ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮದ ಬಗ್ಗೆ ಅವಹೇಳನ, ಅಪಪ್ರಚಾರ: ದತ್ತಾತ್ರೇಯ ಹೊಸಬಾಳೆ ಬೇಸರ

Published 4 ಡಿಸೆಂಬರ್ 2023, 19:46 IST
Last Updated 4 ಡಿಸೆಂಬರ್ 2023, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರಂಥಗಳಲ್ಲಿ ಹೇಳದಿದ್ದರೂ ನಡವಳಿಕೆಯಿಂದ ಕೆಲವರನ್ನು ಶ್ರೇಷ್ಠ ಮತ್ತು ಕನಿಷ್ಠವೆಂದು ಕಂಡಿರುವ ಅಮಾನುಷ ನಡೆ ನಮ್ಮ ಸಮಾಜದ ದೌರ್ಭಾಗ್ಯ. ಮೇಲು–ಕೀಳಿನ ಆಚರಣೆಯೇ ಹಿಂದೂ ಧರ್ಮವೆಂದು ಹೇಳುವ ಮೂಲಕ ಅಲ್ಲಲ್ಲಿ ಧರ್ಮದ ಬಗ್ಗೆ ಅವಹೇಳನ, ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಬೇಸರ ವ್ಯಕ್ತಪಡಿಸಿದರು. 

ದಿ ಮಿಥಿಕ್ ಸೊಸೈಟಿ ನಗರದಲ್ಲಿ ಸೋಮವಾರ ಹಮ್ಮಿಕೊಂಡ ನೂರ್ ಅಹಮದ್ ಖಾನ್ ದತ್ತಿ ಉಪನ್ಯಾಸದಲ್ಲಿ ‘ಗುರೂಜಿ ಗೋಳ್ವಲ್ಕರ್ ಮತ್ತು ಹಿಂದೂ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯತೆ’ ವಿಷಯದ ಬಗ್ಗೆ ಮಾತನಾಡಿದರು.

‘ಶ್ರೇಷ್ಠ ಜೀವನವನ್ನು ಜಗತ್ತಿಗೆ ನೀಡಿ, ನಡವಳಿಕೆಯಲ್ಲಿ ಕೆಲವೊಮ್ಮೆ ಎಡವಿದ್ದು ಏಕೆ ಎನ್ನುವುದರ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಮೇಲು–ಕೀಳಿನ ಆಚರಣೆ ವೇದದ ನಿರ್ದೇಶನಕ್ಕೆ ವಿರೋಧವಾದದ್ದಾಗಿದೆ. ವಾಸ್ತವವಾಗಿ ಈ ಆಚರಣೆ ಧರ್ಮವಲ್ಲ, ಅಧರ್ಮ. ಋಗ್ವೇದದಲ್ಲಿ ಯಾರೂ ಶ್ರೇಷ್ಠರಲ್ಲ, ಯಾರೂ ಕನಿಷ್ಠರಲ್ಲವೆಂದು ಹೇಳಲಾಗಿದೆ. ವೇದದ ಸೂಕ್ತಿಗಳು ಮತ್ತು ಮಂತ್ರಗಳೂ ಮಾನವನ ಸಮಾನತೆಯನ್ನು ಸ್ವಷ್ಟವಾಗಿ ಸಾರುತ್ತವೆ’ ಎಂದು ಹೇಳಿದರು. 

‘ಹುಟ್ಟಿನಿಂದ ಯಾರೂ ಮೇಲು–ಕೀಳು ಅಲ್ಲ. ಹಿಂದೂ ಸಮಾಜದಲ್ಲಿನ ದುಷ್ಟ ಪರಂಪರೆ ನಿವಾರಿಸದೆ ರಾಷ್ಟ್ರದ ಏಳ್ಗೆ ಸಾಧ್ಯವಿಲ್ಲವೆಂದು ಗುರೂಜಿ ಗೋಳ್ವಲ್ಕರ್ ಅವರೂ ಹೇಳಿದ್ದರು. ಜಗತ್ತಿನಲ್ಲಿ ಬೇರೆ ಬೇರೆ ಕಾರಣಕ್ಕೆ ದ್ವೇಷ, ದುಃಖ ತುಂಬಿಕೊಂಡಿದೆ. ಇಂತಹ ಸಂದರ್ಭದಲ್ಲಿ ಆದರ್ಶ ಸಮಾಜದ ನಿರ್ಮಾಣದ ಬಗ್ಗೆ ಚಿಂತನೆ ಮಾಡಬೇಕು’ ಎಂದು ತಿಳಿಸಿದರು. 

‘ಹಿಂದೂ ಸಮಾಜದಲ್ಲಿ ಅಸಂಖ್ಯಾತ ಜಾತಿಗಳಿವೆ. ನೂರು ವರ್ಷದ ಹಿಂದೆ ಎಷ್ಟು ಜಾತಿಗಳಿದ್ದವೋ ಈಗ ಆ ಸಂಖ್ಯೆ ಹತ್ತು ಪಟ್ಟು ಜಾಸ್ತಿಯಾಗಿದೆ. ಒಂದೊಂದು ಗಣತಿಯಲ್ಲಿಯೂ ಜಾತಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಜಾತಿ ಕಡಿಮೆಯಾಗಬೇಕೆಂಬ ಕೂಗು ಒಂದೆಡೆಯಾದರೆ, ಇನ್ನೊಂದೆಡೆ ಸಮಾಜದಲ್ಲಿ ವ್ಯಕ್ತಿಯ ಪರಿಚಯ ಜಾತಿ, ವರ್ಣದಿಂದ ಆಗುತ್ತಿದೆ. ಇದಕ್ಕೆ ಸಾಮಾಜಿಕ, ರಾಜಕೀಯ ಕಾರಣಗಳಿವೆ’ ಎಂದರು.

‘ಅಸ್ಪೃಶ್ಯತೆ ಅಮಾನವೀಯ’

‘ಅಸ್ಪೃಶ್ಯತೆ ಅಮಾನವೀಯ ಆಚರಣೆ. ಈ ಆಚರಣೆ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖ ಇರಲಿಲ್ಲ. ಜಾತಿ ಮತ್ತು ಅಸ್ಪೃಷ್ಯತೆಗೆ ಧಾರ್ಮಿಕ ಆಚರಣೆ ಸೇರಿಕೊಂಡಿದ್ದರಿಂದ ಕೆಲವರು ಇದನ್ನೇ ಹಿಂದೂ ಧರ್ಮ ಅಂದುಕೊಂಡರು. ಹಿಂದೂ ಧರ್ಮ ವಿರೋಧಿಸುವವರು ಇದನ್ನೇ ತರ್ಕಕ್ಕೆ ಬಳಸಿಕೊಂಡರು. ಎಲ್ಲರಲ್ಲಿಯೂ ಭಗವಂತ ಇದ್ದಾನೆ ಎಂದು ಪ್ರಾಚೀನ ಕಾಲದಿಂದ ನಾವು ನಂಬಿದ್ದೇವೆ. ಇಷ್ಟಾಗಿಯೂ ನಮ್ಮ ಸಮಾಜ ಏಕೆ ಅಸ್ಪೃಶ್ಯತೆ ಆಚರಣೆ ಮಾಡಿತು ಎನ್ನುವುದು ವಿಶ್ಲೇಷಣೆಗೆ ಮೀರಿದ್ದಾಗಿದೆ’ ಎಂದು ದತ್ತಾತ್ರೇಯ ಹೊಸಬಾಳೆ  ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT