ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ: ಜೈಲುಗಳ ಸುಧಾರಣೆ ಮರೀಚಿಕೆ
ಆಳ–ಅಗಲ: ಜೈಲುಗಳ ಸುಧಾರಣೆ ಮರೀಚಿಕೆ
ಕಾಡುತ್ತಿದೆ ಸಿಬ್ಬಂದಿ ಕೊರತೆ, ಕೈದಿಗಳ ಮನಃಪರಿವರ್ತನೆಗಿಲ್ಲ ಅವಕಾಶ
ಫಾಲೋ ಮಾಡಿ
Published 8 ಸೆಪ್ಟೆಂಬರ್ 2024, 20:21 IST
Last Updated 8 ಸೆಪ್ಟೆಂಬರ್ 2024, 20:21 IST
Comments
ಕೊಲೆ ಪ್ರಕರಣ‌ದ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್‌ಗೆ ವಿಶೇಷ ಆತಿಥ್ಯ ಸಿಕ್ಕಿದ ವಿಚಾರ ರಾಜ್ಯದ ಜೈಲು ವ್ಯವಸ್ಥೆ ಬಗ್ಗೆ ಭಾರಿ ಚರ್ಚೆ ಹುಟ್ಟುಹಾಕಿರುವುದೇನೋ ನಿಜ. ಜೈಲಿನಲ್ಲಿ ಕೆಲವು ಕೈದಿಗಳಿಗೆ ಸಿಗುತ್ತಿರುವ ರಾಜಾತಿಥ್ಯದ ಬಗ್ಗೆ ಮಾತ್ರ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಈ ಚರ್ಚೆಯ ಅಬ್ಬರದ ನಡುವೆ ರಾಜ್ಯದಲ್ಲಿರುವ ಕಾರಾಗೃಹಗಳ ವಾಸ್ತವ ಸ್ಥಿತಿಗತಿ, ಕನಿಷ್ಠ ಸವಲತ್ತುಗಳೂ ಇಲ್ಲದೇ ಇಡೀ ಜೈಲು ವ್ಯವಸ್ಥೆ ಕುಸಿದಿರುವ ಪ್ರಮುಖ ವಿಚಾರ ಹಿನ್ನೆಲೆಗೆ ಸರಿದುಹೋಗಿದೆ.
ಕಾರಾಗೃಹಗಳಿಗೆ ಏನು ಬೇಕು?
ರಾಜ್ಯದಲ್ಲಿರುವ ಬಹುತೇಕ ಜೈಲುಗಳು ಬ್ರಿಟಿಷ್‌ ಕಾಲದವು. ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎಲ್ಲರನ್ನೂ ಇರಿಸಲು ಸಾಧ್ಯವಾಗುತ್ತಿಲ್ಲ. ಸದ್ಯಕ್ಕಂತೂ ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ಮಲಗಲು ಸಾಧ್ಯವಾಗದ ಸ್ಥಿತಿ ಇದೆ. ನೆಮ್ಮದಿ ಇಲ್ಲದ ವಾತಾವರಣದಲ್ಲಿ ವ್ಯಕ್ತಿಯ ಮನಃಪರಿವರ್ತನೆ ಹೇಗೆ ಸಾಧ್ಯ? ಭದ್ರತೆಗಾಗಿ ಸಿಸಿಟಿವಿ, ಬಾಡಿವೋರ್ನ್‌ ಕ್ಯಾಮೆರಾಗಳು ಬೇಕು. ಇವುಗಳತ್ತ ಸರ್ಕಾರ ಗಮನವನ್ನೇ ಕೊಟ್ಟಿಲ್ಲ. ‘ಬಜೆಟ್‌ನಲ್ಲಿ ಸಿಗುವುದು ಅತ್ಯಲ್ಪ ಅನುದಾನ. ಕನಿಷ್ಠ ಕೇಂದ್ರ ಕಾರಾಗೃಹಗಳಲ್ಲಾದರೂ, ಅತ್ಯಾಧುನಿಕ ಜಾಮರ್‌ ವ್ಯವಸ್ಥೆ ಇರಬೇಕಿತ್ತು. ಆದರೆ, ರಾಜ್ಯದ ಯಾವ ಕೇಂದ್ರ ಕಾರಾಗೃಹಗಳಲ್ಲೂ ಇನ್ನೂ ಅಂಥ ಜಾಮರ್‌ಗಳು ಬಂದೇ ಇಲ್ಲ. ಜೈಲುಗಳು ಸವಲತ್ತುಗಳಿಲ್ಲದೇ ಸೊರಗುತ್ತಿವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ’ ಎಂದು ಹೇಳುತ್ತಾರೆ ಅಧಿಕಾರಿಗಳು.
ರಾಜ್ಯವೂ ಸೇರಿದಂತೆ ದೇಶದ ಜೈಲುಗಳಲ್ಲಿ ಭದ್ರತೆ, ಸಿಬ್ಬಂದಿ ಕೊರತೆ, ಅವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಜೈಲುಗಳ ಸುಧಾರಣೆಗಾಗಿ ರಚನೆಯಾಗುವ ಸಮಿತಿಗಳಲ್ಲಿ ಪೊಲೀಸ್‌ ಇಲಾಖೆಯೂ ಸೇರಿದಂತೆ ಸಾಮಾಜಿಕ ರಂಗದ ಪ್ರಮುಖರು, ನ್ಯಾಯಾಧೀಶರು, ವೈದ್ಯರು ಮತ್ತು ಇತರರು ಇರಬೇಕು. ಆಗ ಮಾತ್ರ ಸುಧಾರಣೆ ಕೇಂದ್ರಿತ ಶಿಫಾರಸುಗಳು ಬರಲು ಸಾಧ್ಯ. ಜತೆಗೆ ಶಿಫಾರಸುಗಳು ಅನುಷ್ಠಾನವಾದರೆ ಮಾತ್ರ ಜೈಲುಗಳು ಸುಧಾರಣೆ ಕಾಣಬಹುದು.
–ಡಿ.ವಿ.ಗುರುಪ್ರಸಾದ್‌, ನಿವೃತ್ತ ಡಿಜಿಪಿ
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಜೈಲು ವ್ಯವಸ್ಥೆ ಚೆನ್ನಾಗಿದೆ. ಇಲ್ಲಿ ಸಿಬ್ಬಂದಿ ಕೊರತೆಯೇ ಸಮಸ್ಯೆ. ಜತೆಗೆ, ಸಿಬ್ಬಂದಿಗೆ ತರಬೇತಿ, ರಕ್ಷಣಾ ಆಯುಧ ನೀಡಬೇಕು. ಸಾವಿರ ಜನಕ್ಕೆ ಒಂದು ಜೈಲು ಎಂಬಂತಾಗಬೇಕು. ವಿಚಾರಣಾಧೀನ, ಶಿಕ್ಷಾಬಂದಿ, ಅಪಾಯಕಾರಿ ಪ್ರವೃತ್ತಿಯುಳ್ಳ ಕೈದಿಗಳನ್ನೂ ವಿಭಾಗಿಸಬೇಕು. ಜೈಲು ಸುಧಾರಣೆಗೆ ರಚನೆಯಾಗುವ ಸಮಿತಿಗಳಲ್ಲಿ ಜೈಲು ಅಧಿಕಾರಿಗಳೂ ಇರಬೇಕು. ಸುಧಾರಣೆಯ ವಿಷಯ ಬಂದಾಗ ಕಠಿಣ ಕ್ರಮಗಳು ಇರಬಾರದು, ಉದಾರವಾಗಿರಬೇಕು..
–ವಿ.ಎಸ್‌.ರಾಜಾ, ನಿವೃತ್ತ ಎಐಜಿ, ಕಾರಾಗೃಹ ಇಲಾಖೆ
ಹೆಸರಿಗಷ್ಟೇ ಜಿಲ್ಲಾ ಸಮಿತಿ?
ಕಾರಾಗೃಹಗಳ ಸುಧಾರಣೆಗೆ ಕಾಲ ಕಾಲಕ್ಕೆ ಅವುಗಳ ಪರಿಶೀಲನೆ ಆಗಬೇಕು ಎಂಬ ನಿಯಮವಿದೆ. ಇದಕ್ಕಾಗಿ ‘ಬೋರ್ಡ್‌ ಆಫ್‌ ವಿಸಿಟರ್ಸ್‌’ ಎಂಬ ಸಮಿತಿ ಪ್ರತಿ ಜಿಲ್ಲೆಗಳಲ್ಲೂ ಇರುತ್ತದೆ. ಇದಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ನ್ಯಾಯಧೀಶರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮತ್ತು ಇತರರು ಸದಸ್ಯರಾಗಿರುತ್ತಾರೆ. ಈ ಸಮಿತಿ ಮೂರು ತಿಂಗಳಿಗೆ ಒಮ್ಮೆ ತಮ್ಮ ವ್ಯಾಪ್ತಿಯ ಜೈಲುಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ಮಾಡಿ, ಸರ್ಕಾರಕ್ಕೆ ವರದಿ ನೀಡಬೇಕು. ಆದರೆ, ಬಹುತೇಕ ಸಮಿತಿಗಳು ವರ್ಷದಲ್ಲಿ ಒಂದು ಬಾರಿಯೂ ಭೇಟಿ ನೀಡಿ ಪರಿಶೀಲನೆ ನಡೆಸುವುದಿಲ್ಲ ಎಂದು ಅಧಿಕಾರಿಗಳು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT