ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ (ಮೊದಲ ಪುಟದಿಂದ) ಕೆ.ಸಿ ಮತ್ತು ಎಚ್.ಎನ್.ವ್ಯಾಲಿ ನೀರಿನಲ್ಲಿ ಕೈಗಾರಿಕೆ ಮತ್ತು ಆಸ್ಪತ್ರೆ ತ್ಯಾಜ್ಯ ಸೇರಿವೆ. ಆದ್ದರಿಂದ ಮೂರನೇ ಹಂತದ ಶುದ್ಧೀಕರಣ ಅತ್ಯಗತ್ಯ. ಅಂತರ್ಜಲ ಮರುಪೂರಣಕ್ಕೆ ಈ ಯೋಜನೆ ಅಗತ್ಯವಾಗಿದ್ದರೂ ಕೇವಲ ಎರಡು ಹಂತದಲ್ಲಿ ನೀರನ್ನು ಸಂಸ್ಕರಿಸಿದರೆ ಖಂಡಿತ ಸುರಕ್ಷಿತ ಅಲ್ಲ. ಸದ್ಯಕ್ಕೆ ಸಮಸ್ಯೆ ಗೋಚರಿಸದಿದ್ದರೂ ಭವಿಷ್ಯದಲ್ಲಿ ಖಂಡಿತ ಅಪಾಯ ಕಾದಿದೆ. ಎರಡು ವರ್ಷದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆ ಆಗಿದೆ. ಹೀಗಾಗಿ ಸಮಸ್ಯೆ ತೀವ್ರಗೊಂಡಿಲ್ಲ. ಎರಡು ಹಂತದ ಶುದ್ಧೀಕರಣದ ನಂತರವೂ ನೀರಿನಲ್ಲಿ ಕ್ಯಾಡ್ಮಿಯಂ ಕ್ರೋಮಿಯಂ ತಾಮ್ರ ನಿಕೆಲ್ ಸೀಸ ಜಿಂಕ್ ಮುಂತಾದ ಲೋಹಧಾತು ರಾಸಾಯನಿಕ ಅಂಶ ಕಂಡು ಬಂದಿವೆ. ಇವು ಆಹಾರದಲ್ಲಿ ಸೇರಿ ಆರೋಗ್ಯದ ಮೇಲೆ ಭಾರಿ ಪರಿಣಾಮ ಉಂಟು ಮಾಡುತ್ತಿವೆ. ವರ್ತೂರು ಕೆರೆ ಸುತ್ತ ಅಂತರ್ಜಲ ಕಲುಷಿತಗೊಂಡಿದೆ. ಇಲ್ಲಿ ಬೆಳೆದ ಮೂಲಂಗಿ ಗಜ್ಜರಿ ಕೋಸು ಹಾಗೂ ತರಕಾರಿಯಲ್ಲಿ ಲೋಹಧಾತುವಿನ ಅಂಶ ಕಂಡು ಬಂದಿದೆ. ಆ ಪ್ರದೇಶದ ಬಾವಿ ಕೊಳವೆಬಾವಿ ನೀರಿನಲ್ಲಿ ನೈಟ್ರೇಟ್ ಅಂಶ ಪತ್ತೆಯಾಗಿದೆ. ಇಲ್ಲಿ ಬೆಳೆದ ತರಕಾರಿ ಸೊಪ್ಪುಗಳನ್ನು ದೀರ್ಘ ಕಾಲ ಸೇವಿಸಿದರೆ ಕಿಡ್ನಿ ವೈಫಲ್ಯ ಯಕೃತ್ ಸಮಸ್ಯೆ ಹೃದಯ ಸಂಬಂಧಿ ಕಾಯಿಲೆ ಚರ್ಮ ವ್ಯಾಧಿ ಕಾಣಿಸಿಕೊಳ್ಳುತ್ತವೆ. ವರ್ತೂರು ಸುತ್ತಮುತ್ತ ನಾವು ನಡೆಸಿದ ಅಧ್ಯಯನದಲ್ಲಿ ಚಿಕ್ಕ ಮಕ್ಕಳಲ್ಲಿ ಆರೋಗ್ಯ ಮತ್ತು ಕಿಡ್ನಿ ಸಮಸ್ಯೆ ಕಂಡುಬಂದಿದೆ. ಈ ಬಗ್ಗೆ ವರದಿ ನೀಡಿದರೂ ಅಧಿಕಾರಿಗಳು ಕಾರ್ಯಗತಗೊಳಿಸಿಲ್ಲ. ಕೊಳಚೆ ನೀರನ್ನು ನೈಸರ್ಗಿಕವಾಗಿ ಶುದ್ಧಗೊಳಿಸಿ ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಸೋಸಿ ತೆಗೆಯಬಹುದು. ಜಕ್ಕೂರು ಕೆರೆಯಲ್ಲಿ ಈಗಾಗಲೇ ಈ ಪ್ರಯೋಗ ಮಾಡಲಾಗಿದೆ. ಆದರೆ ಸರ್ಕಾರದ ವಿವಿಧ ಇಲಾಖೆಯಲ್ಲಿರುವ ವಿಜ್ಞಾನಿಗಳು ಸರ್ಕಾರಕ್ಕೆ ಬೇಕಾದಂತೆ ವರದಿ ನೀಡಿದ್ದಾರೆ. ಇದು ಹೆಚ್ಚು ದಿನ ನಡೆಯಲ್ಲ.–ಡಾ.ಟಿ.ವಿ.ರಾಮಚಂದ್ರ ಪರಿಸರ ವಿಜ್ಞಾನಿ ಭಾರತೀಯ ವಿಜ್ಞಾನ ಸಂಸ್ಥೆ ( ಐಐಎಸ್‌ಸಿ) ಬೆಂಗಳೂರು
ಬಯಲುಸೀಮೆ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ಹೆಸರಲ್ಲಿ ಜಲಮೂಲಗಳನ್ನು ಕಲುಷಿತಗೊಳಿಸಲಾಗುತ್ತಿದೆ. ಕೆ.ಸಿ.ವ್ಯಾಲಿ ಮೊದಲ ಹಂತದಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆ ತಜ್ಞರ ಎಚ್ಚರಿಕೆ ಕಡೆಗಣಿಸಿ ಸರ್ಕಾರ ಈಗ ಎರಡನೇ ಹಂತದ ಕಾಮಗಾರಿಗೆ ಮುಂದಾಗಿದೆ. 272 ಕೆರೆಗಳಿಗೆ ನೀರು ಹರಿಸಲು ಪೈಪ್‌ಲೈನ್ ಹಾಗೂ ಪಂಪ್‌ಹೌಸ್ ಕಾಮಗಾರಿ ಆರಂಭವಾಗಿದೆ. ಭರವಸೆ ನೀಡಿದಂತೆ ಮೊದಲ ಹಂತದಲ್ಲಿ 134 ಕೆರೆ ತುಂಬಿಲ್ಲ. ಮೂರನೇ ಹಂತದ ಶುದ್ಧೀಕರಣ ಘಟಕ ತೆರೆದಿಲ್ಲ. ಆದರೂ ಸರ್ಕಾರ ವಿಸ್ತರಣೆಗೆ ಮುಂದಾಗಿದೆ. ಅರೆ ಸಂಸ್ಕರಿತ ನೀರನ್ನಾದರೂ ಹರಿಸಿರುವುದೇ ಪುಣ್ಯ ಎನ್ನುವಂತೆ ರಾಜಕಾರಣಿಗಳು ಮಾತನಾಡುತ್ತಿದ್ದಾರೆ. ಮೂರು ಹಂತದಲ್ಲಿ ಶುದ್ಧೀಕರಿಸಿದ ನಂತರವೇ ನೀರು ಹರಿಸುವಂತೆ ಯೋಜನೆ ಜಾರಿಗೂ ಮುಂಚೆಯೇ ಹೋರಾಟ ನಡೆಸುತ್ತಿದ್ದೇವೆ. ಭವಿಷ್ಯದಲ್ಲಿ ಎದುರಾಗಬಹುದಾದ ಅನಾಹುತಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ವಿಜ್ಞಾನಿಗಳು ಈ ಬಗ್ಗೆ ವರದಿ ನೀಡಿದ್ದಾರೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ.–ಆರ್.ಆಂಜನೇಯ ರೆಡ್ಡಿ ಅಧ್ಯಕ್ಷ ಶಾಶ್ವತ ನೀರಾವರಿ ಹೋರಾಟ ಸಮಿತಿ ಚಿಕ್ಕಬಳ್ಳಾಪುರ
ಕೋಲಾರ ನಗರದ ಸುತ್ತಮುತ್ತಲಿನ ಕೋಲಾರಮ್ಮ ಅಮ್ಮೇರಹಳ್ಳಿ ಮಡೇರಹಳ್ಳಿ ಹಾಗೂ ಕೋಡಿಕಣ್ಣೂರು ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲಾಗುತ್ತಿದೆ. ಇದಕ್ಕೂ ಮುನ್ನ ಈ ಕೆರೆಗಳ ನೀರನ್ನು ಕೋಲಾರ ನಗರದ ಜನರಿಗೆ ಕುಡಿಯಲು ಪೂರೈಸಲಾಗುತಿತ್ತು. ಬರಗಾಲ ಬಂದಾಗ ಈ ಕೆರೆಯೊಳಗೆ ಕೋಲಾರ ನಗರಸಭೆಯು ನೂರಕ್ಕೂ ಅಧಿಕ ಕೊಳವೆಬಾವಿ ಕೊರೆಸಿ ಪಂಪ್ ಹಾಗೂ ಮೋಟಾರ್ ಅಳವಡಿಸಿ ನೀರು ಸರಬರಾಜು ಮಾಡುತಿತ್ತು. ಕೆಲ ಕೊಳವೆ ಬಾವಿಗಳಿಗೆ ಮುಚ್ಚಳ ಕೂಡ ಅಳವಡಿಸಿಲ್ಲ. ಕೆ.ಸಿ.ವ್ಯಾಲಿ ನೀರು ಹರಿಸಿ ಜಲಮೂಲದ ಜೊತೆಗೆ ಕೊಳವೆಬಾವಿ ನೀರನ್ನೂ ಕಲುಷಿತಗೊಳಿಸಲಾಗಿದೆ. ಕುಡಿಯುವ ನೀರಿನ ಉದ್ದೇಶದ ಯರಗೋಳ್ ಜಲಾಶಯದ ಒಡಲನ್ನೂ ಕೆ.ಸಿ.ವ್ಯಾಲಿ ನೀರು ಸೇರುತ್ತಿದೆ.–ಗಾಂಧಿನಗರ ನಾರಾಯಣಸ್ವಾಮಿ ಜನಪರ ವೇದಿಕೆ ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.