ ಮಂದಹಾಸದೊಂದಿಗೆ ಕೈಬಿಸುತ್ತ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ಕಾತರರಾಗಿದ್ದರು. ನಟ ರಮೇಶ್ ಹಾಗೂ ಅನುಶ್ರೀ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿದರೆ, ನಟಿ ಆಶಿಕಾ ರಂಗನಾಥ್ ಮತ್ತು ತಂಡದವರು 'ರಾಗ ತಾಳ ನಾಟ್ಯಂ' ಗೀತೆಗೆ ನೃತ್ಯ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.

‘ಜೀವಮಾನ ಸಾಧನೆ ಪ್ರಶಸ್ತಿ’ಗೆ ಭಾಜನರಾದ ಬಿ. ಸರೋಜಾದೇವಿ ಅವರು ವೇದಿಕೆಗೆ ಏರುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು. ಪ್ರಶಸ್ತಿ ಪ್ರದಾನ ಆಗುತ್ತಿದ್ದಂತೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಗೀತ, ನೃತ್ಯ ನಿರ್ದೇಶನ ಸೇರಿ ವಿವಿಧ ವಿಭಾಗಗಳಲ್ಲಿ ಡಿಜಿಟಲ್ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುತ್ತಿದ್ದಂತೆ ಕೆಲವರಲ್ಲಿ ದುಗುಡ ಕಾಣಿಸಿಕೊಂಡರೂ, ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ಎಲ್ಲವನ್ನೂ ಮರೆತು ಪರಸ್ಪರ ಕೈ ಕೈ ಕುಲುಕಿ ಸಂಭ್ರಮಿಸಿದರು.

ಪ್ರಶಸ್ತಿ ಕೈ ಸೇರುತ್ತಿದ್ದಂತೆ ಕೆಲವರು ಭಾವುಕರಾದರೆ, ಇನ್ನೂ ಕೆಲವರಲ್ಲಿ ಸಾರ್ಥಕತೆಯ ಭಾವ ಮೂಡಿತ್ತು. ಈ ವೇಳೆ ತಮಗೆ ಅವಕಾಶ ನೀಡಿದ ನಿರ್ದೇಶಕ, ನಿರ್ಮಾಪಕರು ಸೇರಿ ಚಿತ್ರ ತಂಡದ ಸದಸ್ಯರನ್ನು, ಚಿತ್ರೀಕರಣದ ವೇಳೆ ನಡೆದ ಘಟನೆಗಳನ್ನು ಸ್ಮರಿಸಿಕೊಂಡರು. ಪ್ರಶಸ್ತಿ ಕೈ ತಪ್ಪಿದರೂ ಉಪಸ್ಥಿತರಿದ್ದ ನಾಮ ನಿರ್ದೇಶಿತ ಸದಸ್ಯರು ಸಹ ನಟ-ನಟಿಯರಿಗೆ ಶುಭ ಹಾರೈಸಿದರು.

ಚಿತ್ರರಂಗದ ಪ್ರಮುಖರಾದ ಶಿವರಾಜ್ ಕುಮಾರ್, ಪ್ರಕಾಶ್ ರಾಜ್, ಖುಷ್ಬು, ಡಾಲಿ ಧನಂಜಯ್, ರುಕ್ಮಿಣಿ ವಸಂತ್, ದೊಡ್ಡಣ್ಣ, ತರುಣ್ ಸುಧೀರ್, ವಿ. ಮನೋಹರ್, ಹರಿಕೃಷ್ಣ, ಶಮಿತಾ ಮಲ್ನಾಡ್, ದತ್ತಣ್ಣ, ಚೈತ್ರಾ ಆಚಾರ್, ಪೂಜಾ ಗಾಂಧಿ, ಮಂಡ್ಯ ರಮೇಶ್, ಟಿ.ಎನ್. ಸೀತಾರಾಮ್, ಪಿ. ಶೇಷಾದ್ರಿ, 'ಮುಖ್ಯಮಂತ್ರಿ' ಚಂದ್ರು, ನಾಗತಿಹಳ್ಳಿ ಚಂದ್ರಶೇಖರ್, ಎಸ್. ನಾರಾಯಣ್, ಭಾ.ಮ. ಹರೀಶ್, ಉಮೇಶ್ ಬಣಕಾರ್, ಆರ್. ಚಂದ್ರು, ವಿಜಯ ಪ್ರಕಾಶ್, ಗುರುಕಿರಣ್‌ ಸೇರಿ ಹಲವರು ಪಾಲ್ಗೊಂಡಿದ್ದರು.

ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರದವರೂ ಸಮಾರಂಭಕ್ಕೆ ಸಾಕ್ಷಿಯಾದರು. ಸಂಸದ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಚಿವರಾದ ರಾಮಲಿಂಗಾರೆಡ್ಡಿ, ಶಿವರಾಜ ಎಸ್‌. ತಂಗಡಗಿ, ಸಾಹಿತ್ಯ ಕ್ಷೇತ್ರದ ಪ್ರಮುಖರಾದ ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡ, ಎಸ್.ಜಿ. ಸಿದ್ಧರಾಮಯ್ಯ ಮೊದಲಾದವರು ಉಪಸ್ಥಿತರಿದ್ದರು.

ಒಂಬತ್ತು ದಶಕದ ಮೆಲುಕು :

ಕನ್ನಡ ಚಿತ್ರರಂಗವು 90 ವರ್ಷಗಳನ್ನು ಪೂರೈಸಿದ್ದು, ಕಾರ್ಯಕ್ರಮದಲ್ಲಿ ಒಂಬತ್ತು ದಶಕಗಳ ಸಿನಿಯಾನವನ್ನು ಸ್ಮರಿಸಲಾಯಿತು. ನಟಿಯರಾದ ಶ್ರುತಿ, ಶ್ರುತಿ ಹರಿಹರನ್, ಭಾವನಾ ರಾವ್, ರೂಪಿಕಾ ಹಾಗೂ ಸಿಂಧು ಲೋಕನಾಥ್ ಅವರು ನೃತ್ಯದ ಮೂಲಕ ಅಂದಿನಿಂದ ಇಂದಿನವರೆಗಿನ ಆಯ್ದ ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಿದರು. ಈ ನೃತ್ಯವು ನೆರೆದಿದ್ದವರನ್ನು ಆಯಾ ಕಾಲಘಟ್ಟಕ್ಕೆ ಕರೆದೊಯ್ದಿತು. ಇದೇ ವೇಳೆ, ಕನ್ನಡ ಚಿತ್ರರಂಗ ಸಾಗಿ ಬಂದ ಹಾದಿಯನ್ನು ಡಿಜಿಟಲ್ ಪರದೆಯಲ್ಲಿ ಪ್ರದರ್ಶಿಸಲಾಯಿತು. ಚಿತ್ರರಂಗದ ತೆರೆಮರೆಯ ನಾಯಕರಿಗೆ ಪ್ರೇಕ್ಷಕರು ಎದ್ದು ನಿಂತು ಗೌರವಿಸಿದರು.

90 ವರ್ಷಗಳ ಸಿನಿ ಪಯಣದ ಬಗ್ಗೆ ನಟ ರಮೇಶ್ ಅರವಿಂದ್ ಹಾಗೂ ನಟಿ ಶ್ರುತಿ ಮನದಾಳದ ಮಾತುಗಳನ್ನು ಹಂಚಿಕೊಂಡರು.

ರಮೇಶ್ ಅರವಿಂದ್, 'ನಾನು ಶಾಲಾ ಕಾಲೇಜು ದಿನಗಳಲ್ಲಿ ಸಿನಿಮಾ ನೋಡುತ್ತಿದ್ದೆ. ಆ ವೇಳೆ ಸಿನಿಮಾಕ್ಕೆ ಬರುತ್ತೇನೆ ಅಂದುಕೊಂಡಿರಲಿಲ್ಲ. ಚಿತ್ರರಂಗಕ್ಕೆ ಬಂದ ಬಳಿಕ ಸಿನಿಮಾವೇ ನಮಗೆ ಎಲ್ಲವೂ ಆಗಿತ್ತು. ನಟನೆ ಎನ್ನುವುದು ನಿತ್ಯದ ತಿದ್ದುಪಡಿಯಾಗಿದೆ. ಈಗ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಪರಿಕಲ್ಪನೆ ಬಂದಿದೆ. ಆದರೆ, 65 ವರ್ಷಗಳ ಹಿಂದೆಯೇ ಐದಾರು ಭಾಷೆಗಳಲ್ಲಿ ಕನ್ನಡ ಸಿನಿಮಾ ಡಬ್ಬಿಂಗ್ ಆಗಿದ್ದವು. ಆಯಾ ಕಾಲಕ್ಕೆ ಅನುಗುಣವಾಗಿ ತಂತ್ರಜ್ಞಾನ ಅಳವಡಿಕೆ ನಡೆದಿದೆ ' ಎಂದು ಹೇಳಿದರು.

ಶ್ರುತಿ, 'ಸಿನಿಮಾ ರಂಗಕ್ಕೆ ಬರಲು ನನಗೆ ಅಪ್ಪನೇ ಸ್ಫೂರ್ತಿ. ವಿವಿಧ ಪಾತ್ರಗಳ ಮೂಲಕ ನಾನು ನಗುತ್ತಾ ಇದ್ದೇನೆ. ಆಗ ಹತ್ತಿಪ್ಪತ್ತು ಸಿನಿಮಾ ಮಾಡಿ ಹೆಸರು ಮಾಡುತ್ತಿದ್ದೆವು. ಈಗ ಸಿನಿಮಾಕ್ಕೆ ಮೊದಲೇ ಕಲಾವಿದರು ಹೆಸರು ಮಾಡುತ್ತಿದ್ದಾರೆ. ನಮಗೆ ಕಲಿಯಲು ಅವಕಾಶ ಇರುತ್ತಿತ್ತು. ಈಗ ಹಾಗಿಲ್ಲ. ಎಲ್ಲವೂ ಕಲಿತಿರಬೇಕು’ ಎಂದು ತಿಳಿಸಿ, 'ರಾಮಾ ಶ್ಯಾಮಾ ಭಾಮಾ' ಚಿತ್ರದ ಡೈಲಾಗ್ ಹೇಳಿ ರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT