ಬೆಂಗಳೂರು: ರಾಜ್ಯದಲ್ಲಿ ಜಾರಿಯಾಗಿರುವ ಐದು ಗ್ಯಾರಂಟಿ ಯೋಜನೆಗಳು ಯಥಾಪ್ರಕಾರ ಮುಂದುವರಿಯಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನಡೆಯುತ್ತಿರುವ 78ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಪರೇಡ್ ವೀಕ್ಷಿಸಿ ಅವರು ರಾಜ್ಯಕ್ಕೆ ಸಂದೇಶ ನೀಡಿದರು.

ಕೆಲವು ಗ್ಯಾರಂಟಿ ಯೋಜನೆಗಳಿಗೆ ಮಾನದಂಡ ವಿಧಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದು ಅದನ್ನು ಮುಖ್ಯಮಂತ್ರಿ ಅಲ್ಲಗೆಳೆದು ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ ಎಂದು ಹೇಳಿದರು.

ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿದವರಿಗೆ ರಾಜ್ಯದಲ್ಲಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿ ತೋರಿಸುವ ಮೂಲಕ ನಾವು ಉತ್ತರಿಸಿದ್ದೇವೆ ಎಂದರು.

ಐದು ಗ್ಯಾರಂಟಿ ಯೋಜನೆಗಳು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೇರ ಆರ್ಥಿಕ ನೆರವು ಸಿಗುತ್ತಿದೆ ಎಂದರು.

ಕಲ್ಯಾಣ ಕರ್ನಾಟಕದ ದಶಮಾನೋತ್ಸವ ಸಂಭ್ರಮ ಆಚರಣೆ ಮಾಡಲಾಗುವುದು ಎಂದು ಹೇಳಿದರು.

1. ಭಾರತದ 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಿಮಗೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಬಯಸುತ್ತೇನೆ.

2. ಎರಡು ಶತಮಾನಗಳ ಬ್ರಿಟಿಷರ ಕ್ರೂರ ದಾಸ್ಯದಿಂದ ಬಿಡುಗಡೆ ಹೊಂದಿ, ನಮ್ಮ ದೇಶ ಸ್ವಾತಂತ್ರ್ಯದ ಬೆಳಕನ್ನು ಕಂಡ ಸುದಿನವಿದು. ಇಡೀ ಜಗತ್ತೇ ಒಪ್ಪಿಕೊಂಡಂತೆ ಭಾರತದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕಿಂತ ಹೆಚ್ಚು ಪ್ರಾಮಾಣಿಕವಾದ ಮತ್ತು ಅಹಿಂಸಾತ್ಮಕವಾದ ಇನ್ನೊಂದು ಸ್ವಾತಂತ್ರ್ಯ ಹೋರಾಟ ಚರಿತ್ರೆಯಲ್ಲಿ ನಡೆದಿಲ್ಲ. ಇಂತಹ ಅಭೂತಪೂರ್ವ ಹೋರಾಟಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಹಾಗೂ ಅಮೂಲ್ಯವಾದ ಪ್ರಾಣವನ್ನೇ ಬಲಿದಾನ ಮಾಡಿದ ಎಲ್ಲ ಮಹಾನ್ ಚೇತನಗಳಿಗೆ ಈ ಸಂದರ್ಭದಲ್ಲಿ ಶ್ರದ್ಧಾಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ.

3. ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟವನ್ನು ಮೆಲುಕು ಹಾಕುವಾಗ ಈ ವರ್ಷ ಅಂದರೆ 2024ನೇ ಇಸವಿ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ. ಮುಖ್ಯವಾಗಿ 1924ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಚಾರಿತ್ರಿಕ ಬೆಳಗಾವಿ ಅಧಿವೇಶನ ನಡೆದು ನೂರು ವರ್ಷಗಳಾಗಿವೆ. ಅದೇ ರೀತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1924ರಲ್ಲಿ “ಬಹಿಷ್ಕøತ ಹಿತಕಾರಿಣಿ ಸಭಾ” ಎನ್ನುವ ಮಹತ್ವದ ಸಂಘಟನೆಯನ್ನು ಸ್ಥಾಪಿಸಿದ ಚಾರಿತ್ರಿಕ ಘಟನೆಗೂ ಈ ವರ್ಷ ನೂರು ತುಂಬುತ್ತದೆ.

4. ಬೆಳಗಾವಿ ಅಧಿವೇಶನ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಗಾಂಧೀಜಿ ಈ ಅಧಿವೇಶನದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣದಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ವಿವಿಧ ಭಾಷೆಳನ್ನಾಡುವ ಜನರ ನಡುವಣ ಸೌಹಾರ್ದಯುತ ಸಂಬಂಧಕ್ಕೆ ಒತ್ತು ನೀಡಿ ಮಾತನಾಡಿದ್ದರು. ಸಮಾಜದ ದಮನಿತ ವರ್ಗಗಳ ಅಭ್ಯುದಯಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಪ್ರಸ್ತಾಪಿಸಿದ್ದರು. ದ್ವೇಷ, ಅಸಹನೆಗಳಲ್ಲಿ ಜಗತ್ತು ಕುದಿಯುತ್ತಿರುವ ವಿಷಕಾರಿಯಾದ ಈ ಸಂದರ್ಭದಲ್ಲಿ ಗಾಂಧೀಜಿಯವರ ಮಾತುಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ಮಹತ್ವವಿದೆ.

5. ಬಾಬಾಸಾಹೇಬ್ ಡಾ: ಬಿ.ಆರ್. ಅಂಬೇಡ್ಕರ್ ಅವರು ಸ್ಥಾಪಿಸಿದ “ಬಹಿಷ್ಕøತ ಹಿತಕಾರಿಣಿ ಸಭಾ” ದಮನಿತ ವರ್ಗಗಳ ಪರವಾದ ಅವರ ಹೋರಾಟದ ಒಂದು ಪ್ರಮುಖ ಘಟನೆ. ಈ ಸಂಸ್ಥೆಯ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೋಷಿತ ವರ್ಗಗಳಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಅರಿವು ಮೂಡಿಸಲು ಶ್ರಮಿಸಿದರು. ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ' ಎಂಬ ತತ್ವದ ಸಾಕ್ಷಾತ್ಕಾರಕ್ಕಾಗಿ ಅಂಬೇಡ್ಕರ್ ಅವರು “ಬಹಿಷ್ಕøತ ಹಿತಕಾರಿಣಿ ಸಭಾ”ದ ಮೂಲಕ ಶ್ರಮಿಸಿದರು.

6. ಬೆಳಗಾವಿ ಅಧಿವೇಶನ ಮತ್ತು “ಬಹಿಷ್ಕøತ ಹಿತಕಾರಿಣಿ ಸಭಾ’’ದ ಸ್ಥಾಪನೆಯ ಶತಮಾನೋತ್ಸವಗಳನ್ನು ಸ್ಮರಣೀಯವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಈ ವರ್ಷ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು.

7. ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳೆಂದು ಕರೆಸಿಕೊಳ್ಳುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಅಂದಿನ ಪ್ರಧಾನಮಂತ್ರಿ ಡಾ: ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಟಿಕಲ್ 371ಜೆ ಸೇರ್ಪಡೆ ಮಾಡುವ ಮೂಲಕ ಆ ಭಾಗಕ್ಕೆ ಭರವಸೆ ತುಂಬಿದರು. ಈ 10 ವರ್ಷಗಳಲ್ಲಿ ಉದ್ಯೋಗ, ಶಿಕ್ಷಣ, ಮೂಲಭೂತ ಸೌಕರ್ಯ, ನೀರಾವರಿ, ಕೈಗಾರಿಕೆ ಅಭಿವೃದ್ಧಿ ಮುಂತಾದವುಗಳ ಮೂಲಕ ಲಕ್ಷಾಂತರ ಕುಟುಂಬಗಳಲ್ಲಿ ನೆಮ್ಮದಿ ನೆಲೆಸಲು ಸಾಧ್ಯವಾಗಿದೆ. 10 ವರ್ಷಗಳ ಹಿಂದೆ ಪ್ರಾರಂಭವಾದ ಈ ಭರವಸೆಯ ಬೆಳಕಿಗೆ ಈಗ ದಶಮಾನೋತ್ಸವದ ಸಂದರ್ಭ. ಆದ್ದರಿಂದ ಸರ್ಕಾರವು ದಶಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಕ 5,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

ಕರ್ನಾಟಕ ಮಾದರಿ

8. ಅನ್ನ, ನೀರು ಮತ್ತು ಪ್ರಾಣಕ್ಕಿಂತ ಸ್ವಾತಂತ್ರ್ಯ ಎನ್ನುವುದು ಬಹಳ ದೊಡ್ಡದು ಎಂದು ಹೋರಾಡಿದ ಎಲ್ಲಾ ಮಹನೀಯರು ಕಂಡ ಕನಸಿನ ಹಾದಿಯಲ್ಲಿ ದೇಶವನ್ನು ಮುನ್ನಡೆಸುವುದಕ್ಕಾಗಿ ಮತ್ತು ಅಭಿವೃದ್ಧಿ ಸಾಧಿಸುವುದಕ್ಕಾಗಿ ಕಳೆದ 77 ವರ್ಷಗಳಲ್ಲಿ ಕರ್ನಾಟಕ ರಾಜ್ಯವು ಅತ್ಯಂತ ಮಹತ್ತರವಾದ ಕೊಡುಗೆಗಳನ್ನು ನೀಡಿದೆ. ಸ್ವಾತಂತ್ರ್ಯ, ಸಮಾನತೆ, ನ್ಯಾಯಪರತೆ ಮತ್ತು ಭ್ರಾತೃತ್ವದ ಆಧಾರದಲ್ಲಿ ದೇಶವನ್ನು ಕಟ್ಟುವ ಸ್ವಾತಂತ್ರ್ಯ ಚಳವಳಿಗಾರರ ಆಶಯವನ್ನು ನಮ್ಮ ಸಂವಿಧಾನ ಪ್ರತಿಪಾದಿಸಿದೆ. ಕರ್ನಾಟಕದ ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ, ದಾಸೋಹ ಮತ್ತು ಸಮ-ಸಮಾಜ ನಿರ್ಮಾಣದ ತತ್ವಗಳು ಸಂವಿಧಾನದ ಮೂಲಭೂತ ಆಶಯಗಳಿಗೆ ಸಮೀಪವಾಗಿವೆ.

9. ಈ ಮೌಲ್ಯಗಳನ್ನು ಆಧಾರವಾಗಿರಿಸಿಕೊಂಡು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಗೆ ವಿಶೇಷವಾದ ಆದ್ಯತೆ ನೀಡಿ ರಾಜ್ಯದ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸುವ ಮತ್ತು ಆ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳುವ ಕಾರ್ಯವನ್ನು ಕರ್ನಾಟಕದಲ್ಲಿ ನಾವು ಮಾಡುತ್ತಿದ್ದೇವೆ. ಇದು ಅಭಿವೃದ್ಧಿಯ ಕರ್ನಾಟಕ ಮಾದರಿ.

2023 ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಕಳೆದ ಹದಿನೈದು ತಿಂಗಳುಗಳ ಅವಧಿಯಲ್ಲಿ ಈ ನಿಟ್ಟಿನಲ್ಲಿ ಸ್ಪಷ್ಟ ಹೆಜ್ಜೆಗಳನ್ನು ಇರಿಸಿದೆ.

10. ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಸಮಸ್ತ ಜನರ ಬದುಕಿಗೆ ಒಂದು ಆರ್ಥಿಕ ಭದ್ರತೆಯನ್ನು ಒದಗಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದು ಹೋಗಿರುವ ಜನರ ಬದುಕಿಗೆ ಈ ಯೋಜನೆಗಳು ನೆಮ್ಮದಿ ತಂದಿವೆ. ಈ ಯೋಜನೆಗಳ ಮೂಲಕ ಸಂಪತ್ತಿನ ಮರುಹಂಚಿಕೆಗೆ ಒತ್ತು ನೀಡುತ್ತಲೇ ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರವಾದ ರೀತಿಯಲ್ಲಿ ಹೆಚ್ಚಿಸಲು ಕೂಡಾ ಅμÉ್ಟೀ ಬದ್ಧತೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವುದರ ಜೊತೆಜೊತೆಗೆ ಈ ನೆಲದ ಸಾಮಾಜಿಕ ಸೌಹಾರ್ದತೆ ಮತ್ತು ಸಹಬಾಳ್ವೆಯ ಪರಂಪರೆಯನ್ನು ಮುಂದುವರಿಸಿ ಕರ್ನಾಟಕವನ್ನು ನಿಜ ಅರ್ಥದಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ'ವನ್ನಾಗಿ ರೂಪಿಸಲು ನಾವು ಕಾರ್ಯತತ್ಪರಾಗಿದ್ದೇವೆ.

ಕಲ್ಯಾಣ ಯೋಜನೆಗಳು

11. ನಮ್ಮ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಿಂದಾಗಿ ಮಾಸಿಕ ಸರಾಸರಿ 4,000-5,000 ರೂ.ಗಳಷ್ಟು ಪ್ರತಿ ಫಲಾನುಭವಿ ಕುಟುಂಬಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಭಿಸುತ್ತಿದೆ. ಇದು ಹಲವು ಕಾರಣಗಳಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೇರ ಆರ್ಥಿಕ ನೆರವು ನೀಡುವ Universal Basic Income ಪರಿಕಲ್ಪನೆ. ಮುಂದುವರಿದ ರಾಷ್ಟ್ರಗಳಲ್ಲಿ ಆರ್ಥಿಕವಾಗಿ ಅಶಕ್ತ ವರ್ಗಗಳಿಗೆ ನೆರವಾಗಲು ಜಾರಿಗೊಳಿಸಲಾಗುತ್ತಿರುವ ಇಂತಹ ಯೋಜನೆಯೊಂದನ್ನು ಅತೀ ದೊಡ್ಡ ಮಟ್ಟದಲ್ಲಿ ಸಾಕಾರಗೊಳಿಸುತ್ತಿರುವ ರಾಜ್ಯ ಕರ್ನಾಟಕ. ಈ ಬಗ್ಗೆ ನಮಗೆ ಹೆಮ್ಮೆ ಇದೆ.

12. ಈ ಯೋಜನೆಗಳು ಮುಂದುವರಿಯಲಿವೆ. ಮಾತ್ರವಲ್ಲ,

ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿದವರಿಗೆ ರಾಜ್ಯದಲ್ಲಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿ ತೋರಿಸುವ ಮೂಲಕ ನಾವು ಉತ್ತರಿಸಲಿದ್ದೇವೆ.

ಈ ಯೋಜನೆಗಳ ವ್ಯಾಪ್ತಿಯೊಳಗೆ ಹೊಸ ಆವಿಷ್ಕಾರಗಳನ್ನು ನಡೆಸಿ ಅವುಗಳು ಫಲಾನುಭವಿಗಳಿಗೆ ಇನ್ನಷ್ಟು ಹೆಚ್ಚು ನೆರವಾಗುವ ರೀತಿಯ ಕ್ರಮಗಳನ್ನು ಕೈಗೊಳ್ಳಲು ನಾವು ಉದ್ಯುಕ್ತರಾಗಿದ್ದೇವೆ. ಉದಾಹರಣೆಗೆ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿ ಕುಟುಂಬಗಳ ಯಜಮಾನಿ ಮಹಿಳೆಯರಿಗೆ ಈಗ ಮಾಸಿಕ 2,000 ರೂ. ನೆರವು ನೀಡುತ್ತಿದ್ದೇವೆ. ಈ ಫಲಾನುಭವಿಗಳನ್ನು ಸ್ತ್ರೀ-ಶಕ್ತಿ ಮಹಿಳಾ ಸ್ವಸಹಾಯ ಸಂಘಗಳಾಗಿ ಸಂಘಟಿಸುವ ಮೂಲಕ ಅವರಿಗೆ ವಿವಿಧ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಒದಗಿಸಿ ವರಮಾನ ತರುವ ವಿವಿಧ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವ ಯೋಚನೆ ಇದೆ. ಅದೇ ರೀತಿ ಯುವನಿಧಿಯ ಫಲಾನುಭವಿಗಳಿಗೆ ಕೌಶಾಲ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಕ್ರಮ ವಹಿಸಲಾಗುತ್ತಿದೆ.

13. “ಶಕ್ತಿ ಯೋಜನೆ”ಯಡಿ ಮಹಿಳೆಯರು 270 ಕೋಟಿ ಟ್ರಿಪ್ ಉಚಿತ ಪ್ರಯಾಣ ಸೌಲಭ್ಯ ಪಡೆಯುವ ಮೂಲಕ 6,541 ಕೋಟಿ ರೂ.ಗಳಷ್ಟು ಪ್ರಯಾಣ ವೆಚ್ಚ ಉಳಿತಾಯ ಮಾಡಿದ್ದಾರೆ. ‘ಗೃಹಲಕ್ಷ್ಮಿ ಯೋಜನೆ’ಯಡಿ 1.20 ಕೋಟಿ ಮಹಿಳೆಯರಿಗೆ ಈ ವರೆಗೆ 25,259 ಕೋಟಿ ರೂ.ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ.

‘ಅನ್ನಭಾಗ್ಯ ಯೋಜನೆ’ಯಡಿ ಹೆಚ್ಚುವರಿ ಅಕ್ಕಿ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ಕೇಂದ್ರದ ಅಸಹಕಾರದಿಂದಾಗಿ ಅಕ್ಕಿಯ ಬದಲಿಗೆ ನಗದು ವರ್ಗಾವಣೆ ಮಾಡಲಾಗುತ್ತಿದೆ. ಈ ವರೆಗೆ

1.16 ಕೋಟಿ ಪಡಿತರ ಚೀಟಿಗಳ 4.08 ಕೋಟಿ ಫಲಾನುಭವಿಗಳಿಗೆ 7,763 ಕೋಟಿ ರೂ. ನೆರವನ್ನು ನೇರವಾಗಿ ವರ್ಗಾಯಿಸಲಾಗಿದೆ. ಉಚಿತವಾಗಿ 200 ಯೂನಿಟ್ ವರೆಗೆ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆಯ ಸೌಲಭ್ಯವನ್ನು 1.60 ಕೋಟಿ ಕುಟುಂಬಗಳು ಪಡೆದುಕೊಳ್ಳುತ್ತಿವೆ. ಈ ಯೋಜನೆಗಾಗಿ 8,844 ಕೋಟಿ ರೂ. ವೆಚ್ಚ ಮಾಡಲಾಗಿದೆ. ‘ಯುವನಿಧಿ ಯೋಜನೆ’ಯಡಿ 1.31 ಲಕ್ಷ ಪದವಿ/ಡಿಪ್ಲೊಮಾ ಪಡೆದ ನಿರುದ್ಯೋಗಿಗಳಿಗೆ ನೆರವು ನೀಡಲಾಗುತ್ತಿದ್ದು ಇದಕ್ಕಾಗಿ 91 ಕೋಟಿ ರೂ.ಗಳನ್ನು ಭರಿಸಲಾಗಿದೆ.

14. ನಮ್ಮ ಸರಕಾರದ ಜನಕಲ್ಯಾಣ ಯೋಜನೆಗಳು ಐದು ಗ್ಯಾರಂಟಿಗಳಿಗಷ್ಟೇ ಸೀಮಿತವಾಗಿಲ್ಲ. ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತೆ ಒದಗಿಸುವ ವಿವಿಧ ಮಾಸಿಕ ಪಿಂಚಣಿಗಳಡಿ 78.64 ಲಕ್ಷ ಫಲಾನುಭವಿಗಳು ನೇರ ನಗದು ವರ್ಗಾವಣೆಯ ರೂಪದಲ್ಲಿ ನೆರವು ಪಡೆಯುತ್ತಿದ್ದಾರೆ. ಮೈತ್ರಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಲಾಗುವ ಪಿಂಚಣಿ ಮೊತ್ತವನ್ನು 800 ರೂ. ಗಳಿಂದ 1,200 ರೂ.ಗಳಿಗೆ ಹಾಗೂ ಮಾಜಿ ದೇವದಾಸಿಯರಿಗೆ ನೀಡಲಾಗುತ್ತಿರುವ ಮಾಸಾಶನವನ್ನು 1,500 ರೂ. ಗಳಿಂದ 2,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ ನಮ್ಮ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವೃದ್ಧಾಪ್ಯ ವೇತನ, ವಿಧವಾ ವೇತನ, ಮೈತ್ರಿ, ಮನಸ್ವಿನಿ ಮೊದಲಾದ ಸಾಮಾಜಿಕ ಭದ್ರತೆ ಯೋಜನೆಗಳಡಿ 13,027 ಕೋಟಿ ರೂ. ವೆಚ್ಚ ಮಾಡಲಾಗಿದೆ.

15. ಇದರ ಜೊತೆಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಲು ಉತ್ಪಾದಕರ ಖಾತೆಗಳಿಗೆ 1,822.28 ಕೋಟಿ ರೂ.ಗಳ ಪ್ರೋತ್ಸಾಹಧನವನ್ನು ಡಿ.ಬಿ.ಟಿ. ಮೂಲಕ ವರ್ಗಾವಣೆ ಮಾಡಲಾಗಿದೆ. ಸಹಕಾರ ಸಂಸ್ಥೆಗಳಿಂದ ನೀಡಲಾದ ಬೆಳೆಸಾಲ, ಸ್ವ-ಸಹಾಯ ಸಂಘಗಳ ಸಾಲ ಹಾಗೂ ಮತ್ತಿತರ ಸಾಲಗಳಿಗೆ 1,642 ಕೋಟಿ ರೂ. ಬಡ್ಡಿ ಸಹಾಯಧನ ನೀಡಲಾಗಿದೆ ಹಾಗೂ 20,029 ಕೋಟಿ ರೂ. ವೆಚ್ಚ ಭರಿಸಿ ನೀರಾವರಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಒದಗಿಸಲಾಗಿದೆ.

16. ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಹೆಚ್ಚುವರಿಯಾಗಿ 1,500 ರೂ. ಪ್ರೋತ್ಸಾಹಧನ ಘೋಷಿಸಿದ್ದಲ್ಲದೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರದ ನಾಫೆಡ್ನಿಂದ ಬರಬೇಕಾದ ಪೂರ್ಣ ಅನುದಾನ ಬಿಡುಗಡೆಯನ್ನು ನಿರೀಕ್ಷಿಸಿ ರಾಜ್ಯ ಸರ್ಕಾರ ಘೋಷಿಸಿದ ನೆರವೂ ಸೇರಿದಂತೆ ಒಟ್ಟು 870 ಕೋಟಿ ರೂ. ಗಳನ್ನು ನೇರವಾಗಿ 58,893 ರೈತರ ಖಾತೆಗಳಿಗೆ ವರ್ಗಾಯಿಸಿದೆ.

17. ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಮೋಟಾರು ಮತ್ತು ಇತರ ಸಂಬಂಧಿತ ಕಾರ್ಮಿಕರಿಗೆ ಹಾಗೂ ಸಿನೆಮಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಕಲ್ಯಾಣಕ್ಕೆ ಪ್ರತ್ಯೇಕ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಇದರೊಂದಿಗೆ ಗಿಗ್ ಕಾರ್ಮಿಕರ ವಿಮಾ ಸೌಲಭ್ಯ ಯೋಜನೆ ಮತ್ತು ಪತ್ರಿಕಾ ವಿತರಕರಿಗೆ ಅಪಘಾತ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

18. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭ್ಯುದಯಕ್ಕಾಗಿ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ. ಕಾಯ್ದೆ 2013ರ ಸೆಕ್ಷನ್ 7(ಡಿ) ಯನ್ನು ಕೈ ಬಿಡುವ ಮೂಲಕ ಅನುದಾನ ಪರಿಶಿಷ್ಟ ಸಮುದಾಯಗಳಿಗಾಗಿಯೇ ಬಳಕೆಯಾಗುವುದನ್ನು ಖಾತರಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹಾಗೂ ಹಿಂದುಳಿದ ವರ್ಗದವರಿಗೆ ಒಂದು ಕೋಟಿ ರೂ. ವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ, ಸರ್ಕಾರಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಮೀಸಲಾತಿ, ಮಹಿಳಾ ಉದ್ಯಮಿಗಳಿಗೆ ಕೆ.ಎಸ್.ಎಫ್.ಸಿಯಲ್ಲಿ ಶೇ. 4ರ ಬಡ್ಡಿ ದರದಲ್ಲಿ ನೀಡುವ ಸಾಲದ ಮಿತಿ 5 ಕೋಟಿ ರೂ.ಗಳಿಗೆ ಹೆಚ್ಚಳ, ಮುಂತಾದ ಉಪಕ್ರಮಗಳು ದುರ್ಬಲ ವರ್ಗಗಳ ಕುರಿತ ನಮ್ಮ ಕಾಳಜಿಗೆ ಸಾಕ್ಷಿಯಾಗಿವೆ.

19. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಡಿ ಹೋಬಳಿಗೊಂದು ವಸತಿ ಶಾಲೆ ಪ್ರಾರಂಭಿಸುವ ಗುರಿಯನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 20 ಹೊಸ ವಸತಿ ಶಾಲೆಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದವರಲ್ಲಿ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ಪೂರಕವಾಗಿ ಹೊಸದಾಗಿ ಒಟ್ಟು 295 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಲಾಗಿದೆ.

20. ಪರಿಶಿಷ್ಟ ಪಂಗಡದ ಅತಿ ಹಿಂದುಳಿದ 23 ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಶೇ. 20 ರಷ್ಟು ಮೀಸಲಾತಿ ಹಾಗೂ ನೇರ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯಾಬಲವನ್ನು 25 ರಿಂದ 40 ಕ್ಕೆ ಹೆಚ್ಚಿಸಲಾಗಿದೆ.

21. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಬಾಡಿಗೆ ಕಟ್ಟಡದಲ್ಲಿರುವ 30 ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

22. ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಅಭಿವೃದ್ಧಿಗಾಗಿ 100 ಹೊಸ ಮೌಲಾನಾ ಆಜಾದ್ ಶಾಲೆಗಳ ಪ್ರಾರಂಭ ಹಾಗೂ 50 ಸಂಖ್ಯಾ ಬಲವುಳ್ಳ 25 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ವಂತ ಕಟ್ಟಡ ಹೊಂದಿರುವ

25 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪ್ರಾರಂಭಿಸಲಾಗಿದೆ.

23. ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಸಹಯೋಗದೊಂದಿಗೆ ಮೊಟ್ಟೆ ಅಥವಾ ಚಿಕ್ಕಿ ಮತ್ತು ಬಾಳೆಹಣ್ಣಿನ ವಿತರಣೆಯನ್ನು ವಾರದಲ್ಲಿ ಎರಡು ದಿನಗಳಿಂದ ಆರು ದಿನಗಳಿಗೆ ಹೆಚ್ಚಿಸಲಾಗಿದೆ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ ಇವರ ಸಹಭಾಗಿತ್ವದಲ್ಲಿ ವಾರದಲ್ಲಿ 3 ದಿನ ರಾಗಿಮಾಲ್ಟನ್ನು ನೀಡಲಾಗುತ್ತಿದೆ.

24. ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 11,494 ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಬಾಕಿ ಇರುವ ಹುದ್ದೆಗಳನ್ನೂ ಹಂತ ಹಂತವಾಗಿ ಭರ್ತಿ ಮಾಡುವ ಪ್ರಕ್ರಿಯೆ ಪ್ರಾರಂಭಿಸುತ್ತೇವೆ.

25. ಮುಕ್ತ, ನಿರ್ಭೀತ ಸಮಾಜದ ನಿರ್ಮಾಣ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ಉನ್ನತ ಶಿಕ್ಷಣ ವ್ಯವಸ್ಥೆ ರೂಪಿಸಲು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರವು ರಚಿಸಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿಯ ಆಧಾರದಲ್ಲಿ ಪದವಿ ಶಿಕ್ಷಣದ ಅವಧಿ ಹಾಗೂ ಪಠ್ಯಕ್ರಮವನ್ನು ಪರಿಷ್ಕರಿಸಲಾಗಿದೆ.

26. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಎರಡು ಮುಂಗಾರು ಹಂಗಾಮುಗಳಲ್ಲಿ ರಾಜ್ಯ ಸಂಪೂರ್ಣ ವಿಭಿನ್ನ ಪರಿಸ್ಥಿತಿಯನ್ನು ಎದುರಿಸಿದೆ. ಕಳೆದ ವರ್ಷ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾದರೆ, ಈ ಬಾರಿ ಅತಿವೃಷ್ಟಿಗೆ ಒಳಗಾಗಿದೆ. ಕೇಂದ್ರ ಸರ್ಕಾರವು ಬರ ಪರಿಹಾರದ ಮೊತ್ತವನ್ನು ತಡವಾಗಿ ನೀಡಿದರೂ, ರಾಜ್ಯದಲ್ಲಿ ಬರದಿಂದಾಗಿ ಜನರಿಗೆ ಹೆಚ್ಚಿನ ಅನಾನುಕೂಲಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಯಿತು. ಎನ್ಡಿಆರ್ಎಫ್ ಅಡಿ ಪರಿಹಾರ ಬಿಡುಗಡೆಯಾಗುವ ಮೊದಲೇ ರಾಜ್ಯ ಸರ್ಕಾರ ಬರಗಾಲದಿಂದ ಬಾಧಿತರಾದ ಪ್ರತಿ ರೈತರಿಗೆ 2,000 ರೂ. ವರೆಗೆ ಒಟ್ಟು 636.45 ಕೋಟಿ ರೂ.ಗಳ ಮಧ್ಯಂತರ ಪರಿಹಾರವನ್ನು ವಿತರಿಸಿತು. ಒಟ್ಟಾರೆಯಾಗಿ ಬೆಳೆ ನಷ್ಟ ಅನುಭವಿಸಿದ 38,58,737 ರೈತರಿಗೆ 3454.66 ಕೋಟಿ ರೂ. ಬೆಳೆಹಾನಿ ಪರಿಹಾರವನ್ನು ಎನ್.ಡಿ.ಆರ್.ಎಫ್. ಅಡಿ ವಿತರಿಸಲಾಗಿದೆ. ಇದರೊಂದಿಗೆ 17.88 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಒಟ್ಟು 512.83 ಕೋಟಿ ರೂ. ಗಳಷ್ಟು ಜೀವನೋಪಾಯ ಪರಿಹಾರ ವಿತರಿಸಲಾಗಿದೆ.

27. ಪ್ರವಾಹ ಪೀಡಿತ ಜಿಲ್ಲೆಗಳಿಗೆ ನಾನು ಸ್ವತಃ ಭೇಟಿ ನೀಡಿದ್ದೇನೆ. ನಮ್ಮ ಸಚಿವರುಗಳೂ ಜಿಲ್ಲೆಗಳಲ್ಲಿದ್ದು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಜೀವಹಾನಿ, ಜಾನುವಾರುಗಳ ಸಾವು ಹಾಗೂ ಮನೆ ಹಾನಿಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ. ಮನೆ ಕಳೆದುಕೊಂಡವರಿಗೆ 1.2 ಲಕ್ಷ ರೂ. ಪರಿಹಾರದೊಂದಿಗೆ ಮನೆ ಹಂಚಿಕೆ ಮಾಡಲು ಕ್ರಮ ವಹಿಸುತ್ತಿದ್ದೇವೆ.

28. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಸಾಧಿಸುವುದು ಅತಿ ಅಗತ್ಯ ಎಂಬ ಪ್ರಕೃತಿಯ ಎಚ್ಚರಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭೂ-ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯು ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಒಳಪಡುವ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿನ 250 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭೂ-ಕುಸಿತ ಸಂಭವಿಸಬಹುದಾದ 1,351 ಗ್ರಾಮಗಳನ್ನು ಗುರುತಿಸಿದೆ. ಈ ಪ್ರದೇಶಗಳಲ್ಲಿ ಭೂ-ಕುಸಿತ ತಡೆಗಟ್ಟಲು ಭೂ-ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಮತ್ತು National Institute of Rock Mechanics (NIRM) ಸಹಯೋಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಉಪಶಮನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

29. ಮಾನವ-ವನ್ಯ ಪ್ರಾಣಿ ಸಂಘರ್ಷ ನಾವು ಎದುರಿಸುವ ಪ್ರಮುಖ ಸವಾಲಾಗಿದೆ. ಇದನ್ನು ಸಮರ್ಥವಾಗಿ ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 120 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಇದರೊಂದಿಗೆ 7 ಆನೆ ಟಾಸ್ಕ್ ಫೋರ್ಸ್ ಹಾಗೂ 2 ಚಿರತೆ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಇತ್ತೀಚೆಗೆ ಮಾನವ-ಆನೆ ಸಂಘರ್ಷ ತಡೆಗಟ್ಟುವ ಕುರಿತು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.

30. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ವಿವಿಧ ವಸತಿ ಯೋಜನೆಗಳಡಿ ಒಟ್ಟು 3,690 ಕೋಟಿ ರೂ. ವೆಚ್ಚದಲ್ಲಿ 2.38 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ.

31. ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿ ಫಲಾನುಭವಿಗಳಿಗೆ ಆರ್ಥಿಕವಾಗಿ ಹೊರೆಯಾಗಿದ್ದ ವಂತಿಗೆಯಲ್ಲಿ ತಲಾ 4 ಲಕ್ಷ ರೂ.ಗಳಂತೆ ರಾಜ್ಯ ಸರ್ಕಾರವೇ ಭರಿಸಲು ತೀರ್ಮಾನಿಸಿ, ಅರ್ಧಕ್ಕೆ ನಿಂತಿದ್ದ ಮನೆಗಳ ನಿರ್ಮಾಣ ಮತ್ತೆ ಪ್ರಾರಂಭವಾಗಿದೆ. ಈಗಾಗಲೇ 36,781 ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಮೂಲಕ ಬಡ ಜನರ ಸ್ವಂತ ಸೂರಿನ ಕನಸನ್ನು ಸಾಕಾರಗೊಳಿಸಿದ್ದೇವೆ. ಹಾಗೆಯೇ ಇನ್ನುಳಿದ ಮನೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಂಡಿದ್ದೇವೆ.

32. ಜನರಿಗೆ ಸರಳವಾಗಿ, ಪಾರದರ್ಶಕವಾಗಿ ನಾಗರಿಕ ಸೇವೆಗಳನ್ನು ದೊರಕಿಸಲು ನಮ್ಮ ಸರ್ಕಾರವು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಪಹಣಿಗೆ ಆಧಾರ್ ಜೋಡಣೆ, ಆಟೋಮ್ಯುಟೇಷನ್ ಸೌಲಭ್ಯ, ಬಗರ್ಹುಕುಂ ಸಾಗುವಳಿ ತಂತ್ರಾಂಶ, ಕಂದಾಯ ದಾಖಲೆಗಳ ಡಿಜಿಟಲೀಕರಣ, ನಗರಾಸ್ತಿ ಮಾಲೀಕತ್ವದ ಹಕ್ಕು ದಾಖಲೆಗಳ ಯೋಜನೆ ಮೊದಲಾದವುಗಳು ರೈತರ, ಜನ ಸಾಮಾನ್ಯರ ಸಮಯ ಹಾಗೂ ಶ್ರಮ ಉಳಿತಾಯ ಮಾಡುವತ್ತ ಮಹತ್ವದ ಕ್ರಮಗಳಾಗಿವೆ.

33. ಗ್ರಾಮೀಣ ಪ್ರದೇಶದ ಜನರು ತಮ್ಮ ಗ್ರಾಮ ಪಂಚಾಯಿತಿಯಲ್ಲಿಯೇ ಸಕಾಲದಲ್ಲಿ ಜನನ ಮರಣ ನೋಂದಣಿ ಮಾಡುವ ಉದ್ದೇಶದಿಂದ ರಾಜ್ಯದ ಎಲ್ಲ 5,950 ಗ್ರಾಮ ಪಂಚಾಯಿತಿಗಳಲ್ಲಿರುವ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.

34. ನೋಂದಣಿ ಮತ್ತು ಮುದ್ರಾಂಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಕೌನ್ಸೆಲಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

35. ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ತಾಯಂದಿರ ಅನುಕೂಲಕ್ಕಾಗಿ 4,000 ಪಂಚಾಯಿತಿಗಳಲ್ಲಿ ‘ಕೂಸಿನ ಮನೆʼ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಆರ್ಥಿಕ ಅಭಿವೃದ್ಧಿ

36. ಈಗಾಗಲೇ ಹೇಳಿದಂತೆ ಕಲ್ಯಾಣ ಯೋಜನೆಗಳ ಜೊತೆಜೊತೆಗೆ ಅರ್ಥಿಕ ಅಭಿವೃದ್ಧಿ ದರದ ವೇಗ ಹೆಚ್ಚಿಸಲು ಉದ್ಯಮ, ಕೃಷಿ, ಮೂಲಭೂತ ಸೌಕರ್ಯ ಕ್ಷೇತ್ರಗಳಲ್ಲಿ ಬಹುಮುಖಿ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯೆ ನಮ್ಮ ಗುರಿ ಮತ್ತು ಧ್ಯೇಯವಾಗಿದೆ.

37. 2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯವು 54,427 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸುವುದರೊಂದಿಗೆ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.

38. 2023-24ನೇ ಸಾಲಿನಲ್ಲಿ ವಿವಿಧ ಉದ್ಯಮ ಸಂಸ್ಥೆಗಳೊಂದಿಗೆ 13 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇವುಗಳಡಿಯಲ್ಲಿ ರಾಜ್ಯದಲ್ಲಿ 42,915 ಕೋಟಿ ರೂ. ಹೂಡಿಕೆಯಾಗಿ ಸುಮಾರು 22,600 ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

39. 2023-24ನೇ ಸಾಲಿನಲ್ಲಿ ರಾಜ್ಯ ಏಕಗವಾಕ್ಷಿ ಅನುಮೋದನಾ ಸಮಿತಿಗಳಲ್ಲಿ 591 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು ಇವುಗಳಿಂದ ಸುಮಾರು 84,232 ಕೋಟಿ ರೂ. ಬಂಡವಾಳ ಹರಿದು ಬರಲಿದ್ದು, 1,56,986 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ.

40. 2023-24ನೇ ಸಾಲಿನಲ್ಲಿ ರಾಜ್ಯವು 1,66,545 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ರಫ್ತು ಮಾಡಿ ಮೊದಲ ಸ್ಥಾನದಲ್ಲಿದೆ. ಕಳೆದ ಸಾಲಿಗೆ ಹೋಲಿಸಿದರೆ ರಾಜ್ಯವು ಶೇ. 5.20 ರಷ್ಟು ಪ್ರಗತಿಯನ್ನು ಸಾಧಿಸಿದೆ.

41. ರಾಜ್ಯಕ್ಕೆ, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಬಂಡವಾಳವನ್ನು ಆಕರ್ಷಿಸುವ ಸಂಬಂಧ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ - Invest Karnataka 2025 ರನ್ನು ಫೆಬ್ರವರಿ 2025ರಲ್ಲಿ ಆಯೋಜಿಸಲಾಗುತ್ತಿದೆ. ಇದಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ದೇಶ-ವಿದೇಶಗಳಲ್ಲಿ ರೋಡ್ ಶೋಗಳನ್ನು ನಡೆಸಿ ಹೂಡಿಕೆದಾರರನ್ನು ಆಹ್ವಾನಿಸಲಾಗುವುದು.

42. ರಾಜ್ಯ ಸರ್ಕಾರವು ಸಂಪೂರ್ಣ ಕ್ಲೀನ್ ಮೊಬಿಲಿಟಿ ವಾಹನ ಮೌಲ್ಯ ಸರಪಳಿಯಲ್ಲಿ 50,000 ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುವ ಹಾಗೂ ಸರಿಸುಮಾರು 1,00,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದೊಂದಿಗೆ Karnataka Clean Mobility Policy 2024-29 ಕರಡು ನೀತಿಯನ್ನು ಸಿದ್ಧಪಡಿಸಿದ್ದು, ಅನುಮೋದನೆಯ ಅಂತಿಮ ಹಂತದಲ್ಲಿರುತ್ತದೆ.

43. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿ ನವೋದ್ಯಮ ಯೋಜನೆಯಡಿ 40 ಉದ್ಯಮಗಳಿಗೆ ಉತ್ತೇಜನ ನೀಡಲಾಗಿದೆ.

44. ಐಟಿ-ಬಿಟಿ ವಲಯದಲ್ಲಿ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಕೌಶಲ್ಯ ತರಬೇತಿಯನ್ನು ಒದಗಿಸಲು ಕೌಶಲ್ಯ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಉದ್ಯಮಗಳ ಬೇಡಿಕೆಗೆ ಅನುಗುಣವಾದ ಕೋರ್ಸ್ಗಳ ವಿವರವಾದ ಯೋಜನೆ ಕುರಿತು ವರದಿ ನೀಡಿದ್ದು, ಈ ಕೌಶಲ್ಯಗಳ ತರಬೇತಿಯನ್ನು ನೀಡಲು ಕ್ರಮ ವಹಿಸಲಾಗುವುದು.

45. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಖಾಲಿ ಇರುವ ಹುದ್ದೆ ಭರ್ತಿಗೆ ಒತ್ತು ನೀಡಲಾಗಿದ್ದು, 15,428 ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ ನೀಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಸೂಚನೆಯಾಗಿ ಬಾಕಿ ಉಳಿದಿದ್ದ 670 ಹುದ್ದೆಗಳೂ ಸೇರಿದಂತೆ ಒಟ್ಟು 11,512 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ.

46. ಉತ್ತಮ ಮೂಲಸೌಕರ್ಯಗಳು, ಸಾರಿಗೆ ಸಂಪರ್ಕ ಸೌಲಭ್ಯಗಳು ಆರ್ಥಿಕತೆಯ ಬೆಳವಣಿಗೆಗೆ ವೇಗವರ್ಧಕವಿದ್ದಂತೆ. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ 1,917 ಕಿ.ಮೀ. ರಾಜ್ಯ ಹೆದ್ದಾರಿ, 2,502 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳು ಮತ್ತು 150 ಸೇತುವೆಗಳನ್ನು ನಿರ್ಮಾಣ ಮಾಡಲಾಗುವುದು. ಎಸ್.ಹೆಚ್.ಡಿ.ಪಿ. ಹಂತ-5 ರಡಿಯಲ್ಲಿ ಒಟ್ಟು 9,000 ಕೋಟಿ ರೂ. ಮೊತ್ತದಲ್ಲಿ 2,500 ಕಿ.ಮೀ ಹೆದ್ದಾರಿಗಳ ಅಭಿವೃದ್ಧಿಯನ್ನು 2 ಘಟ್ಟಗಳಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ಘಟ್ಟ-1 ರ 4,000 ಕೋಟಿ ರೂ. ಮೊತ್ತದಲ್ಲಿ 1,467 ಕಿ.ಮೀ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.

47. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಪಿ.ಎಂ.ಜಿ.ಎಸ್.ವೈ, ನಮ್ಮ ಗ್ರಾಮ ನಮ್ಮ ರಸ್ತೆ ಮತ್ತು ವಿಶೇಷ ಅಭಿವೃದ್ಧಿ ಯೋಜನೆಗಳಡಿ ಒಟ್ಟು 803.32 ಕಿ.ಮೀ. ಉದ್ದದ ರಸ್ತೆಯನ್ನು 463.11 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಯಡಿ ಒಟ್ಟು 8,260 ಕಿಮೀ ಉದ್ದದ ರಸ್ತೆಯನ್ನು 6,190 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.

48. ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವಾಗಿ ಅಭಿವೃದ್ಧಿ ಪಡಿಸಲು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಜಾರಿಗೊಳಿಸಲಾಗಿದೆ. ನಗರದಲ್ಲಿ ವಿನೂತನ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾದರಿ ಅಡಿಯಲ್ಲಿ (Intergrated Financial Model) ಕನಿಷ್ಠ 48,686 ಕೋಟಿ ರೂ. ವೆಚ್ಚದಲ್ಲಿ ದೀರ್ಘಾವಧಿಯ ಮೂಲಭೂತ ಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ.

49. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಯ ಉದ್ದೇಶದಿಂದ ಫೆರಿಫೆರಲ್ ರಿಂಗ್ ರೋಡ್ ಯೋಜನೆಯನ್ನು ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ದೃಢ ಸಂಕಲ್ಪ ಮಾಡಿದೆ.

50. ರಾಜ್ಯದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ಬಾರಿ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ ಎತ್ತಿನಹೊಳೆ ಯೋಜನೆಯಡಿ 855.02 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮತ್ತು ಭೂ-ಸ್ವಾಧೀನ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ವಿಭಾಗ ಕಚೇರಿ ಮತ್ತು ಉಪವಿಭಾಗ ಕಚೇರಿ ಸ್ಥಳಾಂತರ ಮಾಡಲಾಗಿದೆ.

ಕೇಂದ್ರ ರಾಜ್ಯ ಸಂಬಂಧದ ಸವಾಲುಗಳು

51. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧವನ್ನು ಸಂವಿಧಾನ ಸ್ಪಷ್ಟಪಡಿಸಿದೆ. ಜನಕಲ್ಯಾಣ ಕಾರ್ಯಗಳನ್ನು ಅನುಷ್ಠಾನಗೊಳಿಸುವುದು ರಾಜ್ಯಗಳ ಜವಾಬ್ದಾರಿಯಾಗಿದ್ದು, ಅವುಗಳಿಗೆ ಪೂರಕವಾಗಿ ಸಂಪನ್ಮೂಲ ಒದಗಿಸುವುದು ಕೇಂದ್ರದ ಹೊಣೆಗಾರಿಕೆ.

52. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಆಶಯದಿಂದ ದೂರ ಸರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ. ಸಂವಿಧಾನದ ಆಶಯಗಳನ್ನು ನಿರ್ಲಕ್ಷಿಸಿ, ರಾಜ್ಯಗಳಿಗೆ ದೊರೆಯಬೇಕಾದ ಹಣಕಾಸಿನ ಪಾಲನ್ನು ನೀಡಲು ಮೀನಾಮೇಷ ಎಣಿಸಲಾಗುತ್ತಿದೆ. ಕೇಂದ್ರದಿಂದ ನ್ಯಾಯಯುತವಾಗಿ ಬರಬೇಕಾದ ಪರಿಹಾರದ ಮೊತ್ತ ಪಡೆಯಲು ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಗಿರುವುದು ಜನಹಿತಕ್ಕೆ ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಾದರೂ ಕೇಂದ್ರ ಸರ್ಕಾರವು, ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡು ರಾಜ್ಯಗಳ ಅಭಿವೃದ್ಧಿಗೆ ಅನುದಾನಗಳನ್ನು ಬಿಡುಗಡೆ ಮಾಡಬೇಕೆಂದು ಈ ಸಂದರ್ಭದಲ್ಲಿ ಸಮಸ್ತ ನಾಡ ಬಂಧುಗಳ ಪರವಾಗಿ ಒತ್ತಾಯಿಸುತ್ತೇನೆ.

53. ಅಂತೆಯೇ ಜನತೆಯ ತೀರ್ಪನ್ನು ಧಿಕ್ಕರಿಸಿ ನಡೆಸುವ ಹಿಂಬಾಗಿಲ ರಾಜಕಾರಣವನ್ನು ಇತಿಹಾಸದಲ್ಲಿ ಜನತೆ ಎಂದಿಗೂ ಕ್ಷಮಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಾಡಿನ ಮಹಾ ಜನತೆ ನೀಡಿದ ತೀರ್ಪನ್ನು ಗೌರವಿಸಿ, ಸಂವಿಧಾನದ ಆಶಯಗಳ ಪ್ರಕಾರ ವಿರೋಧಪಕ್ಷಗಳು ಜವಾಬ್ದಾರಿಯುತವಾಗಿ ನಡೆಯಬೇಕೆಂಬುದನ್ನು ಎಲ್ಲರೂ ನಿರೀಕ್ಷಿಸುತ್ತಾರೆ.

54. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಪ್ರಬುದ್ಧತೆ ಮೆರೆದಿರುವ ಮತದಾರರು, ಪ್ರಜಾಪ್ರಭುತ್ವ ಯಾರ ಕೈಗೊಂಬೆಯಾಗಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ.

55. ದೇಶದ ಚಲನಶೀಲ, ಸ್ಪಂದನಾಶೀಲ ಪ್ರಜಾಪ್ರಭುತ್ವಕ್ಕೆ ನಮ್ಮ ಸಂವಿಧಾನವೇ ಶ್ರೀರಕ್ಷೆಯಾಗಿದೆ. ದೇಶದಲ್ಲಿ ನಮ್ಮ ಪ್ರಜಾಪ್ರಭುತ್ವವು ಕ್ರಿಯಾಶೀಲವಾಗಲು, ಜನ ಜೀವನದ ಸಹಜ ಮತ್ತು ಅವಿಭಾಜ್ಯ ಭಾಗವಾಗಿರಲು ಎದುರಾಗಬಹುದಾದ ಅಡ್ಡಿ-ಆತಂಕಗಳ ಕುರಿತು ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಂದೇ ಮುನ್ನೆಚ್ಚರಿಕೆ ನೀಡಿದ್ದರು. ಮೊದಲನೆಯದಾಗಿ, ಜಾತಿ-ಮತದ ಆಧಾರದ ವಿಭಜನೆಯ ರಾಜಕಾರಣ ಮಾಡುವ ವಿಚ್ಛಿದ್ರಕಾರಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕು. ಎರಡನೆಯದಾಗಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ಆಶಯಗಳನ್ನು ಬುಡಮೇಲು ಮಾಡುವ ಮನಸ್ಥಿತಿಯ ವ್ಯಕ್ತಿಗಳನ್ನು ಅಧಿಕಾರದಿಂದ ಮುಲಾಜಿಲ್ಲದೆ ದೂರ ಇಡಬೇಕು. ಅಂತಿಮವಾಗಿ ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲದ ರಾಜಕೀಯ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದರು.

56. ನಾಡಿನ ಸಮಸ್ತ ಜನರು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮೂಲ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ಗೌರವವಾಗಿರುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಭಗತ್ ಸಿಂಗ್ ಮತ್ತು ಹುತಾತ್ಮರಾದ ಅವರ ಕ್ರಾಂತಿಕಾರಿ ಸ್ನೇಹಿತರು, ನಮಗೆ ಸಂವಿಧಾನ ನೀಡಿದ ಬಾಬಾ ಸಾಹೇಬ್ ಡಾ: ಬಿ.ಆರ್.ಅಂಬೇಡ್ಕರ್, ವೈಜ್ಞಾನಿಕ ಹಾಗೂ ಜ್ಯಾತ್ಯಾತೀತ ತಳಹದಿಯಲ್ಲಿ ಆಧುನಿಕ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿದ ಜವಾಹರ್ಲಾಲ್ ನೆಹರು ಮುಂತಾದ ಮಹನೀಯರನ್ನು ನಾವು ಸ್ಮರಿಸಬೇಕು ಹಾಗೂ ಅವರ ಆಶಯಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ನೆರೆಹೊರೆಯ ದೇಶಗಳಲ್ಲಿ ತಲೆದೋರಿರುವ ಪ್ರಕ್ಷುಬ್ಧ ಪರಿಸ್ಥಿತಿ ಇಲ್ಲಿಯೂ ಎದುರಾಗಿ ಬಿಡಬಹುದು ಎಂಬ ಎಚ್ಚರಿಕೆ ನಮ್ಮೆಲ್ಲರಲ್ಲಿ ಇರಬೇಕಾಗುತ್ತದೆ.

57. ಎಲ್ಲ ಜಾತಿ ಹಾಗೂ ಮತಗಳ ಜನರು ಒಟ್ಟುಗೂಡಿ ಸ್ವಾತಂತ್ರ್ಯ ಗಳಿಸಿದ್ದೇವೆ. ಎಲ್ಲರೂ ಒಟ್ಟುಗೂಡಿ ಈ ಅಮೂಲ್ಯ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾಗಿದೆ.

ಮತದ ಬಿರುಕುಗಳನು ತೊರೆವೆ

ನುಡಿಗಳೊಡಕುಗಳನು ಮರೆವೆ

ತೊತ್ತ ತೊಡಕುಗಳನು ಬಿರಿವೆ

ಸ್ವಾತಂತ್ರ್ಯದ ಸ್ವರ್ಗಕೇರೆ

ಪುಣ್ಯದೇಣಿ ಮೆಟ್ಟಿಲು

58. ರಾಷ್ಟ್ರಕವಿ ಕುವೆಂಪು ಅವರ ಕವನದ ಈ ಸಾಲುಗಳಂತೆ ಜಾತಿ, ಮತ, ಧರ್ಮ, ಭಾμÉಯ ಆಧಾರದ ಭೇದ-ಭಾವಗಳನ್ನು ಮರೆತು ದೇಶದ ವೈವಿಧ್ಯತೆಯನ್ನು ಗೌರವಿಸುತ್ತ, ಅಖಂಡತೆಯನ್ನು ಪಾಲಿಸುತ್ತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಾಗಿದೆ. ಎಲ್ಲರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ದೊರಕಿಸುವ ಮೂಲಕ ರಾಜಕೀಯ ಸ್ವಾತಂತ್ರ್ಯ ಅಬಾಧಿತವಾಗುವಂತೆ ಶ್ರಮಿಸಬೇಕಾಗಿದೆ. ಈ ಗುರಿ ಸಾಧನೆಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ. ಸ್ವಸ್ಥ, ಸಮೃದ್ಧ, ಸಮ-ಸಮಾಜದ ನಾಡು ಕಟ್ಟೋಣ ಎಂದು ಆಶಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

78ನೇ ಸ್ವಾತಂತ್ರ್ಯೋತ್ಸವವನ್ನು ರಾಜ್ಯದಾದ್ಯಂತ ಸಡಗರ, ಸಂಭ್ರಮದಿಮದ ಆಚರಿಸಲಾಗುತ್ತಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಮಯ್ಯ ಧ್ವಜಾರೋಹಣ ನೆರವೇರಿಸಿದರು.

ಚಿತ್ರದುರ್ಗ:ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಚಿತ್ರದುರ್ಗ: ಇಲ್ಲಿಯ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಧ್ವಜಾರೋಹಣ ನೆರವೇರಿಸಿದರು.

ನಂತರ ನಡೆದ ಪೊಲೀಸ್, ಅರಣ್ಯ, ಅಬಕಾರಿ ಇಲಾಖೆಯ ಸಿಬ್ಬಂದಿ, ಶಾಲಾ ಕಾಲೇಜು ವಿದ್ಯಾರ್ಥಿಗಳ ಪಥ ಸಂಚಲನದಲ್ಲಿ ಸಚಿವರು ಗೌರವ ವಂದನೆ ಸ್ವೀಕರಿಸಿದರು.

ಸಂಸದ ಗೋವಿಂದ ಕಾರಜೋಳ, ಶಾಸಕ ಕೆ.ಸಿ.ವೀರೇಂದ್ರ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲಗಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಇದ್ದರು.

ಮೈಸೂರು: ಜಿಲ್ಲಾಡಳಿತದಿಂದ ಇಲ್ಲಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯ ದಿನವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು. ವಿವಿಧ ತುಕಡಿಗಳ ಪಥಸಂಚಲನವನ್ನು ವೀಕ್ಷಿಸಿದರು.

ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಿದರು.

ಅಭಿವೃದ್ಧಿಯೇ ಸ್ವಾತಂತ್ರ್ಯ. ಅದಕ್ಕಾಗಿಯೇ ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಅಭಿವೃದ್ಧಿಯ ಸ್ವಾತಂತ್ರ್ಯ ನೀಡಲು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಉತ್ತರ ವಲಯದ ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ದೇಶದಲ್ಲಿ ಸಾಕಷ್ಟು ವೈವಿಧ್ಯವಿದ್ದರೂ ನಾವೆಲ್ಲರೂ ಒಂದೇ ಎಂಬ ಆಶಯವನ್ನು ಸಾರಿದರು.

ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್.ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ಪಾಲ್ಗೊಂಡಿದ್ದರು.

ಹೊಸಪೇಟೆಯಲ್ಲಿ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನ ಆಚರಣೆ

ಹೊಸಪೇಟೆ (ವಿಜಯನಗರ):

ವಿಜಯನಗರ ಜಿಲ್ಲಾಡಳಿತದ ವತಿಯಿಂದ ಗುರುವಾರ ಇಲ್ಲಿನ ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಧ್ವಜಾರೋಹಣ ನೆರವೇರಿಸಿದರು.

ರಾಜ್ಯ ಸರ್ಕಾರ ಐದು ಗ್ಯಾರಂಟಿಯ ಜತೆಗೆ ಬಡವರಿಗೆ ಸೂರು ನೀಡುವ ಮಹತ್ವದ ಯೋಜನೆಗೆ ಉತ್ತೇಜನ ನೀಡಿತು, ಇದು ಸರ್ಕಾರಕ್ಕೆ ಬಡವರ ಮೇಲೆ ಇರುವ ಪ್ರೀತಿಗೆ ದ್ಯೋತಕ ಎಂದು ಸಚಿವ ಜಮೀರ್ ಹೇಳಿದರು.

ತುಂಗಭದ್ರಾ ಅಣೆಕಟ್ಟೆಯ ಕೊಚ್ಚಿಹೋದ ಗೇಟ್ ಅನ್ನು ಅಳವಡಿಸುವ ಕೆಲಸ ಈಗಾಗಲೇ ಆರಂಭವಾಗಿದ್ದು, ಶುಕ್ರವಾರದಿಂದ ಗೇಟ್ ಅಳವಡಿಕೆ ಪ್ರಯೋಗ ನಡೆಯಲಿದೆ ಎಂದರು.

ರೈತರು ನೀರು ಸಿಗುವುದಿಲ್ಲ ಎಂದು ಆತಂಕ ಪಡಬಾರದು, ಈ ಬಾರಿ ಉತ್ತಮ ಮಳೆ ಆಗುತ್ತಿರುವುದರಿಂದ ಮತ್ತೆ ಜಲಾಶಯ ತುಂಬಲಿದೆ ಎಂದರು.

ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಎಸ್ಪಿ ಶ್ರೀಹರಿಬಾಬು ಬಿ.ಎಲ್. ಇತರರು ಪಾಲ್ಗೊಂಡಿದ್ದರು.

ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಯಾದಗಿರಿ : ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಇದಾದ ನಂತರ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ಸ್ವಾತಂತ್ರ್ಯ ಗಳಿಸಿದ್ದು, ಇದು ಪ್ರತಿಯೊಬ್ಬ ಭಾರತೀಯರ ಪಾಲಿಗೆ ಮಹತ್ವ ದಿನ ಎಂದರು.

ಬ್ರೀಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆಗೈದ ಸಾವಿರಾರು ಕ್ರಾಂತಿಕಾರಿಗಳು ಇನ್ನೂ ಅನೇಕ ಮಹನೀಯರು ನಮ್ಮ ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಿ ಸ್ವತಂತ್ರ ದೇಶವನ್ನಾಗಿಸಿದ್ದಾರೆ ಎಂದು ಹೇಳಿದರು.

ದೇಶದ ಅವಶ್ಯಕತೆಗಳೆಂದರೆ ಶಾಂತಿ ಮತ್ತು ಐಕ್ಯತೆ ನಮ್ಮ ಪ್ರಗತಿಯ ಮಂತ್ರ ಹಾಗೂ ಸೂತ್ರ. ಪ್ರತಿಯೊಬ್ಬರು ಈ ದೇಶಕ್ಕಾಗಿ ಕರ್ತವ್ಯ ನಿರ್ವಹಿಸಬೇಕು. ಜಗತ್ತಿನಲ್ಲಿಯೇ ಭಾರತ ವೈವಿಧ್ಯತೆಯಿಂದ ಕೂಡಿದ ದೇಶವಾಗಿದೆ. ಭೌಗೋಳಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ವೈವಿಧ್ಯತೆಯಿಂದ ಕೂಡಿದೆ ಎಂದು ಹೇಳಿದರು.

ಈ ವೇಳೆ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ವಿನಾಯಕ ಮಾಲಿ ಪಾಟೀಲ, ತಹಶೀಲ್ದಾರ್ ಸುರೇಶ ಅಂಕಲಗಿ, ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರೀಮಾ ಪಂವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಜಿ.ಸಂಗೀತಾ ಉಪಸ್ಥಿತರಿದ್ದರು.

ಹುಬ್ಬಳ್ಳಿ:ಸ್ವಾತಂತ್ರ್ಯೋತ್ಸವ: ರಾಷ್ಟ್ರಧ್ವಜಾರೋಹಣ

ಹುಬ್ಬಳ್ಳಿ: ನಗರದ ನೆಹರೂ ಮೈದಾನದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಶಹರ ತಹಶೀಲ್ದಾರ್ ಕಲಗೌಡ ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿದರು.

ರಾಷ್ಟ್ರಗೀತೆ, ನಾಡಗೀತೆ, ರೈತಗೀತೆ ಪ್ರಸ್ತುತಪಡಿಸಲಾಯಿತು. ಪೊಲೀಸರು ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ, ತಾಲ್ಲೂಕು ಪಂಚಾಯ್ತಿ ಇಒ ಉಮೇಶ ಬೊಮ್ಮಕ್ಕನವರ, ಶಹರ ಬಿಇಒ ಚನ್ನಪ್ಪಗೌಡರ, ಪಾಲಿಕೆ ಸದಸ್ಯರು ಇದ್ದರು.

ಬೀದರ್: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.

ಆನಂತರ ತೆರೆದ ಜೀಪಿನಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು. ಬಳಿಕ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಬಳಿಕ ಮಾತನಾಡಿದ ಖಂಡ್ರೆ, ಅನೇಕರ ತ್ಯಾಗ ಬಲಿದಾನದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ.ಅವರನ್ನು ಸ್ಮರಿಸುವ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಪೌರಾಡಳಿತ ಸಚಿವ ರಹೀಂಅಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಡಿಸಿಎಫ್ ವಾನತಿ ಎಂ.ಎಂ.ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಎಂ.ಜಿ. ಮುಳೆ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮತ್ತಿತರರು ಹಾಜರಿದ್ದರು.

'ಪ್ರವಾಹ ಹಾನಿ ಸಮೀಕ್ಷೆ ಶೀಘ್ರ' :ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸಚಿವ ಸತೀಶ ಜಾರಕಿಹೊಳಿ

ಚನ್ನಪಟ್ಟಣದಲ್ಲಿ ಉಪ ಮುಖ್ಯಮಂತ್ರಿ ಧ್ವಜಾರೋಹಣ

ಚನ್ನಪಟ್ಟಣ: ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಗುರುವಾರ ನಗರದ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ಯ್ರ ದಿನಾಚರಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.

ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿವಕುಮಾರ್, ತಾಲ್ಲೂಕು ಮಟ್ಟದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

ಬೆಳಗಾವಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.

ಬಳಿಕ ರಾಷ್ಟ್ರಗೀತೆ ಮೊಳಗಿತು. ವಿವಿಧ ತಂಡಗಳು ಆಕರ್ಷಕ ಕವಾಯತು ನಡೆಸಿದರು. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಎನ್ಎಸ್ಎಸ್, ಎನ್ ಸಿಸಿ, ಸ್ಕೌಟ್ ಮತ್ತು ಗೈಡ್ಸ್, ಅಂಧ ಮತ್ತು ಕಿವುಡ ಶಾಲೆಗಳ ಮಕ್ಕಳ ತಂಡಗಳು ಒಬ್ಬರಾದ ನಂತರ ಒಬ್ಬರು ಪಥಸಂಚಲನ ನಡೆಸಿ, ಪ್ರೇಕ್ಷಕರ ಗಮನ ಸೆಳೆದರು.

ಬಳಿಕ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಸತೀಶ, 'ಈ ವರ್ಷ ಜೂನ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿರುವುದರಿಂದ ಮುಂಗಾರು ಬಿತ್ತನೆ ಪ್ರಾರಂಭವಾಗಲು ಅನುಕೂಲವಾಯಿತು. ಪ್ರಸಕ್ತ ಹಂಗಾಮಿನಲ್ಲಿ ಒಟ್ಟು 7.43 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ ಎಲ್ಲಾ ಬೆಳೆಗಳು ಸೇರಿದಂತೆ ಒಟ್ಟು 7.43 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಲಾಗಿದೆ. ಬಿತ್ತನೆಕಾರ್ಯಕ್ಕೆ ಬೇಕಾಗುವ ಉತ್ತಮ ಗುಣಮಟ್ಟದ 36,935 ಕ್ವಿಂಟಲ್ ಬಿತ್ತನೆ ಬೀಜಗಳನ್ನು ರಿಯಾಯಿತಿದರದಲ್ಲಿ ಸುಮಾರು 2.71 ಲಕ್ಷ ರೈತರಿಗೆ ಸಕಾಲದಲ್ಲಿ ಪೂರೈಸಲಾಗಿದೆ. ಬೆಳೆಗಳು ಚೆನ್ನಾಗಿ ಇರುತ್ತವೆ' ಎಂದು ಸತೀಶ ಜಾರಕಿಹೊಳಿ ಹರ್ಷ ವ್ಯಕ್ತಪಡಿಸಿದರು.

'ತೋಟಗಾರಿಕೆ ಇಲಾಖೆಯಿಂದ ಬೆಳೆ ವಿಮೆ ಯೋಜನೆಯಡಿ 2022-23 ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆಗಳಿಗೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 5,803 ರೈತರಿಗೆ ಒಟ್ಟು ₹41.31 ಕೋಟಿ ಹಾಗೂ ಹಿಂಗಾರು ಹಂಗಾಮಿನಲ್ಲಿ 536 ರೈತರಿಗೆ ₹91.83 ಲಕ್ಷ ಮೊತ್ತದ ವಿಮೆ ಪರಿಹಾರ ವಿತರಿಸಲಾಗಿದೆ. 2024 ನೇ ಸಾಲಿನಲ್ಲಿ ಮುಂಗಾರು ಪೂರ್ವ ಅಕಾಲಿಕ ಮಳೆಯಿಂದಾಗಿ 177 ಜನ ರೈತರಿಗೆ 105 ಹೆಕ್ಟೇರ್ ಹಾಗೂ ಮುಂಗಾರಿನಲ್ಲಿ 725 ಜನ ರೈತರಿಗೆ 372.31 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ, ಪಪ್ಪಾಯ, ತರಕಾರಿ ಮತ್ತು ಇತರೆ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು ₹82.3 ಲಕ್ಷ ಬೆಳೆ ಪರಿಹಾರಕ್ಕಾಗಿ ವರದಿ ಸಲ್ಲಿಸಲಾಗಿದೆ' ಎಂದು ಸತೀಶ ಹೇಳಿದರು.

'ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಳೆ ದಾಖಲಾಗಿರುವುದರಿಂದ ಬೆಳೆಗಳಲ್ಲಿ ನೀರು ನಿಂತು ಸುಮಾರು 41,700 ಹೆಕ್ಟೇರ್ ಬೆಳೆ ಮುಳುಗಡೆ ಪ್ರದೇಶವೆಂದು ಅಂದಾಜಿಸಲಾಗಿದೆ. ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಅತೀವೃಷ್ಟಿ/ಪ್ರವಾಹದಿಂದ ಜಿಲ್ಲೆಯಲ್ಲಿ 17 ಮನೆಗಳು ಪೂರ್ಣ ಹಾನಿಯಾಗಿದ್ದು, 203 ಮನೆಗಳು ಭಾಗಶಃ ಹಾನಿಯಾಗಿವೆ. ಹೀಗೆ ಹಾನಿಯಾಗಿರುವ ಒಟ್ಟು 220 ಮನೆಗಳಿಗೆ ₹ 31.32 ಲಕ್ಷ ಪರಿಹಾರ ವಿತರಿಸಲಾಗಿದೆ. ಬಾಕಿ ಉಳಿದ ಪ್ರಕರಣಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಏಳು ಜನರು ಪ್ರಾಣ ಕಳೆದುಕೊಂಡಿದ್ದು, ಒಟ್ಟು ₹34 ಲಕ್ಷ ಪರಿಹಾರ ವಿತರಿಸಲಾಗಿದೆ. 11 ಜಾನುವಾರುಗಳ ಜೀವ ಹಾನಿಯಾಗಿದ್ದು, ಈ ಪ್ರಕರಣಗಳಿಗೆ ಒಟ್ಟು ₹3.73 ಲಕ್ಷ ಪರಿಹಾರ ವಿತರಿಸಲಾಗಿದೆ' ಎಂದರು.

‘ಸ್ಮಾರ್ಟ್ ಸಿಟಿ ಯೋಜನೆ’ ಕೇಂದ್ರ ಸರ್ಕಾರದ. ಮಹತ್ವಾಕಾಂಕ್ಷಿ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 50:50 ಅನುಪಾತದಲ್ಲಿ ಒಟ್ಟು ₹1000 ಕೋಟಿ ಅನುದಾನ ಒದಗಿಸಲಾಗುದೆ. ಇದೂವರೆಗೆ ಒಟ್ಟು ₹990 ಕೋಟಿ ಅನುದಾನ ಬಿಡುಗಡೆ, ₹910.33 ಕೋಟಿ ಖರ್ಚು ಮಾಡಲಾಗಿದೆ. ಸದರಿ ಅನುದಾನದ ಉಳಿತಾಯ ಮೊತ್ತದಲ್ಲಿ ಹೊಸದಾಗಿ 5 ಕಾಮಗಾರಿಗಳನ್ನು ಒಳಗೊಂಡಂತೆ ಒಟ್ಟು 107 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇವುಗಳಲ್ಲಿ ಪ್ರಸ್ತುತ 97 ಕಾಮಗಾರಿಗಳು ಪೂರ್ಣಗೊಂಡಿವೆ. 10 ಕಾಮಗಾರಿಗಳು ಪ್ರಗತಿಯಲ್ಲಿವೆ.

ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಹತ್ತಾರು ಹೊಸ ಹೊಸ ಯೋಜನೆಗಳನ್ನು ರೂಪಿಸಿ ಕಾಲಮಿತಿಯೊಳಗೆ ಜಾರಿಗೆ ತರಲಾಗುವುದು' ಎಂದರು.

ಮುಖ್ಯ ಅತಿಥಿಗಳಾಗಿ ಸಂಸದ ಜಗದೀಶ ಶೆಟ್ಟರ್, ಶಾಸಕ ಆಸೀಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಸ್ವಾತಂತ್ರ್ಯ ಯೋಧರು ಸೇರಿ ಮತ್ತಿತರರು ಇದ್ದರು.

ಚಾಮರಾಜನಗರ: ಸ್ವಾತಂತ್ರ್ಯೋತ್ಸವ ಸಂಭ್ರಮ

ಚಾಮರಾಜನಗರ: ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಸಂಸದ ಸುನೀಲ್ ಬೋಸ್, ಶಾಸಕರ ಸಿ. ಪುಟ್ಟರಂಗಶೆಟ್ಟಿ, ಕಾಡ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಗೌರವ ಸಲ್ಲಿಸಿದರು.

ಮಡಿಕೇರಿಯಲ್ಲಿ ಮಂಜು, ತುಂತುರು ಮಳೆಯ ನಡುವೆ ಸ್ವಾತಂತ್ರ್ಯೋತ್ಸವ

ವಿಜಯಪುರದಲ್ಲಿ ಸಚಿವ ಎಂ.ಬಿ.ಪಾಟೀಲ ಧ್ವಜಾರೋಹಣ

ವಿಜಯಪುರ: ವಿಜಯಪುರ ಜಿಲ್ಲಾಡಳಿತವು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಧ್ವಜಾರೋಹಣ ನೆರವೇರಿಸಿದರು.

ಸ್ವಾತಂತ್ರೋತ್ಸವ ಸಂದೇಶ ನೀಡಿದ ಸಚಿವ ಎಂ.ಬಿ.ಪಾಟೀಲ, ಸಾಮಾಜಿಕ ನ್ಯಾಯ, ಶೈಕ್ಷಣಿಕ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಒಳಗೊಂಡಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿರುವ ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜನಪರ ಕಾಳಜಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.

ದೇಶದಾದ್ಯಂತ ಸಂಚಲನ ಉಂಟುಮಾಡಿರುವ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಬದುಕಿನಲ್ಲಿ ಬೆಳಕು ಮತ್ತು ಭರವಸೆ ತುಂಬುವಲ್ಲಿ ಸಫಲವಾಗಿವೆ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಸಿ.ಎಸ್.ಆರ್. ಅನುದಾನದಲ್ಲ್ಲಿ ವಿಜಯಪುರ ನಗರದಲ್ಲಿರುವ ತಾಜ್ಬಾವಡಿ, ಗೋಳಗುಮ್ಮಟ, ಬಬಲೇಶ್ವರ ತಾಲ್ಲೂಕಿನಲ್ಲಿರುವ ಮಮದಾಪುರ ಕೆರೆ ಮತ್ತು ಅದರ ಸುತ್ತಲಿನ ಅರಣ್ಯ ಪ್ರದೇಶ, ಕುಮಟಗಿಯಲ್ಲಿರುವ ಬೇಸಿಗೆ ಅರಮನೆ, ಕಪ್ಪು ತಾಜ್ಮಹಲ್ ಎಂದು ಪ್ರಸಿದ್ಧಿಯಾಗಿರುವ ಇಬ್ರಾಹಿಂ ರೋಜಾ ಹಾಗೂ ಇನ್ನಿತರ ಸ್ಮಾರಕಗಳನ್ನು ಮತ್ತು ಅವುಗಳ ಆವರಣದಲ್ಲಿರುವ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವ ಮತ್ತು ಸೌಂದರ್ಯೀಕರಣಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ವಿಜಯಪುರ ನಗರದಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ಅನುಮೋದನೆಯಾಗಿದ್ದು, ಸರ್ಕಾರದಿಂದ ₹49 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆಯಾಗಿದೆ. ಅಂದಾಜು ಪತ್ರಿಕೆ ಅನುಮೋದನೆ ಪಡೆದುಕೊಂಡು ಅತೀಶೀಘ್ರದಲ್ಲಿಯೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.

ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣಕ್ಕೆ ₹ 18 ಕೋಟಿ ಮಂಜೂರಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.

ಕರ್ನಾಟಕವು ಕಳೆದ 100 ವರ್ಷಗಳಿಂದಲೂ ಕೈಗಾರಿಕಾ ಸ್ನೇಹಿ ರಾಜ್ಯವಾಗಿದ್ದು, ಕೇಂದ್ರ ಸರ್ಕಾರಕ್ಕೆ ಅತ್ಯಧಿಕ ತೆರಿಗೆ ಸಲ್ಲಿಸುವ ರಾಜ್ಯಗಳಲ್ಲಿ ಒಂದಾಗಿದೆ. ಇದಕ್ಕೆ ತಕ್ಕಂತೆ ಕರ್ನಾಟಕವು ಸ್ಟಾರ್ಟಪ್ಸ್, ಸಂಶೋಧನೆ, ಹೂಡಿಕೆ, ಬಂಡವಾಳ ಆಕರ್ಷಣೆ, ಉದ್ಯಮಕ್ಕೆ ಸಂಬಂಧಿಸಿದ ಹೊಸ-ಹೊಸ ನೀತಿಗಳು ಹೀಗೆ ಎಲ್ಲದರಲ್ಲೂ ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ ಎಂದರು.

ಕೆ.ಐ.ಎ.ಡಿ.ಬಿ ಅಲಿಯಾಬಾದ್ ಹಂತ-3 ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ 1870 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದರು.

ಕೈಗಾರಿಕೆ ಅಭಿವೃದ್ಧಿಗಾಗಿ ಒಟ್ಟು 3239 ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಕ್ರಮವಹಿಸಲಾಗಿದ್ದು, ಈಗಾಗಲೇ ₹ 245 ಕೋಟಿ ಬಂಡವಾಳ ಹೂಡಿ ಕೊಲ್ಹಾರ ತಾಲ್ಲೂಕಿನಲ್ಲಿ 614 ಎಕರೆ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಹೊಸ ಕೈಗಾರಿಕೆಗಳ ಸ್ಥಾಪನೆಗಾಗಿ 411 ನಿವೇಶನಗಳು ಲಭ್ಯವಿರುತ್ತವೆ. ಅದರಂತೆಯೇ ಇಂಡಿ ತಾಲ್ಲೂಕಿನ ಬೂದಿಹಾಳ ಹಾಗೂ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕ್ರಮವಾಗಿ 19 ಹಾಗೂ 06 ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಹಂತದಲ್ಲಿರುತ್ತವೆ ಎಂದರು.

ಗಾಳಿಯಿಂದ ವಿದ್ಯುತ್ ತಯಾರಿಸಲು ವಿಜಯಪುರ ಜಿಲ್ಲೆಯು ದೇಶದಲ್ಲೇ ಅತ್ಯಂತ ಪ್ರಶಸ್ತವಾದ ತಾಣವಾಗಿದೆ. ಇದನ್ನು ಮನಗಂಡಿರುವ ಸುಜ್ಲಾನ್ ಕಂಪನಿಯು ಜಿಲ್ಲೆಯಲ್ಲಿ 5,000 ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಘಟಕ ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಇದಕ್ಕಾಗಿ 100 ಎಕರೆ ಭೂಮಿಯನ್ನು ಕಂಪನಿಗೆ ಒದಗಿಸಲಾಗುವುದು ಎಂದರು.

ರೆನೈಸಾನ್ಸ್ ಕಂಪನಿಯು ಜಿಲ್ಲೆಯಲ್ಲಿ ಸೌರಫಲಕ ಬಿಡಿ ಭಾಗಗಳ ತಯಾರಿಕೆ ಘಟಕವನ್ನು ಪ್ರಾರಂಭಿಸಲು ತೀರ್ಮಾನಿಸಿದ್ದು, ಇದಕ್ಕಾಗಿ ₹ 6,000 ಕೋಟಿಗಳನ್ನು ಬಂಡವಾಳವಾಗಿ ಹೂಡಲಿದೆ. ಈ ನಿಟ್ಟಿನಲ್ಲೂ ಕಂಪನಿಯೊಂದಿಗೆ ಮಾತುಕತೆ ನಡೆದಿದ್ದು, ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಕಂಪನಿಯು ತನ್ನ ಚಟುವಟಿಕೆಗಳನ್ನು ಆರಂಭಿಸಲಿದೆ. ಮುಂದಿನ 6-7 ವರ್ಷಗಳಲ್ಲಿ ಕಂಪನಿಯು 20,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ ಎಂದರು.

ಮುಳವಾಡದಲ್ಲಿ ಕೆಐಎಡಿಬಿ ವ್ಯಾಪ್ತಿಯಲ್ಲಿ ಇರುವ 300 ಎಕರೆ ಪ್ರದೇಶದಲ್ಲಿ ಉತ್ಪಾದನಾ ಕ್ಲಸ್ಟರ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯನ್ನು ಇಂಧನ ಕ್ಷೇತ್ರದ ಸಾಧನಗಳು, ಮೆಷಿನರೀಸ್ ಆ್ಯಂಡ್ ಎಕ್ವಿಪ್ಮೆಂಟ್, ನಾನ್-ಮೆಟಲಿಕ್ ಖನಿಜೋತ್ಪನ್ನಗಳು, ಕೃಷಿ ಮತ್ತು ಕೃಷಿ ಆಧಾರಿತ ಉತ್ಪನ್ನಗಳು, ನ್ಯೂಟ್ರಾಸೂಟಿಕಲ್ಸ್ ಮೆಡಿಸಿನಲ್ ಮತ್ತು ಬೊಟಾನಿಕಲ್ ಉತ್ಪನ್ನಗಳು, ವಿಶೇಷ ಅಲಾಯ್ ಆ್ಯಂಡ್ ಲೋಹೋತ್ಪನ್ನ- ಈ ಆರು ವಲಯಗಳ ಕೈಗಾರಿಕಾ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಸಂಕಲ್ಪ ಮಾಡಲಾಗಿದೆ ಎಂದರು. ವಿಜಯಪುರದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು, ಕೇಂದ್ರದ ಅನುಮತಿ ಸಿಕ್ಕ ನಂತರ ಆದಷ್ಟು ಬೇಗ ಉದ್ಘಾಟನೆ ಮಾಡಲಾಗುವುದು, ರಾತ್ರಿ ವೇಳೆಯೂ ವಿಮಾನಗಳ ಲ್ಯಾಂಡಿಂಗ್, ಎ-320 ಮಾದರಿಯ ವಿಮಾನಗಳ ಸೇವೆ ಎಲ್ಲವೂ ಇರಲಿವೆ. ಇದರಿಂದ ಕೃಷಿಪೂರಕ ಉದ್ಯಮಗಳು, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ತೋಟಗಾರಿಕೆ ಬೆಳೆಗಳ ರಫ್ತು, ಶೈಕ್ಷಣಿಕ ಚಟುವಟಿಕೆಗಳು, ಪ್ರವಾಸೋದ್ಯಮ ಎಲ್ಲವೂ ಗರಿಗೆದರಲಿವೆ ಎಂದರು.

ದಾಬಸ್ಪೇಟೆ- ದೊಡ್ಡಬಳ್ಳಾಪುರ ನಡುವಿನ ಸುಮಾರು 2,000 ಎಕರೆ ಪ್ರದೇಶದಲ್ಲಿ ನಾಲೆಡ್ಜ್-ಹೆಲ್ತ್-ಇನ್ನೋವೇಶನ್- ರೀಸರ್ಚ್ (ಕೆ.ಎಚ್.ಐ.ಆರ್) ಸಿಟಿಯನ್ನು ಅಭಿವೃದ್ಧಿಪಡಿಸಲು ದಾಪುಗಾಲು ಇಡಲಾಗುತ್ತಿದೆ. ಇದರ ಭಾಗವಾಗಿ 1,000 ಎಕರೆ ಪ್ರದೇಶದಲ್ಲಿ ಮೊದಲ ಹಂತದ ಅಭಿವೃದ್ಧಿಗೆ ಇದೇ ತಿಂಗಳ 23ರಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಈ ಯೋಜನೆಗೆ ಒಟ್ಟು ₹ 40 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗುತ್ತಿದ್ದು, ನೇರವಾಗಿ 48 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಇಲ್ಲಿ ಜಗತ್ತಿನ ಉತ್ಕೃಷ್ಟ ವಿಶ್ವವಿದ್ಯಾಲಯಗಳು, ವೈದ್ಯಕೀಯ ಸಂಸ್ಥೆಗಳು, ಸಂಶೋಧನಾಲಯಗಳು, ಉದ್ಯಮಗಳು, ನವೋದ್ಯಮಗಳು ನೆಲೆಯೂರಲಿವೆ ಎಂದರು.

ಬೆಂಗಳೂರಿನ ವಿಮಾನ ನಿಲ್ದಾಣದ ಸಮೀಪ 407 ಎಕರೆ ವಿಸ್ತೀರ್ಣದಲ್ಲಿ ಒಟ್ಟು ಎರಡು ಹಂತಗಳಲ್ಲಿ ₹ 817 ಕೋಟಿ ವೆಚ್ಚದಲ್ಲಿ ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ನಿರ್ಮಿಸಲಾಗುತ್ತಿದೆ ಎಂದರು.

ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದ ಅಗತ್ಯಗಳಿಗಾಗಿ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಬೆಂಗಳೂರಿನ ಯಾವ ಭಾಗದಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ಒಳ್ಳೆಯದು ಎಂಬುದರ ಬಗ್ಗೆ ಅನೇಕ ಸಮಾಲೋಚಕರ ಜತೆಗೆ ಚರ್ಚಿಸಲಾಗುತ್ತಿದೆ. ಒಟ್ಟಿನಲ್ಲಿ 2033 ರ ವೇಳೆಗೆ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸುವ ವಿಶ್ವಾಸ ಇದೆ ಎಂದರು.

ರಾಜ್ಯ ಸರ್ಕಾರವು ಫಾಕ್ಸ್ ಕಾನ್, ವಿಸ್ಟ್ರಾನ್, ಟಾಟಾ ಗ್ರೂಪ್, ಏರ್ ಇಂಡಿಯಾ, ಟೊಯೋಟಾ ಮುಂತಾದ ಕಂಪನಿಗಳೊಂದಿಗೆ ಹೂಡಿಕೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಕಂಪನಿಗಳು ಕ್ರಮವಾಗಿ ₹14 ಸಾವಿರ ಕೋಟಿ, ₹ 1,500 ಕೋಟಿ, ₹2,300 ಕೋಟಿ ಮತ್ತು ₹1,300 ಕೋಟಿಗಳನ್ನು ರಾಜ್ಯದಲ್ಲಿ ಹೂಡಿಕೆ ಮಾಡಲಿವೆ ಎಂದು ಹೇಳಿದರು.

ರಾಜ್ಯದ ವಿದ್ಯುತ್ ಚಾಲಿತ ವಾಹನಗಳ ವಲಯದಲ್ಲಿ ₹50 ಸಾವಿರ ಕೋಟಿ ಹೂಡಿಕೆಯ ಖಾತ್ರಿ ನಮಗೆ ಸಿಕ್ಕಿದ್ದು, ಇದರಿಂದ 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದನ್ನು ಪರಿಗಣಿಸಿ, 2024-29ರ ಅವಧಿಗೆ ಚಾಲೂ ಆಗುವಂತೆ ಕ್ಲೀನ್ ಮೊಬಿಲಿಟಿ ಪಾಲಿಸಿಯನ್ನು ರೂಪಿಸಲಾಗಿದೆ ಎಂದರು.

ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂ.ಎಸ್.ಐ.ಎಲ್) ಹಲವು ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಕೇವಲ ₹410 ಕೋಟಿ ಇದ್ದ ಚಿಟ್ ಫಂಡ್ ವ್ಯವಹಾರವನ್ನು ₹ 5,000 ಕೋಟಿಗೆ ವಿಸ್ತರಿಸುವ ಉದ್ದೇಶ ಇದ್ದು, ಇನ್ನು ಕೆಲವೇ ದಿನಗಳಲ್ಲಿ ಅದಕ್ಕೆ ಚಾಲನೆ ಸಿಗಲಿದೆ. ಸದ್ಯ 23 ಶಾಖೆಗಳಿರುವ ಚಿಟ್ ಫಂಡ್ ಶಾಖೆಗಳನ್ನು 100ಕ್ಕೆ ಹೆಚ್ಚಿಸಲಾಗುವುದು. ಮೊದಲ ಹಂತದಲ್ಲಿ ವಿಜಯಪುರದಲ್ಲೂ ಒಂದು ಚಿಟ್ ಫಂಡ್ ಕಚೇರಿ ತೆರೆಯಲಾಗುವುದು ಎಂದು ಹೇಳಿದರು.

10 ಮೆಗಾ ಔಷಧ ಮಳಿಗೆಗಳನ್ನು ರಾಜ್ಯದಲ್ಲಿ ಆರಂಭಿಸುತ್ತಿದ್ದು, ಅದರಲ್ಲಿ ಒಂದನ್ನು ವಿಜಯಪುರದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ. ಸದ್ಯದಲ್ಲೇ ಇವೆರಡಕ್ಕೂ ಚಾಲನೆ ನೀಡಲಾಗುವುದು. ರಾಜ್ಯದಲ್ಲಿನ 83 ಜನೌಷಧಿ ಕೇಂದ್ರಗಳನ್ನು ಆಧುನೀಕರಿಸುವ ಕೆಲಸ ಕೂಡ ಕೈಗೆತ್ತಿಕೊಳ್ಳಲಾಗುವುದು ಎಂದರು.

ಎಂಎಸ್ಐಎಲ್ ತನ್ನ ಸೇವೆಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಕಾರಣಕ್ಕೆ ಎರಡು ತಿಂಗಳಲ್ಲಿ 73 ಮಂದಿ ಅಧಿಕಾರಿಗಳನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದು. ಒಟ್ಟಾರೆ ₹3,759 ಕೋಟಿ ವಹಿವಾಟು ನಡೆಸಿರುವ ಎಂಎಸ್ಐಎಲ್ ₹ 103 ಕೋಟಿ ಲಾಭ ಗಳಿಸಿದೆ. ಇದು ಕಳೆದ ವರ್ಷಕ್ಕಿಂತ ₹ 62 ಕೋಟಿ ಹೆಚ್ಚು ಲಾಭ ಗಳಿಸಿದೆ ಎಂದರು.

ಮಹರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದ ಮೈಸೂರು ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ಕೂಡ ಇವತ್ತು ಖಾಸಗಿ ಸಂಸ್ಥೆಗಳ ಜತೆ ಪೈಪೋಟಿ ನಡೆಸಿ, ಒಳ್ಳೆ ಲಾಭದಾಯಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯವಾಗಿದೆ.

ನಮ್ಮ ಸರ್ಕಾರ ಬಂದ ಮೇಲೆ ಅದರ ಲಾಭ ಬಹುತೇಕ ದ್ವಿಗುಣ ಆಗಿದೆ. 2022-23ರಲ್ಲಿ ₹ 182 ಕೋಟಿ ಲಾಭ ಪಡೆದಿದ್ದ ಸಂಸ್ಥೆ 2023-24ರಲ್ಲಿ ₹352 ಕೋಟಿ ಲಾಭ ಮಾಡಿದೆ. 2024-25ರಲ್ಲಿ ₹500 ಕೋಟಿ ಲಾಭ ಮಾಡುವ ಉದ್ದೇಶ ಇದೆ ಎಂದರು.

ಎಂಎಸ್ಐಎಲ್, ಸ್ಯಾಂಡಲ್ ಸೋಪು ಕಾರ್ಖಾನೆಗಳಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಇಷ್ಟೆಲ್ಲ ಲಾಭ ಮಾಡಲು ಸಾಧ್ಯವಾಗಿದ್ದು ಹೆಮ್ಮೆಯ ವಿಷಯ ಎಂದರು.

ಸರ್ಕಾರಿ ಸ್ವಾಮ್ಯದ ಮೈಸೂರು ಪೇಂಟ್ಸ್ ಇದುವರೆಗೆ ಕೇವಲ ಇಂಕ್ ತಯಾರಿಕೆಗೆ ಸೀಮಿತವಾಗಿತ್ತು. ಇದನ್ನು ಪುನಶ್ಚೇತನಗೊಳಿಸಿ, ಅಲಂಕಾರಿಕ ಬಣ್ಣಗಳನ್ನು ಉತ್ಪಾದಿಸುವುದು ಹಾಗೂ ಎಲ್ಲ ಸರ್ಕಾರಿ ಕಟ್ಟಡಗಳಿಗೆ ಇದೇ ಬಣ್ಣವನ್ನು ಬಳಸುವ ಉದ್ದೇಶ ಹೊಂದಿದೆ ಎಂದರು.

ವಿಜಯಪುರ ಮಹಾನಗರದ ಜನತೆಗೆ ವಾಯು ವಿಹಾರಕ್ಕಾಗಿ ಭೂತನಾಳ ಕೆರೆ, ಬೇಗಂ ತಲಾಬ್ ಕೆರೆ ಆವರಣಗಳು, ಗೋಳ ಗುಮ್ಮಟ, ಇಬ್ರಾಹಿಂ ರೋಜಾ, ಕುಮಟಗಿ ಕೆರೆ ಬೇಸಿಗೆ ಅರಮನೆ, ಕರಾಡ ದೊಡ್ಡಿ ಮಾನವ ನಿರ್ಮಿತ ಅರಣ್ಯ ಇವುಗಳನ್ನು ಸರ್ಕಾರ ಹಾಗೂ ಖಾಸಗಿ ಸಿಎಸ್ಆರ್ ಅನುದಾನದಲ್ಲಿ ಅಭಿವೃದ್ಧಿಗೊಳಿಸಿ ಮನಮೋಹಕ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ವಿಜಯಪುರ ನಗರದ ಸೌಂದರ್ಯಕ್ಕಾಗಿ ಅಮೃತ 2.0 ಯೋಜನೆಯಡಿಯಲ್ಲಿ ₹5 ಕೋಟಿ ಮೊತ್ತದಲ್ಲಿ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

400 ವರ್ಷಗಳ ಇತಿಹಾಸವಿರುವ ಐತಿಹಾಸಿಕ ತಾಜ್ಬಾವಡಿಯನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತದ ವತಿಯಿಂದ ಟಾಟಾ ಕನ್ಸ್ಲ್ಟನ್ಸಿ ಸರ್ವಿಸಸ್ ಇವರ ಸಹಯೋಗದೊಂದಿಗೆ ₹ 8 ಕೋಟಿ ಮೊತ್ತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ನಗರದಲ್ಲಿನ ವಿವಿಧ ಐತಿಹಾಸಿಕ ಬಾವಡಿಗಳನ್ನು ಈ ಹಿಂದೆ ಸ್ವಚ್ಚಗೊಳಿಸಲಾಗಿದ್ದು, ಇವುಗಳನ್ನು ಸುಸ್ಥಿತಿ ಇಟ್ಟುಕೊಳ್ಳಲು ಸಾರ್ವಜನಿಕರು ಇಲ್ಲಿನ ನೀರನ್ನು ತಮ್ಮ ನಿತ್ಯದ ಬಳಕೆಗೆ ಉಪಯೋಗಿಸಿದರೆ, ಕುಡಿಯುವ ನೀರು ಸರಬರಾಜು ಮೇಲಿನ ಒತ್ತಡ ಕಡಿಮೆಯಾಗಿ ನೀರಿನ ಲಭ್ಯತೆ ವಿಫುಲವಾಗುವುದು. ಇದಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು.

ವಿಜಯಪುರ ನಗರದ ಸೌಂದರ್ಯೀಕರಣ ಮಾಡುವ ದೃಷ್ಟಿಯಿಂದ ನಗರದ ಎಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ವಿವಿಧ ವಾರ್ಡ್ ಗಳಲ್ಲಿ 12,000 ಸಸಿಗಳನ್ನು ನೆಟ್ಟು ನಗರದ ಹಸರೀಕರಣವನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಇಂದಿರಾ ಕ್ಯಾಂಟೀನ್ ಸ್ಥಾಪನೆಯ 2 ನೇ ಹಂತದ ಭಾಗವಾಗಿ ಜಿಲ್ಲೆಯ 13 ನಗರ-ಪಟ್ಟಣ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ಗಳ ನಿರ್ಮಾಣ ಕಾರ್ಯವು ಭರದಿಂದ ಸಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಕಾರ್ಯವು ಪ್ರಾರಂಭಿಸಲಾಗುವುದು ಎಂದರು.

ನಗರಾಭಿವೃದ್ಧಿ ಇಲಾಖೆಯಿಂದ ಮಹತ್ಮಾಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ವಿಜಯಪುರ ನಗರದ ಅಭಿವೃದ್ಧಿಗಾಗಿ ₹ 250 ರಿಂದ ₹ 300 ಕೋಟಿ ಅನುದಾನ ಒದಗಿಸಲು ಕ್ರಮ ವಹಿಸಲಾಗುತ್ತಿದ್ದು, ಇದರಿಂದ ನಗರದ ಮುಖ್ಯರಸ್ತೆಗಳು, ವಿವಿಧ ವಾರ್ಡುಗಳ ರಸ್ತೆಗಳು, ಚರಂಡಿ, ಇತ್ಯಾದಿ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಮಾಡಲಾಗುವುದು ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ವತಿಯಿಂದ ಸಿಎಸ್ಆರ್ ಅನುದಾನದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ತಾಲ್ಲೂಕುಗಳನ್ನು ವಿಜಯಪುರ ಜಿಲ್ಲೆಯಲ್ಲಿ ಮಾದರಿ ತಾಲ್ಲೂಕುಗಳು ಎಂದು ಆಯ್ಕೆ ಮಾಡಿಕೊಂಡು ಇಲ್ಲಿನ ಸರ್ಕಾರಿ ಶಾಲೆಗಳ ಕಟ್ಟಡ, ದುರಸ್ಥಿ ನಿರ್ಮಾಣ ಹಾಗೂ ಸ್ಮಾರ್ಟ್ ಕ್ಲಾಸ್ ಅಳವಡಿಕೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆಯಾದ್ಯಂತ ಕೆಲವು ಸ್ಥಳಗಳಲ್ಲಿ ವಿಸ್ತರಣೆ ಮಾಡಲಾಗುವುದು ಎಂದರು.

ಪಥಸಂಚಲನ:

ಪೊಲೀಸ್, ಗೃಹ ರಕ್ಷಕ ದಳ, ಎನ್ ಸಿಸಿ, ಎನ್ ಎಸ್ ಎಸ್ಎಸ್, ಸ್ಕೌಟ್ ಮತ್ತು ಗೈಡ್ಸ್ ಕೆಡೆಟ್ ಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥ ಸಂಚನದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿದರು.

ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.

ವಿವಿಧ ಕ್ಷೇತ್ರದ ಸಾಧಕರನ್ನು ಸಚಿವ ಎಂ.ಬಿ.ಪಾಟೀಲ ಸನ್ಮಾನಿಸಿದರು.

ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮೇಯರ್ ಮಹೆಜಬಿನ್ ಹೊರ್ತಿ, ಉಪ ಮೇಯರ್ ದಿನೇಶ್ ಹಳ್ಳಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಇದ್ದರು.

ಮಡಿಕೇರಿ: ತುಂತುರು ಮಳೆ ಮಂಜಿನ ನಡುವೆ ಇಲ್ಲಿನ ಇಲ್ಲಿನ ಕೋಟೆ ಆವರಣದಲ್ಲಿ ಗುರುವಾರ ಸ್ವಾತಂತ್ರೋತ್ಸವ ನಡೆಯಿತು.

ಧ್ವಜಾರೋಹಣ ನೆರವೇರಿಸಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು

ಕೊಡಗೂ ಸಹ ಭಾರತದ ಸ್ವಾತಂತ್ರ್ಯ ಚಳವಳಿಯ ಒಂದು ಭಾಗವಾಗಿ ತನ್ನದೇ ಮಹತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

ಪಂಚ ಗ್ಯಾರಂಟಿಗಳನ್ನು ಜಿಲ್ಲೆಯಲ್ಲಿ ಪಡೆದವರ ವಿವರಗಳನ್ನು ಪ್ರಸ್ತಾಪಿಸಿದ ಅವರು ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಂತೆ ಕಟ್ಟೆಚ್ಚರ ವಹಿಸಲಾಗಿತ್ತು ಎಂದು ಶ್ಲಾಘಿಸಿದರು.

ಒಟ್ಟು 20 ತಂಡಗಳು ಆಕರ್ಷಕ ಪಥಸಂಚಲನ ನಡೆಸಿದರು. 7 ಶಾಲೆಯ ತಂಡಗಳು ವೈವಿಧ್ಯಮಯ ನೃತ್ಯ ಪ್ರದರ್ಶಿಸಿದರು.

ಶಾಸಕ ಡಾ.ಮಂತರ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಏರ್ ಮಾರ್ಷಲ್ (ನಿ) ಕೆ.ಸಿ.ಕಾರ್ಯಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಪಾಲ್ಗೊಂಡಿದ್ದರು.

ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲರಿಂದ ಧ್ವಜಾರೋಹಣ

ರಾಯಚೂರು: ಜಿಲ್ಲಾ ಆಡಳಿತದ ವತಿಯಿಂದ ಇಲ್ಲಿಯ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ನಂತರ ವಿವಿಧ ಪಡೆಗಳು, ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು.

ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ರಾಯಚೂರು ಗ್ರಾಮೀಣ

ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ವಸಂತಕುಮಾರ, ರುಡಾ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ನಿತಿಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಪಾಂಡ್ವೆ, ಎಡಿಸಿ ಶಿವಪ್ಪ ಭಜಂತ್ರಿ, ರಾಯಚೂರು ಉಪ ವಿಭಾಗಾಧಿಕಾರಿ ಮೆಹಬೂಬಿ, ರಾಯಚೂರು ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ, ರಾಯಚೂರು ನಗರಸಭೆಯ ಪೌರಾಯುಕ್ತ ಗುರುಸಿದ್ದಯ್ಯ ಉಪಸ್ಥಿತರಿದ್ದರು.

ಮಂಗಳೂರು: ತುಂತುರು ಮಳೆಯಲ್ಲೂ ಗರಿಗೆದರಿದ ಸ್ವಾತಂತ್ರ್ಯೋತ್ಸವ ಸಂಭ್ರಮ

ಮಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧ್ವಜಾರೋಹಣ ನೆರವೇರಿಸಿದರು.

ತುಂತುರು ಮಳೆಯಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ ಗರಿಗೆದರಿದೆ.

ಪೊಲೀಸ್ ವಾದ್ಯವೃಂದ, ಸಂಚಾರಿ ಪೊಲೀಸ್, ಅಬಕಾರಿ ಇಲಾಖೆ, ಗೃಹ ರಕ್ಷಕ ದಳ, ಆರ್ ಎಸ್ ಪಿ ಬಾಲಕ- ಬಾಲಕಿಯರ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾ ದಳ ತಂಡಗಳು ಸೇರಿದಂತೆ ಒಟ್ಟು 16 ತಂಡಗಳಿಂದ ಸಚಿವರು ಗೌರವರಕ್ಷೆ ಸ್ವೀಕರಿಸಿದರು.

ವಿದ್ಯಾರ್ಥಿಗಳು, ಪೊಲೀಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್ ಇದ್ದರು.

ಬಳ್ಳಾರಿಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪಥಸಂಚಲನದ ಗೌರವ ಸ್ವೀಕರಿಸಿದರು. ಬಳಿಕ ಧ್ವಜಾರೋಹಣ ನೆರವೇರಿಸಿದರು.

ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಧ್ವಜಾರೋಹಣ; ಆಕರ್ಷಕ ಪಥ ಸಂಚಲನ

ಕೊಪ್ಪಳ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಗುರುವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಬಳಿಕ ತೆರೆದ ಜೀಪಿನಲ್ಲಿ ತೆರಳಿ ಒಟ್ಟು 19 ವಿವಿಧ ತಂಡಗಳಿಂದ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಅಗ್ನಿಶಾಮಕ ತಂಡ ಮೊದಲ ಬಾರಿಗೆ ಪಥ ಸಂಚಲನದಲ್ಲಿ ಪಾಲ್ಗೊಂಡಿತ್ತು. ಪರೇಡ್ ಕಮಾಂಡರ್ ಶಶಿಧರ್ ನೇತೃತ್ವ ವಹಿಸಿದ್ದರು.

ಬಳಿಕ ಮಾತನಾಡಿದ ಸಚಿವ ತಂಗಡಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲ ವರ್ಗಗಳ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದೆ. ಸಕಲ ಜಾತಿ, ಧರ್ಮ, ಭಾಷೆ, ಪ್ರದೇಶಗಳ ಜನರೆಲ್ಲ ಒಗ್ಗಟ್ಟಾಗಿ ಬೃಹತ್ ಪ್ರಜಾಪ್ರಭುತ್ವ ಯಶಸ್ಸಿಗಾಗಿ ಸಾಮರಸ್ಯದಿಂದ ಬಾಳುತ್ತಿದ್ದೇವೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತುಮಕೂರು:ಗೃಹ ಸಚಿವರಿಂದ ಧ್ವಜಾರೋಹಣ

ತುಮಕೂರು: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಧ್ವಜಾರೋಹಣ ನೆರವೇರಿಸಿದರು.

ನಂತರ ತೆರೆದ ವಾಹನದಲ್ಲಿ ತುಕಡಿಗಳ ಪರಿವೀಕ್ಷಣೆ ನಡೆಸಿದರು. ನಾಗರಿಕ ಪೊಲೀಸ್ ತಂಡ, ಗೃಹರಕ್ಷಕ ದಳ, ಕಲ್ಪತರು ಪಡೆ, ಪೊಲೀಸ್ ವಾದ್ಯ ವೃಂದ, ಪೊಲೀಸ್ ಅಬಕಾರಿ ತಂಡ ಸೇರಿದಂತೆ ವಿವಿಧ ತಂಡಗಳು ಕವಾಯತಿನಲ್ಲಿ ಭಾಗವಹಿಸಿದ್ದವು.

ಶಾಸಕರಾದ ಬಿ.ಸುರೇಶ್ ಗೌಡ, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಇತರರು ಪಾಲ್ಗೊಂಡಿದ್ದರು.

ಕೋಲಾರ: ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಸಡಗರ, ಸಂಭ್ರಮ ಮನೆ ಮಾಡಿತ್ತು. ತ್ರಿವರ್ಣ ಧ್ವಜದ ರಂಗು ಚೆಲ್ಲಿ ದೇಶಪ್ರೇಮದ ಕಹಳೆ ಮೊಳಗಿತು.

78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ಜೀಪಿನಲ್ಲಿ ಸಾಗಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಆನಂತರ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ತುಂಬಿದವು. ಮುನ್ನೆಚ್ಚರಿಕೆ ಕ್ರಮವಾಗಿ ಕ್ರೀಡಾಂಗಣ ಹಾಗೂ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಶಾಸಕ ಕೊತ್ತೂರು ಜಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಎಂ.ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ಕುಮಾರ್, ಇಂಚರ ಗೋವಿಂದರಾಜು, ನಗರಸಭೆ ಸದಸ್ಯರು, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಡಿಸಿಎಫ್ ಏಡುಕೊಂಡಲು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.