ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರಲ್ಲೇ ನಡೆದಿತ್ತು ಮೂವರ ಕೊಲೆ: ಆರೋಪಿ ವಶಕ್ಕೆ

Published 24 ಮಾರ್ಚ್ 2024, 7:54 IST
Last Updated 24 ಮಾರ್ಚ್ 2024, 7:54 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಕುಚ್ಚಂಗಿ ಕೆರೆ ಅಂಗಳದಲ್ಲಿ ಶುಕ್ರವಾರ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂರು ಮೃತದೇಹಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಎಂಟಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆ ಮಾಡಿರುವುದು ತುಮಕೂರಿನ ನಿವಾಸಿಗಳು ಎಂಬ ವಿಚಾರ ಪೊಲೀಸರಿಗೆ ಖಚಿತಪಟ್ಟಿದೆ. ನಗರದಲ್ಲೇ ಕೊಲೆ ಮಾಡಿ, ಕಾರಿನಲ್ಲಿ ಶವಗಳನ್ನು ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೃತಪಟ್ಟ ಮೂವರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ನಿವಾಸಿಗಳು. ಯಾವ ಕಾರಣಕ್ಕಾಗಿ ಜಿಲ್ಲೆಗೆ ಬಂದಿದ್ದರು. ಜಿಲ್ಲೆಗೆ ಬಂದು ಎಷ್ಟು ದಿನ ಆಗಿತ್ತು. ಅವರನ್ನು ಇಲ್ಲಿಗೆ ಕರೆಸಿ ಕೊಂಡವರು ಯಾರು ಎಂಬೆಲ್ಲ ಪ್ರಶ್ನೆಗಳು ಪೊಲೀಸರನ್ನು ಕಾಡುತ್ತಿವೆ. ಬೆಳ್ತಂಗಡಿ, ತುಮಕೂರು ಪೊಲೀಸರು ಕಳೆದ ರಾತ್ರಿಯಿಂದಲೇ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.

ಮೃತರ ಜತೆಗೆ ಸಂಪರ್ಕದಲ್ಲಿ ಇದ್ದವರ ವಿವರಗಳನ್ನು ಕಲೆ ಹಾಕಿ, ಎಲ್ಲರನ್ನು ವಿಚಾರಣೆ ನಡೆಸುತ್ತಿದ್ದಾರೆ. ಶನಿವಾರ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮೃತರು ಒಂದು ವಾರದ ಹಿಂದೆಯೇ ನಗರಕ್ಕೆ ಬಂದಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ನಗರದ ವಿವಿಧೆಡೆ ಇರುವ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಪೊಲೀಸರ ಒಂದು ತಂಡ ಸಂಪೂರ್ಣವಾಗಿ ಸಿ.ಸಿ ಟಿ.ವಿ ಪರಿಶೀಲನೆಯ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ಸುಟ್ಟು ಕರಕಲಾಗಿದ್ದ ಕಾರಿನ ನೋಂದಣಿ ಸಂಖ್ಯೆ ಆಧಾರದ ಮೇಲೆ ಕಾರು ಮಾಲೀಕ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ರಫೀಕ್ ಎಂಬುವರನ್ನು ಪ‍ತ್ತೆ ಮಾಡಿದ್ದರು. ಆ ಮೂಲಕ ಮೃತರ ವಿಳಾಸ ಪತ್ತೆ ಹಚ್ಚಿದ್ದರು. ಶನಿವಾರ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಘಟನೆ ಹಿನ್ನೆಲೆ: ಕುಚ್ಚಂಗಿ ಕೆರೆ ಅಂಗಳದಲ್ಲಿ ಶುಕ್ರವಾರ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿರುವ ಮೂರು ಮೃತದೇಹಗಳು ಪತ್ತೆಯಾಗಿದ್ದವು. ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದ ಆಟೊ ಚಾಲಕ ಸಾಹುಲ್ (45), ಕುವೆಟ್ಟು ಗ್ರಾಮ ಮದ್ದಡ್ಕದ ಇಸಾಕ್ (56), ಶಿರ್ಲಾಲು ಗ್ರಾಮದ ನಿವಾಸಿ ಇಮ್ತಿಯಾಜ್ (34) ಎಂದು ಗುರುತಿಸಲಾಗಿತ್ತು.

ನಿಧಿಗಾಗಿ ಬಂದು ಕೊಲೆಯಾದರು

ಕೃಷಿ ಮಾಡುವ ಜಾಗದಲ್ಲಿ ನಿಧಿ ಸಿಕ್ಕಿದ್ದು ಕಡಿಮೆ ಬೆಲೆಗೆ ಅದನ್ನು ಕೊಡುತ್ತೇವೆ ಎಂದು ತುಮಕೂರಿನ ನಿವಾಸಿಗಳು ಮೃತರನ್ನು ಇಲ್ಲಿಗೆ ಕರೆಸಿಕೊಂಡಿದ್ದರು. ಬೆಳ್ತಂಗಡಿಯಿಂದ ಬಂದಿದ್ದ ಮೂವರನ್ನು ಕೊಲೆ ಮಾಡಿ ನಿಧಿಗಾಗಿ ತಂದಿದ್ದ ಹಣವನ್ನು ದೋಚಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದೇ ಆಯಾಮದಲ್ಲಿ ತನಿಖೆ ಮುಂದುವರಿದಿದೆ.

ಮೃತ ಇಸಾಕ್‌ಗೆ ತುಮಕೂರಿನ ನಿವಾಸಿ ಸ್ವಾಮಿ ಎಂಬುವರ ಪರಿಚಯವಾಗಿತ್ತು. ಇವರ ಮುಖಾಂತರ ನಿಧಿಯ ನಾಟಕ ಆಡಿದ್ದಾರೆ. ನಿಧಿಯ ಆಸೆಗಾಗಿ ತುಮಕೂರಿಗೆ ಬಂದವರನ್ನು ಕೊಲೆ ಮಾಡಿದ್ದಾರೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT