ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಬಾಂಡ್: ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Published : 5 ಅಕ್ಟೋಬರ್ 2024, 15:15 IST
Last Updated : 5 ಅಕ್ಟೋಬರ್ 2024, 15:15 IST
ಫಾಲೋ ಮಾಡಿ
Comments

ನವದೆಹಲಿ: ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿ ಫೆಬ್ರುವರಿ 15ರಂದು ತಾನು ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

‘ತೀರ್ಪಿನಲ್ಲಿ ಎದ್ದುಕಾಣುವಂತಹ ಯಾವುದೇ ದೋಷ ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ಬಿ.ಆರ್‌.ಗವಾಯಿ, ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠವು ಹೇಳಿದೆ. 

‘ಸುಪ್ರೀಂ ಕೋರ್ಟ್‌ ನಿಯಮಗಳು–2013ರ ಅನುಸಾರ, ತೀರ್ಪನ್ನು ಮರುಪರಿಶೀಲನೆ ಮಾಡುವ ಅಗತ್ಯತೆಯನ್ನು ಪುಷ್ಟೀಕರಿಸುವ ಅಂಶಗಳು ಕಂಡುಬಂದಿಲ್ಲ. ಹೀಗಾಗಿ, ಈ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ’ ಎಂದು ಪೀಠ ಹೇಳಿದೆ.

ಪುನರ್‌ಪರಿಶೀಲನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ತೆರೆದ ನ್ಯಾಯಾಲಯದಲ್ಲಿ ನಡೆಸಬೇಕು
ಎಂಬ ಕೋರಿಕೆಯನ್ನೂ ಪೀಠವು ತಿರಸ್ಕರಿಸಿದೆ.

ಚುನಾವಣಾ ಬಾಂಡ್‌ ಯೋಜನೆಗೆ ಸಂಬಂಧಿಸಿದ ವಿಷಯವು ಶಾಸಕಾಂಗ ಮತ್ತು ಕಾರ್ಯಾಂಗದ ನೀತಿಗಳ ವ್ಯಾಪ್ತಿಯೊಳಗೆ ಬರುತ್ತದೆ ಎಂದು ವಕೀಲ ಮ್ಯಾಥ್ಯೂಸ್‌ ಜೆ. ನೆಡುಂಬಾರ ಹಾಗೂ ಇತರರು ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

‘ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ತೀರ್ಪಿಗೆ ಸಾರ್ವಜನಿಕ ವಲಯದಲ್ಲಿ ಭಿನ್ನ ಅಭಿಪ್ರಾಯ ಇರುವುದನ್ನು ಗಮನಿಸಲು ಸುಪ್ರೀಂ ಕೋರ್ಟ್‌ ವಿಫಲವಾಗಿದೆ. ತಮ್ಮ ಚುನಾಯಿತ ಪ್ರತಿನಿಧಿಗಳು ಜಾರಿಗೆ ತಂದ ಈ ಯೋಜನೆಯನ್ನು ದೇಶದ ಬಹುಪಾಲು ಮಂದಿ ಬೆಂಬಲಿಸಬಹುದು’ ಎಂದಿದ್ದರು.

ಚುನಾವಣಾ ಬಾಂಡ್‌ ಯೋಜನೆಯನ್ನು ಅಸಾಂವಿಧಾನಿಕ ಎಂದು ಹೇಳಿದ್ದ ಸುಪ್ರೀಂಕೋರ್ಟ್‌ ಫೆಬ್ರುವರಿ 15ರಂದು ರದ್ದು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT