ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ಛಾಬಹಾರ್ ಬಂದರು ಒಪ್ಪಂದ: ಆರ್ಥಿಕ ದಿಗ್ಬಂಧನದ ತೂಗುಗತ್ತಿ
ಆಳ–ಅಗಲ | ಛಾಬಹಾರ್ ಬಂದರು ಒಪ್ಪಂದ: ಆರ್ಥಿಕ ದಿಗ್ಬಂಧನದ ತೂಗುಗತ್ತಿ
ಫಾಲೋ ಮಾಡಿ
Published 15 ಮೇ 2024, 20:05 IST
Last Updated 15 ಮೇ 2024, 20:05 IST
Comments

ಇರಾನ್‌ನ ಛಾಬಹಾರ್ ಬಂದರಿನ ಕಾರ್ಯನಿರ್ವಹಣೆ ಸಂಬಂಧ ಇರಾನ್‌ ಮತ್ತು ಭಾರತ ಸರ್ಕಾರವು ಈಚೆಗಷ್ಟೇ ಒಪ್ಪಂದ ಮಾಡಿಕೊಂಡಿವೆ. ಈ ಬಂದರು ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ಎರಡೂ ಸರ್ಕಾರಗಳು 2003, 2015 ಮತ್ತು 2017ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. 2018ರಿಂದ ಈ ಬಂದರನ್ನು ಭಾರತವೇ ನಿರ್ವಹಣೆ ಮಾಡುತ್ತಿತ್ತು. ಈಗ ಬಂದರು ನಿರ್ವಹಣೆ ಒಪ್ಪಂದವನ್ನು ಹತ್ತು ವರ್ಷಗಳಿಗೆ ವಿಸ್ತರಣೆ ಮಾಡಿಕೊಳ್ಳಲಾಗಿದೆ. ಇದು ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಲು ಕಾರಣವಾಗಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿತ್ತು. ಈ ಮಧ್ಯೆಯೇ ಛಾಬಹಾರ್ ಬಂದರು ಒಪ್ಪಂದದ ಅನುಕೂಲಗಳು ಮತ್ತು ಅಮೆರಿಕವು ನಿರ್ಬಂಧ ಹೇರಿದರೆ ಅದರಿಂದಾಗುವ ಅನನುಕೂಲಗಳ ಬಗ್ಗೆ ಚರ್ಚೆ ಆರಂಭವಾಗಿದೆ

ಒಪ್ಪಂದದ ಸಾಧ್ಯತೆಗಳು

ಒಪ್ಪಂದವು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದರೆ ಭಾರತಕ್ಕೆ ಹಲವು ಅನುಕೂಲಗಳಿವೆ. ರಷ್ಯಾ ಮತ್ತು ಇರಾನ್‌ ಈಗಾಗಲೇ ಅಮೆರಿಕ ಮತ್ತು ಅಮೆರಿಕದ ಮಿತ್ರ ರಾಷ್ಟ್ರಗಳ ಆರ್ಥಿಕ ದಿಗ್ಬಂಧನಕ್ಕೆ ಗುರಿಯಾಗಿವೆ. ಹೀಗಾಗಿ ವಿಶ್ವದ ಬೇರೆ ದೇಶಗಳೊಟ್ಟಿಗೆ ಇವುಗಳ ವ್ಯಾಪಾರ–ವಾಣಿಜ್ಯ ವಹಿವಾಟು ಅಷ್ಟಕ್ಕಷ್ಟೆ. ಇದಕ್ಕೆ ಬೇರೆ ದೇಶಗಳು ವ್ಯಾಪಾರ ನಡೆಸಲು ಹಿಂದೇಟು ಹಾಕುತ್ತಿರುವುದು ಒಂದು ಕಾರಣ. ಅಮೆರಿಕ ಪ್ರಾಯೋಜಿತ ಆರ್ಥಿಕ ದಿಗ್ಬಂಧನದ ಕಾರಣದಿಂದ ಜಲಮಾರ್ಗ ಮತ್ತು ಭೂಮಾರ್ಗಗಳು ಇರಾನ್‌ ಮತ್ತು ರಷ್ಯಾಕ್ಕೆ ಮುಚ್ಚಿಹೋಗಿರುವುದು ಇನ್ನೊಂದು ಪ್ರಮುಖ ಕಾರಣ.

ಇದಕ್ಕಾಗಿ ಈ ಎರಡೂ ದೇಶಗಳು ಕಂಡುಕೊಂಡ ಪರಿಹಾರವೇ, ‘ಅಂತರರಾಷ್ಟ್ರೀಯ ಉತ್ತರ ಮತ್ತು ದಕ್ಷಿಣ ಸಾರಿಗೆ ಕಾರಿಡಾರ್‌’. ರೈಲುಮಾರ್ಗ–ರಸ್ತೆಮಾರ್ಗ ಮತ್ತು ಸಮುದ್ರ ಮಾರ್ಗವನ್ನೂ ಒಳಗೊಂಡ ಈ ಕಾರಿಡಾರ್‌ನಿಂದ ಭಾರತಕ್ಕೂ ಅನುಕೂಲವಿದೆ. ಛಾಬಹಾರ್ ಬಂದರಿನ ಮೂಲಕ ಈ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಬಹುದು. ಭಾರತ– ಐರೋಪ್ಯ ದೇಶಗಳ ರಫ್ತು – ಆಮದು ವಹಿವಾಟನ್ನು ಈ ಕಾರಿಡಾರ್‌ನ ಮೂಲಕ ನಡೆಸಿದರೆ ಹಲವು ಲಾಭಗಳಿವೆ. ಆದರೆ ಅದು ಅಮೆರಿಕ ಆರ್ಥಿಕ ದಿಗ್ಬಂಧನ ಹೇರದಿದ್ದರೆ ಮತ್ತು ಐರೋಪ್ಯ ದೇಶಗಳು ಅದನ್ನು ಪಾಲಿಸದೇ ಇದ್ದರಷ್ಟೇ ಈ ಲಾಭಗಳು ಭಾರತಕ್ಕೆ ದೊರೆಯುತ್ತವೆ.

ಅಫ್ಗಾನಿಸ್ತಾನದ ಮಾರುಕಟ್ಟೆ ಮೇಲಿನ ಜೂಜು

ಅಫ್ಗಾನಿಸ್ತಾನದಲ್ಲಿ ಚುನಾಯಿತ ಸರ್ಕಾರವಿದ್ದಾಗ ಭಾರತವು ‘ಅಂತರರಾಷ್ಟ್ರೀಯ ಸಾರಿಗೆ ಕಾರಿಡಾರ್‌’ ಯೋಜನೆ ರೂಪಿಸಿತ್ತು. ಇರಾನ್‌ನ ಛಾಬಹಾರ್‌ ಬಂದರಿನಿಂದ ಇರಾನ್‌ ಒಳನಾಡಿನ ಮೂಲಕ ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ವರೆಗೆ ರಸ್ತೆ–ರೈಲು ಮಾರ್ಗ ರೂಪಿಸುವುದೇ ಈ ಯೋಜನೆ. ಆದರೆ ಅಫ್ಗಾನಿಸ್ತಾನದ ಸರ್ಕಾರದ ಪತನ ಮತ್ತು ತಾಲಿಬಾನ್‌ ಸರ್ಕಾರದ ಮರುಸ್ಥಾಪನೆಯು ಈ ಯೋಜನೆಯನ್ನು ಬಹುತೇಕ ಸ್ಥಗಿತಗೊಳಿಸಿದೆ. ಅಫ್ಗಾನಿಸ್ತಾನದೊಟ್ಟಿಗೆ ಭಾರತದ ವ್ಯಾಪಾರವೂ ಕುಸಿದಿದೆ. ಈ ಸಂಬಂಧ ಮೂರೂ ದೇಶಗಳು ಹಲವು ಒಪ್ಪಂದಗಳನ್ನು ಮಾಡಿಕೊಂಡಿದ್ದವು. ಈಗ ಮಾಡಿಕೊಂಡಿರುವ ಒಪ್ಪಂದದಿಂದ ಅಫ್ಗಾನಿಸ್ತಾನವನ್ನು ಹೊರಗಿಡಲಾಗಿದೆ. ಆದರೆ ಇರಾನ್‌ ಮತ್ತು ಅಫ್ಗಾನಿಸ್ತಾನದಲ್ಲಿ ರೈಲು ಮತ್ತು ರಸ್ತೆ ಮಾರ್ಗ ನಿರ್ಮಿಸಲು ಭಾರತವು ಆರ್ಥಿಕ ನೆರವು ನೀಡಿರುವ ಕಾರಣ, ಮುಂದೊಂದು ದಿನ ಮತ್ತೆ ಈ ಯೋಜನೆ ಅನುಷ್ಠಾನಕ್ಕೆ ಬರಬಹುದು.‌

ಈ ಕಾರಿಡಾರ್‌ ಯೋಜನೆ ರೂಪುಗೊಂಡಾಗ ಅಫ್ಗಾನಿಸ್ತಾನದಲ್ಲಿನ ಅಪಾರ ಖನಿಜ ಸಂಪತ್ತನ್ನೂ ಗಮನದಲ್ಲಿ ಇರಿಸಿಕೊಳ್ಳಲಾಗಿತ್ತು. ಅಲ್ಲಿನ ಪೆಟ್ರೋಲಿಯಂ, ಚಿನ್ನ, ಮ್ಯಾಂಗನೀಸ್‌ ಮತ್ತು ಲಿಥಿಯಂ ನಿಕ್ಷೇಪಗಳಲ್ಲಿ ಗಣಿಗಾರಿಕೆಯನ್ನೂ ಪರಿಗಣಿಸಿ ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಇಲ್ಲಿ ಗಣಿಗಾರಿಕೆ ನಡೆಸುವ ಉದ್ದೇಶದಿಂದ ಚೀನಾವು ತಾಲಿಬಾನಿಗಳ ಒಟ್ಟಿಗೆ ಮಾತುಕತೆ ನಡೆಸುತ್ತಿದೆ. ಹೀಗಾಗಿ ಈ ಯೋಜನೆ ಮೇಲೆ ಭಾರತ ಮಾಡುತ್ತಿರುವ ಹೂಡಿಕೆ ಒಂದರ್ಥದಲ್ಲಿ ಜೂಜಾಟವೇ ಸರಿ ಎಂದು ಜಾಗತಿಕ ಮಟ್ಟದ ಸುದ್ದಿಸಂಸ್ಥೆಗಳು ವಿಶ್ಲೇಷಿಸುತ್ತಿವೆ.

ಅಮೆರಿಕದ ಎಚ್ಚರಿಕೆ

ಛಾಬಹಾರ್‌ ಬಂದರು ಸಂಬಂಧ ಇರಾನ್‌ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಕಾರಣಕ್ಕಾಗಿ ಭಾರತದ ಮೇಲೆ ಆರ್ಥಿಕ ದಿಗ್ಬಂಧನ ಹೇರುವ ಎಚ್ಚರಿಕೆಯನ್ನು ಅಮೆರಿಕ ನೀಡಿದೆ. ‘ಇರಾನ್‌–ಭಾರತದ ಒಪ್ಪಂದದ ಕುರಿತು ತಿಳಿದಿದೆ. ಇರಾನ್‌ ಮೇಲೆ ಹೇರಿರುವ ದಿಗ್ಬಂಧನವು ಮುಂದುವರಿಯಲಿದೆ. ಯಾವುದೇ ದೇಶವು ಇರಾನ್‌ನೊಂದಿಗೆ ವ್ಯಾವಹಾರಿಕ ಒಪ್ಪಂದಕ್ಕೆ ಮುಂದಾದರೆ, ಅಂಥ ದೇಶವು ಆರ್ಥಿಕ ದಿಗ್ಬಂಧನ ಎದುರಿಸು ವುದಕ್ಕೆ ಸಿದ್ಧವಾಗಬೇಕೆಂದು ನಾವು ಹಿಂದೆಯೂ ಹಲವು ಬಾರಿ ಹೇಳಿದ್ದೇವೆ. ಈಗಲೂ ನಮ್ಮದು ಅದೇ ಅಭಿಪ್ರಾಯ’ ಎಂದು ಅಮೆರಿಕ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತವು, ‘ಬಂದರು ನಿರ್ಮಾಣ ದಿಂದಾಗುವ ಲಾಭದ ಕುರಿತು ಜಗತ್ತಿಗೆ ನಾವು ಹೇಗೆ ಮನವರಿಕೆ ಮಾಡಿಕೊಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಆದ್ದರಿಂದ, ಭಾರತವು ಈ ಬಂದರಿನಿಂದಾಗುವ ಅನುಕೂಲಗಳ ಬಗ್ಗೆ ಜಗತ್ತಿಗೆ ಒತ್ತಿ ಹೇಳಲಿದೆ’ ಎಂದು ಹೇಳಿದೆ. ಆದರೆ, ಭಾರತದ ಮೇಲಂತೂ ತೂಗುಗತ್ತಿಯೊಂದು ನೇತಾಡುತ್ತಿದೆ.

ಯಾವುದೇ ದೇಶವು, ಅಮೆರಿಕದ ಭದ್ರತೆಗೆ ಹಾಗೂ ಆರ್ಥಿಕತೆಗೆ ಬೆದರಿಕೆ ಒಡ್ಡುತ್ತಿದೆ ಎಂದಾದರೆ ಅಮೆರಿಕವು ಅಂಥ ದೇಶಗಳ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರುತ್ತದೆ. ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ಕಾರಣದಿಂದ ಅದರ ಮೇಲೆ ಹಲವು ವರ್ಷಗಳಿಂದ ಅಮೆರಿಕದ ದಿಗ್ಬಂಧನ ಜಾರಿಯಲ್ಲಿದೆ. ಪರಿಣಾಮವಾಗಿ ಇರಾನ್‌ ಆರ್ಥಿಕವಾಗಿ ಕುಸಿದಿದೆ. ಭಾರತದ ಮೇಲೆ ಅಮೆರಿಕವು ದಿಗ್ಬಂಧನ ಹೇರಿದರೆ, ಭಾರತದ ಆರ್ಥಿಕತೆಗೂ ಪೆಟ್ಟು ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉಕ್ರೇನ್‌ ಮೇಲಿನ ದಾಳಿ ಕಾರಣಕ್ಕೆ ಅಮೆರಿಕ ರಷ್ಯಾ ಮೇಲೆ ದಿಗ್ಬಂಧನ ಹೇರಿತ್ತು. ಆನಂತರ ರಷ್ಯಾ ಜೊತೆಗೆ ವ್ಯವಹಾರ ವಿಸ್ತರಿಸಿಕೊಂಡ ಕಾರಣಕ್ಕೆ, ಅಮೆರಿಕವು ಈ ಹಿಂದೆಯೇ ದಿಗ್ಬಂಧನ ಹೇರುವ ಎಚ್ಚರಿಕೆಯನ್ನು ಭಾರತಕ್ಕೆ ನೀಡಿತ್ತು. ಆದರೆ ಅದು ಎಚ್ಚರಿಕೆಯಾಗಷ್ಟೇ ಉಳಿಯಿತು ಹೊರತು ಜಾರಿಯಾಗಲಿಲ್ಲ. ಆದರೆ, ಈ ಬಾರಿ ಅಂತರರಾಷ್ಟ್ರೀಯ ರಾಜಕೀಯ ಹಾಗೂ ಲೆಕ್ಕಾಚಾರಗಳು ಬದಲಾಗಿವೆ. ಈ ಕಾರಣದಿಂದ ಅಮೆರಿಕವು ಸಣ್ಣ ಪ್ರಮಾಣದ ದಿಗ್ಬಂಧನ ವನ್ನಾದರೂ ಹೇರಬಹುದು ಅಥವಾ ಮೊದಲಿನಂತೆಯೇ ಇದು ಕೇವಲ
ಎಚ್ಚರಿಕೆಯಾಗಷ್ಟೇ ಉಳಿಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಸಾಗಾಣೆ ಅಂತರ ಇಳಿಕೆ

ಭಾರತವು ಈಗ ಐರೋಪ್ಯ ದೇಶಗಳೊಟ್ಟಿಗೆ ವ್ಯಾಪಾರ ವಹಿವಾಟನ್ನು ಸಮುದ್ರ ಮಾರ್ಗದ ಮೂಲಕವೇ ನಡೆಸುತ್ತದೆ. ಭಾರತದ ಸರಕುಗಳು ಕೆಂಪು ಸಮುದ್ರ ಮಾರ್ಗದ ಮೂಲಕ ಐರೋಪ್ಯ ದೇಶಗಳನ್ನು ತಲುಪುತ್ತವೆ. ಇದು ದೀರ್ಘವಾದ ಸಮುದ್ರ ಮಾರ್ಗವಾಗಿದೆ. ಅಂದಾಜು 15,000–15,500 ಕಿ.ಮೀ.ನಷ್ಟು ದೂರದ ಮಾರ್ಗವಿದು. ಛಾಬಹಾರ್‌ ಬಂದರು ಒಪ್ಪಂದದ ಮೂಲಕ ಭಾರತವು ‘ಅಂತರ
ರಾಷ್ಟ್ರೀಯ ಉತ್ತರ–ದಕ್ಷಿಣ ಸಾರಿಗೆ ಕಾರಿಡಾರ್‌’ನ ಭಾಗವಾದರೆ, ಈ ಅಂತರವನ್ನು 7,200 ಕಿ.ಮೀ.ಗೆ ಇಳಿಸಬಹುದು. ಇದರಿಂದ ಸರಕುಗಳ ಸಾಗಣೆ ಕ್ಷಿಪ್ರವಾಗಿ ಆಗುವುದಲ್ಲದೆ, ಸಾಗಣೆ ವೆಚ್ಚವೂ ಇಳಿಕೆಯಾಗಲಿದೆ.

ಕಚ್ಚಾತೈಲ ಬೆಲೆ ಇಳಿಕೆ ಸಾಧ್ಯತೆ

ಭಾರತವು ಈಗಾಗಲೇ ರಷ್ಯಾದಿಂದ ಕಚ್ಚಾತೈಲವನ್ನು ತರಿಸಿಕೊಳ್ಳುತ್ತಿದೆ. ಇದು ಕೆಂಪು ಸಮುದ್ರ ಮಾರ್ಗದ ಮೂಲಕವೇ ಭಾರತಕ್ಕೆ ಬರುತ್ತಿರುವ ಕಾರಣ, ಸಾಗಣೆ ವೆಚ್ಚ ಹೆಚ್ಚೇ ಇದೆ. ‘ಅಂತರರಾಷ್ಟ್ರೀಯ ಉತ್ತರ–ದಕ್ಷಿಣ ಸಾರಿಗೆ ಕಾರಿಡಾರ್‌’ನ ಮೂಲಕ ಇದೇ ತೈಲವನ್ನು ತರಿಸಿಕೊಂಡರೆ ಸಾಗಣೆ ವೆಚ್ಚ ಇಳಿಕೆಯಾಗಿ, ಕಚ್ಚಾತೈಲದ ಬೆಲೆ ಇಳಿಕೆಯಾಗಲಿದೆ. ಜತೆಗೆ ಇರಾನ್‌ನಿಂದಲೂ ಕಚ್ಚಾತೈಲ ತರಿಸಿಕೊಳ್ಳಲು ಅವಕಾಶ ದೊರೆಯಬಹುದು.

ಅಮೆರಿಕದ ನೇತೃತ್ವದಲ್ಲಿ ಆರ್ಥಿಕ ದಿಗ್ಬಂಧನ ಇರುವ ಕಾರಣದಿಂದ ರಷ್ಯಾ ಮತ್ತು ಇರಾನ್‌ನ ಕಚ್ಚಾತೈಲಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಬೇಡಿಕೆ ಕುಸಿದಿದೆ. ಹೀಗಾಗಿ ರಿಯಾಯಿತಿ ದರದಲ್ಲಿ ಅವು ಕಚ್ಚಾತೈಲ ಮಾರಾಟ ಮಾಡುತ್ತಿವೆ. ಈ ಎರಡೂ ದೇಶಗಳಿಂದ ಭಾರತವು ಕಚ್ಚಾತೈಲ ಖರೀದಿಸಿದರೆ, ಭಾರತಕ್ಕೆ ಲಾಭವೇ ಆಗಲಿದೆ. ಕಡಿಮೆ ಬೆಲೆಗೆ ದೊರೆಯುವ ಕಚ್ಚಾತೈಲದ ಮೇಲಿನ ಲಾಭವನ್ನು ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ವರ್ಗಾಯಿಸಿದರೆ, ಪೆಟ್ರೋಲ್‌ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ.

l ತೈಲ ಉತ್ಪಾದನಾ ದೇಶಗಳಲ್ಲಿ (ಒಪೆಕ್‌+) ಹಲವು ಅಮೆರಿಕದ ಸಖ್ಯದಲ್ಲಿವೆ. ಅಮೆರಿಕವು ಭಾರತದ ಮೇಲೆ ದಿಗ್ಬಂಧನ ವಿಧಿಸಿದರೆ, ಭಾರತದ ತೈಲ ಆಮದು ಮೇಲೆ ಹೊಡೆತ ಬೀಳಲಿದೆ. ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಮೇಲೆ ಇದು ಪರಿಣಾಮ ಬೀರಲಿದೆ. ಭಾರತದ ಆಮದು ವ್ಯಾಪಾರವನ್ನೂ ಇದು ಬಾಧಿಸಬಹುದು

l ಭಾರತದ ರಫ್ತಿಗೂ ಹೆಚ್ಚಿನ ಪರಿಣಾಮವಾಗಲಿದೆ. ಐರೋಪ್ಯ ದೇಶಗಳು ಸೇರಿದಂತೆ ಅಮೆರಿಕದ ಜತೆಗಿರುವ ದೇಶಗಳಿಗೇ ಭಾರತವು ರಫ್ತು ಮಾಡುತ್ತದೆ. ದಿಗ್ಬಂಧನವು ಭಾರತದ ಆದಾಯವನ್ನು ಕಡಿತ ಮಾಡಲಿದೆ. ದೇಶದ ರಫ್ತಿಗೆ ಹೊಸ ಮಾರುಕಟ್ಟೆಗಳನ್ನು ಹುಡುಕಿಕೊಳ್ಳು ವುದು ದೀರ್ಘವಾದ ಪ್ರಕ್ರಿಯೆ ಆಗಲಿದೆ. ಇದು ಭಾರತಕ್ಕೆ ದೊಡ್ಡ ಪೆಟ್ಟನ್ನೇ ಕೊಡಬಹುದು

l ಭಾರತದ ಅಂತರರಾಷ್ಟ್ರೀಯ ವ್ಯವಹಾರವು ಡಾಲರ್‌ನಲ್ಲಿ ನಡೆಯುತ್ತದೆ. ಅಮೆರಿಕವು ವಿಧಿಸುವ ದಿಗ್ಬಂಧನವು ಇದಕ್ಕೂ ಪೆಟ್ಟು ನೀಡಲಿದೆ. ಎಲ್ಲ ದೇಶಗಳು ಡಾಲರ್‌ನಲ್ಲಿಯೇ ವ್ಯವಹಾರಕ್ಕೆ ಆದ್ಯತೆ ನೀಡುತ್ತದೆ. ರಫ್ತು–ಆಮದಿನಲ್ಲಿ ಹಣದ ವರ್ಗಾವಣೆಗೆ ತಾಂತ್ರಿಕ ತೊಡಕು ಎದುರಾಗಬಹುದು

l ಭಾರತದ ಹಲವು ಮಾಹಿತಿ ತಂತ್ರಜ್ಞಾನ ಕಂಪನಿಗಳ ಗ್ರಾಹಕರು ಅಮೆರಿಕ ಮತ್ತು ಅದರ ಮಿತ್ರ ದೇಶಗಳೇ ಆಗಿವೆ. ಜೊತೆಗೆ, ಇಂಥ ಕಂಪನಿಗಳು ಲಾಭದಾಯಕ ವಾಗಿಯೂ ಇವೆ. ಆದರೆ, ದಿಗ್ಬಂಧನದ ಕಾರಣಕ್ಕಾಗಿ ಇವುಗಳು ನಷ್ಟ ಅನುಭವಿಸಬೇಕಾಗಬಹುದು ಮತ್ತು ಇದರಿಂದ ಉದ್ಯೋಗ ನಷ್ಟವೂ ಉಂಟಾಗಬಹುದು

ಆಧಾರ: ಛಾಬಹಾರ್ ಒಪ್ಪಂದ ಪತ್ರ, ಭಾರತ–ಇರಾನ್‌–ಅಫ್ಗಾನಿಸ್ತಾನ ‘ಅಂತರರಾಷ್ಟ್ರೀಯ ಸಾರಿಗೆ ಕಾರಿಡಾರ್‌’ ಒಪ್ಪಂದ, ರಷ್ಯಾ–ಇರಾನ್‌ನ ‘ಅಂತರರಾಷ್ಟ್ರೀಯ ಉತ್ತರ ಮತ್ತು ದಕ್ಷಿಣ ಸಾರಿಗೆ ಕಾರಿಡಾರ್‌’ ಒಪ್ಪಂದ, ಅಮೆರಿಕದ ವಿದೇಶಾಂಗ ಸಚಿವಾಲಯದ ಪ್ರಕಟಣೆಗಳು, ರಾಯಿಟರ್ಸ್‌, ಎಎಫ್‌ಪಿ, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT