ಬೆಂಗಳೂರು: ಈಶ್ವರನಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಓಂ ನಮಃ ಶಿವಾಯ ಜಪ... ಇದು ನಗರದ ಪ್ರಮುಖ ಶಿವ ದೇಗುಲಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಕಂಡು ಬಂದ ದೃಶ್ಯಗಳಿವು.

ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ಮುಂಜಾನೆಯಿಂದ ಸಂಜೆಯವರೆಗೂ ವಿಶೇಷ ಪೂಜೆಗಳು ನಡೆದವು. ಜನರು ಶ್ರದ್ಧಾ ಭಕ್ತಿಯಿಂದ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹಿರಿಯರು, ಕಿರಿಯರು ಭಕ್ತಿಭಾವದಿಂದ ಶಿವಲಿಂಗಕ್ಕೆ ಕ್ಷೀರಾಭಿಷೇಕ ನೆರವೇರಿಸಿದರು. ಕೆಲ ದೇಗುಲಗಳಲ್ಲಿ ಬೆಳಿಗಿನ ಜಾವದಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು. ಹೂವಿನ ಅಲಂಕಾರ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಮಹಾಲಕ್ಷ್ಮೀ ಹೋಮ, ವಿಶೇಷ ರುದ್ರ ಹೋಮ, ಸಹಸ್ರ ಬಿಲ್ವಾರ್ಚನೆ ಮಹಾ ಮಂಗಳಾರತಿ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆದವು.

ಗವಿಪುರದ ಗವಿಗಂಗಾಧರೇಶ್ವರ ದೇವಾಲಯ, ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯ, ಟೆಂಪಲ್ ಸ್ಟ್ರೀಟ್‌ನ ದಕ್ಷಿಣಮುಖ ನಂದಿ ತೀರ್ಥ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಜರಗನಹಳ್ಳಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ಕೋಣನಕುಂಟೆಯ ಚಂದ್ರಚೂಡೇಶ್ವರ ದೇವಸ್ಥಾನ, ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಚಾಮರಾಜಪೇಟೆಯ ಮಲೆ ಮಹದೇಶ್ವರ ದೇವಸ್ಥಾನ, ಹಳೆ ವಿಮಾನ ನಿಲ್ದಾಣ ರಸ್ತೆಯ ಮುರುಗೇಶ ಪಾಳ್ಯದ ಶಿವೋಹಂ ಶಿವ ದೇವಸ್ಥಾನ, ಕೋಟೆ ಜಲಕಂಟೇಶ್ವರ ದೇವಸ್ಥಾನ ಸೇರಿ ಸೇರಿ ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ದರ್ಶನಕ್ಕೆ ನೂಕುನುಗ್ಗಲು: ಕೆಲವು ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗ ನಡೆಯಿತು. ಸರದಿಯಲ್ಲಿ ನಿಂತು ಭಕ್ತರು ಪ್ರಸಾದ ಸೇವಿಸಿದರು. ದೇಗುಲಗಳಲ್ಲಿ ದರ್ಶನಕ್ಕೆ ನೂಕುನುಗ್ಗಲು ಸಹ ಇತ್ತು. ಮತ್ತಿಕೆರೆ ಮೈದಾನದಲ್ಲಿ ರಾಮಮಂದಿರದ ಜತೆಗೆ ರಾಮ ಹಾಗೂ ಶಿವನ ಬೃಹತ್ ಪ್ರತಿಕೃತಿ ಇರಿಸಲಾಗಿತ್ತು. ಇದು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಕಲಾಸಿಪಾಳ್ಯದಲ್ಲಿರುವ ಜಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜಲಕಂಠೇಶ್ವರನಿಗೆ ಮಂಜುಗಡ್ಡೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ಪ್ರಮುಖ ದೇವಾಲಯಗಳಲ್ಲಿ ರಾತ್ರಿ ಜಾಗರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಜಾಗರಣೆ ಅಂಗವಾಗಿ ನಾಟಕೋತ್ಸವ, ಸಂಗೀತೋತ್ಸವ, ಕಾವ್ಯೋತ್ಸವ ಆಯೋಜಿಸಲಾಗಿತ್ತು. ದೀಪೋತ್ಸವ ವಿಶೇಷ ಮೆರುಗು ನೀಡಿತು. ಕತ್ತಲು ಆವರಿಸುತ್ತಿದ್ದಂತೆ ಶಿವನ ಆರಾಧನೆಯ ತಾಣಗಳು ವಿದ್ಯುತ್ ದೀಪಗಳಿಂದ ಕಂಗೊಳಿಸಿದವು. ತಳಿರು, ತೋರಣಗಳು ಮಹಾಶಿವರಾತ್ರಿ ಮೆರುಗು ಹೆಚ್ಚಿಸಿದವು.

ಸಂಗೀತ–ನೃತ್ಯದ ಮೆರಗು

ಜಾಗರಣೆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳು ಹಾಗೂ ದೇವಾಲಯಗಳು ಶುಕ್ರವಾರ ಸಂಜೆಯಿಂದ ಶನಿವಾರ ಬೆಳಿಗ್ಗೆ ತನಕ ಲಕ್ಷ ದೀಪೋತ್ಸವ, ನಾಟಕೋತ್ಸವ, ಸಂಗೀತ–ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದವು. ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘವು ಮಲ್ಲೇಶ್ವರದ ಶ್ರೀಕಂಠೇಶ್ವರ ಭವನದಲ್ಲಿ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಯು ಹೆಸರುಘಟ್ಟ ರಸ್ತೆಯ ಚಿಮಿಣಿ ಹಿಲ್ಸ್‌ನಲ್ಲಿ ಶಿವರಾತ್ರಿ ಸ್ವರ ಸಂಭ್ರಮ ಕಾರ್ಯಕ್ರಮ ನಡೆಸಿತು. ಸೃಷ್ಟಿ ಸೆಂಟರ್ ಆಫ್ ಪರ್ಮಫಾಮಿಂಗ್ ಆರ್ಟ್ಸ್ ಆ್ಯಂಡ್ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್ ಥೆರೆಪಿಯಿಂದ ಚಾಮರಾಜಪೇಟೆಯಲ್ಲಿರುವ ಶೃಂಗೇರಿ ಶಂಕರ ಮಠದಲ್ಲಿ ರಾತ್ರಿಯಿಡೀ ಸಂಗೀತ–ನೃತ್ಯ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಸಿರೂರು ಪಾರ್ಕ್ ಆಟದ ಮೈದಾನದಲ್ಲಿ ‘ಜಾಣಜಾಣೆಯರ ನಗೆಜಾಗರಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಂಗಸೇತುವೆ ಟ್ರಸ್ಟ್ ವತಿಯಿಂದ ಶ್ರೀಗಂಧ ಕಾವಲಿನ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ ‘ವರಭ್ರಷ್ಠ’ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು. ಕಾಡುಮಲ್ಲೇಶ್ವರ ಗೆಳೆಯರ ಬಳಗದಿಂದ ಮಲ್ಲೇಶ್ವರದ ಕಾಡುಮಲ್ಲೇಶ್ವರ ಬಯಲು ರಂಗಮಂಟಪದಲ್ಲಿ ತಡರಾತ್ರಿವರೆಗೂ ಸಂಗೀತ–ನೃತ್ಯ ಕಾರ್ಯಕ್ರಮಗಳು ನಡೆದವು.

ರಾತ್ರಿಯಿಡೀ ‘ಕಾವ್ಯ ಶಿವರಾತ್ರಿ’

ಜನಸಂಸ್ಕೃತಿ ಪ್ರತಿಷ್ಠಾನ ಕಾವ್ಯ ಮಂಡಲ ಹಾಗೂ ಡಾ.ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಜಂಟಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಕಾವ್ಯ ಶಿವರಾತ್ರಿ ಆಯೋಜಿಸಿತ್ತು. ಅಹೋರಾತ್ರಿ ಕಾವ್ಯ ಗಾಯನ ನಡೆಯಿತು. ಅದಾದ ಮೇಲೆ ಮಂಟೇಸ್ವಾಮಿ ಮತ್ತು ಮಲೆಮಹದೇಶ್ವರ ಮಹಾಕಾವ್ಯಗಳ ಗಾಯನ, ‘ಮಿಸಸ್ ಅಂಬೇಡ್ಕರ್’ ನಾಟಕ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.