ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯತ್ನಾಳ ಹೇಳಿಕೆ: ವರದಿ ಪಡೆದ ಬಿಜೆಪಿ ವರಿಷ್ಠರು

Published : 4 ಅಕ್ಟೋಬರ್ 2024, 16:43 IST
Last Updated : 4 ಅಕ್ಟೋಬರ್ 2024, 16:43 IST
ಫಾಲೋ ಮಾಡಿ
Comments

ಬೆಂಗಳೂರು: ‘ಮುಂದಿನ ಮುಖ್ಯಮಂತ್ರಿಯಾಗಲು ಯುವ ಮುಖಂಡರೊಬ್ಬರು ₹1,000 ಕೋಟಿ ಸಂಗ್ರಹಿಸಿಟ್ಟುಕೊಂಡಿದ್ದಾರೆ’ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾಡಿರುವ ಆರೋಪದ ಕುರಿತು, ಬಿಜೆಪಿ ವರಿಷ್ಠರು ವರದಿ ತರಿಸಿಕೊಂಡಿದ್ದಾರೆ. 

‘ಈ ವರದಿ ಆಧರಿಸಿ ಹರಿಯಾಣ ಚುನಾವಣೆ ಬಳಿಕ ನಿರ್ದಿಷ್ಟ ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಯತ್ನಾಳ ಪದೇ ಪದೇ ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಿರುವುದನ್ನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಅದರಲ್ಲೂ, ಕಾಂಗ್ರೆಸ್‌ ಸರ್ಕಾರ ಉರುಳಿಸಿ ಮುಖ್ಯಮಂತ್ರಿಯಾಗಲು ₹1,000 ಕೋಟಿ ಸಂಗ್ರಹಿಸಿಟ್ಟಿದ್ದಾರೆ ಎಂಬ ಹೇಳಿಕೆ ವರಿಷ್ಠರನ್ನು ಸಿಟ್ಟಿಗೆಬ್ಬಿಸಿದೆ. ಈ ಹೇಳಿಕೆಯಿಂದ ರಾಷ್ಟ್ರಮಟ್ಟದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂಬುದು ವರಿಷ್ಠರ ಸ್ಪಷ್ಟ ಅಭಿಪ್ರಾಯ’ ಎಂದು ಮೂಲಗಳು ಹೇಳಿವೆ.

‘ಯತ್ನಾಳ ಅವರಿಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಬಗ್ಗೆ ಭಿನ್ನಾಭಿಪ್ರಾಯ ಮತ್ತು ಅಸಮಾಧಾನ ಇರಬಹುದು. ಅವರಿಗೆ ಗುಂಡು ಹೊಡೆಯುವ ನೆಪದಲ್ಲಿ ಹಿಟ್‌ ವಿಕೆಟ್‌ ಮಾಡುತ್ತಿದ್ದಾರೆ. ಇಂತಹ ನಡೆ ಒಪ್ಪಲಾಗದು. ರಾಜ್ಯದಲ್ಲಿ ಮುಖ್ಯಮಂತ್ರಿಯೇ ಗಂಭೀರ ಹಗರಣದಲ್ಲಿ ಸಿಲುಕಿರುವಾಗ ಸರ್ಕಾರದ ಮೇಲೆ ಒತ್ತಡ ಹೇರುವ ಬದಲು, ಯತ್ನಾಳ ಪಕ್ಷದ ಕಾಲಿನ ಮೇಲೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಇತಿಶ್ರೀ ಹಾಡದಿದ್ದರೆ ಕಷ್ಟ ಆಗುತ್ತದೆ’ ಎಂದು ಬಿಜೆಪಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

’ಪಕ್ಷದಲ್ಲಿನ ಅಸಮಾಧಾನಿತರನ್ನು ಸಮಾಧಾನಗೊಳಿಸಲು ಆರ್‌ಎಸ್‌ಎಸ್‌ ನಾಯಕರು ಇತ್ತೀಚೆಗೆ ಕರೆದಿದ್ದ 40 ನಾಯಕರ ಸಭೆಯಲ್ಲಿ 37 ಮಂದಿ ವಿಜಯೇಂದ್ರ ಅವರ ಬಗ್ಗೆ ಹರಿಹಾಯ್ದಿದ್ದರು. ಆಗ ವಿಜಯೇಂದ್ರ ಅವರು, ‘ನನ್ನಿಂದ ತಪ್ಪುಗಳು ಆಗಿದ್ದರೆ, ಅದನ್ನು ತಿಳಿಸಿ ಸರಿಪಡಿಸಿಕೊಂಡು ಹೋಗುತ್ತೇನೆ. ಸರಿ‍ಪಡಿಸಿಕೊಳ್ಳಲು ಮುಕ್ತ ಮನಸ್ಸು ಹೊಂದಿದ್ದೇನೆ’ ವಿಜಯೇಂದ್ರ ಭರವಸೆ ನೀಡಿದ್ದರು.

ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯುವುದಾಗಿ ಯತ್ನಾಳ್ ಬಣ ಹೇಳಿತ್ತು. ಆದರೆ, ಹಿಂದೆಯೇ ಯತ್ನಾಳ್ ಬಣ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಅದಾದ ಬಳಿಕ ಪ್ರತ್ಯೇಕ ಸಭೆಗಳನ್ನು ನಡೆಸಿತ್ತು. ಇವೆಲ್ಲ ಬೆಳವಣಿಗೆಯನ್ನು ವರಿಷ್ಠರು ಗಮನಿಸಿದ್ದಾರೆ’ ಎಂದು ತಿಳಿಸಿದರು. ಯತ್ನಾಳ ನೇತೃತ್ವದ ಬಣ ಶನಿವಾರ ಹುಬ್ಬಳ್ಳಿಯಲ್ಲಿ ಸಭೆ ಸೇರಬೇಕಿತ್ತು. ಅದನ್ನು ಮುಂದೂಡಲಾಗಿದೆ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT