ಕಣ್ಣಿಗೆ ಕಾಣುವ ದೌರ್ಜನ್ಯವನ್ನು ಪ್ರತಿಭಟಿಸಬಹುದು, ಪ್ರಶ್ನಿಸಬಹುದು, ನ್ಯಾಯ ಕೇಳಬಹುದು. ಆದರೆ ಕಣ್ಣಿಗೇ ಕಾಣದಂತೆ, ಸದ್ದೇ ಆಗದ ರೀತಿಯಲ್ಲಿ ನಡೆಯುವ ದೌರ್ಜನ್ಯವನ್ನು ಗುರುತಿಸುವುದು ಹೇಗೆ? ಹೊರಗಿನ ಅತ್ಯಾಚಾರ ಕಣ್ಣಿಗೆ ಕಾಣುವಂತದ್ದು. ಆದರೆ ಆಧುನಿಕ ವೈದ್ಯಕೀಯ ಆವಿಷ್ಕಾರಗಳು ಹೆಣ್ಣಿನ ಗರ್ಭಕ್ಕೇ ನೇರವಾಗಿ ದಾಳಿಯಿಟ್ಟಿವೆ. ಹೆಣ್ಣು ಸಂತತಿಯನ್ನು ಬೇರು ಸಹಿತ ನಾಶ ಮಾಡುವ ಅಮಾನುಷ ಅತ್ಯಾಚಾರದಲ್ಲಿ ನಿರತವಾಗಿರುವ ‘ವೈದ್ಯಕೀಯ ಅಪರಾಧ’ದಲ್ಲಿ ತೊಡಗಿರುವವರು ಮುಗ್ಧರೋ, ಮೂಢರೋ ಅಲ್ಲ. ನಾವು ದೇವರ ಸಮಾನರೆಂದು ನಂಬಿರುವ ಸಾಕ್ಷಾತ್ ವೈದ್ಯರು!

ಪ್ರಕೃತಿ ತನ್ನ ಸಮತೋಲನ ಕಾಯ್ದುಕೊಳ್ಳಲು ಗಂಡು ಸಂತತಿಗಿಂತ ಹೆಣ್ಣು ಸಂತತಿಯ ಪ್ರಮಾಣವನ್ನು ಹೆಚ್ಚಾಗಿ ಸೃಷ್ಟಿಸಿರುತ್ತದೆ. ಏಕೆಂದರೆ ವಂಶಾಭಿವೃದ್ಧಿ ಮಾಡುವ ಜವಾಬ್ದಾರಿ ಹೆಣ್ಣು ಜೀವದ ಮೇಲಿರುತ್ತದೆ. ಇದು ಎಲ್ಲ ಪ್ರಾಣಿ ಸಂತತಿಗೂ ಅನ್ವಯವಾಗುತ್ತದೆ. ಆರು ವರ್ಷದೊಳಗಿನ ಹೆಣ್ಣು ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಕುಸಿಯುತ್ತಿದ್ದು ಕಳೆದ ಮೂರು ದಶಕಗಳ ಅವಧಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಹೆಣ್ಣುಮಕ್ಕಳ ಬದುಕನ್ನು ಹುಟ್ಟುವ ಮೊದಲೇ ಕಿತ್ತುಕೊಳ್ಳಲಾಗಿದೆ. ಕಾಕತಾಳೀಯವೆಂಬಂತೆ ಲಿಂಗಪತ್ತೆ ಹಚ್ಚುವ ಸ್ಕ್ಯಾನಿಂಗ್ ಯಂತ್ರ ದೇಶವನ್ನು ಪ್ರವೇಶಿಸಿಯೂ ಮೂರು ದಶಕವಾಯ್ತು!

ಪ್ರಸವ ಪೂರ್ವ ಪತ್ತೆ ತಂತ್ರಜ್ಞಾನ ನಿಯಂತ್ರಣ ಹಾಗೂ ದುರ್ಬಳಕೆ ತಡೆ ಕಾಯ್ದೆ 1996ರಿಂದಲೇ ರಾಷ್ಟ್ರದಾದ್ಯಂತ ಅನುಷ್ಠಾನಗೊಳಿಸಲಾಗಿದೆ. 2003ರಲ್ಲಿ ತಿದ್ದುಪಡಿಯಾದ ಗರ್ಭಧಾರಣೆ ಪೂರ್ವ ಹಾಗೂ ಪ್ರಸವ ಪೂರ್ವ ಪತ್ತೆ ತಂತ್ರಜ್ಞಾನ (ಲಿಂಗ ಆಯ್ಕೆ ನಿಷೇಧ) ಜಾರಿಯಲ್ಲಿದೆ. ಆದರೆ ಅದರ ಪರಿಣಾಮಕಾರಿ ಜಾರಿಯಾಗದೇ, ಅಕ್ರಮ ಹೆಣ್ಣುಭ್ರೂಣ ಹತ್ಯೆಗೆ ತಡೆ ಒಡ್ಡಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ಈವರೆಗೆ ಭ್ರೂಣಲಿಂಗ ಪತ್ತೆ ಕಾಯ್ದೆ ಉಲ್ಲಂಘಿಸಿದ 49 ಪ್ರಕರಣ ಮಾತ್ರ ದಾಖಲಾಗಿವೆ. ಈ ಪೈಕಿ ಇನ್ನೂ 8 ಪ್ರಕರಣ ವಿಚಾರಣೆ ಹಂತದಲ್ಲಿವೆ. ಕಾಯ್ದೆ ಉಲ್ಲಂಘಿಸಿದ 41 ಪ್ರಕರಣಗಳಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ. ಇದಕ್ಕೆ ಸರ್ಕಾರ ನ್ಯಾಯಾಲಯಗಳಲ್ಲಿ ಸರಿಯಾದ ಸಾಕ್ಷ್ಯ ಒದಗಿಸದಿರುವುದೇ ಕಾರಣವಂತೆ!

ಇಂದು ರಾಜ್ಯಾದಾದ್ಯಂತ ಸುಮಾರು 5000ಕ್ಕೂ ಹೆಚ್ಚು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರೊಂದರಲ್ಲೇ 1500 ಯಂತ್ರಗಳು ಕಾರ್ಯ ನಿರ್ವಹಿಸುತ್ತಿರುವುದು ದಾಖಲಾಗಿದೆ. ಈಗ ಹಳ್ಳಿಗಳಲ್ಲಿಯೂ ಭ್ರೂಣಲಿಂಗ ಪತ್ತೆ ಮಾಡುವ ಮೊಬೈಲ್ ಯಂತ್ರಗಳು ಸಂಚರಿಸಲಾರಂಭಿಸಿವೆ. ಇದರೊಂದಿಗೇ ಚೀನಾದಲ್ಲಿ ತಯಾರಿಸಲಾಗಿರುವ ಪೋರ್ಟಬಲ್ ಸ್ಕ್ಯಾನಿಂಗ್ ಯಂತ್ರಗಳೂ ಕರ್ನಾಟಕದ ಮಾರುಕಟ್ಟೆಯನ್ನು ಪ್ರವೇಶಿಸಿ, ಎಗ್ಗಿಲ್ಲದೇ ಮಾರಾಟವಾಗುತ್ತಿವೆ. ಪ್ರಸವಪೂರ್ವ ಲಿಂಗ ಪತ್ತೆಗೆ ಸಂಬಂಧಿಸಿದ ಎಲ್ಲಾ ವಿಧದ ಜಾಹಿರಾತುಗಳನ್ನೂ ಕಾಯ್ದೆ ನಿಷೇಧಿಸಿದ್ದರೂ ಅಂತರ್ಜಾಲದಲ್ಲಿ ಯಾವ ಕಟ್ಟುಪಾಡೂ ಇಲ್ಲದೆ ಈ ಜಾಹಿರಾತುಗಳು ಬಿತ್ತರಗೊಳ್ಳುತ್ತಿವೆ.

ಮೊನ್ನೆಯಷ್ಟೇ ಸುಪ್ರೀಂಕೋರ್ಟ್ ಇಂತಹ ಅಂತರ್ಜಾಲ ತಾಣಗಳನ್ನು ನಿಷೇಧಿಸಿದ್ದರೂ, ಅವು ಮಿತಿಮೀರಿ ಕಾರ್ಯನಿರ್ವಹಿಸುತ್ತಿರುವ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದಕ್ಕಾಗಿ ಕಣ್ಗಾವಲು ಸಮಿತಿಯೊಂದನ್ನು ರೂಪಿಸುವಂತೆ ಸೂಚಿಸಿದೆ. ಹೀಗೆ ಯಾವ ಕಷ್ಟವೂ ಇಲ್ಲದಂತೆ, ಆಧುನಿಕ ಯಂತ್ರಗಳಿಂದ ಹೆಣ್ಣುಭ್ರೂಣ ಪತ್ತೆ ಮತ್ತು ಅದರ ಹತ್ಯೆಯ ವಿಧಾನಗಳು ಸುಲಭವಾಗಿ ಅತ್ಯಂತ ಸೂಕ್ಷ್ಮವಾಗಿ, ಕಣ್ಣಿಗೆ ಕಾಣದ ರೀತಿಯಲ್ಲಿ ಹೆಣ್ಣನ್ನು ನಾಶ ಮಾಡಲು ಪಣ ತೊಟ್ಟಂತೆ ಕಾರ್ಯನಿರ್ವಹಿಸುತ್ತಿವೆ.

ಕರ್ನಾಟಕದ 0-6 ವರ್ಷದ ಮಕ್ಕಳ ಅನುಪಾತವು 1991ರಲ್ಲಿ 960 ಇದ್ದದ್ದು 2001ರಲ್ಲಿ 946ಕ್ಕಿಳಿದಿತ್ತು, ಈ 2011ರ ಜನಗಣತಿಯಲ್ಲಿ ಅದು 948 ಆಗಿದ್ದು, ಹೆಚ್ಚು ಕಮ್ಮಿ ಹಿಂದಿನ ಸ್ಥಿತಿಯೇ ಮುಂದುವರೆದಿದೆ. ಎಲ್ಲ ಜಿಲ್ಲೆಗಳ ಅಂಕಿಅಂಶಗಳನ್ನು ಅಭ್ಯಸಿಸಿದರೆ, ದಶಕದಿಂದ ದಶಕಕ್ಕೆ ಹೆಣ್ಣಿನ ಪ್ರಮಾಣ ಯಾವ ರೀತಿ ತೀವ್ರಗತಿಯಲ್ಲಿ ಕುಸಿಯುತ್ತಿದೆ ಎಂಬುದು ಢಾಳಾಗಿ ಗೋಚರಿಸುತ್ತದೆ. ಪ್ರತಿ 1000ಗಂಡು ಮಕ್ಕಳಿಗೆ, ಹೆಣ್ಣುಮಕ್ಕಳು 1000ಕ್ಕಿಂತಾ ಹೆಚ್ಚಾಗಿದ್ದ ರಾಜ್ಯದ ಐದು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರುಗಳಲ್ಲಿ ಕೂಡ ಹೆಣ್ಣುಮಕ್ಕಳ ಸಂಖ್ಯೆ ಸರಾಸರಿ 950-970ಕ್ಕೆ ಇಳಿದಿರುವುದು ಗಾಬರಿ ಹುಟ್ಟಿಸುವಂತಿದೆ. ಕಳೆದ 10ರಿಂದ20 ವರ್ಷಗಳಲ್ಲಿ ಈ ಪ್ರಮಾಣದ ಏರುಪೇರಿಗೆ ಕಾರಣವೇನು? ಇದು ಎಲ್ಲಾ ಜಿಲ್ಲೆಗಳಲ್ಲೂ ಹೆಣ್ಣು ಭ್ರೂಣಹತ್ಯೆ ನಿರಾತಂಕವಾಗಿ ನಡೆಯುತ್ತಿರುವ ಸೂಚನೆಯಲ್ಲದೇ ಬೇರಿನ್ನೇನು? ದಕ್ಷಿಣ ಭಾರತದ ನಮ್ಮ ನೆರೆಹೊರೆ ರಾಜ್ಯಗಳಿಗೆ ಹೋಲಿಸಿದರೂ ಕರ್ನಾಟಕ ಅಸಮಾನ ಲಿಂಗಾನುಪಾತದಲ್ಲಿ ಮೊದಲ ಸ್ಥಾನದಲ್ಲಿದೆ ಎಂಬುದು ನಾವು ತುರ್ತಾಗಿ ಈ ಬಗ್ಗೆ ಗಮನಹರಿಸಬೇಕೆಂಬುದನ್ನು ಸೂಚಿಸುತ್ತದೆ.

ಹೆಣ್ಣು ಮಕ್ಕಳ ಮೇಲಿನ ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಹೆಣ್ಣುಭ್ರೂಣ ಹತ್ಯೆಯೂ ಒಂದು ಮುಖ್ಯ ಕಾರಣವೆಂದು ಸಮಾಜವಿಜ್ಞಾನಿಗಳು ಗುರುತಿಸುತ್ತಿದ್ದಾರೆ. ಹೆಣ್ಣಿನ ಹೊರ ದೇಹದ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಈಗ ಗರ್ಭಕ್ಕೇ ಇಳಿದು, ಅನೈಸರ್ಗಿಕವಾಗಿ ಅವಳ ಸಂತತಿಯನ್ನು ಹೊಸಕಿ ಸಾಯಿಸುತ್ತಿದೆ. ಜೊತೆಗೆ ಬಹುಸಂಖ್ಯಾತ ಪುರುಷರಿಗೆ ಸಂಗಾತಿಯಾಗಿ ಹೆಣ್ಣು ದೊರಕದಿದ್ದಾಗ ಕಾನೂನುಬಾಹಿರ ಹಿಂಸೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಪ್ರಮಾಣ ಹೆಚ್ಚುತ್ತಿದೆ ಎಂದೂ ಮನೋವಿಜ್ಞಾನಿಗಳು ಹೇಳುತ್ತಿದ್ದಾರೆ. ಇದಕ್ಕೆ ಒತ್ತು ನೀಡುವಂತೆ ಇತ್ತಿಚೆಗಿನ ಎರಡು ದಶಕಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಮಾಣ ಆತಂಕ ಹುಟ್ಟಿಸುವ ಪ್ರಮಾಣದಲ್ಲಿ ಹೆಚ್ಚಾಗಿದೆ. ಎಲ್ಲೋ ಒಮ್ಮೊಮ್ಮೆ ಮಾತ್ರ ಘಟಿಸುತ್ತಿದ್ದ, ದಾಖಲಾಗುತ್ತಿದ್ದ ಅತ್ಯಾಚಾರ ಪ್ರಕರಣಗಳು ಈಗ ಪ್ರತೀ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 50-60 ಮಹಿಳೆಯರ ಮೇಲೆ ಅದರಲ್ಲೂ ಅರ್ಧದಷ್ಟು ಅಪ್ರಾಪ್ತ ಹೆಣ್ಣುಮಕ್ಕಳ ಮೇಲಾಗುತ್ತಿದೆ.

ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳೂ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ವರ್ಷವೊಂದಕ್ಕೆ ಪತ್ತೆಯೇ ಆಗದೇ ಉಳಿಯುವ ಪ್ರಕರಣಗಳು ಜಿಲ್ಲೆಗೆ 40ರಿಂದ 50ರಷ್ಟಿವೆ. ಇದು ದಾಖಲಾಗುತ್ತಿರುವ ಪ್ರಮಾಣ ಮಾತ್ರ. ಮರ್ಯಾದೆಗಂಜಿ ದಾಖಲಾಗದೇ ಉಳಿಯುವ ಪ್ರಮಾಣ ಅದಿನ್ನೆಷ್ಟಿದೆಯೋ. ಜೊತೆಗೇ ಎಲ್ಲ ಜಾತಿ/ಧರ್ಮಗಳಲ್ಲೂ ಈಗ ವಧುವಿನ ತೀವ್ರ ಕೊರತೆ ಉಂಟಾಗಿದೆ! ಈ ರೀತಿಯ ಅಸಮಾನ ಲಿಂಗಾನುಪಾತ ಮುಂದೆ ಹೆಣ್ಣಿಗಾಗಿ ಜಾತಿ-ಧರ್ಮಗಳ ನಡುವೆ ಭೀಕರ ಕಾಳಗವನ್ನೇ ಸೃಷ್ಟಿಸುವ ಮುನ್ಸೂಚನೆಗಳು ಕಾಣುತ್ತಿವೆ.

ಹೆಣ್ಣಿನ ಬಗೆಗಿನ ಪರಂಪರಾಗತ ಅಸಡ್ಡೆ, ವ್ಯಾಪಾರ, ವಹಿವಾಟು ನೋಡಿಕೊಳ್ಳಲು ಗಂಡೇ ಬೇಕೆಂಬ ನಿರ್ಧಾರ, ಆಸ್ತಿ ಬೇರೆ ಕುಟುಂಬಕ್ಕೆ ಹೋಗುವುದೆಂಬ ಆತಂಕ, ಹೆಣ್ಣಿನ ಸುರಕ್ಷತೆಯ ಭೀತಿ, ವರದಕ್ಷಿಣೆ ನೀಡಬೇಕಾದ ಆತಂಕ ಹೀಗೆ ವಿಭಿನ್ನ ಕಾರಣಗಳಿಗಾಗಿ ಹೆಣ್ಣು ಬೇಡವೆಂಬ ಮನೋಭಾವ ಹೆಚ್ಚುತ್ತಿದೆ. ಇದು ನಗರ-ಗ್ರಾಮೀಣ, ಅಕ್ಷರಸ್ಥ-ಅನಕ್ಷರಸ್ಥ ಎಂಬ ಬೇಧವಿಲ್ಲದೆ ಹೆಣ್ಣನ್ನು ಭ್ರೂಣದಲ್ಲೇ ಕಾಣದಂತೆ ಕೊಲ್ಲುವ ಆಲೋಚನೆಗೆ ದಾರಿ ಮಾಡಿ ಕೊಟ್ಟಿದೆ.

ಲಿಂಗಪತ್ತೆಯ ತಂತ್ರಜ್ಞಾನ ಬರುವ ಮೊದಲು ಹೆಣ್ಣಿನ ಬಗೆಗೆ ವಿಭಿನ್ನ ಕಾರಣಗಳಿಂದಾಗಿ ಅಸಡ್ಡೆ ಇದ್ದರೂ ಅದನ್ನು ಕೊಂದು ಬಿಸುಟುವ ನಿರ್ಧಾರಕ್ಕೆ ಈಗಿನಂತೆ ಬಹುಸಂಖ್ಯಾತರು ಬರುತ್ತಿರಲಿಲ್ಲ. ಆದರೆ ಈಗ ಆಧುನಿಕ ವೈದ್ಯಕೀಯ ವಿಜ್ಞಾನ ಮನುಷ್ಯತ್ವವನ್ನೇ ಮರೆತು, ಹೆಣ್ಣನ್ನು ನಾಜೂಕಾಗಿ, ‘ನಾಗರಿಕ ವಿಧಾನ’ಗಳಿಂದಲೇ ಭ್ರೂಣದಲ್ಲೇ ನಿರ್ನಾಮ ಮಾಡುವ ಕ್ರೂರ ಶಕ್ತಿಯನ್ನು ವೈದ್ಯರಿಗೆ ನೀಡಿದೆ.

ನಮ್ಮ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ಮತ್ತೆ ಮತ್ತೆ ಕಟುವಾಗಿ ಹೆಣ್ಣುಭ್ರೂಣಹತ್ಯೆಯ ಹೆಚ್ಚಳ ಮತ್ತು ಅಸಮಾನ ಲಿಂಗಾನುಪಾತದ ಕುರಿತು ಎಚ್ಚರಿಸುತ್ತಲೇ ಇವೆ. ‘ಹೆಣ್ಣು ಭ್ರೂಣಹತ್ಯೆ ಮಾನವ ಜನಾಂಗದ ಅತಿ ಕೆಟ್ಟ ಪದ್ಧತಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿವೆ. ಕಾನೂನು ರಚನೆಯಾಗಿದ್ದರೂ ಅದರ ಪರಿಣಾಮಕಾರಿ ಅನುಷ್ಠಾನವೇಕಾಗಿಲ್ಲ ಎಂದೂ ಪ್ರಶ್ನಿಸುತ್ತಿವೆ. ನ್ಯಾಯಾಲಯದ ಆದೇಶದಂತೆ ನಮ್ಮ ರಾಜ್ಯದಲ್ಲೂ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಹೆಣ್ಣುಭ್ರೂಣಹತ್ಯೆ ತಡೆ ಸಮಿತಿಗಳು ಕಾಯ್ದೆ ಜಾರಿಯಾದಾಗಿನಿಂದ ನಾಲ್ಕು ವರ್ಷದ ಹಿಂದಿನವರೆಗೂ ಕಾರ್ಯನಿರ್ವಹಿಸಿದ್ದವು. ಆದರೆ ಅವಕ್ಕೆ ಹಲ್ಲೂ ಇರದೇ ಉಗುರೂ ಇರದೇ, ಅರೆ ಸತ್ತಂತೆ ಇದ್ದವು.!

ಏಕೆಂದರೆ, ಇಂತಹ ಸಮಿತಿಗೆ ಜಿಲ್ಲಾ ಆರೋಗ್ಯಾಧಿಕಾರಿಯೇ ಅಧ್ಯಕ್ಷರಾಗಿದ್ದು, ಜನಪರ ಕಾಳಜಿಯುಳ್ಳ ವೈದ್ಯರು, ಸಾಮಾಜಿಕ ಕಾರ್ಯಕರ್ತರು, ಮಹಿಳೆ-ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಸದಸ್ಯರಾಗಿರುತ್ತಾರೆ. ಈ ಕಾಯಿದೆಯನ್ನು ಬಳಸಿ, ಅನುಮಾನಾಸ್ಪದ ಮತ್ತು ದೂರು ಬಂದ ನರ್ಸಿಗ್ ಹೋಮ್ ಮತ್ತು ಸ್ಕ್ಯಾನಿಂಗ್ ಕೇಂದ್ರಗಳಿಗೆ ದಾಳಿ ಮಾಡುವುದು, ಭ್ರೂಣ ಲಿಂಗ ಪತ್ತೆಯ ಕೃತ್ಯಗಳನ್ನು ಬಯಲಿಗೆಳೆದು ಅವರ ವಿರುದ್ಧ ಮೊಕದ್ದಮೆ ದಾಖಲಿಸಿ, ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಕೆಲಸವನ್ನು ಈ ಸಮಿತಿ ಮಾಡಬೇಕಿತ್ತು. ಆದರೆ ಇಷ್ಟೂ ವರ್ಷಗಳಲ್ಲಿ ಈ ಕೆಲಸ ಪರಿಣಾಮಕಾರಿಯಾಗಿ ಆಗಿಯೇ ಇಲ್ಲ. ಅದಕ್ಕೆ ಮುಖ್ಯ ಕಾರಣ ಈ ಕೃತ್ಯದ ವಿರುದ್ಧ ದೂರು ಕೊಡುವವರಾರು? ಕುಟುಂಬವೇ ಸ್ವ ಇಚ್ಛೆಯಿಂದ ಭ್ರೂಣಪತ್ತೆ ಮತ್ತು ಹತ್ಯೆಗೆ ಮುಂದಾಗಿರುತ್ತದೆ. ವೈದ್ಯರು ತಪ್ಪೆಂದು ಗೊತ್ತಿದ್ದೇ ಇದರಲ್ಲಿ ಭಾಗಿಗಳಾಗಿರುತ್ತಾರೆ. ಈ ನಿರ್ಧಾರಗಳು ಮತ್ತು ಕೆಲಸಗಳು ಅತ್ಯಂತ ಖಾಸಗಿಯಾಗಿ ಮತ್ತು ಗೌಪ್ಯವಾಗಿ ಜರುಗುವುದರಿಂದ ಸಾಕ್ಷಿ ಯಾರು ಹೇಳುತ್ತಾರೆ? ಜಿಲ್ಲಾ ಆರೋಗ್ಯಾಧಿಕಾರಿಯೇ ಈ ಸಮಿತಿಗೆ ಅಧ್ಯಕ್ಷರಾಗಿರುವಾಗ ಅವರು ತನ್ನ ಸಹೋದ್ಯೋಗಿಗಳ ನರ್ಸಿಂಗ್ ಹೋಮ್/ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದಾಳಿಯೆಲ್ಲಿ ನಡೆಸುತ್ತಾರೆ?

ತಪ್ಪು ಮಾಡಿದ ತಮ್ಮ ಸಹೋದ್ಯೋಗಿಗಳ ಮೇಲೆ ಕ್ರಮ ಕೈಗೊಳ್ಳುತ್ತಾರೆಂದು ನಿರೀಕ್ಷಿಸುವುದೂ ಕಷ್ಟ. ಸದಸ್ಯರಾಗುವ ಸ್ಥಳೀಯ ಜನಪರ ವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರೂ ಸ್ಥಳೀಯರನ್ನು ಎದುರು ಹಾಕಿಕೊಳ್ಳುವುದು ಕಷ್ಟ ಎಂದೋ ಅಧ್ಯಕ್ಷರ ಮರ್ಜಿಯಂತೆ ನಡೆಯುವ ಸಾಧ್ಯತೆಯಿಂದಲೋ ನಿರ್ಭೀತರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದೆಲ್ಲದರ ಗೊಡವೆಯೇ ಬೇಡವೆಂದೇನೋ ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರ್ಕಾರ ಇಂತಹ ಸಮಿತಿಗಳನ್ನೇ ನೇಮಿಸದೇ ನಿಶ್ಚಿಂತೆಯಿಂದಿದೆ!

ಮಗು ಹುಟ್ಟಿದ ನಂತರ ಯೋಗಕ್ಷೇಮ, ಆರೋಗ್ಯ, ರಕ್ಷಣೆಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಇಲಾಖೆಗಳಿವೆ, ಆಯೋಗಗಳಿವೆ, ಸಮಿತಿಗಳಿವೆ. ಆದರೆ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಜವಾಬ್ದಾರಿಯಷ್ಟೇ ಮುಖ್ಯವಾಗಿ ಹೆಣ್ಣನ್ನು ಭ್ರೂಣದಲ್ಲಿ ನಾಶವಾಗದಂತೆ ತಡೆಯುವ ಪ್ರಮುಖ ಜವಾಬ್ದಾರಿಯೂ ಆರೋಗ್ಯ ಇಲಾಖೆಯದ್ದೇ. ದುರಂತವೆಂದರೆ, ಇಲಾಖೆ ಕಣ್ಣುಮುಚ್ಚಿ ಕುಳಿತಿದೆ! ಆದರೆ ಇನ್ನಾದರೂ ಹೆಣ್ಣುಭ್ರೂಣ ಹತ್ಯೆಯನ್ನು ಪರಿಣಾಮಕಾರಿಯಾಗಿ ತಡೆಯಲು ಅನುಮಾನಾಸ್ಪದ, ದೂರು ದಾಖಲಾಗಿರುವ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದಾಳಿ ನಡೆಸಬಲ್ಲ, ಕೇಂದ್ರವನ್ನೂ, ಯಂತ್ರವನ್ನು ಮಟ್ಟುಗೋಲು ಹಾಕಿಕೊಳ್ಳಬಲ್ಲ, ವೈದ್ಯರ ಮೇಲೆ ಯಾವ ಮುಲಾಜೂ ಇಲ್ಲದೇ ಶಿಸ್ತು ಕ್ರಮ ಕೈಗೊಳ್ಳಬಲ್ಲ ಒಂದು ಪ್ರತ್ಯೇಕ, ಪ್ರಬಲ ಆಯೋಗವನ್ನು ತುರ್ತಾಗಿ ರಚಿಸಿ ಇದುವರೆಗೆ ಆಗಿರುವ ಎಲ್ಲಾ ಲೋಪಗಳನ್ನೂ ಮುಚ್ಚುವಂತೆ ಕಾರ್ಯಪ್ರವರ್ತವಾಗಬೇಕು. ನಾವೀಗ ತುರ್ತಾಗಿ ಕಾರ್ಯಪ್ರವರ್ತರಾಗದಿದ್ದರೆ ಮುಂದೆ ಕರ್ನಾಟಕಕ್ಕೆ ಶತಮಾನ ತುಂಬುವಾಗ ಸಾವಿರ ಗಂಡಿಗೆ ನೂರು ಹೆಣ್ಣು ಇರಲಾರದ ಸ್ಥಿತಿ ಬಂದೀತು.

ಕರ್ನಾಟಕದ ವಧು ರಫ್ತು ಉದ್ಯಮ

ಈ ಅಗಾಧ ಪ್ರಮಾಣದ ಗಂಡು-ಹೆಣ್ಣಿನ ನಡುವಿನ ವ್ಯತ್ಯಾಸದಿಂದ ಸಂಗಾತಿಯಾಗಿ ಹೆಣ್ಣು ದೊರಕದೇ ಈಗಾಗಲೇ ರಾಜಸ್ತಾನ, ಹರಿಯಾಣ, ಪಂಜಾಬ್ ಮುಂತಾದ ರಾಜ್ಯಗಳು ವಧುವನ್ನು ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿವೆ. ‘ವಧು ರಫ್ತು’ ಉದ್ಯಮದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಹೆಚ್ಚುತ್ತಿರುವ ‘ವಧು ಮಾರಾಟ’! ‘ಗುಜ್ಜರ್ ಮದುವೆ’ ಹೆಸರಿನ ಈ ಹಣದ ಒಪ್ಪಂದದ ಮದುವೆ ಕಳೆದ 10-12 ವರ್ಷಗಳಿಂದ ಧಾರವಾಡ, ಬೆಳಗಾವಿ, ಕೊಪ್ಪಳ ಜಿಲ್ಲೆಗಳಲ್ಲಿ ವ್ಯಾಪಿಸಿದ್ದು ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಜಿಲ್ಲೆಗಳಿಗೆ ರೋಗದಂತೆ ಹರಡುತ್ತಿದೆ. ಬಡ ಹೆಣ್ಣು ಇಲ್ಲಿ ಕೇವಲ ಮಾರಾಟದ ಸರಕು. ವಿವಾಹದ ಸೋಗಿನಲ್ಲಿ ಇಂತಹ ಅಮಾನವೀಯ ಕೃತ್ಯಗಳು ಹೆಣ್ಣಿನ ಪೋಷಕರು, ಮದುವೆ ದಲ್ಲಾಳಿಗಳು, ವಧು ಮಾರಾಟದ ಏಜೆಂಟರ ಸಂಘಟಿತ ಪ್ರಯತ್ನದಿಂದ ನಡೆಯುತ್ತಿದೆ. ಹೀಗೆ ಮದುವೆ ಮಾಡಿಕೊಂಡು ಹೋದ ಒಂದೇ ಹೆಣ್ಣು ಆ ಕುಟುಂಬದ ಹಲವು ಪುರುಷರ ಕಾಮನೆಗಳನ್ನು ತಣಿಸುವ ‘ವಸ್ತು’ವಾಗಿ ಬಳಸುವಂತಾ ಸ್ಥಿತಿ ಅಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.