ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿರೋಧಿಗಳಿಗೆ ‘ಜೈಲು ಬೆದರಿಕೆ’ ; ಟ್ರಂಪ್‌ ಎಚ್ಚರಿಕೆ

Published : 8 ಸೆಪ್ಟೆಂಬರ್ 2024, 14:41 IST
Last Updated : 8 ಸೆಪ್ಟೆಂಬರ್ 2024, 14:41 IST
ಫಾಲೋ ಮಾಡಿ
Comments

ಮೊಸಿನಿ: ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ವಿರುದ್ಧ ಚೊಚ್ಚಲ ಚರ್ಚೆಗೆ ಕೆಲವು ದಿನಗಳು ಬಾಕಿ ಉಳಿದಿರುವಂತೆಯೇ, ಚುನಾವಣೆಯಲ್ಲಿ ‘ಅನೈತಿಕ ನಡವಳಿಕೆ’ ಪ್ರದರ್ಶಿಸುವವರಿಗೆ ಜೈಲುಶಿಕ್ಷೆಗೆ ಗುರಿಪಡಿಸಲಾಗುವುದು’ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ. 

‘ನಾನು ಚುನಾವಣೆಯಲ್ಲಿ ಗೆದ್ದಾಗ, ಮೋಸ ಮಾಡಿದವರನ್ನು ಕಾನೂನಿನ ಪರಿಧಿಯಲ್ಲಿ ಶಿಕ್ಷೆಗೆ ಒಳಪಡಿಸುತ್ತೇನೆ. ಇದರಲ್ಲಿ ದೀರ್ಘಾವಧಿ ಶಿಕ್ಷೆಯೂ ಒಳಗೊಂಡಿರಲಿದೆ’ ಎಂದು ಟ್ರಂಪ್ ತಿಳಿಸಿದ್ದಾರೆ. ಈ ಸಲದ ಚುನಾವಣೆಯಲ್ಲಿ ಅಕ್ರಮ ನಡೆಯುವ ಸಾಧ್ಯತೆಯೂ ಅತ್ಯಂತ ಅಪರೂಪವಾಗಿದ್ದರೂ ಕೂಡ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುವ ಸಾಧ್ಯತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

‘ದಯವಿಟ್ಟು ಎಚ್ಚರವಹಿಸಿ... ಮತದಾನದಲ್ಲಿ ಅನೈತಿಕ ನಡವಳಿಕೆ ಪ್ರದರ್ಶಿಸುವ ವಕೀಲರು, ರಾಜಕೀಯ ಕಾರ್ಯಕರ್ತರು, ದಾನಿಗಳು, ಅಕ್ರಮ ಮತದಾರರು, ಭ್ರಷ್ಟ ಚುನಾವಣಾ ಅಧಿಕಾರಿಗಳನ್ನು ಹಿಡಿದು, ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು. ದೇಶದಲ್ಲಿ ಹಿಂದೆಂದೂ ಇಂತಹ ಅಕ್ರಮಗಳನ್ನು ಕಂಡಿರಲಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದು ಅವಧಿಗೆ ದೇಶದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ಡೊನಾಲ್ಡ್‌ ಟ್ರಂಪ್‌ ವಿರೋಧಿಗಳಿಗೆ ಈ ಸಲ ಹೊಸದಾಗಿ ಬೆದರಿಕೆ ಒಡ್ಡಿದ್ದಾರೆ.

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬಳಿಕವೂ ಡೊನಾಲ್ಡ್‌ ಟ್ರಂಪ್  ಕೂಡ ಇದೇ ರೀತಿಯ ಆರೋಪ ಮಾಡಿದ್ದರು. ಇದಾದ ಬಳಿಕ ಹತ್ತಕ್ಕೂ ಅಧಿಕ ನ್ಯಾಯಾಲಯಗಳು, ರಿಪಬ್ಲಿಕನ್‌ ಪಕ್ಷದ ಪ್ರತಿನಿಧಿಗಳು ಕೂಡ ಅಕ್ರಮ ನಡೆದಿರುವುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT