ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಕಾಂತ್​ನನ್ನು ಬಂಧಿಸದಿದ್ದರೆ ಶ್ರೀರಾಮಚಂದ್ರನೂ ಕ್ಷಮಿಸಲಾರ: CM ಸಿದ್ದರಾಮಯ್ಯ

ಬಿಜೆಪಿ ಪ್ರತಿಭಟನೆಗೆ ಸಿದ್ದರಾಮಯ್ಯ ತಿರುಗೇಟು
Published 3 ಜನವರಿ 2024, 15:31 IST
Last Updated 3 ಜನವರಿ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಮಭಕ್ತ ಎಂದು ಸಮಾಜದೆದುರು ನಕಲಿ ವೇಷ ತೊಟ್ಟು ಮೆರೆಯುವ ಹುಬ್ಬಳ್ಳಿಯ ಶ್ರೀಕಾಂತ್​ ಪೂಜಾರಿ ಕಾನೂನಿನ ದೃಷ್ಟಿಯಲ್ಲಿ ಸಮಾಜಘಾತುಕ ವ್ಯಕ್ತಿ. ತನ್ನ ಅಪರಾಧ ಕೃತ್ಯಗಳಿಂದ ರಕ್ಷಣೆ ಸಿಗಲಿ ಎಂಬ ಕಾರಣಕ್ಕೆ ಧರ್ಮ ರಕ್ಷಣೆ ನಾಟಕವಾಡುವ ಇಂಥವರನ್ನು ಬಂಧಿಸದೆ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಮ್ಮ ‘ಎಕ್ಸ್​’ನಲ್ಲಿ ಶ್ರೀಕಾಂತ್ ಪೂಜಾರಿ ವಿರುದ್ಧದ ಪ್ರಕರಣಗಳ ಪಟ್ಟಿಯನ್ನು ಟ್ಯಾಗ್ ಮಾಡಿರುವ ಮುಖ್ಯಮಂತ್ರಿ, ‘ಅಕ್ರಮ ಸಾರಾಯಿ ಮಾರಾಟ, ದೊಂಬಿ, ಮಟಕಾ, ಜೂಜಾಟ ಮುಂತಾದ 16 ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು, ಆತನ ಎಲ್ಲ ಅಪರಾಧ ಕೃತ್ಯಗಳಿಗೆ ತಮ್ಮ ಪಕ್ಷದ ಬೆಂಬಲವಿದೆ ಎಂಬುವುದನ್ನು ಬಹಿರಂಗವಾಗಿ ಹೇಳಲಿ ಅಥವಾ ಪ್ರತಿಭಟನೆ ಕೈಬಿಟ್ಟು ಸಾರ್ವಜನಿಕವಾಗಿ ಕ್ಷಮೆ ಕೋರಲಿ’ ಎಂದು ಆಗ್ರಹಿಸಿದ್ದಾರೆ.

‘2023ನೇ ಸಾಲಿನಲ್ಲಿ ಹುಬ್ಬಳ್ಳಿ–ಧಾರವಾಡ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಕಳ್ಳತನ, ಸುಲಿಗೆ, ವಂಚನೆ, ದೊಂಬಿ ಮುಂತಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಎಲ್​ಪಿಸಿ (ಕಾನೂನು ವಿಚಾರಣಾ ಪ್ರಮಾಣಪತ್ರ) ಪ್ರಕರಣಗಳಲ್ಲಿ ಒಟ್ಟು 36 ಜನರನ್ನು ದಸ್ತಗಿರಿ ಮಾಡಲಾಗಿದೆ. ಅದರಲ್ಲಿ ಶ್ರೀಕಾಂತ್​ ಪೂಜಾರಿ 32ನೇ ವ್ಯಕ್ತಿ. ಈತನನ್ನು ಹಿಂದೂ ಕಾರ್ಯಕರ್ತ ಎಂಬ ಕಾರಣಕ್ಕೆ ಹೊರಗಡೆ ಬಿಡಬೇಕೇ ಅಥವಾ ಆರೋಪಿ ಎಂಬ ಕಾರಣಕ್ಕೆ ಬಂಧಿಸಬೇಕೇ? ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ನಮ್ಮ ಸರ್ಕಾರದ ವಿರುದ್ಧವಲ್ಲ, ದೇಶದ ಕಾನೂನು ಮತ್ತು ಸಂವಿಧಾನದ ವಿರುದ್ಧ. ಅಪರಾಧ ಕೃತ್ಯಗಳಲ್ಲಿ ತೊಡಗುವವರು ಧರ್ಮರಕ್ಷಕರು ಎಂದು ಹೇಳಿಕೊಂಡು ಕೊಲೆ, ಸುಲಿಗೆಗಳಿಗೆ ಇಳಿದರೆ ಅದನ್ನೂ ಬಿಜೆಪಿ ನಾಯಕರು ಬೆಂಬಲಿಸುತ್ತಾರೆಯೇ’ ಎಂದೂ ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT