ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಡೆಲ್‌ಗೆ ಬೆದರಿಕೆ, ಕಿರುಕುಳ: ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳು ಅಮಾನತು

ಹಿರಿಯ ಐಪಿಎಸ್ ಅಧಿಕಾರಿಗಳಾದ ಪಿ. ಸೀತಾರಾಮ ಆಂಜನೆಯಲು, ಕ್ರಾಂತಿ ರಾಣಾ ಟಾಟಾ ಹಾಗೂ ಐಪಿಎಸ್ ಅಧಿಕಾರಿ, ವಿಜಯವಾಡದ ಮಾಜಿ ಡಿಸಿಪಿ ವಿಶಾಲ್ ಗುನ್ನಿ ಅಮಾನತುಗೊಂಡ ಅಧಿಕಾರಿಗಳು.
Published : 16 ಸೆಪ್ಟೆಂಬರ್ 2024, 3:47 IST
Last Updated : 16 ಸೆಪ್ಟೆಂಬರ್ 2024, 3:47 IST
ಫಾಲೋ ಮಾಡಿ
Comments

ಅಮರಾವತಿ: ಪ್ರಕರಣ ದಾಖಲಾದ ತಕ್ಷಣ ಸೂಕ್ತ ವಿಚಾರಣೆ ನಡೆಸದೇ, ತರಾತುರಿಯಲ್ಲಿ ಮಾಡೆಲ್ ಒಬ್ಬರನ್ನು ಬಂಧಿಸಿ ಕಿರುಕುಳ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ.

ಈ ಕುರಿತು ಶನಿವಾರ ಆಂಧ್ರಪ್ರದೇಶ ಸರ್ಕಾರ ಕ್ರಮ ಕೈಗೊಂಡಿರುವುದು ಗೊತ್ತಾಗಿದೆ.

ಹಿರಿಯ ಐಪಿಎಸ್ ಅಧಿಕಾರಿಗಳಾದ ಪಿ. ಸೀತಾರಾಮ ಆಂಜನೆಯಲು, ಕ್ರಾಂತಿ ರಾಣಾ ಟಾಟಾ ಹಾಗೂ ಐಪಿಎಸ್ ಅಧಿಕಾರಿ, ವಿಜಯವಾಡದ ಮಾಜಿ ಡಿಸಿಪಿ ವಿಶಾಲ್ ಗುನ್ನಿ ಅಮಾನತುಗೊಂಡ ಅಧಿಕಾರಿಗಳು.

ನಟಿ ಹಾಗೂ ಮಾಡೆಲ್ ಕಾದಂಬರಿ ಜೆಟ್ವಾನಿ ಎನ್ನುವರು ತಮಗೆ ವಂಚಿಸಿದ್ದಾರೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಫೆಬ್ರುವರಿ 2 ರಂದು ಆಂಧ್ರ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಭಾಗವಾಗಿ ಪಿ. ಸೀತಾರಾಮ ಆಂಜನೆಯಲು ಅವರು ಕಾದಂಬರಿ ಅವರನ್ನು ಬಂಧಿಸಲು ತಮ್ಮ ಅಧೀನದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಆದರೆ, ಕಾದಂಬರಿ ತಮ್ಮ ಬಂಧನ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಕುರಿತು ಇಲಾಖಾ ತನಿಖೆ ನಡೆಸಿದಾಗ ಸೀತಾರಾಮ ಆಂಜನೆಯಲು, ಕ್ರಾಂತಿ ರಾಣಾ ಟಾಟಾ ಹಾಗೂವಿಶಾಲ್ ಗುನ್ನಿ ತಪ್ಪಿತಸ್ಥರೆಂದು ತಿಳಿದು ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾನು ಮುಂಬೈನಲ್ಲಿ ಕಾರ್ಪೋರೆಟ್ ಕಂಪನಿ ಅಧಿಕಾರಿಯೊಬ್ಬರ ವಿರುದ್ಧ ನೀಡಿರುವ ದೂರಿನ ವಿಚಾರವಾಗಿ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಹಾಗೂ ನನ್ನನ್ನು ತೊಂದರೆಯಲ್ಲಿ ಸಿಲುಕಿಸಲು ಆಂಧ್ರದಲ್ಲಿ ದೂರು ದಾಖಲಿಸಲಾಗಿತ್ತು. ಕಾರ್ಪೋರೆಟ್ ಕಂಪನಿ ಅಧಿಕಾರಿ ವಿರುದ್ಧದ ದೂರು ಹಿಂಪಡೆಯಲು ಆಂಧ್ರ ಪೊಲೀಸ್ ಅಧಿಕಾರಿಗಳು ನನಗೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದರು. ಅಲ್ಲದೇ ನನ್ನ ಬಂಧನವೂ ದುರುದ್ದೇಶಪೂರಿತವಾಗಿತ್ತು ಎಂದು ಕಾದಂಬರಿ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಈ ಮೊದಲು ಮೂವರು ಪೊಲೀಸರನ್ನೂ ಅಮಾನತು ಮಾಡಲಾಗಿತ್ತು. ಪಿ. ಸೀತಾರಾಮ ಆಂಜನೆಯಲು ಅವರ ಮೇಲೆ ಜಗನ್ ಸರ್ಕಾರದಲ್ಲಿ ಟಿಡಿಪಿ ನಾಯಕರ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ ಕೇಳಿ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT