ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೀರ್ಥಹಳ್ಳಿ | ಚಾವಣಿ ಬಿರುಕು: ಸೋರಿಕೆ ತಡೆಗೆ ಲೀಕೇಜ್‌ ಫ್ರೂಪ್‌

Published : 16 ಜುಲೈ 2024, 7:35 IST
Last Updated : 16 ಜುಲೈ 2024, 7:35 IST
ಫಾಲೋ ಮಾಡಿ
Comments

ತೀರ್ಥಹಳ್ಳಿ: ಶನಿವಾರವಷ್ಟೇ ಉದ್ಘಾಟನೆ ಆಗಿರುವ ₹ 3 ಕೋಟಿ ವೆಚ್ಚದ ‌ನೂತನ ಅಗ್ನಿಶಾಮಕ ಠಾಣೆಯ ಚಾವಣಿ ಬಿರುಕು ಬಿಟ್ಟಿದೆ. ಮಳೆಯಿಂದಾಗಿ ಕಟ್ಟಡದಲ್ಲಿ ನೀರು ಸೋರಿಕೆಯಾಗುತ್ತಿದೆ. ಮಳೆ ನೀರು ಸುರಿಯದಂತೆ ತಾತ್ಕಾಲಿಕವಾಗಿ ಲೀಕೇಜ್‌ ಫ್ರೂಪ್‌ ಅಳವಡಿಸಲಾಗಿದೆ.

ಗೃಹ ಇಲಾಖೆಯ ವಿವಿಧ ಕಟ್ಟಡ ಉದ್ಘಾಟನೆಗೆ ಸಚಿವರು ಬರುವ ಹಿನ್ನೆಲೆಯಲ್ಲಿ ಸೋರುವ ಜಾಗಗಳನ್ನು ಗುರುತಿಸಿ ಸಿಮೆಂಟ್‌ ಹಾಕಲಾಗಿತ್ತು. ಈಗ ಮತ್ತೆ ಸೋರುವ ಜಾಗಗಳನ್ನು ಗುರುತಿಸುವ ಕಸರತ್ತು ನಡೆದಿದೆ.

ಮಳೆ ನೀರು ಸೋರದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಬಿರುಕು ಬಿಟ್ಟ ಜಾಗಗಳಿಗೆ ಸಿಮೆಂಟ್‌ ಹಾಕಿ ಮುಚ್ಚಿರುವುದು ಈಗ ಚರ್ಚೆಗೀಡಾಗುತ್ತಿದೆ.

200 ಅಡಿ ಉದ್ದದ ಎರಡು ಅಂತಸ್ಥಿನ ಕಟ್ಟಡದಲ್ಲಿ ಎರಡೂ ಮಹಡಿಯಲ್ಲಿ ಗೋಡೆಯಲ್ಲಿ ನೀರು ಸೋರುತ್ತಿದೆ. ಮೆಟ್ಟಿಲುಗಳಲ್ಲಿ ತೇವಾಂಶ ಎದ್ದಿದ್ದು, ನೀರು ಸೋರದಂತೆ ಹಾಕಿರುವ ಡ್ಯಾಂ ಫ್ರೂಫ್‌ ದಾಟಿ ನೀರು ಇಳಿಯುತ್ತಿದೆ. ಚಾವಣಿಯ ಅಂದಾಜು 100 ಅಡಿ ಜಾಗಕ್ಕೆ ಸಿಮೆಂಟ್‌, ಲೀಕೇಜ್‌ ಫ್ರೂಫ್‌ ಬಳಕೆ ಮಾಡಿ ಬಿರುಕು ಮುಚ್ಚಿರುವುದು ಚಿತ್ರಬಿಡಿಸಿದಂತೆ ಕಾಣುತ್ತಿದೆ.

ಜೀವ ಉಳಿಸುವ ಮಹತ್ವದ ಸೇವೆಯಲ್ಲಿರುವ ಅಗ್ನಿಶಾಮಕ ಠಾಣೆಯನ್ನು ಕಿಮ್ಮನೆ ರತ್ನಾಕರ ಸಚಿವರಾಗಿದ್ದಾಗ ತೀರ್ಥಹಳ್ಳಿಗೆ ಮಂಜೂರು ಮಾಡಿಸಿದ್ದರು. ಆರಂಭದಲ್ಲಿ ಸ್ವಂತ ಕಟ್ಟಡ ಇಲ್ಲದೆ ಜಿಲ್ಲಾ ಪಂಚಾಯಿತಿ ಕಟ್ಟಡ, ನಂತರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಇಲಾಖೆಯು ಕಾರ್ಯನಿರ್ವಹಿಸುತ್ತಿತ್ತು.

2018ರಲ್ಲಿ ಆರಗ ಜ್ಞಾನೇಂದ್ರ ಬೆಟ್ಟಮಕ್ಕಿಯಲ್ಲಿ 2 ಎಕರೆ ಜಾಗವನ್ನು ಮಂಜೂರು ಮಾಡಿಸಿದ್ದರು. ನಂತರ ಆರಗ ಗೃಹ ಸಚಿವರಾದ ಬಳಿಕ ₹ 3 ಕೋಟಿ ಅನುದಾನ ನೀಡುವ ಮೂಲಕ ಸ್ವಂತ ಕಟ್ಟಡಕ್ಕೆ ಬುನಾದಿ ಹಾಕಿದ್ದಾರೆ. ಕಟ್ಟಡದ ಅನೇಕ ಕಾಮಗಾರಿಗಳು ಅಪೂರ್ಣಗೊಂಡಿದ್ದು, ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ. 

ಈಚೆಗೆ ತರಾತುರಿಯಲ್ಲಿ ಕಟ್ಟಡ ಉದ್ಘಾಟನೆಯಾಗಿದೆ. ಆದರೆ ಸೋರಿಕೆ ಮಾತ್ರ ನಿಂತಿಲ್ಲ.

ಜನಪ್ರತಿನಿಧಿಗಳ ಸಮರ್ಥನೆಗೆ ಅಸಮಾಧಾನ:

ಮಲೆನಾಡಿನಲ್ಲಿ ಕಟ್ಟಡ ಸೋರಿಕೆ ಎಂಬ ಜನಪ್ರತಿನಿಧಿಗಳ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಈಚೆಗೆ ಹಲವು ಕಟ್ಟಡಗಳು ಸೋರುತ್ತಿದ್ದ ಬಗ್ಗೆ ಶಾಸಕರು, ಜನಪ್ರತಿನಿಧಿಗಳು ಹಾರಿಕೆ ಉತ್ತರ ನೀಡಿದ್ದರು.

‘ಅಂದಾಜು ₹ 33.50 ಕೋಟಿ ವೆಚ್ಚದ ವಿವಿಧ ಕಟ್ಟಡ ಕಾಮಗಾರಿಯಲ್ಲಿ ಬಹಳ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ. ಅದನ್ನು ಕಾಂಗ್ರೆಸ್‌-ಬಿಜೆಪಿ ಜನಪ್ರತಿನಿಧಿಗಳು ಸಮರ್ಥನೆ ನಡೆಸುತ್ತಿರುವುದರಲ್ಲಿ ಅರ್ಥವೇ ಇಲ್ಲ. ಮಲೆನಾಡಿನಲ್ಲಿ ಮನೆಗಳು ಸೋರುವುದು ಮಾಮೂಲಿ, ಸಹಜ, ಸ್ವಾಭಾವಿಕ ಎಂದು ಹೇಳಿಕೆ ನೀಡಿದ್ದಕ್ಕೆ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳಬೇಕು. ಲೋಪಗಳನ್ನು ತಿದ್ದಿಕೊಳ್ಳದೆ ಕೋಟ್ಯಂತರ ರೂಪಾಯಿ ಅನುದಾನ ಮಳೆಯ ನೀರಿನಲ್ಲಿ ತೊಳೆದು ಹೋಗುತ್ತಿವೆ. ಇದನ್ನು ಯಾವ ಸೀಮೆಯ ಅಭಿವೃದ್ಧಿ ಎಂದು ಜನ ಪರಿಗಣಿಸಬೇಕು’ ಎಂದು ಯುವ ಮುಖಂಡ ಪೂರ್ಣೇಶ್‌ ಕೆಳಕೆರೆ ಒತ್ತಾಯಿಸಿದರು.

ವಿದ್ಯುತ್‌ ಕಾಮಗಾರಿ ವಿಳಂಬ:

4 ತಿಂಗಳ ಹಿಂದೆ ಉದ್ಘಾಟನೆಯಾದ ಸೋರುವ ಗ್ರಾಮೀಣಾಭಿವೃದ್ಧಿ ಭವನ ಅಧಿಕೃತವಾಗಿ ತಾಲ್ಲೂಕು ಪಂಚಾಯಿತಿಗೆ ಹಸ್ತಾಂತರ ಆಗಿಲ್ಲ. ತಾತ್ಕಾಲಿಕವಾಗಿ ಕಚೇರಿಗಳನ್ನು ಆರಂಭಿಸಲಾಗಿದೆ. ಕಟ್ಟಡದಲ್ಲಿ ಬಹಳಷ್ಟು ವಿದ್ಯುತ್‌ ಕಾಮಗಾರಿಗಳು ಬಾಕಿ ಇದೆ. ಪ್ರತ್ಯೇಕ ಟಿಸಿ ಅಳವಡಿಸಿದ್ದರೂ ಪರಿಪೂರ್ಣ ವಿದ್ಯುತ್‌ ಸರಬರಾಜು ಆಗುತ್ತಿಲ್ಲ. ಲಿಫ್ಟ್‌ ಹಾಳಾಗಲು ವಿದ್ಯುತ್‌ ವ್ಯತ್ಯಯ ಪ್ರಮುಖ ಕಾರಣ. ವಿದ್ಯುತ್‌ ತಂತಿಗಳನ್ನು ಬೇಕಾಬಿಟ್ಟಿ ಎಳೆಯಲಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ನಿರಂತರವಾಗಿ ಟ್ರಿಪ್‌ ಆಗುತ್ತಿದ್ದು ಬೆಂಕಿ ತಗುಲುವ ಸಾಧ್ಯತೆ ಇದೆ ಎಂದು ಸಿಬ್ಬಂದಿಯೊಬ್ಬರು ಕಳವಳ ವ್ಯಕ್ತಪಡಿಸಿದರು.

ತೀರ್ಥಹಳ್ಳಿಯ ಗ್ರಾಮೀಣಾಭಿವೃದ್ಧಿ ಭವನದಲ್ಲಿ ತಾತ್ಕಾಲಿಕವಾಗಿ ವಿದ್ಯುತ್‌ ತಂತಿಗಳನ್ನು ಎಳೆದಿರುವುದು.
ತೀರ್ಥಹಳ್ಳಿಯ ಗ್ರಾಮೀಣಾಭಿವೃದ್ಧಿ ಭವನದಲ್ಲಿ ತಾತ್ಕಾಲಿಕವಾಗಿ ವಿದ್ಯುತ್‌ ತಂತಿಗಳನ್ನು ಎಳೆದಿರುವುದು.
ಅಮ್ರಪಾಲಿ ಸುರೇಶ್‌
ಅಮ್ರಪಾಲಿ ಸುರೇಶ್‌

 ಟೆಂಡರ್‌ ಪ್ರಕ್ರಿಯೆಯಲ್ಲೇ ದೋಷ ಇದೆ. ಮಲೆನಾಡಿನಲ್ಲಿ ಹೊಸ ಕಟ್ಟಡಗಳು ಸೋರುವುದು ಹೊಸ ವಿಚಾರ. ಕಳಪೆ ಕಾಮಗಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇವೆ. 

-ಅಮ್ರಪಾಲಿ ಸುರೇಶ್‌ ಜಿಲ್ಲಾ ಕಾಂಗ್ರೆಸ್‌ ಸಂಘಟನಾ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT