ಯೋಗ ಇಂದು ವಿಶ್ವಮಾನ್ಯತೆಯನ್ನು ಪಡೆದಿದೆ. ಯೋಗದ ತವರುಮನೆಯವರಾದ ಭಾರತೀಯರಿಗೆ ಇದು ಸಂತೋಷದಾಯಕವೇ ಹೌದು. ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದಲೇ ಇದು ನಮ್ಮ ಆಧ್ಯಾತ್ಮಿಕ–ಧಾರ್ಮಿಕ ಸಾಧನೆಯ ಭಾಗವಾಗಿದ್ದಿತು; ವೇದ–ಉಪನಿಷತ್ತುಗಳಲ್ಲಿಯೇ ಯೋಗವನ್ನು ಕುರಿತು ಸೊಲ್ಲುಗಳಿರುವುದು ಸುಳ್ಳಲ್ಲ. ಹೀಗಿದ್ದರೂ ಇದಕ್ಕೆ ಸ್ವತಂತ್ರವಾದ ದರ್ಶನದ ಭಿತ್ತಿ ಒದಗಿದ್ದು ಪತಂಜಲಿಮುನಿಗಳ ‘ಯೋಗದರ್ಶನ’ವಾಗಿಯೇ.

ಇಂದು ಯೋಗ ಎಂದರೆ ಯೋಗಾಸನಗಳು ಮಾತ್ರವೇ ಎಂಬ ವ್ಯಾಖ್ಯಾನ ಹೊರಟಂತಿದೆ; ದಿಟ, ಇದರ ಜೊತೆಗೆ ಸ್ವಲ್ಪಮಟ್ಟಿಗೆ ಪ್ರಾಣಾಯಾಮವನ್ನೂ ಕೆಲವರು ಸೇರಿಸುತ್ತಾರೆ; ಆದರೆ ಇದಷ್ಟೇ ಯೋಗದರ್ಶನವಲ್ಲ. ಯೋಗಕ್ಕೆ ಎಂಟು ಅಂಗಗಳು ಉಂಟು; ಅವುಗಳಲ್ಲಿ ಆಸನ ಮತ್ತು ಪ್ರಾಣಾಯಾಮಗಳೂ ಸೇರಿಕೊಂಡಿವೆ. ಯಮ, ನಿಯಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ – ಇವು ಉಳಿದ ಅಂಗಗಳು. ಯೋಗ ಎಂಬ ಶಬ್ದದ ವ್ಯುತ್ಪತ್ತಿಯನ್ನು ಎರಡು ರೀತಿಯಲ್ಲಿ ಕಾಣಿಸಲಾಗಿದೆ; ಒಂದು: ‘ಯುಜ್ ಸಮಾಧೌ’ ಎಂದು ಧಾತುವಿನಿಂದ ಸಿದ್ಧವಾಗುತ್ತದೆ; ನಿಶ್ಚಲತೆ, ಶಾಶ್ವತತೆಯನ್ನು ಇದು ಸೂಚಿಸುತ್ತದೆ. ಇನ್ನೊಂದು: ‘ಯುಜಿರ್ ಯೋಗೇ’ ಎಂಬುದರಿಂದ ಸಿದ್ಧವಾಗುತ್ತದೆ; ಸೇರುವುದು, ಹೊಂದಿಕೊಳ್ಳುವುದು ಎಂಬ ಅರ್ಥವನ್ನು ಇದು ಎತ್ತಿಹಿಡಿಯುತ್ತದೆ. ಈ ಹಿನ್ನೆಲೆಯಿಂದ ವಿಚಾರ ಮಾಡಿದಾಗ ಯೋಗದರ್ಶನದ ವೈಶಾಲ್ಯ ವಿಶದವಾಗುತ್ತದೆ. ಶಾಶ್ವತವೂ ಸುಖಕರವೂ ಆದ ನೆಮ್ಮದಿಯ ಸ್ಥಿತಿಯನ್ನು ಹೊಂದುವುದು ಯೋಗದ ಗುರಿ; ಅದಕ್ಕೆ ಬೇಕಾದ ದೇಹ–ಮನಸ್ಸುಗಳನ್ನು ಹೊಂದಿಸಲು, ಸಿದ್ಧಿಗೊಳಿಸಲು ಒದಗುವ ದೈಹಿಕ–ಮಾನಸಿಕ ಉಪಾಯಗಳೆಲ್ಲವೂ ಯೋಗವೇ.

ಪರಂಪರೆಯಲ್ಲಿ ಯೋಗಸೂತ್ರಗಳನ್ನು ಬರೆದ ಪತಂಜಲಿ ಮತ್ತು ವ್ಯಾಕರಣ ಮಹಾಭಾಷ್ಯವನ್ನು ಬರೆದ ಪತಂಜಲಿ – ಇಬ್ಬರೂ ಒಂದೇ ಎಂಬ ಎಣಿಕೆಯುಂಟು. ಇದು ಐತಿಹಾಸಿಕವಾಗಿ ಹೌದೋ ಅಲ್ಲವೋ, ಹೇಳುವುದು ಕಷ್ಟ; ಆದರೆ ಈ ನಂಬಿಕೆಯಲ್ಲಿ ಒಂದು ಸ್ವಾರಸ್ಯವುಂಟು. ಪತಂಜಲಿ ಮಹರ್ಷಿಯು ನಮ್ಮ ಚಿತ್ತದಲ್ಲಿರುವ ಮಲಗಳನ್ನು ಯೋಗದ ಮೂಲಕವಾಗಿಯೂ, ಮಾತಿನಲ್ಲಿರುವ ಮಲಗಳನ್ನೂವ್ಯಾಕರಣದ ಮೂಲಕವಾಗಿಯೂ ಸ್ವಚ್ಛಗೊಳಿಸುವ ಉಪಾಯಗಳನ್ನು ತಿಳಿಸಿಕೊಟ್ಟ ಎಂಬುದು ಇಲ್ಲಿರುವ ಧ್ವನಿ. ನಮ್ಮ ನಡೆ–ನುಡಿಗಳ ಶುದ್ಧಿಯಲ್ಲಿಯೇ ನಮ್ಮ ಉನ್ನತಿಯೂ ನೆಮ್ಮದಿಯೂ ಅಡಗಿದೆ ಎಂಬುದು ಇಲ್ಲಿರುವ ನಿಲುವು. ಹೀಗಾಗಿಯೇ ನಮ್ಮ ದೇಶದ ಬಹುಪಾಲು ದಾರ್ಶನಿಕರು ಯೋಗವನ್ನು ಸಾಧನೆಯ ಭಾಗವಾಗಿ ಸ್ವೀಕರಿಸಿದ್ದಾರೆ ಎಂಬುದು ಗಮನಾರ್ಹ. ಉದಾಹರಣೆಗೆ, ಬುದ್ಧ ಭಗವಂತನು ಆರ್ಯಸತ್ಯಗಳ ಭಾಗವಾಗಿಯೇ ಎಂಟು ಯೋಗಗಳನ್ನೂ ಉಪದೇಶಿಸಿದ; ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ್ ಸಮಾಧಿ – ಇವೇ ಆ ಅಂಗಗಳು. ನಮ್ಮ ಅಂತರಂಗ–ಬಹಿರಂಗದ ಶುದ್ಧಿಗಾಗಿ ಬೇಕಾದ ಸಾಧನೆಗಳೆಲ್ಲವೂ ಇದರಲ್ಲಿ ಸೇರಿದೆ ಎಂಬುದು ಸ್ಪಷ್ಟ. ಪತಂಜಲಿಯು ‘ಯೋಗಃ ಚಿತ್ತವೃತ್ತಿನಿರೋಧಃ’ ಎಂದೇ ಯೋಗದ ಲಕ್ಷಣವನ್ನು ಹೇಳಿರುವುದನ್ನು ಮರೆಯುವಂತಿಲ್ಲ. ಚಿತ್ತವೆಂದರೆ ಮನಸ್ಸು, ಬುದ್ಧಿ, ಅಹಂಕಾರ. ಹೀಗಾಗಿ, ಆತ್ಮಸಾಕ್ಷಾತ್ಕಾರಕ್ಕಾಗಿ ನಮ್ಮ ದೈಹಿಕ–ಮಾನಸಿಕವಾದ ಏಳು–ಬೀಳುಗಳನ್ನು ಸಂಯಮದಲ್ಲಿರಿಸಿಕೊಳ್ಳಬೇಕೆಂಬುದೇ ಯೋಗದರ್ಶನದ ಕಾಣ್ಕೆ ಎಂಬುದು ಸಿದ್ಧವಾಗುತ್ತದೆ.

ಭಗವದ್ಗೀತೆಯನ್ನು ಕೂಡ ಯೋಗಶಾಸ್ತ್ರ ಎಂದೇ ಆದರಿಸಲಾಗಿದೆ; ಗೀತಾಚಾರ್ಯ ಶ್ರೀಕೃಷ್ಣನು ಯೋಗಾಚಾರ್ಯನೂ ಹೌದು. ಗೀತೆಯು ಯೋಗವನ್ನು ‘ಕರ್ಮಸು ಕೌಶಲಮ್’ ಎಂದಿದೆ; ನಾವು ಮಾಡುವ ಕೆಲಸಗಳಲ್ಲಿ ಇರಬೇಕಾದ ಜಾಣ್ಮೆ ಎಂದು ಇದರ ಸರಳಾರ್ಥ. ಇಲ್ಲಿಯ ಜಾಣತನ ಎನ್ನುವುದುಆತ್ಮಘಾತಕವೂ ಲೋಕವಂಚಕವೂ ಆದ ಬುದ್ಧಿಯ ಕಸರತ್ತು ಅಲ್ಲ; ಇದು ನಮ್ಮನ್ನು ನಾವು ಆತ್ಮಾನಂದಕ್ಕೆ ‘ಸಿದ್ಧ’ಗೊಳಿಸಿಕೊಳ್ಳುವ ಪ್ರ–ಕ್ರಿಯೆ. ಎಂದರೆ ನಾವು ಎಂಥ ಸಂದರ್ಭವನ್ನೂ ಸ್ಥಿರವಾಗಿಯೂ ಸಹಜವಾಗಿಯೂ ಶುದ್ಧವಾಗಿಯೂ ಸ್ವೀಕರಿಸಬಲ್ಲಂಥ ವ್ಯಕ್ತಿತ್ವವನ್ನು ನಮ್ಮಲ್ಲಿ ತುಂಬಿಸಿಕೊಳ್ಳುವ ಹೂರಣದ ಕೆಲಸವೇ ಹೊರತು, ಮುಂದಿರುವವರನ್ನು ಮೆಚ್ಚಿಸುವ–ತಬ್ಬಿಬ್ಬುಗೊಳಿಸುವ ತೋರಣದ ಸಿಂಗಾರವಲ್ಲ; ಇದು ಹಿಗ್ಗಿಗೆ ಉಬ್ಬುವ, ಕುಗ್ಗಿಗೆ ತಗ್ಗುವ ಚಂಚಲತೆಯೂ ಅಲ್ಲ; ಅಥವಾ ದುಃಖಕ್ಕೆ ಹೆದರಿ ಓಡಿಹೋಗುವ ಪಲಾಯನವಾದವೋ, ಸುಖಕ್ಕೆ ಹಂಬಲಿಸಿ ತೇಲಾಡುವ ಲಂಪಟತನವೋ ಅಲ್ಲ; ಪ್ರತಿಯೊಂದು ಕ್ಷಣದ ಪೂರ್ಣದರ್ಶನಕ್ಕೆ ನಮ್ಮನ್ನು ನಾವು ಅಣಿಗೊಳಿಸಿಕೊಳ್ಳುವ ಪ್ರಜ್ಞೆಯೇ ಈ ಕುಶಲತೆ. ಹೊರಗಿನ ಮತ್ತು ಒಳಗಿನ ಇಂಥ ಎಚ್ಚರವೇ ಅಲ್ಲವೆ ನಮಗೆ ಇಂದು ಬೇಕಾಗಿರುವ ಅರಿವು?

ಆದರೆ ಇಂದು ಯೋಗ ಎಂಬುದೂ ಒಂದು ಉದ್ಯಮದ ಹಾದಿಯನ್ನು ಹಿಡಿದಂತಿದೆ. ಇದರ ನಡುವೆಯೇ ಯೋಗದರ್ಶನಕ್ಕೆ ಬೇಕಾದ ದಿಟವಾದ ಸ್ಥಿರವೂ ಸುಖವೂ ಆದ ಆಸನವನ್ನು ಒದಗಿಸುವುದು ಕೂಡ ಭಾರತೀಯರ ಕರ್ತವ್ಯವೆ ಆಗಿದೆಯೆನ್ನಿ!

‘ಮಾನಸಿಕ ಆರೋಗ್ಯವೂ ವೃದ್ಧಿ’

ಯೋಗಾಭ್ಯಾಸವನ್ನು ದಿನವೂ ಮಾಡಬೇಕು. ಆಗ ಆರೋಗ್ಯ ಸಹಜವಾಗಿಯೇ ಸ್ಥಿರವಾಗಿರುತ್ತದೆ. ಕೋವಿಡ್‌ನ ಸಂದರ್ಭದಲ್ಲಂತೂ ಯೋಗ ಮತ್ತು ಪ್ರಾಣಾಯಾಮಗಳು ಅತ್ಯಂತ ಉಪಯುಕ್ತವಾಗಬಲ್ಲವು. ನಮಗೆ ಭಯ ಉಂಟಾದಾಗ ಸಹಜವಾಗಿಯೇ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ; ಅಗತ್ಯ ಪ್ರಮಾಣದಲ್ಲಿ ನಮಗೆ ಆಮ್ಲಜನಕ ಸಿಗದಂತಾಗುತ್ತದೆ. ಯೋಗಾಸನ ಮತ್ತು ಪ್ರಾಣಾಯಾಮಗಳ ನಿರಂತರ ಅಭ್ಯಾಸದಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ; ನಮ್ಮ ದೈಹಿಕ, ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ

– ಬಿ. ರಾಘವೇಂದ್ರ ಶೆಣೈ,‘ನಿರಾಮಯ ಯೋಗಕುಟೀರಮ್’

‘ಜೀವನದ ಅ, ಆ, ಇ, ಈ’

ರೋಗಮುಕ್ತಿಗಾಗಿ ಮಾತ್ರವೇ ಯೋಗವನ್ನು ಪತಂಜಲಿ ಮಹರ್ಷಿಗಳು ಹೇಳಿಲ್ಲ.ನಮ್ಮ ಜೀವನಕ್ಕೆ ಬೇಕಾದ ‘ಅ, ಆ, ಇ, ಈ’ಗಳನ್ನು ಯೋಗ ನಮಗೆ ಕಲಿಸಿಕೊಡುತ್ತದೆ. ‘ಅ’ ಎಂದರೆ ಅರಿವು, ‘ಆ’ ಎಂದರೆ ಆನಂದ, ‘ಇ’ ಎಂದರೆ ಇರವು, ‘ಈ’ ಎಂದರೆ ಈಶ್ವರ – ಹೀಗೆ ಜೀವನದ ಸಮಗ್ರ ಸಾಕ್ಷಾತ್ಕಾರಕ್ಕೆ ಬೇಕಾದ ಎಲ್ಲವನ್ನೂ ಯೋಗದಿಂದ ಪಡೆಯಬಹುದಾಗಿದೆ. ಆಸನ–ಪ್ರಾಣಾಯಾಮಗಳಿಗಷ್ಟೆ ಯೋಗವನ್ನು ಸೀಮಿತ ಮಾಡಬಾರದು; ಯಮ, ನಿಯಮ ಮುಂತಾದ ಎಂಟು ಅಂಗಗಳು ಸೇರಿ ಯೋಗ; ಹೀಗಾಗಿ ಯೋಗದರ್ಶನದಲ್ಲಿ ಹೇಳಿರುವ ನೈತಿಕ ಮೌಲ್ಯಗಳನ್ನೂ ಅಳವಡಿಸಿಕೊಳ್ಳಬೇಕು

– ಎಸ್. ಎನ್. ಓಂಕಾರ್,ಯೋಗಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.