ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ | ರಾಜ್ಯಗಳಿಗೆ ವಿಶೇಷ ವರ್ಗ ಸ್ಥಾನಮಾನ: ಮುಗಿದ ಅಧ್ಯಾಯ?

Published 15 ಜುಲೈ 2024, 23:33 IST
Last Updated 15 ಜುಲೈ 2024, 23:33 IST
ಅಕ್ಷರ ಗಾತ್ರ

ಬಿಹಾರ ಮತ್ತು ಆಂಧ್ರ ಪ್ರದೇಶ ರಾಜ್ಯದ ಅಭಿವೃದ್ಧಿಗಾಗಿ ‘ವಿಶೇಷ ವರ್ಗ ಸ್ಥಾನಮಾನ’ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ. ಕೇಂದ್ರ ಸರ್ಕಾರದ ಹಣಕಾಸು ನೀತಿಗಳಿಂದಾಗಿ ‘ವಿಶೇಷ ವರ್ಗ ಸ್ಥಾನಮಾನ’ ಎನ್ನುವುದು ಅಪ್ರಸ್ತುತವಾಗಿದೆ. ಈ ರಾಜ್ಯಗಳಿಗೂ, ಇತರ ರಾಜ್ಯಗಳಿಗೂ ವ್ಯತ್ಯಾಸವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ

––––

ಕೇಂದ್ರದ ಎನ್‌ಡಿಎ ಸರ್ಕಾರದ ಪ್ರಮುಖ ಪಾಲುದಾರ ಪಕ್ಷ ಜೆಡಿಯು, ಬಿಹಾರಕ್ಕೆ ‘ವಿಶೇಷ ವರ್ಗ ಸ್ಥಾನಮಾನ’ (special category status) ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ. ಇನ್ನೊಂದು ಪ್ರಮುಖ ಪಾಲುದಾರ ‍ತೆಲುಗು ದೇಶಂ ಕೂಡ ಆಂಧ್ರ ಪ್ರದೇಶಕ್ಕೆ ಇದೇ ರೀತಿಯ ಸ್ಥಾನಮಾನ ನೀಡಬೇಕು ಅಥವಾ ರಾಜ್ಯದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತಿದೆ.

ಎನ್‌ಡಿಎ ಕೂಟದಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಈ ಬಾರಿ ಪೂರ್ಣ ಬಹುಮತ ಸಿಕ್ಕಿಲ್ಲ. ಸರ್ಕಾರ ಉಳಿಯಬೇಕಿದ್ದರೆ ಜೆಡಿಯು ಮತ್ತು ಟಿಡಿಪಿ ಬೆಂಬಲ ಅದಕ್ಕೆ ಅನಿವಾರ್ಯ. ಇದೇ ಸಂದರ್ಭವನ್ನು ಬಳಸಿಕೊಂಡು ಎರಡೂ ಪಕ್ಷಗಳು ಮೋದಿಯವರ ಮೇಲೆ ಒತ್ತಡ ಹಾಕುತ್ತಿದ್ದು, ಪ್ರಧಾನಿಯವರು ಇಕ್ಕಟ್ಟಿಗೆ ಸಿಲುಕಿದ್ದಾರೆ. 

ಕೇಂದ್ರ ಸರ್ಕಾರ 2015ರಿಂದ ಯಾವ ರಾಜ್ಯವನ್ನೂ ವಿಶೇಷ ವರ್ಗ ಸ್ಥಾನಮಾನದಿಂದ ಗುರುತಿಸಿಲ್ಲ. 14ನೇ ಹಣಕಾಸು ಆಯೋಗದ (2015–20) ಶಿಫಾರಸಿನ ಮೇರೆಗೆ ಈ ಸ್ಥಾನಮಾನದ ಪರಿಕಲ್ಪನೆಯನ್ನು ಅದು ರದ್ದು ಮಾಡಿದೆ. ‘ಯಾವುದೇ ಕಾರಣಕ್ಕೂ ರಾಜ್ಯಗಳಿಗೆ ವಿಶೇಷ ವರ್ಗ ಸ್ಥಾನಮಾನ ನೀಡಲು ಸಾಧ್ಯವಿಲ್ಲ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಳೆದ ವರ್ಷ ಹೇಳಿದ್ದರು. 

ಕೇಂದ್ರ ಸರ್ಕಾರಕ್ಕೆ ಬರುವ ತೆರಿಗೆ ವರಮಾನದಲ್ಲಿ ರಾಜ್ಯಗಳಿಗೆ ಹಂಚುವ ಪಾಲನ್ನು ಶೇ 32ರಿಂದ ಶೇ 42ಕ್ಕೆ ಹೆಚ್ಚಿಸಲು 14ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ರಾಜ್ಯಗಳಿಗೆ ಹೆಚ್ಚಿನ ಹಣ ನೀಡುವುದರಿಂದ ವಿಶೇಷ ಸ್ಥಾನಮಾನ ನೀಡುವ ಅಗತ್ಯವಿಲ್ಲ ಎಂಬುದು ಕೇಂದ್ರ ಸರ್ಕಾರದ ನಿಲುವು (15ನೇ ಹಣಕಾಸು ಆಯೋಗವು ಈ ತೆರಿಗೆ ಪಾಲನ್ನು ಶೇ 41ಕ್ಕೆ ಇಳಿಸಿದೆ. 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ರಾಜ್ಯ ಸ್ಥಾನಮಾನವನ್ನು ತೆಗೆದು ಕೇಂದ್ರಾಡಳಿತ ಪ್ರದೇಶ ಮಾಡಿದ ಕಾರಣಕ್ಕೆ ರಾಜ್ಯಗಳಿಗೆ ಹಂಚುವ ತೆರಿಗೆ ಹಣದಲ್ಲಿ ಶೇ 1ರಷ್ಟನ್ನು ಕಡಿತ ಮಾಡಿದೆ). 

ವಾರದ ಹಿಂದೆ ಇದೇ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನೀತಿ ಆಯೋಗದ ಸದಸ್ಯ ಅರವಿಂದ ವಿರ್ಮಾನಿ ಅವರು, ವಿಶೇಷ ವರ್ಗ ಸ್ಥಾನಮಾನ ಹೊಂದಿರದ ರಾಜಸ್ಥಾನ, ಒಡಿಶಾದಂತಹ ರಾಜ್ಯಗಳು ಕೂಡ ಅಭಿವೃದ್ಧಿ ಹೊಂದಿವೆ. ಹಾಗಾಗಿ, ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ‘ಕಾರ್ಯರೂಪಕ್ಕೆ ತರಬಹುದಾದ ಪರಿಹಾರ’ಗಳನ್ನು ಹುಡುಕಬೇಕಾಗಿದೆ’ ಎಂದು ಹೇಳಿದ್ದಾರೆ.

ಬಿಹಾರವು 2005ರಿಂದ ವಿಶೇಷ ವರ್ಗ ಸ್ಥಾನಮಾನವನ್ನು ಕೇಳುತ್ತಿದೆ. 2000ದಲ್ಲಿ ಖನಿಜ ಶ್ರೀಮಂತ ಜಾರ್ಖಂಡ್‌ ಪ್ರತ್ಯೇಕ ರಾಜ್ಯವಾದ ಮೇಲೆ ಬಿಹಾರದ ವರಮಾನ ಕಡಿಮೆಯಾಗಿದೆ. ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿಯಾದಾಗಿನಿಂದಲೂ ವಿಶೇಷ ವರ್ಗ ಸ್ಥಾನಮಾನಕ್ಕೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. 

2014ರಲ್ಲಿ ಆಂಧ್ರ ಪ್ರದೇಶವನ್ನು ವಿಭಜಿಸಿ ತೆಲಂಗಾಣವನ್ನು ಪ್ರತ್ಯೇಕ ರಾಜ್ಯ ಮಾಡಿದ ನಂತರ ಆಂಧ್ರವೂ ಆರ್ಥಿಕವಾಗಿ ಹಿಂದುಳಿದಿದೆ. ಅಂದಿನಿಂದಲೂ ವಿಶೇಷ ಸ್ಥಾನಮಾನಕ್ಕೆ ಅದು ಆಗ್ರಹಿಸುತ್ತಿದೆ. ಸ್ಥಾನಮಾನ ಕೊಡದಿದ್ದರೆ ವಿಶೇಷ ಅನುದಾನವನ್ನಾದರೂ ಕೊಡಿ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿಯರಿಗೆ ಮನವಿಯನ್ನೂ ಮಾಡಿದ್ದಾರೆ.  

ವಿಶೇಷ ವರ್ಗ ಸ್ಥಾನಮಾನಕ್ಕಾಗಿ ಹೊಸ ರಾಜ್ಯಗಳನ್ನು ಕೇಂದ್ರ ಸರ್ಕಾರ ಪರಿಗಣಿಸದಿದ್ದರೂ, ಈ ಹಿಂದೆ ಗುರುತಿಸಲಾಗಿರುವ ಈಶಾನ್ಯ ಭಾಗದ ರಾಜ್ಯಗಳು ಮತ್ತು ಬೆಟ್ಟಗುಡ್ಡಗಳನ್ನೊಳಗೊಂಡ ರಾಜ್ಯಗಳಿಗೆ ಕೇಂದ್ರ ಸರ್ಕಾರ ವಿಶೇಷ ಸೌಲಭ್ಯ ನೀಡುವುದನ್ನು ಮುಂದುವರಿಸಿದೆ. 

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಎನ್‌ಡಿಎ ಸರ್ಕಾರ ತನ್ನ ಪಾಲುದಾರ ಪಕ್ಷಗಳ ಪ್ರಮುಖ ಬೇಡಿಕೆಗೆ ಹೇಗೆ ಸ್ಪಂದಿಸಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.   

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ತೆಲುಗು ದೇಶಂ ಪಕ್ಷದ ಸಂಸದರು 2018ರ ಡಿಸೆಂಬರ್ 18ರಂದು ಸಂಸತ್ ಭವನದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು –ಪಿಟಿಐ ಸಂಗ್ರಹ ಚಿತ್ರ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ತೆಲುಗು ದೇಶಂ ಪಕ್ಷದ ಸಂಸದರು 2018ರ ಡಿಸೆಂಬರ್ 18ರಂದು ಸಂಸತ್ ಭವನದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು –ಪಿಟಿಐ ಸಂಗ್ರಹ ಚಿತ್ರ

––––

‘ವಿಶೇಷ ಸ್ಥಾನಮಾನ’ಕ್ಕೂ ‘ವಿಶೇಷ ವರ್ಗ ಸ್ಥಾನಮಾನ’ಕ್ಕೂ ಇದೆ ವ್ಯತ್ಯಾಸ

ರಾಜ್ಯಗಳಿಗೆ ಸ್ಥಾನಮಾನ ನೀಡುವ ವಿಚಾರದಲ್ಲಿ ಎರಡು ಮಾದರಿಗಳಿವೆ. ಒಂದು ವಿಶೇಷ ವರ್ಗ ಸ್ಥಾನಮಾನ (special category status) ಮತ್ತೊಂದ ವಿಶೇಷ ಸ್ಥಾನಮಾನ (special status). ಈ ಎರಡೂ ಮಾದರಿಗಳ ನಡುವೆ ವ್ಯತ್ಯಾಸ ಇದೆ ಎಂದು ಹೇಳುತ್ತಾರೆ ರಾಜಕೀಯ ತಜ್ಞರು. 

‘ವಿಶೇಷ ಸ್ಥಾನಮಾನ’ದಲ್ಲಿ ಶಾಸಕಾಂಗ ಮತ್ತು ರಾಜಕೀಯ ಹಕ್ಕುಗಳ ವಿಚಾರಗಳು ಬರುತ್ತವೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಅಲ್ಲಿ ಶಾಸಕಾಂಗ ಮತ್ತು ಸರ್ಕಾರ ವ್ಯವಸ್ಥೆಗೆ ವಿಶೇಷ ವಿನಾಯಿತಿಗಳು ಇದ್ದವು (ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಇದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ವಿನಾಯಿತಿಗಳು ಹೋಗಿವೆ).  ‘ವಿಶೇಷ ವರ್ಗ ಸ್ಥಾನಮಾನ’ದಲ್ಲಿ ಹಣಕಾಸಿಗೆ ಸಂಬಂಧಿಸಿದ ವಿಚಾರಗಳಿಗೆ ಆದ್ಯತೆ ನೀಡಲಾಗುತ್ತದೆ. 

ವಿಶೇಷ ವರ್ಗ ಸ್ಥಾನಮಾನದ ಮಾನದಂಡಗಳು  

* ಬೆಟ್ಟಗುಡ್ಡಗಳಿಂದ ಕೂಡಿದ ದುರ್ಗಮ ಭೂಪ್ರದೇಶ ಹೊಂದಿರಬೇಕು 

* ಅಂತರರಾಷ್ಟ್ರೀಯ ಗಡಿ ಪ್ರದೇಶ ಹೊಂದಿರಬೇಕು

* ಕಡಿಮೆ ಜನಸಾಂದ್ರತೆ ಹೊಂದಿರಬೇಕು ಅಥವಾ ಗಣನೀಯ ಪ್ರಮಾಣದಲ್ಲಿ ಆದಿವಾಸಿಗಳು ಇರಬೇಕು

* ಆರ್ಥಿಕವಾಗಿ ಮತ್ತು ಮೂಲಸೌಕರ್ಯದ ದೃಷ್ಟಿಯಿಂದ ಹಿಂದುಳಿದಿರಬೇಕು

* ರಾಜ್ಯದ ಆರ್ಥಿಕ ಸ್ಥಿತಿ ಬೆಳವಣಿಗೆ ಕಾಣದ ಸ್ಥಿತಿಯಲ್ಲಿರಬೇಕು

11 ರಾಜ್ಯಗಳಿಗೆ ವಿಶೇಷ ಸವಲತ್ತು

ರಾಜ್ಯಗಳಿಗೆ ವಿಶೇಷ ವರ್ಗ ಸ್ಥಾನಮಾನ ನೀಡುವ ಬಗ್ಗೆ ದೇಶದ ಸಂವಿಧಾನದಲ್ಲಿ ಪ್ರಸ್ತಾವ ಇರಲಿಲ್ಲ. ಆದರೆ, ಅತಿ ಹಿಂದುಳಿದಿರುವ ಕೆಲವು ರಾಜ್ಯಗಳ ಪ್ರಗತಿಗೆ ಉತ್ತೇಜನ ನೀಡುವ ಸಲುವಾಗಿ 1969ರಲ್ಲಿ 5ನೇ ಹಣಕಾಸು ಆಯೋಗ ಮಾಡಿದ್ದ ಶಿಫಾರಸಿನ ಆಧಾರದಲ್ಲಿ ವಿಶೇಷ ವರ್ಗ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಆರಂಭಿಸಿತು. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. 

ಜಮ್ಮು–ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ‘ವಿಶೇಷ ಸ್ಥಾನಮಾನ’ (special status) ನೀಡಲಾಯಿತು. ಅದೇ ಸಮಯದಲ್ಲಿಯೇ ನಾಗಾಲ್ಯಾಂಡ್, ಅಸ್ಸಾಂ ರಾಜ್ಯಗಳಿಗೂ ವಿಶೇಷ ವರ್ಗ ಸ್ಥಾನಮಾನವನ್ನೂ ನೀಡಲಾಯಿತು. ನಂತರ ಹಿಮಾಚಲ ಪ್ರದೇಶ (1970–71) ಮಣಿಪುರ, ಮೇಘಾಲಯ, ತ್ರಿಪುರಾ (1971–72), ಸಿಕ್ಕಿಂ (1975–76) ಅರುಣಾಚಲ ಪ್ರದೇಶ ಮತ್ತು ಮಿಜೋರಾಂ (1986-87) ಹಾಗೂ ಉತ್ತರಾಖಂಡ (2001–02) ರಾಜ್ಯಗಳನ್ನೂ ಈ ಪಟ್ಟಿಗೆ ಸೇರಿಸಲಾಯಿತು.

ಸ್ಥಾನಮಾನದ ಪ್ರಯೋಜನಗಳೇನು? 

ರಾಜ್ಯಗಳಿಗೆ ಕೇಂದ್ರ ಸರ್ಕಾರವು ನೆರವು (ಎನ್‌ಸಿಎ) ನೀಡುವಾಗ ಸಾಲ ಮತ್ತು ಅನುದಾನದ ಅನುಪಾತ ನಿರ್ಧರಿಸಲು ವಿಶೇಷ ವರ್ಗ ಸ್ಥಾನಮಾನವನ್ನು ಮಾನದಂಡವಾಗಿ ಬಳಸಲಾಗುತ್ತದೆ. ಸ್ಥಾನಮಾನ ಹೊಂದಿದ ರಾಜ್ಯಗಳಿಗೆ ಎನ್‌ಸಿಎ ಮತ್ತು ಬಾಹ್ಯ ಅನುದಾನಿತ ಯೋಜನೆ (ಇಎಪಿ) ಅಡಿಯಲ್ಲಿ ಶೇ 90ರಷ್ಟು ಅನುದಾನ ಮತ್ತು ಶೇ 10ರಷ್ಟು ಸಾಲವನ್ನು ಕೇಂದ್ರ ಸರ್ಕಾರ ನೀಡುತ್ತದೆ. 

ಕೇಂದ್ರ ಜಾರಿ ಮಾಡುವ ಯೋಜನೆಗಳಿಗೆ ವಿಶೇಷ ಸ್ಥಾನಮಾನ ಪಡೆದ ರಾಜ್ಯಗಳು ಶೇ 10ರಷ್ಟು ವೆಚ್ಚ ನೀಡಿದರೆ ಸಾಕು, ಉಳಿದ ಶೇ 90ರಷ್ಟು ಕೇಂದ್ರವೇ ಭರಿಸುತ್ತದೆ. ಉಳಿದ ರಾಜ್ಯಗಳಿಗೆ ಕೇಂದ್ರವು ಶೇ 60–70ರಷ್ಟು ಮಾತ್ರ ನೀಡುತ್ತದೆ. ಉಳಿದ ರಾಜ್ಯಗಳಲ್ಲಿ ನಿಗದಿತ ಸಮಯದಲ್ಲಿ ಅನುದಾನವನ್ನು ವಿನಿಯೋಗಿಸದೇ ಇದ್ದರೆ, ಅದು  ವಾಪಸ್‌ ಹೋಗುತ್ತದೆ. ಆದರೆ, ವಿಶೇಷ ಸ್ಥಾನಮಾನ ಪಡೆದ ರಾಜ್ಯಗಳಲ್ಲಿ ಅನುದಾನವನ್ನು ಮುಂದುವರಿಸಲಾಗುತ್ತದೆ.

ಸ್ಥಾನಮಾನ ಹೊಂದಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಭಾರಿ ಪ್ರಮಾಣದಲ್ಲಿ ತೆರಿಗೆ ವಿನಾಯಿಸಿ ನೀಡುತ್ತದೆ. ಅಬಕಾರಿ, ಸೇವಾ ಸುಂಕ, ಆದಾಯ ತೆರಿಗೆ, ಮತ್ತು ಕಾರ್ಪೊರೇಟ್ ತೆರಿಗೆಗಳಲ್ಲಿ ವಿನಾಯಿತಿಯ ಸೌಲಭ್ಯಗಳು ಈ ರಾಜ್ಯಗಳಿಗೆ ಸಿಗುತ್ತವೆ. ಅಲ್ಲದೇ, ಈ ರಾಜ್ಯಗಳ ವಿಶೇಷ ಯೋಜನೆಗಳಿಗಾಗಿ ಕೇಂದ್ರ ವಿಶೇಷ ಅನುದಾನವನ್ನೂ ಒದಗಿಸುತ್ತದೆ.

ಎಲ್ಲ ರಾಜ್ಯಗಳು ಅಭಿವೃದ್ಧಿಯಾಗಿಲ್ಲ

ವಿಶೇಷ ವರ್ಗ ಸ್ಥಾನಮಾನ ಪಡೆದ ಎಲ್ಲ ರಾಜ್ಯಗಳು ನಿರೀಕ್ಷಿತ ಅಭಿವೃದ್ಧಿಯನ್ನು ಹೊಂದಿಲ್ಲ. ಮೂರು ದಿನಗಳ ಹಿಂದೆ ನೀತಿ ಆಯೋಗ ಬಿಡುಗಡೆ ಮಾಡಿರುವ 2023–24ನೇ ಸಾಲಿನ ‘ಸುಸ್ಥಿರ ಅಭಿವೃದ್ಧಿ ಗುರಿ’ ವರದಿಯ ಅಂಕಿ ಅಂಶಗಳು ಇದನ್ನು ಹೇಳುತ್ತವೆ. 

ಉದಾಹರಣೆಗೆ ನಾಗಾಲ್ಯಾಂಡ್‌ ರಾಜ್ಯಕ್ಕೆ 1969ರಲ್ಲಿ ವಿಶೇಷ ವರ್ಗ ಸ್ಥಾನಮಾನ ನೀಡಲಾಗಿತ್ತು. ಅದಿನ್ನೂ ಅಭಿವೃದ್ಧಿ ಕಂಡಿಲ್ಲ. ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ 63 ಅಂಕಗಳನ್ನು ಪಡೆದು ಕೊನೆಯಿಂದ ಮೂರನೇ ಸ್ಥಾನ ಗಳಿಸಿದೆ. ಮೇಘಾಲಯ 1971ರಲ್ಲೇ ವಿಶೇಷ ವರ್ಗ ಸ್ಥಾನಮಾನ ಗಳಿಸಿತ್ತು. ಅದು ಕೂಡ 63 ಅಂಕಗಳನ್ನು ಪಡೆದು ಕೊನೆಯಿಂದ ನಾಲ್ಕನೇ ಸ್ಥಾನದಲ್ಲಿದೆ. 

2001ರಲ್ಲಿ ವಿಶೇಷ ವರ್ಗ ಸ್ಥಾನಮಾನ ಪಡೆದಿದ್ದ ಉತ್ತರಾಖಂಡ ಮಾತ್ರ 79 ಅಂಕಗಳನ್ನು ಗಳಿಸಿ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದಿದೆ. ಆದರೆ ಯಾವುದೇ ಸ್ಥಾನ ಇಲ್ಲದ ಕೇರಳ ಇಷ್ಟೇ ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಗಳಿಸಿದೆ.

371ನೇ ವಿಧಿಯ ಅಡಿ ವಿಶೇಷ ಸ್ಥಾನಮಾನ

ಕೇಂದ್ರ ಸರ್ಕಾರವು ಸಂವಿಧಾನದ 371ನೇ ವಿಧಿ ಮತ್ತು ಅದರ ಉಪವಿಧಿಗಳ ಅಡಿಯಲ್ಲಿ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಿಗೆ ಸೀಮಿತವಾಗಿ ವಿಶೇಷ ಸ್ಥಾನಮಾನ ನೀಡಿದೆ. ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಜಿಲ್ಲೆಗಳಾಗಿರುವ ವಿದರ್ಭ ಮತ್ತು ಮರಾಠವಾಡ ಹಾಗೂ ಗುಜರಾತ್‌ನ ಕಛ್ ಮತ್ತು ಸೌರಾಷ್ಟ್ರ ಜಿಲ್ಲೆಗಳಿಗೆ 371ನೇ ವಿಧಿಯ ಅಡಿ ವಿಶೇಷ ಸ್ಥಾನಮಾನ ನೀಡಲಾಗಿದೆ. 

ಇದೇ ರೀತಿ, ನಾಗಾಲ್ಯಾಂಡ್‌ನ ನಾಗಾ ಜನಗಳ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಿಗೆ ರಕ್ಷಣೆ ಒದಗಿಸಲು 371ಎ, ಅಸ್ಸಾಂ ರಾಜ್ಯಕ್ಕೆ ವಿಶೇಷ ಪ್ರಾತಿನಿಧ್ಯ ನೀಡಲು 371ಬಿ, ಮಣಿಪುರಕ್ಕೆ 371ಸಿ, ಆಂಧ್ರಪ್ರದೇಶದ ಜನರ ಶಿಕ್ಷಣ ಮತ್ತು ಉದ್ಯೋಗದ ಹಕ್ಕಿನ ರಕ್ಷಣೆಗಾಗಿ 371ಡಿ, ಆಂಧ್ರಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು 371ಇ, ಸಿಕ್ಕಿಂ ರಾಜ್ಯಕ್ಕಾಗಿ 371ಎಫ್‌, ಮಿಜೋರಾಂಗಾಗಿ 371ಜಿ, ಅರುಣಾಚಲ ಪ್ರದೇಶಕ್ಕಾಗಿ 371ಎಚ್, ಗೋವಾಕ್ಕಾಗಿ 371ಐ ಮತ್ತು ರಾಜ್ಯದ ಹೈದರಾಬಾದ್‌ ಕರ್ನಾಟಕದ ಹಿಂದುಳಿದ 6 ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಲು 371ಜೆ ಕಲಂಗಳನ್ನು ಸೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT