ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಡಿಯು ಪಕ್ಷದ ಅಧ್ಯಕ್ಷರಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯ್ಕೆ

Published 29 ಡಿಸೆಂಬರ್ 2023, 9:47 IST
Last Updated 29 ಡಿಸೆಂಬರ್ 2023, 9:47 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಜನತಾ ದಳ(ಯುನೈಟೆಡ್) ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ, ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ಮತ್ತು ಜಾತಿ ಗಣತಿಯ ಬೇಡಿಕೆಯನ್ನು ಪೂರೈಸುವಲ್ಲಿ ಅವರ ಪಾತ್ರವನ್ನು ಸಭೆಯಲ್ಲಿ ಶ್ಲಾಘಿಸಲಾಗಿದೆ.

ಹಾಲಿ ಅಧ್ಯಕ್ಷ ಲಲನ್ ಸಿಂಗ್ ಅವರಿಂದ ಅಧಿಕಾರ ವಹಿಸಿಕೊಳ್ಳಲು ನಿತೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ಪಕ್ಷದ ಮುಖ್ಯ ವಕ್ತಾರ ಕೆ ಸಿ ತ್ಯಾಗಿ ಅವರು ತಿಳಿಸಿದ್ದಾರೆ.

ಬಾಗಿಲು ಮುಚ್ಚಿದ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಸಿಂಗ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿ, ನಿತೀಶ್ ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದರು. 2024ರ ಲೋಕಸಭೆ ಚುನಾವಣೆಗೆ ಸಿದ್ಧರಾಗುತ್ತಿರುವ ಈ ನಿರ್ಣಾಯಕ ಘಟ್ಟದಲ್ಲಿ ಪಕ್ಷಕ್ಕೆ ನಿತೀಶ್ ಅವರ ನಾಯಕತ್ವದ ಅಗತ್ಯವಿದೆ ಎಂದು ಹೇಳಿದರು.

ಇಂದು ಸಂಜೆ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯು ಕಾರ್ಯಕಾರಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಅಂಗೀಕರಿಸಲಾಗುತ್ತದೆ.

ಪಕ್ಷದ ಅತ್ಯಂತ ಪ್ರಮುಖ ಮುಖವಾಗಿರುವ ನಿತೀಶ್ ಕುಮಾರ್ ಅವರು ಈ ನಿರ್ಣಾಯಕ ಸಮಯದಲ್ಲಿ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಪಕ್ಷದ ಇತರೆ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಯು ಪಕ್ಷವು ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾದ ಭಾಗವಾಗಿದೆ.

ಸಿಂಗ್ ಅವರ ನಾಯಕತ್ವದ ಶೈಲಿಯನ್ನು ಪಕ್ಷದೊಳಗಿನ ಹಲವಾರು ನಾಯಕರು ಟೀಕಿಸಿದ್ದರು. ನಿತೀಶ್ ಜೊತೆಗಿನ ನಡವಳಿಕೆ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ವೈಯಕ್ತಿಕವಾಗಿ ಇಷ್ಟವಿಲ್ಲ. ಆದರೆ, ಲೋಕಸಭೆ ಚುನಾವಣೆ ದೃಷ್ಟಿಯಿಂದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೈಗೊಂಡಿರುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ನಿತೀಶ್ ಕುಮಾರ್ ಕಾರ್ಯಕಾರಿ ಸಭೆಯಲ್ಲಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT