ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ಅತ್ಯಾಚಾರ: ಶಿಕ್ಷೆ ಕನಿಷ್ಠ, ಖುಲಾಸೆ ಗರಿಷ್ಠ
ಆಳ–ಅಗಲ | ಅತ್ಯಾಚಾರ: ಶಿಕ್ಷೆ ಕನಿಷ್ಠ, ಖುಲಾಸೆ ಗರಿಷ್ಠ
Published 4 ಡಿಸೆಂಬರ್ 2023, 23:53 IST
Last Updated 4 ಡಿಸೆಂಬರ್ 2023, 23:53 IST
ಅಕ್ಷರ ಗಾತ್ರ

ದೇಶದ ನ್ಯಾಯಾಲಯಗಳಲ್ಲಿ ವಿಲೇವಾರಿ ಮಾಡಲಾಗುವ ಅತ್ಯಾಚಾರ ಪ್ರಕರಣಗಳಲ್ಲಿ, ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇದೆ. 2022ರಲ್ಲಿ ದೇಶದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ವಿಲೇವಾರಿಯಾದ ಅತ್ಯಾಚಾರ ಪ್ರಕರಣಗಳಲ್ಲಿ, ಶಿಕ್ಷೆಯಾಗಿದ್ದು ಶೇ 21ರಷ್ಟು ಪ್ರಕರಣಗಳಲ್ಲಿ ಮಾತ್ರ. ದೇಶದ ಸ್ಥಿತಿ ಹೀಗಿದ್ದರೆ, ಕರ್ನಾಟಕದ ಸ್ಥಿತಿ ಇದಕ್ಕಿಂತ ಕಳವಳಕಾರಿಯಾಗಿದೆ. ಇದೇ ಅವಧಿಯಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಲೇವಾರಿಯಾದ ಅತ್ಯಾಚಾರ ಪ್ರಕರಣಗಳಲ್ಲಿ, ಶಿಕ್ಷೆಯಾಗಿದ್ದು ಶೇ 5.21ರಷ್ಟರಲ್ಲಿ ಮಾತ್ರ. ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಅತ್ಯಂತ ಕಡಿಮೆ ಇರುವ ರಾಜ್ಯಗಳಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ಮೊದಲ ಎರಡು ಸ್ಥಾನಗಳಲ್ಲಿ ಆಂಧ್ರಪ್ರದೇಶ (4.5%) ಮತ್ತು ಗುಜರಾತ್‌ ಇವೆ (5.1%).

2022ರಲ್ಲಿ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 1.81 ಲಕ್ಷ ಅತ್ಯಾಚಾರ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಆದರೆ, ಇವುಗಳಲ್ಲಿ ಶಿಕ್ಷೆಯಾಗಿದ್ದು 38,136 ಪ್ರಕರಣಗಳಲ್ಲಿ ಮಾತ್ರ. ಇದೇ ಅವಧಿಯಲ್ಲಿ ಕರ್ನಾಟಕದ ವಿವಿಧ ನ್ಯಾಯಾಲಯಗಳು 10,351 ಅತ್ಯಾಚಾರ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, ಶಿಕ್ಷೆಯಾಗಿದ್ದು 540 ಪ್ರಕರಣಗಳಲ್ಲಿ ಮಾತ್ರ.

ವಿಲೇವಾರಿ ಆಗುತ್ತಿರುವ ಒಟ್ಟು ಪ್ರಕರಣಗಳಲ್ಲಿ ವಿಚಾರಣೆಗೂ ಮುನ್ನವೇ ವಜಾ ಆಗುತ್ತಿರುವ, ವಿಚಾರಣೆ ಹಂತದಲ್ಲಿ ವಜಾ ಆಗುತ್ತಿರುವ ಮತ್ತು ಆರೋಪಿಗಳು ಖುಲಾಸೆ ಆಗುತ್ತಿರುವ ಪ್ರಕರಣಗಳ ಪ್ರಮಾಣವೇ ಹೆಚ್ಚು. ಅದರಲ್ಲೂ ಆರೋಪಿಗಳು ಖುಲಾಸೆ ಆಗುತ್ತಿರುವ ಪ್ರಕರಣಗಳ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚು ಇದೆ. 2022ರಲ್ಲಿ ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಲೇವಾರಿ ಆದ ಒಟ್ಟು ಪ್ರಕರಣಗಳಲ್ಲಿ ಶೇ 58ರಷ್ಟು ಪ್ರಕರಣಗಳಲ್ಲಿ (1.05 ಲಕ್ಷ ಪ್ರಕರಣಗಳು) ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು. ಈ ಅವಧಿಯಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಲೇವಾರಿಯಾದ ಒಟ್ಟು ಪ್ರಕರಣಗಳಲ್ಲಿ ಖುಲಾಸೆ ಆದ ಪ್ರಕರಣಗಳ ಪ್ರಮಾಣ ಶೇ 88.3ರಷ್ಟು (9,139 ಪ್ರಕರಣಗಳು).

ನ್ಯಾಯದಾನ ವಿಳಂಬ
ದೇಶದ ಎಲ್ಲೆಡೆ ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯದಾನವು ತೀರಾ ವಿಳಂಬವಾಗುತ್ತಿದೆ ಎಂಬುದನ್ನು ದತ್ತಾಂಶಗಳು ಹೇಳುತ್ತವೆ. ಅತ್ಯಾಚಾರ ಪ್ರಕರಣಗಳನ್ನು ಸಾಮಾನ್ಯ ನ್ಯಾಯಾಲಯಗಳು ನಿರ್ವಹಣೆ ಮಾಡುತ್ತಿದ್ದು, ಪೋಕ್ಸೊ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಗಳು ನಿರ್ವಹಣೆ ಮಾಡುತ್ತಿವೆ. ಹೀಗಿದ್ದೂ, ಅತ್ಯಾಚಾರ ಪ್ರಕರಣಗಳು ತ್ವರಿತವಾಗಿ ವಿಲೇವಾರಿಯಾಗುತ್ತಿಲ್ಲ. ಇದರಿಂದ ಅತ್ಯಾಚಾರ ಸಂತ್ರಸ್ತೆಯರಿಗೆ ಮತ್ತು ಬಂಧನದಲ್ಲಿರುವ ಆರೋಪಿಗಳಿಗೆ ತ್ವರಿತವಾಗಿ ನ್ಯಾಯ ದೊರೆಯುತ್ತಿಲ್ಲ ಎಂಬುದನ್ನು ಈ ದತ್ತಾಂಶಗಳು ವಿವರಿಸುತ್ತವೆ. 2022ರ ಡಿಸೆಂಬರ್ ಅಂತ್ಯಕ್ಕೆ ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿ ಉಳಿದಿರುವ ಪ್ರಕರಣಗಳ ಸಂಖ್ಯೆ 21.84 ಲಕ್ಷ. 2022ರಲ್ಲಿ ಎಲ್ಲಾ ನ್ಯಾಯಾಲಯಗಳು 1.81 ಲಕ್ಷದಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದರೂ, ಇಷ್ಟೊಂದು ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿಯೇ ಉಳಿದಿವೆ. ಹತ್ತಾರು ವರ್ಷಗಳಿಂದ ಪ್ರಕರಣಗಳು ತ್ವರಿತವಾಗಿ ವಿಲೇವಾರಿಯಾಗದೇ ಉಳಿದಿರುವುದರಿಂದ, ಇಷ್ಟೆಲ್ಲಾ ಪ್ರಕರಣಗಳಲ್ಲಿ ನ್ಯಾಯದಾನ ವಿಳಂಬವಾಗಿದೆ. ಕರ್ನಾಟಕದಲ್ಲೂ 2022ರ ಡಿಸೆಂಬರ್ ಅಂತ್ಯಕ್ಕೆ 72,455 ಅತ್ಯಾಚಾರ ಪ್ರಕರಣಗಳು ವಿಚಾರಣೆ ಹಂತದಲ್ಲೇ ಉಳಿದಿವೆ. 2022ರ ಡಿಸೆಂಬರ್ ಅಂತ್ಯಕ್ಕೆ ವಿಚಾರಣೆ ಹಂತದಲ್ಲೇ ಉಳಿದ ಅತಿಹೆಚ್ಚು ಪ್ರಕರಣಗಳು ಇದ್ದದ್ದು ಪಶ್ಚಿಮ ಬಂಗಾಳದಲ್ಲಿ. ಅಲ್ಲಿ ಅಂತಹ 3.56 ಲಕ್ಷ ಪ್ರಕರಣಗಳು ಇದ್ದವು. ನಂತರದಲ್ಲಿ ಅತಿಹೆಚ್ಚು ಪ್ರಕರಣಗಳು ವಿಚಾರಣೆ ಹಂತದಲ್ಲೇ ಉಳಿದದ್ದು ಉತ್ತರ ಪ್ರದೇಶ (2.72 ಲಕ್ಷ), ಮಹಾರಾಷ್ಟ್ರ (2.71 ಲಕ್ಷ), ಒಡಿಶಾ (1.69 ಲಕ್ಷ) ಮತ್ತು ಮಧ್ಯಪ್ರದೇಶದಲ್ಲಿ (1.21 ಲಕ್ಷ). ಪ್ರತಿ ವರ್ಷ ಅತಿಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುವ ರಾಜಸ್ಥಾನದಲ್ಲಿ ವಿಚಾರಣೆ ಹಂತದಲ್ಲೇ ಉಳಿದ ಒಟ್ಟು ಪ್ರಕರಣಗಳ ಸಂಖ್ಯೆ 1.16 ಲಕ್ಷದಷ್ಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT