ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೈತ್ರಾ ಕುಂದಾಪುರ ಪ್ರಕರಣ: ₹1.08 ಕೋಟಿ ಎಫ್‌.ಡಿ ಜಪ್ತಿ

ಬಿಜೆಪಿ ಟಿಕೆಟ್ ವಂಚನೆ * ಚೈತ್ರಾ–ಶ್ರೀಕಾಂತ್ ಹೆಸರಿನಲ್ಲಿ ಹೆಚ್ಚು ಆಸ್ತಿ
Published : 17 ಸೆಪ್ಟೆಂಬರ್ 2023, 17:16 IST
Last Updated : 17 ಸೆಪ್ಟೆಂಬರ್ 2023, 17:16 IST
ಫಾಲೋ ಮಾಡಿ
Comments

ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಪ್ರಕರಣದ ಆರೋಪಿಗಳ ಚರಾಸ್ತಿ ಹಾಗೂ ಸ್ಥಿರಾಸ್ತಿ ಶೋಧ ಪ್ರಕ್ರಿಯೆಯನ್ನು ಸಿಸಿಬಿ ಪೊಲೀಸರು ಭಾನುವಾರವೂ ಮುಂದುವರಿಸಿದ್ದು, ಬ್ಯಾಂಕ್‌ನಲ್ಲಿದ್ದ ಠೇವಣಿ ಹಾಗೂ ಕಾರು ಜಪ್ತಿ ಮಾಡಿದ್ದಾರೆ.

ಪ್ರಕರಣದ ಆರೋಪಿಗಳಾದ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್‌ಗೆ ಸೇರಿದ್ದ ಆಸ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿವೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ದೂರುದಾರ ಗೋವಿಂದ ಬಾಬು ಪೂಜಾರಿ ಕಡೆಯಿಂದ ಪಡೆದಿದ್ದ ₹ 3.50 ಕೋಟಿ ಹಣವನ್ನು ಚೈತ್ರಾ, ಶ್ರೀಕಾಂತ್ ಹಾಗೂ ಆಪ್ತರು ಹಂಚಿಕೊಂಡಿದ್ದರು. ಅದೇ ಹಣವನ್ನು ಆರೋಪಿಗಳು ಹಲವೆಡೆ ಹೂಡಿಕೆ ಮಾಡಿದ್ದಾರೆ. ಹೀಗಾಗಿ, ಅವರ ಖಾತೆಗಳು ಇರುವ ಬಾಗಲಕೊಟೆ, ಕುಂದಾಪುರ ಹಾಗೂ ಇತರೆಡೆ ಬ್ಯಾಂಕ್‌ಗಳಲ್ಲಿ ಭಾನುವಾರವೂ ಶೋಧ ನಡೆಸಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಶನಿವಾರ ₹ 81 ಲಕ್ಷ ನಗದು ಜಪ್ತಿ ಮಾಡಲಾಗಿತ್ತು. ಇದೀಗ, ₹1.08 ಕೋಟಿ ಮೊತ್ತದ ನಿಶ್ಚಿತ ಠೇವಣಿಗಳು (ಎಫ್‌.ಡಿ) ಪತ್ತೆಯಾಗಿವೆ. ಬ್ಯಾಂಕ್‌ಗಳ ಮೂಲಕ ಠೇವಣಿಗಳ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ.’

‘ವಂಚನೆ ಹಣದಲ್ಲಿ ಆರೋಪಿಗಳು ₹ 12 ಲಕ್ಷ ಮೌಲ್ಯದ ಕಿಯಾ ಕಾರು ಖರೀದಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ, ಸೊಲ್ಲಾಪುರದ ಬಾರ್‌ವೊಂದರ ಎದುರು ಕಾರು ನಿಲ್ಲಿಸಲಾಗಿತ್ತು. ಚೈತ್ರಾ ಸ್ನೇಹಿತರಾದ ಮುಧೋಳ ತಾಲ್ಲೂಕಿನ ಕಿರಣ್, ಕಾರು ತೆಗೆದುಕೊಂಡು ಬಂದು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ವಾಹನಾ ಚಾಲನಾ ತರಬೇತಿ ಕೇಂದ್ರ ನಡೆಸುತ್ತಿರುವ ಕಿರಣ್, ಅದೇ ಕಾರು ಬಳಸುತ್ತಿದ್ದರು. ಅವರ ಬಳಿ ಕಾರು ಇರುವುದು ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಕಾರು ಜಪ್ತಿ ಮಾಡಲಾಗಿದೆ.

‘ಕಾರ್ಯಕ್ರಮವೊಂದರಲ್ಲಿ ಚೈತ್ರಾ ಪರಿಚಯವಾಗಿತ್ತು. ಸೆಪ್ಟೆಂಬರ್ ಮೊದಲ ವಾರದಲ್ಲಿ ನನಗೆ ಕರೆ ಮಾಡಿದ್ದ ಚೈತ್ರಾ, ಕಾರನ್ನು ಸ್ವಲ್ಪ ದಿನ ಇಟ್ಟುಕೊಳ್ಳುವಂತೆ ಹೇಳಿದ್ದರು. ಹೀಗಾಗಿ, ಕಾರು ತಂದು ನನ್ನ ಬಳಿ ಇಟ್ಟುಕೊಂಡಿದ್ದೆ. ವಂಚನೆಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ಕಿರಣ್ ಹೇಳಿಕೆ ನೀಡಿರುವುದಾಗಿ ಸಿಸಿಬಿ ಮೂಲಗಳು ಹೇಳಿವೆ.

ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್, ಹಲವು ವರ್ಷಗಳ ಸ್ನೇಹಿತರು. ಹೀಗಾಗಿ, ಶ್ರೀಕಾಂತ್ ಹೆಸರಿನಲ್ಲಿ ಚೈತ್ರಾ ಹಲವೆಡೆ ಹೂಡಿಕೆ ಮಾಡಿರುವ ಸಂಗತಿ ಗೊತ್ತಾಗಿದೆ. ಎಲ್ಲವನ್ನೂ ಪತ್ತೆ ಮಾಡಲಾಗಿದೆ’ ಎಂದು ಅಧಿಕಾರಿ ವಿವರಿಸಿದರು.

ಗೋವಿಂದ ಬಾಬು ವಿಚಾರಣೆ: ‘ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಮಾಹಿತಿ ಬೇಕಿದೆ. ಹೀಗಾಗಿ, ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ದೂರುದಾರ ಗೋವಿಂದ ಬಾಬು ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ಆಸ್ಪತ್ರೆಯಲ್ಲಿ ಚೈತ್ರಾ: ಸಿಸಿಬಿ ವಿಚಾರಣೆ ಸಂದರ್ಭದಲ್ಲಿ ಕುಸಿದು ಬಿದ್ದಿದ್ದ ಚೈತ್ರಾ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಭಾನುವಾರ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಆದರೆ, ತಮಗೆ ಇತರೆ ಆರೋಗ್ಯ ಸಮಸ್ಯೆ ಇರುವುದಾಗಿ ಚೈತ್ರಾ ಹೇಳುತ್ತಿದ್ದಾರೆ. ಹೀಗಾಗಿ, ವೈದ್ಯರು ಸದ್ಯಕ್ಕೆ ಚೈತ್ರಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಲ್ಲವೆಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಸಾಲು ಮರದ ತಿಮ್ಮಕ್ಕ ಕಾರು ಬಳಕೆ ಶಂಕೆ: ‘ಉದ್ಯಮಿ ಗೋವಿಂದ ಬಾಬು ಅವರನ್ನು ನಂಬಿಸುವ ಉದ್ದೇಶದಿಂದ ಆರೋಪಿಗಳು, ಸಾಲು ಮರದ ತಿಮ್ಮಕ್ಕ ಅವರಿಗೆ ಸರ್ಕಾರದ ನೀಡಿದ್ದ ಕಾರನ್ನು ಬಳಕೆ ಮಾಡಿದ್ದರೆಂಬ ಶಂಕೆ ಇದೆ. ಆದರೆ, ಅದಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ’ ಎಂದು ಸಿಸಿಬಿ ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT