ಕ್ಯೂಬಾದ ರಾಜಧಾನಿ ಹವಾನಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಮೂರು ದಶಕಗಳ ಕನಸು ನನಸಾಯಿತು. ದಕ್ಷಿಣ ಭಾರತದ ಹವಾಮಾನ, ತೆಂಗಿನ ಮರಗಳ ಸಾಲು ನಮ್ಮನ್ನು ಸ್ವಾಗತಿಸಿದವು. ಪ್ರವೇಶಪತ್ರದಲ್ಲಿ ಬೇರೆ ಯಾವ ದೇಶದಲ್ಲೂ ಕೇಳದ ಒಂದು ಪ್ರಶ್ನೆಯಿತ್ತು: ‘ನೀವು ಯಾವುದಾದರೂ ಅಶ್ಲೀಲ ಸಾಮಗ್ರಿಯನ್ನು ತರುತ್ತಿದ್ದೀರಾ?’ ಈ ಪ್ರಶ್ನೆಗೆ ಕಾರಣ ಏನಿರಬಹುದೆಂದು ಯೋಚಿಸಿದಾಗ ಹೊಳೆಯಿತು: ಅಮೆರಿಕ, ಜಗತ್ತಿನ ರಾಷ್ಟ್ರಗಳನ್ನು ವಶಪಡಿಸಿಕೊಳ್ಳಲು ಬಳಸುವ ಅತ್ಯಂತ ಬಲಿಷ್ಠ ಆಯುಧವೆಂದರೆ ಅಶ್ಲೀಲತೆ.

ನಮ್ಮ ದೇಶದಲ್ಲಿ ಈ ಬಗ್ಗೆ ಯಾವುದೇ ಪ್ರತಿಬಂಧವಿಲ್ಲದ್ದರಿಂದಲೇ ಹಾಲಿವುಡ್ಡೀಕೃತ ಬಾಲಿವುಡ್ ಸಿನಿಮಾ ಅಶ್ಲೀಲತೆಯನ್ನು ಸಂಭ್ರಮಿಸುತ್ತಾ ಇವತ್ತು ಪವಿತ್ರ ಭರತಭೂಮಿಯ ಮಹಾನ್ ಸಂಸ್ಕೃತಿಯ ಟ್ರೇಡ್ಮಾರ್ಕ್ ಆಗಿ ವಿಜೃಂಭಿಸುತ್ತಿದೆ. ಆದರೆ ಕ್ಯೂಬಾ ಈ ಬಗ್ಗೆ ಜಾಗರೂಕವಾಗಿರುವುದು ಅಲ್ಲಿನ ಸರ್ಕಾರದ ವಿವೇಕದ ಕುರುಹಾಗಿ ಕಾಣುತ್ತದೆ.

ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆ ತುಂಬಾ ಬಿಗಿ ಎಂಬುದೂ ಅನುಭವವಾಯಿತು. ವಿದ್ಯುತ್ಚಾಲಿತ ಸಾಮಾನುಗಳನ್ನು ಕ್ಯೂಬಾದೊಳಗೆ ತರುವಹಾಗಿಲ್ಲ. ನಮ್ಮ ಜೊತೆಗಾರರೊಬ್ಬರು ಸ್ವತಃ ಅಡುಗೆ ಮಾಡಿಕೊಳ್ಳುವ ಕಠೋರ ಸಸ್ಯಾಹಾರಿಗಳು. ಅವರು ಅಂಟಾರ್ಟಿಕಾಕ್ಕೆ ಹೋದರೂ ಅನ್ನದ ಕುಕ್ಕರ್, ಅಕ್ಕಿ ಮತ್ತು ಉಪ್ಪಿನಕಾಯನ್ನು ಹೊತ್ತುಕೊಂಡು ಹೋಗುವಂತಹವರು.

ಆದರೆ ಹವಾನಾ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯವರು ಅವರ ಆ ಅಕ್ಷಯಪಾತ್ರೆಯನ್ನು ಗಂಟೆಗಟ್ಟಲೆ ತಡೆಹಿಡಿದುಬಿಟ್ಟರು. ತನ್ನ ನಾಯಕನ ಮೇಲೆ ೬೦೦ಕ್ಕೂ ಹೆಚ್ಚು ಕೊಲೆಯ ಪ್ರಯತ್ನ ಮಾಡಿರುವ ನೆರೆಯ ಶತ್ರುರಾಷ್ಟ್ರ ಅಮೆರಿಕದ ಹಲ್ಲೆಯ ನಿರಂತರ ಭೀತಿಯಲ್ಲಿ ಬಾಳುತ್ತಿರುವ ದೇಶದಲ್ಲಿ ಇಂಥ ಅತೀವ ಭದ್ರತಾ ವ್ಯವಸ್ಥೆ ಸಕಾರಣ ಅನಿಸಿತು.

ಹವಾನಾ ನಗರ ಹೊಕ್ಕೊಡನೆ ಒಂದು ಆಶ್ಚರ್ಯ ನಮ್ಮನ್ನು ಕಾಯುತ್ತಿರುತ್ತದೆ. ಅಲ್ಲಿ ಓಡಾಡುವ ಹಳೇ ಮಾಡಲ್ಲಿನ ಕಾರುಗಳನ್ನು ನೋಡಿದಾಗ ಈ ದೇಶ ಮೂರು ದಶಕ ಹಿಂದಿದೆಯೇನೋ ಎಂಬ ಅನುಮಾನ ಬಂದರೂ ನಗರದ ನಿಯಮಬದ್ಧ ಸಂಚಾರ ವ್ಯವಸ್ಥೆ ಮತ್ತು ರಸ್ತೆಗಳ ಅಚ್ಚುಕಟ್ಟು ಮುಂದುವರಿದ ರಾಷ್ಟ್ರಗಳನ್ನೂ ಮೀರಿಸುವಂತಿವೆ. ಹಳೆಯ ಮಾಡಲ್ಲಿನ ಕಾರುಗಳು ಇನ್ನೂ ಚೆನ್ನಾಗಿಯೇ ಓಡಾಡುತ್ತಿವೆ. ಮಾರ್ಕೆಟ್ಟಿಗೆ ಬಂದ ಹೊಸ ಮಾಡಲ್ ಕಾರುಗಳು ನಮ್ಮ ರಸ್ತೆಗೆ ಬರುವುದೇ ಪ್ರಗತಿಯ ಸಂಕೇತ ಎಂಬ ಭ್ರಮೆಗೊಳಗಾಗಿರುವ ನಮಗೆ ಕ್ಯೂಬಾದ ವಿಕಾಸದ ಪರಿಕಲ್ಪನೆಯೇ ವಿಭಿನ್ನವಾದುದೆಂದು ಅರಿವಾಗತೊಡಗುತ್ತದೆ.

ಹಲವು ಜನಾಂಗೀಯ ಲಕ್ಷಣಗಳಿರುವ ಮತ್ತು ಮಿಶ್ರ ಲಕ್ಷಣಗಳುಳ್ಳ ಜನ ಕಣ್ಣಿಗೆ ಬೀಳುತ್ತಾರೆ. ಕ್ಯೂಬಾ ಮಿಶ್ರ ಸಂಸ್ಕೃತಿಯ ರಾಷ್ಟ್ರ. ಮೂಲನಿವಾಸಿಗಳಾದ ಅಮರಿಕನ್ ಇಂಡಿಯನ್ನರು, ವಸಾಹತು ಕಟ್ಟಿದ ಸ್ಪೇನಿನವರು, ಗುಲಾಮರಾಗಿ ಬಿಳಿಯರು ಕರೆತಂದ ನೀಗ್ರೋಗಳು ಮಾತ್ರವಲ್ಲದೆ ಚೀನಾ ಮತ್ತು ವಿಯೆಟ್ನಾಂ ಮೂಲದವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹವಾನಾದಲ್ಲಿರುವ ಚೀನಿ ಜನಗಳಿಗಾಗಿ ಸ್ಥಳೀಯ ಸರ್ಕಾರದವರು ಬಹು ದೊಡ್ಡ ಸ್ಮಶಾನವೊಂದನ್ನು ಕಟ್ಟಿಕೊಟ್ಟಿದ್ದಾರೆ. ವರ್ಣ ಮತ್ತು ಜನಾಂಗ ವೈಷಮ್ಯಗಳ ಸುಳಿವು ಕಾಣುವುದೇ ಇಲ್ಲ.

ನಮಗೆ ಹವಾನಾದಲ್ಲಿ ದುಭಾಷಿಗಳಾಗಿ ಇಬ್ಬರು ಹುಡುಗಿಯರಿದ್ದರು. ಅವರಲ್ಲಿ ಮೊದಲನೆಯವಳಾದ ದೆಯಾನೀರಾ ಕೇರಳ ಅಥವಾ ಶ್ರೀಲಂಕಾದ ಕೃಷ್ಣಸುಂದರಿಯಂತಿದ್ದಳು. ಆದರೆ ಅವಳ ಮೂಲವನ್ನು ವಿಚಾರಿಸಲಾಗಿ ತನ್ನ ಪೂರ್ವಜರ ಪಟ್ಟಿಯಲ್ಲಿ ನೈಜೀರಿಯಾದವರು, ಚೀನಿಯರು ಮತ್ತು ಸ್ಪೇನಿನವರು ಇದ್ದಾರೆ ಎಂದಳು. ಇನ್ನೊಬ್ಬ ದುಭಾಷಿ ಹೈಡಿ, ಹಸಿರುಕಣ್ಣಿನ ಶ್ವೇತಸುಂದರಿ. ಅವಳು ಬಿಳಿಯ ಮೂಲದವಳೇ ಎಂದು ಕೇಳಿದಾಗ ದೆಯಾನೀರಾ ಹೇಳಿದಳು: ‘ಹಾಗೆ ಹೇಳಲು ಬರುವುದಿಲ್ಲ. ಏಕಜನಾಂಗ ಮೂಲದವರ ಹಾಗೆ ತೋರುವ ಹೈಡಿಯಂಥವರ ಡಿ.ಎನ್.ಎ. ವಿಶ್ಲೇಷಣೆ ಮಾಡಿದರೆ ಅಂಥವರಲ್ಲೂ ಜನಾಂಗೀಯ ಮಿಶ್ರಣವಿದೆಯೆಂದು ಗೊತ್ತಾಗುತ್ತದೆ.’ ಮನುಷ್ಯ ಜೀವಿಗಳೆಲ್ಲರೂ ಮಿಶ್ರತಳಿಯವರೆಂದು ನಂಬುವ ನನಗೆ ಸಂತೋಷವಾಯಿತು.

ಕ್ಯೂಬಾದಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚಿನ ಜನ ಕ್ಯಾಥೊಲಿಕ್ ಧರ್ಮಾನುಯಾಯಿಗಳು. ಆಫ್ರಿಕಾ ಮೂಲದವರು ತಮ್ಮ ಧರ್ಮವನ್ನೋ ಅಥವಾ ತಮ್ಮ ಧರ್ಮದೊಂದಿಗೆ ಮಿಶ್ರವಾದ ಕ್ರೈಸ್ತಧರ್ಮವನ್ನೋ ಅನುಸರಿಸುತ್ತಾರೆ. ಚೀನಿ ಮೂಲದವರಿಗೆ ಅವರದೇ ಧರ್ಮವಿದೆ. ಮೌಖಿಕ ಪ್ರಚಾರದಲ್ಲಿರುವ ಕೆಲವು ಪ್ರಾಚೀನ ಭಾಷೆಗಳನ್ನು ಬಿಟ್ಟರೆ ಎಲ್ಲ ವ್ಯವಹಾರಕ್ಕೂ ಸ್ಪ್ಯಾನಿಷ್ ಭಾಷೆಯೊಂದೇ ಮಾಧ್ಯಮ. ವಿದೇಶಿಯರೊಡನೆ ಪ್ರವಾಸಿಗಳೊಡನೆ ವ್ಯವಹರಿಸಬೇಕಾದ ಉದ್ಯೋಗ ಹಿಡಿದವರು ಮಾತ್ರ ಇಂಗ್ಲಿಷ್ ಬಳಸುತ್ತಾರೆ. ನಮ್ಮಲ್ಲಿರುವಂತೆ ಇಂಗ್ಲಿಷಹಂಕಾರಕ್ಕೆ ಅಲ್ಲಿ ಎಡೆಯಿಲ್ಲ. ಅಥವಾ ಭಾಷಿಕ, ಧಾರ್ಮಿಕ ಒಡಕುಗಳಿಲ್ಲ.

ಕ್ಯೂಬಾದಲ್ಲಿ ಸ್ವಾತಂತ್ರ್ಯವಿಲ್ಲ, ಉಸಿರುಗಟ್ಟಿಸುವ ವಾತಾವರಣವಿದೆ ಎಂಬ ಪ್ರಚಾರವನ್ನೂ ತುಂಬಾ ಕೇಳಿದ್ದು ಸ್ವಲ್ಪಮಟ್ಟಿಗೆ ಅದನ್ನು ನಂಬಿಯೂ ಇದ್ದ ನಾನು ಪ್ರತ್ಯಕ್ಷ ನೋಡಿದಾಗ ಕಂಡದ್ದು ಬೇರೆ. ಸ್ವಾತಂತ್ರ್ಯವಿದೆ ಎಂದು ಕೊಚ್ಚಿಕೊಳ್ಳುವ ಭಾರತದಂಥ ದೇಶಕ್ಕಿಂತ ಅಲ್ಲಿನ ಜನ ಹಗುರವಾಗಿ ಓಡಾಡಿಕೊಂಡಿರುವುದು ಕಂಡಿತು. ಲಂಡನ್ ಬಗ್ಗೆ ಬ್ಲೇಕ್ ಬರೆದ ಕವಿತೆಯೊಂದು ನೆನಪಾಯಿತು:

ನಾನು ಕಂಡ ಮುಖಗಳಲ್ಲಿ
ಬಲಹೀನತೆ, ಅಳಲ ಛಾಪು
ಇಂಥ ಬಲಹೀನತೆ ಮತ್ತು ಅಳಲ ಛಾಪುಗಳನ್ನು ಜಗತ್ತಿನ ಎಷ್ಟೋ ನಗರಗಳಲ್ಲಿ ಕಂಡಿರುವ ನನಗೆ ಇಂಥಾ ಲಕ್ಷಣಗಳು ಕಾಣಲೇ ಇಲ್ಲ. ಇಂದಿನ ಯುವ ಜನಾಂಗದ ಪ್ರತಿನಿಧಿಗಳಾದ ನಮ್ಮ ದುಭಾಷಿಗಳಲ್ಲಿ ಕಂಡ ಪಾರದರ್ಶಕತೆ, ಆತ್ಮವಿಶ್ವಾಸ ಮತ್ತು ಸ್ಪಷ್ಟತೆ ಅದೇ ತಲೆಮಾರಿನ ಭಾರತೀಯರಲ್ಲಿ ಇಲ್ಲವಲ್ಲಾ ಎಂದು ಬೇಸರವಾಯಿತು.

ಕ್ಯೂಬಾ ವೈಭವದ ವಸ್ತುಪ್ರದರ್ಶನವಲ್ಲ. ಆದರೆ ಬಡತನ, ಸೂಳೆಗಾರಿಕೆಗಳ ದಾರುಣ ದೃಶ್ಯಗಳನ್ನು ನಾವಲ್ಲಿ ಕಾಣುವುದಿಲ್ಲ. ಸಂಪತ್ತಿನಲ್ಲಿ ಹೊರಳಾಡುತ್ತಿರುವ ನೆದರ್ಲೆಂಡ್ಸ್ನ ಕಾನೂನುಬದ್ಧ ಸೂಳೆಗಾರಿಕೆ ಸ್ತ್ರೀ ಶೋಷಣೆಯ ಪರಮ ಸಂಕೇತ. ಭಾರತದ ಮಹಾನ್ ನಗರಗಳಲ್ಲಿ ಹೆಂಗಸರು ಗಂಡಸರ ಕಣ್ಣುಗಳನ್ನು ಸೆಳೆಯುವಂಥ ಬಾಲಿವುಡ್ ಉಡುಗೆತೊಡುಗೆಗಳನ್ನು, ಹಾವಭಾವ ವೈಯಾರಗಳನ್ನು ಪ್ರದರ್ಶಿಸುವುದು ಕಣ್ಣಿಗೆ ರಾಚುತ್ತದೆ. ಇಂಥ ಪರಿಸ್ಥಿತಿಗೆ ತದ್ವಿರುದ್ಧವಾದ ಆತ್ಮವಿಶ್ವಾಸ ಮತ್ತು ಸಹಜ ಆತ್ಮೀಯತೆ ಕ್ಯೂಬಾದ ಹೆಂಗಸರಲ್ಲಿ ಕಾಣುತ್ತದೆ. ಅಂದರೆ ಕ್ಯೂಬಾ ಮಡಿವಂತರ ಬೀಡು ಅಂತ ಅಲ್ಲ. ಸಮಾಜವಾದಿ ಮೌಲ್ಯಗಳು ಅಲ್ಲಿನ ಹೆಂಗಸರನ್ನು ಅಮೆರಿಕನ್ ಮಾದರಿಗಿಂತ ಭಿನ್ನ ರೀತಿಯಲ್ಲಿ ಮುಕ್ತಗೊಳಿಸಿವೆ.

ಸೋವಿಯೆತ್ ಒಕ್ಕೂಟದ ನೆರವು ಕ್ಯೂಬಾದ ಬೆನ್ನೆಲುಬಾಗಿತ್ತು. ಸೋವಿಯೆತ್ ಸಾಮ್ರಾಜ್ಯ ಕುಸಿದಾಗ ಕ್ಯೂಬಾ ಮೆಕ್ಸಿಕನ್ ಕೊಲ್ಲಿಯಲ್ಲಿ ಮುಳುಗಿಹೋಗುವುದೆಂದು ಬಂಡವಾಳಶಾಹಿಯ ತುತ್ತೂರಿಗಳು ಮೊಳಗಿದ್ದವು. ಪೂರ್ವ ಯೂರೋಪಿನ ರಾಷ್ಟ್ರಗಳಾದ ಪೋಲೆಂಡ್, ಹಂಗರಿ, ಝೆಕ್ ರಿಪಬ್ಲಿಕ್ಗಳಲ್ಲಿ ಇವೊತ್ತು ಸಮಾಜವಾದದ ಸುಳಿವು ಕಾಣುವುದಿಲ್ಲ. ಆದರೆ ಕ್ಯೂಬಾ ತನ್ನ ಸ್ವಾಯತ್ತೆಯನ್ನು ಕಾಪಾಡಿಕೊಂಡಿದ್ದರಿಂದಲೋ ಏನೋ ಇಂದಿಗೂ ಬಹುಮಟ್ಟಿಗೆ ಸಮಾಜವಾದಿ ಚೌಕಟ್ಟಿನಲ್ಲೇ ಉಳಿದಿದೆ, ಬೆಳೆಯುತ್ತಿದೆ.

ಇಲ್ಲಿನ ಆರ್ಥಿಕ ವ್ಯವಹಾರದ ಒಂದು ವಿಶೇಷವೆಂದರೆ ಡಬಲ್ ಕರೆನ್ಸಿ– ಇಬ್ಬಗೆಯ ಅರ್ಥ ವ್ಯವಸ್ಥೆ. ಇಲ್ಲಿನ ಕರೆನ್ಸಿಯ ಹೆಸರು ಪೆಸೋ. ಎರಡು ಬಗೆಯ ಪೆಸೋಗಳು ಸಮಾನಾಂತರವಾಗಿ ಚಲಾವಣೆಯಲ್ಲಿವೆ. ಕ್ಯೂಬಾದವರು ಬಲಸುವ ಪೆಸೋ ಅವರ ಸ್ವದೇಶಿ ವಹಿವಾಟಿಗೆ ಮೀಸಲು. ಅದಕ್ಕೆ ವಿದೇಶಿ ಕರೆನ್ಸಿಗಳ ಜೊತೆಗೆ ವಿನಿಮಯ ಮೌಲ್ಯವಿಲ್ಲ. ಆದರೆ ವಿದೇಶಿಯರ ಬಳಕೆಗೆ ಮೀಸಲಾಗಿರುವ ಪೆಸೋನ ವಿನಿಮಯ ಮೌಲ್ಯ ಯೂರೋಗಿಂತ ಹೆಚ್ಚು. ಪ್ರವಾಸೋದ್ಯಮ ಕ್ಯೂಬಾದ ಆದಾಯದ ದೊಡ್ಡ ಭಾಗ. ಅಲ್ಲಿನ ಹಿತವಾದ ಹವಾಮಾನ, ನಿಸರ್ಗ ಸೌಂದರ್ಯ, ಸುರಕ್ಷಿತ ಕಾನೂನು ವ್ಯವಸ್ಥೆ ಯೂರೋಪು, ಕೊರಿಯಾ ಮತ್ತು ಜಪಾನುಗಳಿಂದ ದೊಡ್ಡಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರವಾಸಿಗರು ಅಧಿಕ ವಿನಿಮಯ ಮೌಲ್ಯದ ಕರೆನ್ಸಿ ಬಳಸುವದರಿಂದ ಕ್ಯೂಬಾಕ್ಕೆ ಬಹಳ ಲಾಭ.

ಆದರೆ ಕ್ಯೂಬನ್ನರಿಗೆ?: ಅಧಿಕ ವಿನಿಮಯ ಮೌಲ್ಯದ ಪೆಸೋ ಅವರಿಗೆ ಎಟುಕದ್ದು. ಆದ್ದರಿಂದ ಸ್ಥಳೀಕರು ಬಳಸುವ ಪೆಸೋನ ಮೌಲ್ಯ ವಿದೇಶಿ ಪೆಸೋದ ಮೂವತ್ತನೇ ಒಂದು ಭಾಗ. ಆದ್ದರಿಂದ ಅವರು ವಿದೇಶಿಯರು ತಂಗುವ ಹೋಟೆಲುಗಳಲ್ಲಿ ತಂಗುವುದಾಗಲೀ ತಿನ್ನುವುದಾಗಲೀ ಅಸಾಧ್ಯ. ಅಂದರೆ ಅವರು ದರಿದ್ರರೆಂದು ಅರ್ಥವೆ?

ನಮ್ಮ ಮಾರ್ಗದರ್ಶಕಿಯರನ್ನು ಕೇಳಿದೆ: ‘ನಿಮ್ಮ ಸಂಬಳ ಎಷ್ಟು?’ ವಿದೇಶಿ ಸಚಿವಾಲಯದಲ್ಲಿ ನೌಕರಿ ಮಾಡುವ ದೆಯಾನೀರಾಳ ತಿಂಗಳ ಸಂಬಳ ೨೮೦ ಪೆಸೋ. ಸಂಸ್ಕೃತಿ ಸಚಿವಾಲಯದ ಹೈಡಿಯ ಸಂಬಳ ೩೫೦ ಪೆಸೋ. ಹಾಗಿದ್ದರೆ ಅವರು ಬಹಳ ಕಷ್ಟದಲ್ಲಿ ಬದುಕುತ್ತಿರಬೇಕಲ್ಲವೆ?

‘ಖಂಡಿತಾ ಅಲ್ಲ’ ಅನ್ನುತ್ತಾಳೆ ದೆಯಾನೀರಾ. ಅದಕ್ಕೆ ಅವಳು ಕೊಡುವ ಕಾರಣಗಳು ಹೀಗಿವೆ:
‘ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರದವರೆಗಿನ ಶಿಕ್ಷಣ ನಿಶ್ಶುಲ್ಕ. ಆರೋಗ್ಯ ಚಿಕಿತ್ಸೆ ಎಲ್ಲರಿಗೂ ಉಚಿತ. ನಮ್ಮ ಪರಿವಾರಗಳ ಬೇಕುಗಳಿಗೆ ಸಾಲುವಷ್ಟು ದವಸ-ಧಾನ್ಯಗಳು ಅತ್ಯಂತ ಕನಿಷ್ಠ ಬೆಲೆಯಲ್ಲಿ ಎಲ್ಲರಿಗೂ ಲಭ್ಯ. ಸಾರ್ವಜನಿಕ ಸಂಚಾರ ವ್ಯವಸ್ಥೆ ಅತ್ಯುತ್ತಮವಾಗಿದ್ದು ಅತ್ಯಂತ ಸಸ್ತಾ ಕೂಡ. ಟೆಲಿಫೋನು ಕೂಡಾ ತುಂಬಾ ಸಸ್ತಾ. ಹೀಗಾಗಿ ನಮ್ಮ ಖರ್ಚಿನ ಹೊರೆ ನೀವಂದುಕೊಂಡಷ್ಟು ಇಲ್ಲವೇ ಇಲ್ಲ. ನಮಗೆ ಯಾವುದೂ ಕಡಿಮೆಯಿದೆ ಅನಿಸುವುದೇ ಇಲ್ಲ’.

ಕ್ಯೂಬಾದ ಪ್ರಗತಿಯ ಬುನಾದಿ ಮಾನವೀಯ ಸ್ವಾತಂತ್ರ್ಯದ ನಿಷೇಧವೆಂದು ಬಂಡವಾಳಶಾಹಿ ತಲೆಹಿಡುಕರು ದೂರುತ್ತಾರೆ. ಆರ್ಥಿಕ ಸಮಾನತೆ ಮತ್ತು ರಾಜಕೀಯ ಸ್ವಾತಂತ್ರ್ಯ ಎರಡೂ ಇರುವ ಆದರ್ಶ ರಾಷ್ಟ್ರ ಎಲ್ಲಿದೆ? ಆದರೆ ಹೆರಿಗೆಯಲ್ಲಿ ತಾಯಿಮಗು ಸಾಯದಿದ್ದರೆ, ಆಸ್ಪತ್ರೆಗೆ ಹೋಗಲಾರದೆ ಅಥವಾ ಹೋದರೂ ಚಿಕಿತ್ಸೆ ಸಿಗದೆ ರೋಗಿಗಳು ಸಾಯದಿದ್ದರೆ, ಸ್ಕೂಲು ಕಾಲೇಜು ಶುಲ್ಕ ಕೊಡಲಾಗದೆ ಮಕ್ಕಳು ಕೂಲಿಗಳಾಗದಿದ್ದರೆ ಅಥವಾ ಗೂಂಡಾಗಳಾಗದಿದ್ದರೆ, ಹೊಟ್ಟೆಪಾಡಿಗಾಗಿ ಹೆಂಗಸರು ಸೂಳೆಯರಾಗದಿದ್ದರೆ, ಪ್ರಜೆಗಳು ಅಲ್ಪಾಯುಗಳಾಗದಿದ್ದರೆ, ಅದೇನೂ ಕಡಿಮೆ ಸಾಧನೆಯಲ್ಲ. ಇಂಥ ಸಾಧನೆ ಕ್ಯೂಬಾದಲ್ಲಿ ಆಗಿರುವುದು ಅಲ್ಲಿ ಹೋಗಿ ಬಂದವರಿಗೆ ಸೂರ್ಯಸ್ಪಷ್ಟ.

ಕ್ರಾಂತಿಯ ಆದರ್ಶ ಕ್ಯೂಬಾದಲ್ಲಿ ಇನ್ನೂ ಜೀವಂತ. ಹೋಸೆ ಮಾರ್ತಿ, ಫಿಡೆಲ್ ಮತ್ತು ಚೆ ಅವರಿಗಿನ್ನೂ ಅನುಕರಣೀಯ ಆದರ್ಶಗಳು. ಶಿಕ್ಷಣ ಮತ್ತು ಸಮಾಜ ಎರಡನ್ನೂ ಕ್ಯೂಬನ್ನರು ತಮ್ಮ ವಿಶಿಷ್ಟ ಬಗೆಯಲ್ಲಿ ನವೀಕರಿಸಿ ಕೊಂಡಿದ್ದಾರೆ. ನಮ್ಮ ಹಾಗೆ ಅವರು ಯೂರೋ ಅಮೆರಿಕನ್ ನಕಲುಗಳಾಗಿಲ್ಲ.

ನಾವು ಭೆಟ್ಟಿ ಮಾಡಿದ ಬರಹಗಾರರು, ಕಲಾವಿದರು ದಮನಕ್ಕೊಳಗಾದವರಂತೆ ಕಾಣಲಿಲ್ಲ. ಅತ್ಯುತ್ಕೃಷ್ಟ ರೀತಿಯಲ್ಲಿ ನಿರ್ಮಿಸಿದ ರಂಗಮಂದಿರಗಳು, ನೃತ್ಯಶಾಲೆಗಳು, ಕಲಾ ಸಂಸ್ಥೆಗಳೂ ನಿರಂತರ ಚಟುವಟಿಕೆಯ ತಾಣಗಳಾಗಿವೆ. ಹಳೆಯ ಇಮಾರತಿಗಳನ್ನು ಗೌರವದಿಂದ ಉಳಿಸಿಕೊಂಡೇ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕೊಲ್ಲಿಯಿಂದ ಎರಡು ಹೋಳಾಗಿರುವ ಹವಾನಾದ ಎರಡು ಭಾಗಗಳನ್ನು ಕೂಡಿಸಲು ನಿರ್ಮಿತವಾಗಿರುವ ನೀರಿನೊಳಗಣ ಸುರಂಗರಸ್ತೆ ಕ್ಯೂಬನ್ ತಾಂತ್ರಿಕತೆಯ ದೊಡ್ಡ ಹೆಮ್ಮೆ.

ನೀಗ್ರೋ ಮೂಲದ ಕಲಾವಿದೆ ಲೆಸ್ಲಿ ಆಪ್ತವಾಗಿ ಮಾತಾಡುತ್ತಾ ಹೇಳಿದಳು: ‘ನಮ್ಮ ದೇಶವೇನೂ ಸ್ವರ್ಗವಲ್ಲ. ತಪ್ಪುಗಳಾಗಿವೆ. ಅವನ್ನು ನಮ್ಮದೇ ರೀತಿಯಲ್ಲಿ ಸರಿಪಡಿಸಿಕೊಳ್ಳುವ ಪ್ರಕ್ರಿಯೆಗಳೂ ಸುರುವಾಗುತ್ತಿವೆ. ಆದರೆ ಸ್ವಾತಂತ್ರ್ಯದ ಬೊಬ್ಬೆ ಹೊಡೆಯುವ ಹಿಂಸ್ರ ನಾಗರಿಕತೆಯ ಅಮೆರಿಕ ಆಗಲು ನಾವೆಂದೂ ಒಪ್ಪುವುದಿಲ್ಲ’.

ಕೊನೆಯ ದಿನ ಬೆಳಗ್ಗೆ ಕೊಲ್ಲಿತೀರದ ಮರಳಮೇಲೆ ಕೂತು ಮುಂದೆ ಹೊಂಬಿಸಿಲಲ್ಲಿ ಉರುಳುರುಳಿ ಬರುತ್ತಿದ್ದ ಪಾರದರ್ಶಕ ಜಲರಾಶಿಯನ್ನು ವೀಕ್ಷಿಸುತ್ತಾ ಕೂತಿದ್ದಾಗ ದೆಯಾನೀರಾ ಹೇಳಿದಳು:

‘ಇಲ್ಲಿಂದ ಅಮೆರಿಕದ ದಂಡೆಗೆ ಕೇವಲ ೧೨೪ ಕಿಲೋಮೀಟರು. ಯಾವಾಗ ಇದನ್ನು ದಾಟಿಕೊಂಡು ಬಂದು ನಾವು ಕಟ್ಟಿರುವ ಸಮಾಜವನ್ನು ಆಕ್ರಮಿಸುತ್ತಾರೋ ಎಂಬ ಆತಂಕ ನಮಗಿದೆ. ಇಲ್ಲಿಯವರೆಗೂ ಅದನ್ನು ನಾವು ಆಗಗೊಟ್ಟಿಲ್ಲ’.
ಸಮಾಜವಾದದ ಕೊನೆಯ ಕಿಲ್ಲೆ ಸದಾ ಸುರಕ್ಷಿತವಾಗಿರಲಿ, ಹಲ್ಲೆಕೋರರು ಅದರ ಬಳಿ ಸುಳಿಯದಿರಲಿ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.