ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಛಾವಣಿ ಕುಸಿತ: ಒಬ್ಬ ಸಾವು,ಐವರಿಗೆ ಗಾಯ‌

Published : 28 ಜೂನ್ 2024, 3:14 IST
Last Updated : 28 ಜೂನ್ 2024, 3:14 IST
ಫಾಲೋ ಮಾಡಿ
Comments

ನವದೆಹಲಿ: ಇಂದು(ಶುಕ್ರವಾರ) ಮುಂಜಾನೆ ರಾಷ್ಟ್ರರಾಜಧಾನಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಈ ನಡುವೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದಿದೆ. ಘಟನೆಯಲ್ಲಿ ಟ್ಯಾಕ್ಸಿ ಹಾಗೂ ಕಾರುಗಳು ಜಖಂಗೊಂಡಿದ್ದು, ಒಬ್ಬ ಮೃತಪಟ್ಟು ಐವರು ಗಾಯಗೊಂಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ 6 ಮಂದಿಯನ್ನು ವಿಮಾನ ನಿಲ್ದಾಣದ ಬಳಿಯಿರುವ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಒಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಜಖಂಗೊಂಡಿರುವ ವಾಹನಗಳಲ್ಲಿ ಜನ ಸಿಲುಕಿಕೊಂಡಿರುವ ಶಂಕೆ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಟರ್ಮಿನಲ್‌ನ ಪಿಕ್-ಅಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ನಿಲ್ಲಿಸಿದ ಕಾರುಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಬೆಳಿಗ್ಗೆ 5:30ರ ಸುಮಾರಿಗೆ ಮಾಹಿತಿ ಪಡೆದ ದೆಹಲಿ ಅಗ್ನಿಶಾಮಕ ದಳ ಮೂರು ಅಗ್ನಿಶಾಮಕ ವಾಹನಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ.

ಘಟನೆಯ ಬಗ್ಗೆ ನಿಗಾವಹಿಸಲಾಗುತ್ತಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಂಕಷ್ಟದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಸಹಾಯ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

2 ಗಂಟೆಯವರೆಗೆ ವಿಮಾನ ಕಾರ್ಯಾಚರಣೆ ಸ್ಥಗಿತ

ಘಟನೆ ಬಳಿಕ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಿಂದ ಹೊರಡುವ ವಿಮಾನಗಳನ್ನು ಇಂದು (ಶುಕ್ರವಾರ) ಮಧ್ಯಾಹ್ನ 2 ಗಂಟೆಯವರೆಗೆ ರದ್ದುಗೊಳಿಸಲಾಗಿದೆ. ಆದರೆ ವಿಮಾನಗಳ ಆಗಮನಕ್ಕೆ ಯಾವುದೇ ಅಡಚಣೆ ಇಲ್ಲ ಎಂದು ಮೂಲಗಳು ತಿಳಿಸಿವೆ.

'ಘಟನೆಯ ಹಿನ್ನೆಲೆಯಲ್ಲಿ ಟರ್ಮಿನಲ್ 1 ರಿಂದ ಎಲ್ಲಾ ನಿರ್ಗಮನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸುರಕ್ಷತಾ ಕ್ರಮವಾಗಿ ಚೆಕ್-ಇನ್ ಕೌಂಟರ್‌ಗಳನ್ನು ಮುಚ್ಚಲಾಗಿದೆ. ಈ ಘಟನೆ ಬಗ್ಗೆ ನಾವು ವಿಷಾದಿಸುತ್ತೇವೆ. ಸಂತ್ರಸ್ತರಿಗೆ ಸೂಕ್ತ ನೆರವು ನೀಡಲಾಗುವುದು ಮತ್ತು ಉಂಟಾದ ಯಾವುದೇ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ' ಎಂದು ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (DIAL) ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT