ಗುರುವಾರ, 26 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುಭವ ಮಂಟಪ | ಒಳಮೀಸಲು: ‘ದತ್ತಾಂಶ’ಕ್ಕೆ ದಾರಿ ಯಾವುದು?

Published : 25 ಸೆಪ್ಟೆಂಬರ್ 2024, 20:57 IST
Last Updated : 25 ಸೆಪ್ಟೆಂಬರ್ 2024, 20:57 IST
ಫಾಲೋ ಮಾಡಿ
Comments

ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಜಾತಿಗಳಿಗೆ ಹಿಂದುಳಿದಿರುವಿಕೆಯ ಆಧಾರದಲ್ಲಿ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ನ್ಯಾಯಪೀಠವು ಹೇಳಿದ ಬೆನ್ನಲ್ಲೇ ಒಳಮೀಸಲು ಅನುಷ್ಠಾನದ ಮಾನದಂಡಗಳ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಆದರೆ, ಯಾವುದೇ  ಗೊಂದಲಕ್ಕೆ ಎಡೆ ಇಲ್ಲದಂತೆ ತನ್ನ ತೀರ್ಪಿನಲ್ಲೇ ಸ್ಪಷ್ಟತೆ ಒದಗಿಸಿರುವ ಸುಪ್ರೀಂ ಕೋರ್ಟ್‌, ‘ವೈಜ್ಞಾನಿಕವಾಗಿ ಸಂಗ್ರಹಿಸಿದ ದತ್ತಾಂಶದ (ಎಂಪಿರಿಕ್‌ ಡೇಟಾ) ಆಧಾರದಲ್ಲೇ ಪರಿಶಿಷ್ಟ ಜಾತಿಗಳ ಹಿಂದುಳಿದಿರುವಿಕೆಯನ್ನು ಗುರುತಿಸಬೇಕು’ ಎಂದು ಹೇಳಿದೆ. ಈಗ ಒಳಮೀಸಲು ಅನುಷ್ಠಾನಕ್ಕೆ ಆಧಾರವಾಗಿ ಬಳಸಬಹುದಾದ ದತ್ತಾಂಶಕ್ಕಾಗಿ ಶೋಧ ನಡೆಯಬೇಕಿದೆ. ಪರಿಶಿಷ್ಟ ಜಾತಿಗಳಲ್ಲೇ ಅತ್ಯಂತ ಹಿಂದುಳಿದ ಸಮುದಾಯಗಳನ್ನು ಗುರುತಿಸಲು ಆಧಾರವಾಗಬಲ್ಲ ನಿಖರ ದತ್ತಾಂಶ ಯಾವುದು ಎಂಬ ಪ್ರಶ್ನೆ ಎಲ್ಲ ರಾಜ್ಯ ಸರ್ಕಾರಗಳ ಮುಂದೆಯೂ ಇದೆ.

ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಒಳಮೀಸಲು ಪರವಾಗಿ ಇರುವಷ್ಟೇ ಪ್ರಬಲವಾದ ಒತ್ತಡ ವಿರುದ್ಧವಾಗಿಯೂ ಇದೆ. ಹೀಗಾಗಿ ಒಳಮೀಸಲು ಕಲ್ಪಿಸಲು ಮಾನದಂಡವಾಗಿ ಬಳಸುವ ದತ್ತಾಂಶದಲ್ಲಿ ಸಣ್ಣ ಪ್ರಮಾಣದ ಲೋಪಗಳಿದ್ದರೂ ಸರ್ಕಾರ ಕೈಗೊಳ್ಳುವ ತೀರ್ಮಾನವು ವಿವಾದಕ್ಕೆ ಈಡಾಗಬಹುದು

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಿಗತಿ, ರಾಜಕೀಯ ಸ್ಥಾನಮಾನಗಳ ನಿಖರ ಅಂಕಿಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸಿಯೇ ಒಳಮೀಸಲು ಹಂಚಿಕೆಯ ನಿರ್ಧಾರ ಕೈಗೊಳ್ಳಬೇಕಾದ ಗುರುತರ ಹೊಣೆಗಾರಿಕೆ ರಾಜ್ಯ ಸರ್ಕಾರಗಳ ಮೇಲಿದೆ. ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಒಳಮೀಸಲು ಪರವಾಗಿ ಇರುವಷ್ಟೇ ಪ್ರಬಲವಾದ ಒತ್ತಡ ವಿರುದ್ಧವಾಗಿಯೂ ಇದೆ. ಹೀಗಾಗಿ ಒಳಮೀಸಲು ಕಲ್ಪಿಸಲು ಮಾನದಂಡವಾಗಿ ಬಳಸುವ ದತ್ತಾಂಶದಲ್ಲಿ ಸಣ್ಣ ಪ್ರಮಾಣದ ಲೋಪಗಳಿದ್ದರೂ ಸರ್ಕಾರ ಕೈಗೊಳ್ಳುವ ತೀರ್ಮಾನವು ವಿವಾದಕ್ಕೆ ಈಡಾಗಬಹುದು. 

ದೇಶದಲ್ಲಿ 2011ರ ನಂತರ ಜನಗಣತಿ ನಡೆದಿಲ್ಲ. ಜನಗಣತಿಯ ದತ್ತಾಂಶವು ಜನಸಂಖ್ಯೆ ಎಷ್ಟು ಎಂಬದನ್ನು ಅರಿಯುವುದನ್ನೇ ಕೇಂದ್ರೀಕರಿಸಿರುತ್ತದೆ. ಜಾತಿವಾರು, ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಮತ್ತು ರಾಜಕೀಯ ಸ್ಥಾನಮಾನಗಳ ಕುರಿತು ನಿಖರವಾದ ಮಾಹಿತಿ ಜನಗಣತಿಯ ದತ್ತಾಂಶದಲ್ಲಿ ದೊರಕುವುದಿಲ್ಲ. ಜನಗಣತಿಯಲ್ಲಿ ಸಂಗ್ರಹಿಸುವ ಸಾಮಾನ್ಯ ದತ್ತಾಂಶದ ಆಧಾರದಲ್ಲಿ ಯಾವುದೇ ಸಮದಾಯವೊಂದರ ಹಿಂದುಳಿದಿರುವಿಕೆಯನ್ನು ನಿಖರವಾಗಿ ಗುರುತಿಸುವುದು ಕಷ್ಟವೂ ಆಗಬಹುದು. ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲು ಕಲ್ಪಿಸುವುದಕ್ಕಾಗಿಯೇ ಧರ್ಮಸಿಂಗ್‌ ನೇತೃತ್ವದ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಆಯೋಗವನ್ನು ನೇಮಿಸಿತ್ತು. 2012ರಲ್ಲಿ ಆಯೋಗ ತನ್ನ ವರದಿಯನ್ನು ಸಲ್ಲಿಸಿತ್ತು. ಈ ವರದಿಯ ಅಧ್ಯಯನಕ್ಕಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು, ಅಂದಿನ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಿತ್ತು. ಸಂಪುಟ ಉಪಸಮಿತಿ ನೀಡಿದ್ದ ಶಿಫಾರಸುಗಳ ಆಧಾರದಲ್ಲಿ ಆಗಿನ ಸರ್ಕಾರವು ಒಳಮೀಸಲು ಅನುಷ್ಠಾನಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಎಲ್ಲ ವರದಿಗಳು, ಶಿಫಾರಸುಗಳು ಇದ್ದರೂ ಸುಪ್ರೀಂ ಕೋರ್ಟ್‌ ವ್ಯಾಖ್ಯಾನಿಸಿದಂತೆ ನಿಖರ ದತ್ತಾಂಶಕ್ಕಾಗಿ ಅವುಗಳನ್ನು ಬಳಸಲಾಗದು ಎಂಬ ವಾದವೂ ಇದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2015’ರ (ಜಾತಿವಾರು ಜನಗಣತಿ) ವರದಿಯಲ್ಲಿನ ದತ್ತಾಂಶಗಳೇ ವಿವಿಧ ಜಾತಿಗಳ ಹಿಂದುಳಿದಿರುವಿಕೆಯನ್ನು ನಿಖರವಾಗಿ ಗುರುತಿಸಲು ಸೂಕ್ತ ಎಂಬ ಚರ್ಚೆ ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿದೆ. ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ 1,351 ಜಾತಿಗಳನ್ನೂ ಒಳಗೊಂಡಂತೆ ಈ ಜಾತಿವಾರು ಜನಗಣತಿ ನಡೆಸಲಾಗಿತ್ತು. 55 ಮಾನದಂಡಗಳ ಆಧಾರದಲ್ಲಿ ನಡೆದ ವಿಸ್ತೃತವಾದ ಸಮೀಕ್ಷೆಯ ವರದಿಯನ್ನು ಎಚ್.ಕಾಂತರಾಜ ನೇತೃತ್ವದ ಆಯೋಗ ಸಿದ್ಧಪಡಿಸಿತ್ತು. ಕೆ.ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಕೆಲವು ಪರಿಷ್ಕರಣೆಗಳೊಂದಿಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ರಾಜ್ಯದ ಯಾವುದೇ ಜಾತಿಯ ಜನರ ಹಿಂದುಳಿದಿರುವಿಕೆಯನ್ನು ಗುರುತಿಸಲು ‘ಜಾತಿವಾರು ಜನಗಣತಿ’ ವರದಿಯಷ್ಟು ನಿಖರವಾಗಿ ದತ್ತಾಂಶ ಒದಗಿಸುವ ಮೂಲ ಬೇರೊಂದಿಲ್ಲ ಎಂಬುದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಅನೇಕರ ಅಭಿಪ್ರಾಯ.

‘ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ 101 ಜಾತಿಗಳಿವೆ. ಆದರೆ, ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಜಾತಿವಾರು ಜನಗಣತಿಯಲ್ಲಿ ಉಪಜಾತಿಗಳನ್ನೂ ಪ್ರತ್ಯೇಕವಾಗಿ ಗುರುತಿಸಿ 180 ಜಾತಿಗಳ ದತ್ತಾಂಶ ಸಂಗ್ರಹಿಸಲಾಗಿದೆ. ಈಗ ಸರ್ಕಾರದ ಬಳಿ ಇರಬಹುದಾದ ಅತ್ಯಂತ ನಿಖರವಾದ ವರದಿ ಇದು. ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲು ಕಲ್ಪಿಸುವ ಹೆಜ್ಜೆಯನ್ನು ರಾಜ್ಯ ಸರ್ಕಾರ ಇಡುವುದಾದರೆ ಜಾತಿವಾರು ಜನಗಣತಿಯ ವರದಿಯ ಆಧಾರದಲ್ಲೇ ತೀರ್ಮಾನಕ್ಕೆ ಬರಬಹುದು’ ಎನ್ನುತ್ತಾರೆ ಸಮೀಕ್ಷೆಯ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿದ್ದ ಕೆ.ಎನ್‌.ಲಿಂಗಪ್ಪ.

ಸರ್ಕಾರದ ಎದುರು ಸವಾಲಿನ ಹಾದಿ: ಒಳಮೀಸಲು ಕಲ್ಪಿಸುವ ವಿಷಯದಲ್ಲಿ ಪರಿಶಿಷ್ಟ ಜಾತಿಗಳ ಮಧ್ಯೆ ಇರುವ ಪರ–ವಿರೋಧದ ಹಗ್ಗ ಜಗ್ಗಾಟವನ್ನು ನಿಯಂತ್ರಣಕ್ಕೆ ತರುವ ಸವಾಲಿನ ಜತೆಯಲ್ಲೇ ನಿಖರ ದತ್ತಾಂಶಕ್ಕಾಗಿ ‘ಜಾತಿವಾರು ಜನಗಣತಿ’ ವರದಿಯನ್ನು ಬಳಸಿಕೊಳ್ಳುವುದೂ ರಾಜ್ಯ ಸರ್ಕಾರಕ್ಕೆ ಒಂದು ಸವಾಲಾಗಿ ಪರಿಣಮಿಸುವುದು ನಿಶ್ಚಿತ. ತ್ವರಿತವಾಗಿ ಒಳಮೀಸಲು ಕಲ್ಪಿಸಬೇಕಾದರೆ ಸರ್ಕಾರ ಜಾತಿವಾರು ಜನಗಣತಿಯ ದತ್ತಾಂಶದ ಮೊರೆ ಹೋಗುವುದೊಂದೇ ದಾರಿ. ಆದರೆ, ಅದು ಸಾಧ್ಯವಾಗಬೇಕಾದರೆ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ವರದಿಯನ್ನು ಸ್ವೀಕರಿಸುವ ಧೈರ್ಯವನ್ನು ಮೊದಲು ತೋರಬೇಕಾಗುತ್ತದೆ.

ಜಾತಿವಾರು ಜನಗಣತಿಯ ವರದಿಯನ್ನು ಸ್ವೀಕರಿಸದಂತೆ ಪ್ರಬಲ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ವರದಿ ಬಹಿರಂಗಗೊಂಡರೆ ರಾಜ್ಯದಲ್ಲಿ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಮತ್ತು ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಸೃಷ್ಟಿಯಾಗಬಹುದಾದ ಅಲ್ಲೋಲ ಕಲ್ಲೋಲವನ್ನು ಗಮನದಲ್ಲಿ ಇರಿಸಿಕೊಂಡು ಈ ಎರಡೂ ಸಮುದಾಯಗಳು ಬಿಗಿ ನಿಲುವು ತಳೆದಿವೆ. ರಾಜಕೀಯ ವಿರೋಧವನ್ನು ಸಂಭಾಳಿಸಿಕೊಂಡು ಜಾತಿವಾರು ಜನಗಣತಿ ವರದಿಯನ್ನು ಸ್ವೀಕರಿಸಿ, ದತ್ತಾಂಶವನ್ನು ಬಹಿರಂಗಪಡಿಸುವ ದಿಟ್ಟತನವನ್ನು ರಾಜ್ಯ ಸರ್ಕಾರ ಪ್ರದರ್ಶಿಸಿದರೆ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲು ಕಲ್ಪಿಸುವ ಐತಿಹಾಸಿಕ ನಿರ್ಧಾರಕ್ಕೆ ನಾಂದಿ ಹಾಡಿದಂತಾಗುತ್ತದೆ.

‘ಕರ್ನಾಟಕದಲ್ಲಷ್ಟೆ ನಿಖರ ದತ್ತಾಂಶವಿದೆ’

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲು ಕಲ್ಪಿಸಲು ಪೂರಕವಾಗಿ ಸುಪ್ರೀಂ ಕೋರ್ಟ್‌ ಸೂಚಿಸಿರುವ ನಿಖರ ದತ್ತಾಂಶ ಕರ್ನಾಟಕದಲ್ಲಷ್ಟೇ ಲಭ್ಯವಿದೆ. ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ಜಾತಿವಾರು ಜನಗಣತಿ ವರದಿಯಂತಹ ದತ್ತಾಂಶ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಈ ವರದಿಯ ಆಧಾರದಲ್ಲೇ ಪರಿಶಿಷ್ಟ ಜಾತಿಗಳ ಹಿಂದುಳಿದಿರುವಿಕೆಯನ್ನು ಗುರುತಿಸಿ ಒಳಮೀಸಲು ಕಲ್ಪಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಸುಸೂತ್ರವಾಗಿ ಮಾಡಬಹುದು’ ಎನ್ನುತ್ತಾರೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್‌. ‘ಎಸ್‌ಎಸ್‌ಎಲ್‌ಸಿವರೆಗಿನ ಶಿಕ್ಷಣ ಪಡೆದಿರುವುದು ಹಾಗೂ ನಂತರದ ಶೈಕ್ಷಣಿಕ ಅವಕಾಶಗಳನ್ನು ಆಧರಿಸಿ ಹಿಂದುಳಿದಿರುವಿಕೆಯನ್ನು ಗುರುತಿಸಬೇಕಾಗುತ್ತದೆ. ಈಗ ರಾಜ್ಯ ಸರ್ಕಾರವು ದಿಟ್ಟತನ ಪ್ರದರ್ಶಿಸಿದರೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲು ಕಲ್ಪಿಸುವುದರಲ್ಲಿ ದೇಶದಲ್ಲೇ ಮುಂದಡಿ ಇಟ್ಟ ಕೀರ್ತಿ ದೊರಕುತ್ತದೆ’ ಎಂದು ಅವರು ಹೇಳುತ್ತಾರೆ.

‘ಜಾತಿವಾರು ಜನಗಣತಿ ವರದಿಯೇ ಸೂಕ್ತ’

‘ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲು ಕಲ್ಪಿಸಲು ಹೊಸದಾಗಿ ದತ್ತಾಂಶ ಕಲೆಹಾಕಲು ಸಮೀಕ್ಷೆ ಆರಂಭಿಸಿದರೆ ಹಲವು ವರ್ಷಗಳು ಬೇಕಾಗುತ್ತವೆ. ಈಗ ಎಲ್ಲ ಜಾತಿಗಳ ಜನರ ಸಮಗ್ರ ಮಾಹಿತಿಯುಳ್ಳ ಜಾತಿವಾರು ಜನಗಣತಿಯ ವರದಿ ಸರ್ಕಾರದ ಬಳಿ ಇದೆ. ವ್ಯಾಪಕವಾದ ದತ್ತಾಂಶಗಳುಳ್ಳ ಈ ವರದಿಯ ಆಧಾರದಲ್ಲೇ ಒಳಮೀಸಲು ಕಲ್ಪಿಸುವ ನಿರ್ಧಾರ ಕೈಗೊಳ್ಳುವುದು ಸೂಕ್ತ’ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಹೇಳಿದರು. ‘ಶಿಕ್ಷಣ ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯಲ್ಲಿ ಒಳಮೀಸಲು ಕಲ್ಪಿಸಲು ಕಾನೂನು ತಿದ್ದುಪಡಿ ಬೇಕಾಗುತ್ತದೆ. ಆದರೆ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಳಮೀಸಲಾತಿ ಒದಗಿಸಲು ಕಾನೂನು ತಿದ್ದುಪಡಿಯ ಅಗತ್ಯವಿಲ್ಲ. ಸರ್ಕಾರದ ಆದೇಶವೊಂದರ ಮೂಲಕವೇ ಅನುಷ್ಠಾನಕ್ಕೆ ತರಬಹುದು’ ಎಂದರು.

‘ಬದಲಾವಣೆಗಳೊಂದಿಗೂ ಬಳಸಬಹುದು’

‘2015ರಲ್ಲಿ ಜಾತಿವಾರು ಜನಗಣತಿ ನಡೆಸಲಾಗಿತ್ತು. ಆ ವರದಿಯಲ್ಲಿ ರಾಜ್ಯದ ಎಲ್ಲ ಜಾತಿಗಳ ಜನಸಂಖ್ಯೆ ಮತ್ತು ಸಾಮಾಜಿಕ ಶೈಕ್ಷಣಿಕ ರಾಜಕೀಯ ಸ್ಥಿತಿಗತಿಯ ವಿಸ್ತೃತ ಚಿತ್ರಣ ಇದೆ. ರಾಷ್ಟ್ರೀಯ ಸರಾಸರಿ ಆಧಾರದಲ್ಲಿ ದತ್ತಾಂಶಗಳನ್ನು ಪರಿಷ್ಕರಿಸಿಕೊಂಡು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲು ಕಲ್ಪಿಸಲು ಆಧಾರವಾಗಿ ಬಳಸಬಹುದು’ ಎನ್ನುತ್ತಾರೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್‌. ಲಿಂಗಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT