ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣ: ಇ.ಡಿಗೆ ದಾಖಲೆ ಸಲ್ಲಿಸಿದ ಸ್ನೇಹಮಯಿ ಕೃಷ್ಣ

Published : 3 ಅಕ್ಟೋಬರ್ 2024, 16:14 IST
Last Updated : 3 ಅಕ್ಟೋಬರ್ 2024, 16:14 IST
ಫಾಲೋ ಮಾಡಿ
Comments

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣದಲ್ಲಿ ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ದೂರುದಾರ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದಾರೆ. ಆ ದಾಖಲೆಗಳ ಸಂಬಂಧ ಅವರಿಂದ ಇ.ಡಿ ವಿವರಣೆ ಪಡೆದುಕೊಂಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನೀಡಿದ್ದ ಆದೇಶದ ಅನ್ವಯ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದರು. ಇದರ ಬೆನ್ನಲ್ಲೇ ಇ.ಡಿಗೆ ದೂರು ನೀಡಿದ್ದ ಕೃಷ್ಣ, ಪ್ರಕರಣ ದಾಖಲಿಸಿಕೊಳ್ಳುವಂತೆ ಕೋರಿದ್ದರು. ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಸ್ನೇಹಮಯಿ ಕೃಷ್ಣ ಅವರಿಗೆ ಇ.ಡಿ ಸಮನ್ಸ್‌ ನೀಡಿತ್ತು. ಅದರಂತೆ ಕೃಷ್ಣ ಅವರು ಗುರುವಾರ ಬೆಳಿಗ್ಗೆ ಇ–ಮೇಲ್‌ ಮೂಲಕ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರು ಮತ್ತು ನಿರ್ದೇಶನಾಲಯದ ಬೆಂಗಳೂರು ಕಚೇರಿಗೆ ಭೇಟಿ ನೀಡಿ, ದಾಖಲೆಗಳ ಪ್ರತಿಗಳನ್ನೂ ನೀಡಿದರು.

‘ಸಿದ್ದರಾಮಯ್ಯ ಕುಟುಂಬ ಅಕ್ರಮವಾಗಿ ನಿವೇಶನ ಪಡೆದುಕೊಂಡ ಬಗೆ ಹೇಗೆ ಎಂಬುದನ್ನು ವಿವರಿಸುವ ದಾಖಲೆಗಳು, ಮತ್ತು ಈಚಿನ ವರ್ಷಗಳಲ್ಲಿ ಮುಡಾದಲ್ಲಿ ನಡೆದಿರುವ ನಿವೇಶನ ಹಂಚಿಕೆ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅವರು ಸಲ್ಲಿಸಿದ್ದಾರೆ’ ಎಂದು ಇ.ಡಿ ಮೂಲಗಳು ಹೇಳಿವೆ.

ದಾಖಲೆಗಳನ್ನು ಪರಿಶೀಲಿಸಿದ ಇ.ಡಿ ಅಧಿಕಾರಿಗಳು ಕೃಷ್ಣ ಅವರನ್ನು ಕಚೇರಿಗೆ ಕರೆಸಿಕೊಂಡು, ವಿವರಣೆ ಪಡೆದುಕೊಂಡಿದ್ದಾರೆ. ಮಧ್ಯಾಹ್ನ ಕಚೇರಿಗೆ ಹೋಗಿದ್ದ ಅವರು, ಸಂಜೆಯವರೆಗೆ ದಾಖಲೆಗಳನ್ನು ವಿವರಿಸಿದ್ದಾರೆ.

ಮುಡಾ ಅಕ್ರಮಕ್ಕೆ ಸಂಬಂಧಿಸಿದ 500ಕ್ಕೂ ಹೆಚ್ಚು ದಾಖಲೆಗಳನ್ನು ನೀಡಿದ್ದೇನೆ. ಯಾವ–ಯಾವ ಹಂತದಲ್ಲಿ ಅಕ್ರಮವಾಗಿದೆ ಎಂಬುದರ ವಿವರಣೆಯನ್ನೂ ನೀಡಿದ್ದೇನೆ.
–ಸ್ನೇಹಮಯಿ ಕೃಷ್ಣ, ಮುಡಾ ಪ್ರಕರಣದ ದೂರುದಾರ

ಸಿ.ಎಂ ಬಂಧಿಸಿ: ಇ.ಡಿಗೆ ಪ್ರದೀಪ್‌ ಕುಮಾರ್ ಮನವಿ

‘ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಶ ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಸಾಕ್ಷ್ಯ ನಾಶವನ್ನು ತಡೆಗಟ್ಟಿ’ ಎಂದು ಪ್ರದೀಪ್‌ ಕುಮಾರ್‌ ಎಸ್.ಪಿ. ಜಾರಿ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅನುಮತಿ ನೀಡಿ ಎಂದು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದವರಲ್ಲಿ ಜೆಡಿಎಸ್‌ನ ಪ್ರದೀಪ್‌ ಕುಮಾರ್ ಸಹ ಒಬ್ಬರು. ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡುವಲ್ಲಿ ಇವರ ಮನವಿಯನ್ನೂ ರಾಜ್ಯಪಾಲರು ಪರಿಗಣಿಸಿದ್ದರು.

‘ಮುಖ್ಯಮಂತ್ರಿ ಯತೀಂದ್ರ ಸಿದ್ದರಾಮಯ್ಯ ಮತ್ತು ಪಾರ್ವತಿ ಮತ್ತು ಮುಡಾ ಆಯುಕ್ತರ ವಿರುದ್ಧ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕೂಡಲೇ ಬಂಧಿಸಬೇಕು. ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಕೋರಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT