ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖರ್ಗೆ ‍ಪ್ರಧಾನಿಯಾದರೆ ಕಾಂಗ್ರೆಸ್‌ ಸಹಿಸಿಕೊಳ್ಳುತ್ತದೆಯೇ: ದೇವೇಗೌಡ ಪ್ರಶ್ನೆ

Published 8 ಫೆಬ್ರುವರಿ 2024, 22:30 IST
Last Updated 8 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ನ ಹೈಕಮಾಂಡ್‌ ಸಂಸ್ಕೃತಿಯ ಕುರಿತು ವಾಗ್ದಾಳಿ ನಡೆಸಿರುವ ಜೆಡಿಎಸ್‌ ವರಿಷ್ಠ ಹಾಗೂ ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ, ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಪ್ರಧಾನಿಯಾದರೆ ಕಾಂಗ್ರೆಸ್‌ ಪಕ್ಷವು ಸಹಿಸಿಕೊಳ್ಳುತ್ತದೆಯೇ’ ಎಂದು ಪ್ರಶ್ನಿಸಿದರು. 

ರಾಜ್ಯಸಭೆಯಲ್ಲಿ ನಿವೃತ್ತಿಯಾಗುತ್ತಿರುವ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಾಂಧವ್ಯದ ಬಗ್ಗೆ ವ್ಯಂಗ್ಯವಾಡಿದ ಖರ್ಗೆ ಅವರಿಗೆ ತಿರುಗೇಟು ಕೊಟ್ಟರು. ‘ಖರ್ಗೆ ಅವರೇ.. ನೀವು ಪ್ರಧಾನಮಂತ್ರಿಯಾದರೆ, ನೀವು ಅಧ್ಯಕ್ಷರಾಗಿರುವ ಕಾಂಗ್ರೆಸ್ ಪಕ್ಷ ಮುಕ್ತವಾಗಿ ಬೆಂಬಲ ಕೊಡುತ್ತದೆಯೇ? ಆ ಬಗ್ಗೆ ಹೇಳಿ’ ಎಂದರು. 

‘ಖರ್ಗೆ ಅವರು ಪ್ರಾಮಾಣಿಕ ವ್ಯಕ್ತಿ. ಡಾ.ಮನಮೋಹನ್ ಸಿಂಗ್ ಅವರು ಅಪ್ಪಟ ಪ್ರಾಮಾಣಿಕ ವ್ಯಕ್ತಿ. ಆದರೆ, ಕಾಂಗ್ರೆಸ್ ತನ್ನನ್ನು ತಾನೇ ದುರ್ಬಲಗೊಳಿಸಿಕೊಳ್ಳುತ್ತಿದೆ. ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ಅಪೇಕ್ಷೆ ಆಗಿತ್ತು. ಅವರೇನೂ ನನ್ನ ಸ್ವಂತದವರು ಅಲ್ಲ, ನನ್ನ ಸ್ವಂತ ಮಗನೂ ಅಲ್ಲ. ಆದರೆ, ಅವರಿಗೆ ಅರ್ಹತೆ ಇದೆ. ಅವರು ಉನ್ನತ ಸ್ಥಾನಕ್ಕೆ ಬಂದರೆ ಕಾಂಗ್ರೆಸ್ ನಾಯಕರು ಸಹಿಸಿಕೊಳ್ಳುತ್ತಾರೆಯೇ?’ ಎಂದು ಅವರು ಕೇಳಿದರು. 

ಹಿಂದೆ ರಾಜ್ಯಸಭೆ ಚುನಾವಣೆಯ ಸಂದರ್ಭದ ಪ್ರಸಂಗವನ್ನು ನೆನಪಿಸಿಕೊಂಡ ಮಾಜಿ ಪ್ರಧಾನಿಗಳು, ‘ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕುವ ಪ್ರಯತ್ನ ಮಾಡಿತ್ತು. ಆದರೆ, ಖರ್ಗೆ ಅವರು ದೇವೇಗೌಡರು ಸೋಲಬಾರದು. ಒಂದು ವೇಳೆ ಹಾಗೆ ಆಗುವುದೇ ಆಗಿದ್ದರೆ ನಾನು ಚುನಾವಣೆ ಕಣದಲ್ಲಿಯೇ ಇರುವುದಿಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದರು. ಅದಕ್ಕಾಗಿ ನಾನು ಖರ್ಗೆ ಅವರಿಗೆ ಆಭಾರಿ ಆಗಿದ್ದೇನೆ’ ಎಂದು ನೆನಪಿಸಿಕೊಂಡರು. 

’ನಿಮ್ಮ ಹೆಸರನ್ನು ಪ್ರಧಾನಿ ಹುದ್ದೆಗೆ ನಿಮ್ಮದೇ ಮೈತ್ರಿಕೂಟದ ಕೆಲ ನಾಯಕರು ಪ್ರಸ್ತಾಪ ಮಾಡಿದರು. ಆದರೆ, ಮೈತ್ರಿಕೂಟದ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಈ ವ್ಯಕ್ತಿ ಸಿಎಂ ಆಗಬೇಕು ಎಂದು ನಾನು ಬಯಸಿದೆ. ನನ್ನ ಮಗ ಕುಮಾರಸ್ವಾಮಿ ಅವರ ಬದಲಿಗೆ ಖರ್ಗೆ ಅವರೇ ಸಿಎಂ ಆಗಬೇಕು ಎಂದು ನಾನು ಹೇಳಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್, ಖರ್ಗೆ ಬೇಡ, ನಿಮ್ಮ ಮಗನೇ ಮುಖ್ಯಮಂತ್ರಿಯಾಗಲಿ ಎಂದು ಪಟ್ಟು ಹಿಡಿಯಿತು. ಗುಲಾಂ ನಬಿ ಆಜಾದ್ ಹಾಗೂ ಅಶೋಕ್ ಗೆಹಲೋಟ್‌ ಅಂದು ನನ್ನ ಮನೆಗೆ ಬಂದು ಹಟ ಹಿಡಿದರು. ನನ್ನ ಮಗನನ್ನು ಮುಖ್ಯಮಂತ್ರಿ ಮಾಡುವುದು ನನಗೆ ಇಷ್ಟ ಇರಲಿಲ್ಲ’ ಎಂದು ಅವರು ಹೇಳಿದರು. 

’ಕುಮಾರಸ್ವಾಮಿ ಅವರ ಸರ್ಕಾರವನ್ನು 13 ತಿಂಗಳಲ್ಲೇ ಪತನಗೊಳಿಸಿದ್ದು ಯಾರು? ಆ ಕೆಲಸ ಮಾಡಿದ್ದು ಖರ್ಗೆ ಅವರಲ್ಲ. ಖರ್ಗೆ ಪ್ರಾಮಾಣಿಕ ವ್ಯಕ್ತಿ. ಆದರೆ, ಅದೇ ಪಕ್ಷದ ಕಾಂಗ್ರೆಸ್ ನಾಯಕರು ಸರ್ಕಾರವನ್ನು ತೆಗೆದರು’ ಎಂದು ಅವರು ಟೀಕಾ‍ಪ್ರಹಾರ ನಡೆಸಿದರು. 

‘ನಾನೆಂದೂ ಪಕ್ಷದಿಂದ ಪಕ್ಷವನ್ನು ಬದಲಿಸಿಲ್ಲ. ರಾಜಕೀಯ ನೈತಿಕತೆ ಕಳೆದುಕೊಂಡಿಲ್ಲ. ಆದರೆ, ಕಾಂಗ್ರೆಸ್‌ನ ಕೆಲವು ನಾಯಕರು ನನ್ನ ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡಿದ್ದಾಗ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಆ ವ್ಯಕ್ತಿಗಳ ಹೆಸರುಗಳನ್ನು ನಾನು ಇಲ್ಲಿ ಪ್ರಸ್ತಾಪ ಮಾಡುವುದಿಲ್ಲ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT