ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏರ್ ಇಂಡಿಯಾ | ಇಂದು ಹಾರದ 75 ವಿಮಾನ; ನಾಳೆಯೂ 50 ವಿಮಾನಗಳ ಹಾರಾಟ ಅನುಮಾನ

Published : 10 ಮೇ 2024, 9:37 IST
Last Updated : 10 ಮೇ 2024, 9:37 IST
ಫಾಲೋ ಮಾಡಿ
Comments

ಮುಂಬೈ: ಸಿಬ್ಬಂದಿ ಕೊರತೆಯಿಂದಾಗಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ 75 ವಿಮಾನಗಳು ಶುಕ್ರವಾರ ಹಾರಾಟ ನಡೆಸಲಿಲ್ಲ. ಸಂಸ್ಥೆ ಮತ್ತು ಸಿಬ್ಬಂದಿ ನಡುವಿನ ಜಾಟಪಟಿಯಿಂದಾಗಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಭಾನುವಾರದ ಹೊತ್ತಿಗೆ ಇದು ಪರಿಹಾರವಾಗುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

‘ವಿಮಾನಗಳ ಹಾರಾಟ ರದ್ದತಿಯಿಂದಾಗಿ ಟಿಕೆಟ್‌ ಶುಲ್ಕದ ಜತೆಗೆ ಪ್ರಯಾಣಿಕರಿಗೆ ಪರಿಹಾರ ರೂಪದಲ್ಲಿ ನೀಡಲಾಗುತ್ತಿರುವ ಹಣದಿಂದ ಸಂಸ್ಥೆಗೆ ₹30 ಕೋಟಿ ನಷ್ಟ ಉಂಟಾಗಿದೆ’ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಸಂಸ್ಥೆಯ ಕೆಲ ಸಿಬ್ಬಂದಿ ದಿಢೀರನೆ ಪ್ರತಿಭಟನೆಗೆ ಮುಂದಾಗಿದ್ದರಿಂದಾಗಿ ಮಂಗಳವಾರದಿಂದ ಸುಮಾರು 170ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ. ಇದರ ಬೆನ್ನಲ್ಲೇ 25 ಕ್ಯಾಬಿನ್‌ ಸಿಬ್ಬಂದಿಯ ವಜಾ ಆದೇಶವನ್ನು ಸಂಸ್ಥೆಯು ಗುರುವಾರ ಸಂಜೆ ಹಿಂಪಡೆದಿದೆ.

ಗುರುವಾರ 100 ವಿಮಾನಗಳ ಹಾರಾಟ ರದ್ದಾಗಿತ್ತು. ಶುಕ್ರವಾರ ಒಟ್ಟು 75 ವಿಮಾನಗಳ ಹಾರಾಟ ರದ್ದಾಗಿದೆ. ಶನಿವಾರವೂ 45ರಿಂದ 50 ವಿಮಾನಗಳು ಹಾರಾಟ ನಡೆಸುವುದು ಬಹುತೇಕ ಅನುಮಾನ ಎಂದೆನ್ನಲಾಗಿದೆ.

ಟಾಟಾ ಸಮೂಹದ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾಗೆ ಸೇರಿದ 380 ವಿಮಾನಗಳು ನಿತ್ಯ ಹಾರಾಟ ನಡೆಸುತ್ತವೆ. ಆದರೆ ಸದ್ಯ ನಡೆಯುತ್ತಿರುವ ಸಿಬ್ಬಂದಿ ಮುಷ್ಕರದಿಂದಾಗಿ ಹಲವು ವಿಮಾನಗಳ ಹಾರಾಟ ರದ್ದುಗೊಂಡಿವೆ. ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಂಸ್ಥೆ ಹಲವು ಕ್ರಮ ಕೈಗೊಂಡಿದೆ. ಮಂಗಳವಾರ ಸಂಜೆಯಿಂದ ಗುರುವಾರ ಸಂಜೆಯವರೆಗೆ ಸಂಸ್ಥೆಯು ಒಟ್ಟು 260 ವಿಮಾನಗಳ ಹಾರಾಟ ರದ್ದುಪಡಿಸಿದೆ.

ಸಂಸ್ಥೆಯ 120 ವಿಮಾನಗಳು ಅಂತರರಾಷ್ಟ್ರೀಯ ಮಾರ್ಗದಲ್ಲಿ ಹಾಗೂ 260 ವಿಮಾನಗಳು ದೇಶದೊಳಗೆ ಕಾರ್ಯಾಚರಣೆ ನಡೆಸುತ್ತಿವೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರುಳುತ್ತಿದ್ದು, ಭಾನುವಾರ ಹೊತ್ತಿಗೆ ಎಲ್ಲವೂ ಸರಿ ಹೋಗಲಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಷ್ಕರ ನಿರತ ಕ್ಯಾಬಿನ್ ಸಿಬ್ಬಂದಿ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಹಾರಾಟಕ್ಕೂ ಮುನ್ನ ಅಗತ್ಯವಿರುವ ವೈದ್ಯಕೀಯ ತಪಾಸಣೆ ಮತ್ತು ಸದೃಢತೆ ಪ್ರಮಾಣಪತ್ರ ನೀಡುವ ಕೆಲಸಕ್ಕೆ ವಿಮಾನಯಾನ ಸಂಸ್ಥೆ ತನ್ನ ಸಹಕಾರ ನೀಡುತ್ತಿದೆ ಎಂದೆನ್ನಲಾಗಿದೆ.

ಸಿಬ್ಬಂದಿಯನ್ನು ನಡೆಸಿಕೊಳ್ಳುವಲ್ಲಿ ತಾರತಮ್ಯ ಹಾಗೂ ಸಂಸ್ಥೆಯ ನಿರ್ವಹಣೆಯಲ್ಲಿನ ಸಮಸ್ಯೆಯಿಂದಾಗಿ ಕ್ಯಾಬಿನ್ ಸಿಬ್ಬಂದಿ ಪ್ರತಿಭಟನೆ ಆರಂಭಿಸಿದರು. 

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಬಳಿ ಸುಮಾರು 6 ಸಾವಿರ ಸಿಬ್ಬಂದಿ ಇದ್ದಾರೆ. ಇದರಲ್ಲಿ 2 ಸಾವಿರ ಸಿಬ್ಬಂದಿ ಕ್ಯಾಬಿನ್‌ ಒಳಗೆ ಕಾರ್ಯ ನಿರ್ವಹಿಸುವವರಾಗಿದ್ದಾರೆ. ಹಿಂದೆ ಏರ್ ಏಷ್ಯಾ ಇಂಡಿಯಾ ಎಂದು ಕರೆಯಲಾಗುತ್ತಿದ್ದ ಎಐಎಕ್ಸ್‌ ಕನೆಕ್ಟ್ ಅನ್ನು ತನ್ನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಆರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT