ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಲಿತರು, ಆದಿವಾಸಿಗಳು, ಒಬಿಸಿ ಮೇಲೆ Lateral Entry ದಾಳಿ: ರಾಹುಲ್, ಖರ್ಗೆ ಕಿಡಿ

Published : 19 ಆಗಸ್ಟ್ 2024, 9:58 IST
Last Updated : 19 ಆಗಸ್ಟ್ 2024, 9:58 IST
ಫಾಲೋ ಮಾಡಿ
Comments

ನವದೆಹಲಿ: ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರು ಹಾಗೂ ತಜ್ಞರನ್ನು ‘ಲ್ಯಾಟರಲ್‌ ಎಂಟ್ರಿ’ ಮೂಲಕ ನೇಮಕ ಮಾಡಿಕೊಳ್ಳುವ ಕೇಂದ್ರದ ನಿರ್ಧಾರವನ್ನು ಖಂಡಿಸಿರುವ ಕಾಂಗ್ರೆಸ್, ಈ ಮೂಲಕ ಬಿಜೆಪಿ ಮೀಸಲಾತಿಯನ್ನು ಕಸಿಯುತ್ತಿದೆ ಎಂದು ಆರೋಪಿಸಿದೆ.

ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗಾಗಿ ಇರುವ ಹುದ್ದೆಗಳನ್ನು ಆರ್‌ಎಸ್‌ಎಸ್‌ ಮಂದಿಗೆ ನೀಡಲಾಗುತ್ತಿದೆ ಎಂದು ಅದು ದೂರಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವು ವಲಯಗಳಲ್ಲಿ ನಿರ್ದಿಷ್ಟ ಹುದ್ದೆಗಳಿಗೆ ಪರಿಣತರು ಮತ್ತು ತಜ್ಞರನ್ನು ನೇಮಕ ಮಾಡಿಕೊಳ್ಳಲು ನಮ್ಮ ಪಕ್ಷವು ಆಡಳಿತದಲ್ಲಿದ್ದಾಗ ‘ಲ್ಯಾಟರಲ್ ಎಂಟ್ರಿ’ಯನ್ನು ಜಾರಿಗೆ ತಂದಿತ್ತು. ಆದರೆ, ಮೋದಿ ಸರ್ಕಾರ ಇದರ ಮೂಲಕ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಸಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಎಂದು ಹಿಂದಿ ಭಾಷೆಯಲ್ಲಿ ಮಾಡಲಾಗಿರುವ ಎಕ್ಸ್‌ ಪೋಸ್ಟ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಕೇಂದ್ರದ ಧೋರಣೆ ವಿರುದ್ಧ ಕಿಡಿಕಾರಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಲ್ಯಾಟರಲ್ ಎಂಟ್ರಿ ಮೂಲಕ ನಾಗರಿಕ ಸೇವಾ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿರುವುದು ದಲಿತರು, ಒಬಿಸಿ ಮತ್ತು ಆದಿವಾಸಿಗಳ ಮೇಲೆ ದಾಳಿ ಎಂದು ಗುಡುಗಿದ್ದಾರೆ. ಬಹು ಸಂಖ್ಯಾತರಿಂದ ಬಿಜೆಪಿ ಮೀಸಲಾತಿಯನ್ನು ಕಸಿಯುತ್ತಿದೆ ಎಂದು ದೂರಿದ್ದಾರೆ.

‘ಲ್ಯಾಟರಲ್ ಎಂಟ್ರಿ’ ಮೂಲಕ ಕೇಂದ್ರ ಲೋಕಸೇವಾ ಆಯೋಗಕ್ಕೆ(ಯುಪಿಎಸ್‌ಸಿ) ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳೂ ಸೇರಿದಂತೆ 45 ಮಂದಿಯ ನೇಮಕಾತಿ ಕುರಿತಂತೆ ಶನಿವಾರ ಕೇಂದ್ರ ಸರ್ಕಾರ ನೋಟಿಫಿಕೇಶನ್ ಬಿಡುಗಡೆ ಮಾಡಿದ ಬಳಿಕ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೀವ್ರ ಟೀಕೆಗೈಯುತ್ತಿವೆ.

‘ಲ್ಯಾಟರಲ್ ಎಂಟ್ರಿ’ ಮೂಲಕ ನಾಗರಿಕ ಸೇವೆಗಳ ಹುದ್ದೆಗಳಿಗೆ ನೇಮಕಾತಿ ದಲಿತರು, ಒಬಿಸಿ ಮತ್ತು ಆದಿವಾಸಿಗಳ ಮೇಲಿನ ದಾಳಿ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.

‘ಬಿಜೆಪಿಯ ತಿರುಚಿದ ರಾಮರಾಜ್ಯದ ಆವೃತ್ತಿಯು ಸಂವಿಧಾನವನ್ನು ನಾಶ ಮಾಡುತ್ತಿದ್ದು, ಬಹುಜನರಿಂದ ಮೀಸಲಾತಿಯನ್ನು ಕಸಿಯುತ್ತಿದೆ’ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ಕಿಡಿಕಾರಿದ್ದಾರೆ.

ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬದಲು ಮೋದಿ ಸರ್ಕಾರ ಲ್ಯಾಟರಲ್ ಎಂಟ್ರಿ ಅವಕಾಶವನ್ನು ಸಂವಿಧಾನದ ಮೇಲೆ ದಾಳಿ ಮಾಡಲು ಬಳಸುತ್ತಿದೆ? ಸಾರ್ವಜನಿಕ ವಲಯದ ಷೇರುಗಳ ಮಾರಾಟ ಮಾಡುವ ಮೂಲಕ ಮೋದಿ ಸರ್ಕಾರವು ಕಳೆದ 10 ವರ್ಷಗಳಲ್ಲಿ 5.1 ಲಕ್ಷ ಹುದ್ದೆಗಳನ್ನು ತಗ್ಗಿಸಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ಕ್ಯಾಶುವಲ್ ಮತ್ತು ಕಾಂಟ್ರ್ಯಾಕ್ಟ್ ನೇಮಕಾತಿ ಶೇಕಡ 91ರಷ್ಟು ಹೆಚ್ಚಾಗಿದೆ. 2022–23ರ ಅವಧಿಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಮೀಸಲಿದ್ದ ಹುದ್ದೆಗಳ ಪೈಕಿ 1.3 ಹುದ್ದೆಗಳು ಕಡಿತಗೊಂಡಿವೆ ಎಂದು ಅವರು ದೂರಿದ್ದಾರೆ.

‘ಎಸ್‌ಸಿ, ಎಸ್‌ಟಿ, ಒಬಿಸಿ, ಇಡಬ್ಲ್ಯುಎಸ್ ಸಮುದಾಯಗಳಿಗೆ ಮೀಸಲಿದ್ದ ಹುದ್ದೆಗಳನ್ನು ಆರ್‌ಎಸ್‌ಎಸ್ ಮೂಲದ ವ್ಯಕ್ತಿಗಳಿಗೆ ನೀಡಲಾಗುತ್ತಿದೆ. ಇದು ಮೀಸಲಾತಿ ಕಸಿಯುವ ಮೂಲಕ ಸಂವಿಧಾನ ಬದಲಿಸುವ ಬಿಜೆಪಿಯ ಚಕ್ರವ್ಯೂಹವಾಗಿದೆ’ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲೇ ‘ಲ್ಯಾಟರಲ್ ಎಂಟ್ರಿ’ ಪರಿಕಲ್ಪನೆಯನ್ನು ಪರಿಚಯಿಸಲಾಗಿದ್ದು, 2005ರಲ್ಲಿ ಯುಪಿಎ ಸರ್ಕಾರವೇ ರಚಿಸಿದ ಎರಡನೇ ಆಡಳಿತ ಸುಧಾರಣಾ ಆಯೋಗವು ಇದನ್ನು ಬಲವಾಗಿ ಅನುಮೋದಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT