ಗುರುವಾರ, 29 ಆಗಸ್ಟ್ 2024
×
ADVERTISEMENT
ಈ ಕ್ಷಣ :
ADVERTISEMENT

ಈ ಭೂಮಿ ಬಣ್ಣದ ಬುಗುರಿ

Last Updated 10 ಜನವರಿ 2015, 19:30 IST
ಅಕ್ಷರ ಗಾತ್ರ

ನನ್ನ, ವಿಷ್ಣು ಕಾಂಬಿನೇಷನ್‌ನ ಸಿನಿಮಾ ಎಂದರೆ ಅದು ಸಹಜವಾಗಿಯೇ ಸುದ್ದಿಯಾಗುತ್ತಿತ್ತು. ಜನರಿಗೆ ಒಳ್ಳೆಯ ಸಿನಿಮಾ ಬರುತ್ತದೆ ಎಂದು ಅಪಾರ ನಿರೀಕ್ಷೆ. ನಾವಿಬ್ಬರೂ ಆ ನಿರೀಕ್ಷೆಯ ಭಾರದಿಂದ ನಲುಗಿ ಹೋಗಿದ್ದೆವು. ಕಥೆಯನ್ನು ಮೂರ್‍್ನಾಲ್ಕು ಸಲ ತಿದ್ದಿದರೂ ನಮಗೆ ಸಮಾಧಾನ ಆಗುತ್ತಿರಲಿಲ್ಲ. ಚಿತ್ರೀಕರಣದ ಸಂದರ್ಭದಲ್ಲಿ ಇನ್ನಷ್ಟು ಫೈನ್‌ಟ್ಯೂನ್‌ ಮಾಡಿಕೊಂಡರೆ ಆಯಿತು ಎಂದುಕೊಂಡು ಧೈರ್ಯ ಮಾಡಿ ಮುಂದಡಿ ಇಡುತ್ತಿದ್ದೆವು.

‘ಮಹಾಕ್ಷತ್ರಿಯ’ ಸಿನಿಮಾ ಮಾಡುವ ಮೊದಲು ಮುಂಬೈನ ಕಥಾಲೇಖಕರಾದ ವೀರೇಂದ್ರ ಸೈನಿ ಅವರಿಂದ ಕಥೆ ಬರೆಸಿದೆವು. ಕಥೆ ಬರೆಸಿದ ಮೇಲೆ ಅದಕ್ಕೆ ಶೀರ್ಷಿಕೆ ಇಟ್ಟಿದ್ದು. ರೀಡಿಂಗ್‌ ಕೊಟ್ಟಾಗ ವಿಷ್ಣುವಿಗೆ ಬಹಳ ಹಿಡಿಸಿ, ‘ಯುವಕರಿಗೆ ಇದೊಂದು ಆಸಕ್ತಿಕರ ಕಥೆಯಂತೆ ಕಾಣುತ್ತಿದೆ’ ಎಂದು ಹೇಳಿದ್ದ. ಶಿವಾ ಎಂದುಕೊಂಡು ಚಿತ್ರೀಕರಣ ಶುರುಮಾಡಿದೆವು. ಇನ್ನೊಂದು ಕಡೆ ಹಾಡುಗಳ ಧ್ವನಿಮುದ್ರಣದ ಕೆಲಸ. ಹಂಸಲೇಖ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಈ ಸಿನಿಮಾಗೆ ಗೊತ್ತುಮಾಡಲು ನಿಶ್ಚಯಿಸಿದ್ದೆ. ಅವರು ಕರೆದ ಕಡೆಗೆಲ್ಲಾ ಸಲೀಸಾಗಿ ಬರುವವರ ಪೈಕಿ ಅಲ್ಲ. ವಿಷ್ಣು ಮನೆಗೆ ಕಾಫಿ ಕುಡಿದುಕೊಂಡು ಬರೋಣ ಎಂದು ನಾನು ಕರೆದಾಗ, ಪುಣ್ಯಕ್ಕೆ ಅವರು ಇಲ್ಲ ಎನ್ನಲಿಲ್ಲ.

ಮಾತಿನ ವರಸೆಯಲ್ಲಿ ವಿಷ್ಣು, ‘‘ನೀವು ‘ರಾ’ ಅವರಿಗೆ ಮಾತ್ರ ಒಳ್ಳೆಯ ಹಾಡು ಕೊಡುತ್ತೀರಿ, ನಮಗೆ– ‘ವಿ’ಗೆ ಕೊಡುವುದಿಲ್ಲ’’ ಎಂದು ಕಿಚಾಯಿಸಿದ. ಅಲ್ಲಿಂದ ನನ್ನ ಮನೆಗೆ ವಾಪಸ್‌ ಬಂದಾಗ ಹಂಸಲೇಖ ಆ ಮಾತನ್ನು ತಲೆಗೆ ಹಚ್ಚಿಕೊಂಡಿದ್ದರು. ‘‘ಏನ್‌ ಸಾರ್‌... ಸಿಂಹ ಹೀಗೆ ಹೇಳಿಬಿಟ್ಟರು. ನಿಮ್ಮ ‘ಮುತ್ತಿನಹಾರ’ದಲ್ಲಿ ಎಂಥೆಂಥ ಹಾಡುಗಳನ್ನು ಕೊಟ್ಟಿದ್ದೀನಿ. ‘ಮಡಿಕೇರಿ ಸಿಪಾಯಿ’, ಬಾಲಮುರಳಿಕೃಷ್ಣ ಅವರು  ಹಾಡಿದ ‘ದೇವರು ಹೊಸೆದ ಪ್ರೇಮದ ದಾರ’ ಒಳ್ಳೆಯ ಹಾಡುಗಳಲ್ಲವೇ?’’ ಎಂದು ಕೇಳಿದರು. ಅವನು ಇನ್ನೂ ಉತ್ತಮ ಹಾಡನ್ನು ಕೊಡಲಿ ಎಂಬ ಉಮೇದಿನಿಂದ ಹಾಗೆ ಹೇಳಿರಬೇಕು ಎಂದು ಅವರನ್ನು ಸಮಾಧಾನಪಡಿಸಿದೆ.

‘ಮಹಾಕ್ಷತ್ರಿಯ’ ಸಿನಿಮಾಗೆ ಒಂದು ಬೋಧನಾಪ್ರಧಾನ ಗೀತೆ ಬೇಕಿತ್ತು. ಹೇಗೆ ಮಾಡುವುದು ಎಂದು ನಾವಿಬ್ಬರೂ ಸಾಕಷ್ಟು ಯೋಚಿಸಿ, ಮಂಥನ ನಡೆಸಿದೆವು. ಒಳ್ಳೆಯ ಹಾಡು ಮೂಡಿಬರಲಿಲ್ಲ. ಆ ದಿನ ರಾತ್ರಿ ನಾನು ಮನೆಗೆ ಹೋಗಿ ರಾಜ್‌ಕಪೂರ್‌ ಸಿನಿಮಾದ ಮನ್ನಾಡೆ ಹಾಡುಗಳನ್ನು ಕೇಳತೊಡಗಿದೆ. ರಾತ್ರಿ 11 ಗಂಟೆಯ ಹೊತ್ತಿಗೆ ಅಮೆರಿಕದಿಂದ ಒಂದು ಫೋನ್‌ ಬಂತು. ಅಲ್ಲಿಂದ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಮಾತನಾಡಿದರು. ಸುಮಾರು ಮೂವತ್ತು ವರ್ಷಗಳ ಪರಿಚಯ ಇದ್ದುದರಿಂದ ನಾನು ಅವರನ್ನು ಬಾಲು ಎಂದೇ ಕರೆಯುತ್ತೇನೆ. ಅಲ್ಲಿ ಬಾಲು ಯಾವುದೋ ಕನ್ನಡ ಸಂಘದ ಸಮಾರಂಭಕ್ಕೆ ಹೋಗಿ, ಹಾಡುಗಳನ್ನು ಹಾಡಿದ್ದರು. ‘ಮುತ್ತಿನಹಾರ’ ಸಿನಿಮಾದ ‘ಮಡಿಕೇರಿ ಸಿಪಾಯಿ’ ಹಾಡಿದಾಗ, ಅಲ್ಲಿದ್ದ ಜನ ಒನ್ಸ್‌ ಮೋರ್‌ ಎಂದು ಕೇಳಿ, ನಾಲ್ಕು ಸಲ ಬಾಲು ಆ ಗೀತೆ ಹಾಡುವಂತೆ ಮಾಡಿದ್ದರಂತೆ. ಆ ವಿಷಯವನ್ನು ತಕ್ಷಣ ನನ್ನ ಜೊತೆ ಹಂಚಿಕೊಳ್ಳಲು ಬಾಲು ಫೋನ್‌ ಮಾಡಿದ್ದುದು. ‘ಆ ಹಾಡು ಇನ್ನೂ ನೂರು ವರ್ಷ ಉಳಿಯುತ್ತದೆ’ ಎಂದು ಅವರು ಹೇಳಿದ ನಂತರ ನನ್ನ ಹೆದರಿಕೆ ಇನ್ನೂ ಹೆಚ್ಚಾಯಿತು. ಈ ವಿಷಯವನ್ನು ನಾನು ಹಂಸಲೇಖ ಅವರಿಗೆ ಹೇಳಿದಾಗ, ಅವರು ಹೆಮ್ಮೆಪಟ್ಟಿದ್ದೇ ಅಲ್ಲದೆ ‘ಈ ವಿಷಯವನ್ನು ನಿಮ್ಮ ಫ್ರೆಂಡ್‌ಗೆ ಹೇಳಿ ಸಾರ್‌’ ಎಂದು ಸಣ್ಣಗೆ ಕುಟುಕಿದರು. ಆ ಸಿನಿಮಾ ಹಾಡಿನ ಯಶಸ್ಸು ನಮಗೆ ಇನ್ನೊಂದು ಸವಾಲು. ಅದರ ತಲೆಮೇಲೆ ಹೊಡೆಯುವಂಥ ಇನ್ನೊಂದು ಹಾಡನ್ನು ಮಾಡಬೇಕು ಎಂದು ನಾನು ಹಂಸಲೇಖ ಅವರಿಗೆ ದುಂಬಾಲುಬಿದ್ದೆ.

‘ನಾನು ಖಂಡಿತ ತುಂಬಾ ಪ್ರಯತ್ನಿಸಿ, ಒಳ್ಳೆಯ ಹಾಡನ್ನೇ ಮಾಡಿಕೊಡುತ್ತೇನೆ’ ಎಂದು ಹಂಸಲೇಖ ಭರವಸೆ ಕೊಟ್ಟರು. ಹಾಡುಗಳು ಹಿಟ್‌ ಆಗಬೇಕಷ್ಟೆ, ಹಿಟ್‌ ಮಾಡಲು ಸಾಧ್ಯವಿಲ್ಲ. ಎಷ್ಟೋ ಸಲ ಧ್ವನಿಮುದ್ರಿಸಿಕೊಳ್ಳುವಾಗ, ಚಿತ್ರೀಕರಣ ನಡೆಸುವಾಗ ಅನೇಕರಿಗೆ ಇಷ್ಟವಾಗುವ ಹಾಡುಗಳನ್ನು ಜನ ಮೆಚ್ಚುವುದಿಲ್ಲ. ನಮಗೆ ಅಷ್ಟೇನೂ ರುಚಿಸದ ಹಾಡು ಸೂಪರ್‌ ಹಿಟ್‌ ಆಗುವುದೂ ಉಂಟು.
ಹಂಸಲೇಖ ಅನೇಕ ಟ್ಯೂನ್‌ಗಳನ್ನು ಕೊಟ್ಟರು. ಯಾವುದೂ ನನಗೆ ಹಿಡಿಸಲಿಲ್ಲ. ಅಷ್ಟೆಲ್ಲಾ ಕೊಟ್ಟರೂ ಒಪ್ಪುತ್ತಿಲ್ಲವಲ್ಲ ಎಂದು ಅವರಿಗೆ ಕೋಪ ಬಂತು. ಒಲ್ಲದ ಮನಸ್ಸಿನಿಂದಲೇ ಒಂದು ಟ್ಯೂನ್ ಒಪ್ಪಿಕೊಂಡೆ. ಹಾಡಿನ ಧ್ವನಿಮುದ್ರಣಕ್ಕೆ ದಿನ ಗೊತ್ತುಪಡಿಸಿ, ಬಾಲು ಅವರನ್ನು ಕರೆಸಿದೆವು. ಪ್ರಸಾದ್‌ ರೆಕಾರ್ಡಿಂಗ್‌ ಸ್ಟುಡಿಯೊದಲ್ಲಿ ಧ್ವನಿಮುದ್ರಣ ನಡೆಯಬೇಕಿತ್ತು. ಬಾಲು ಅಲ್ಲಿಗೆ ಹೇಳಿದ ಸಮಯಕ್ಕೆ ಸರಿಯಾಗಿ ಬಂದರು. ಆದರೆ, ಹಂಸಲೇಖ ಸಾಹಿತ್ಯವನ್ನು ಪೂರ್ತಿ ಬರೆದೇ ಇರಲಿಲ್ಲ.

ನಾನು, ಹಂಸಲೇಖ ಅಲ್ಲಿನ ಬಾತ್‌ರೂಮಿನ ಜಗಲಿ ಮೇಲೆ ಕುಳಿತು, ಪದಗಳಿಗಾಗಿ ಹುಡುಕಾಟ ನಡೆಸಿದೆವು. ಹಂಸಲೇಖ ಅವರು ಯಾರ್‍್ಯಾರೋ ಪದಗಳನ್ನು ಕೊಟ್ಟರೆ ತೆಗೆದುಕೊಳ್ಳುತ್ತಿರಲಿಲ್ಲ. ನಾನು ಅವರಿಗೆ ಬಹಳ ಹತ್ತಿರವಾಗಿದ್ದರಿಂದ ಕೊಡುತ್ತಿದ್ದ ಸಲಹೆಗಳಿಗೆ ಕಿವಿಗೊಡುತ್ತಿದ್ದರು. ಹಂಸಲೇಖ ಅವರ ಸಹಾಯಕ ಬಂದು, ‘ಸಾರ್‌, ಬಾಲು ಅವರು ಸಾಹಿತ್ಯ ಕೇಳುತ್ತಾ ಇದ್ದಾರೆ’ ಎಂದ. ನಮ್ಮ ಹತ್ತಿರ ಒಂದು ಚರಣ ಮಾತ್ರ ಇತ್ತು. ಪಲ್ಲವಿಯ ಸಾಲುಗಳು ಇನ್ನೂ ಹೊಳೆದಿರಲಿಲ್ಲ. ಗಾಯಕರಿಗೆ ಪಲ್ಲವಿಯೇ ಮುಖ್ಯ. ಅದನ್ನು ಟ್ಯೂನ್‌ಗೆ ತಕ್ಕಂತೆ ಹಾಡಿ, ಓಕೆ ಆಗಿಬಿಟ್ಟರೆ ಆಮೇಲೆ ಹಾಡಿನ ಧ್ವನಿಮುದ್ರಣ ಸಲೀಸಾಗಿ ಆಗುತ್ತದೆ. ಒಂದು ಚರಣವನ್ನು ಸಹಾಯಕನ ಕೈಗೆ ಕೊಟ್ಟು ಹಂಸಲೇಖ ಕಳುಹಿಸಿದರು. ಸ್ವಲ್ಪ ಹೊತ್ತಿನ ನಂತರ ಅವರೇ ಒಳಗೆ ಹೋಗಿ, ‘ಚರಣವನ್ನು ಹಾಡುತ್ತಾ ಇರಿ, ಪಲ್ಲವಿಯನ್ನು ಯೋಚಿಸುತ್ತೇನೆ’ ಎಂದು ಹೇಳಿ ಬಂದರು. ‘ಸಾರ್‌ ಒಂದು ಕೆಲಸ ಮಾಡೋಣ... ಇವತ್ತು ಬಾಲು ಅವರನ್ನು ಕಳುಹಿಸಿ ಬಿಡೋಣ. ಇನ್ನೆರಡು ದಿನ ಬಿಟ್ಟು ಅವರನ್ನು ಮತ್ತೆ ಕರೆಸೋಣ’ ಎಂದು ಹಂಸಲೇಖ ಸಲಹೆ ಕೊಟ್ಟರು. ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಮಡಿಕೇರಿಯಲ್ಲಿ ಮರುದಿನ ಅದೇ ಹಾಡಿನ ಚಿತ್ರೀಕರಣಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಆಗಿತ್ತು. ಆ ದಿನವೇ ಹಾಡಿನ ಧ್ವನಿಮುದ್ರಣ ಆಗಲೇಬೇಕು ಎಂದು ಪಟ್ಟುಹಿಡಿದೆ.

ಹಂಸಲೇಖ ಸಾಲುಗಳನ್ನು ಚಕಚಕನೆ ಬರೆಯುವುದನ್ನು ನೋಡುವುದೇ ನಮಗೆ ಭಾಗ್ಯ. ಅವರು ಇನ್ನೊಂದು ಚರಣವನ್ನು ಬೇಗ ಬರೆದುಬಿಟ್ಟರು. ಸಹಾಯಕ ಮತ್ತೆ ಹೊರಗೆ ಬಂದ. ಪಲ್ಲವಿ ಕೇಳಿದ ಅವನ ಕೈಗೆ ಹಂಸಲೇಖ ಇನ್ನೊಂದು ಚರಣ ಕೊಟ್ಟು ಕಳುಹಿಸಿದರು. ನೂರು ರೀತಿಯ ಪಲ್ಲವಿಗಳನ್ನು ಬರೆದರೂ ಯಾವುದೂ ಸಮಾಧಾನ ನೀಡಲಿಲ್ಲ. ಅಷ್ಟರಲ್ಲಿ ರಾಜಕುಮಾರ್‌ ಅವರ ಸಹೋದರ ವರದಪ್ಪನವರು ಅಲ್ಲಿಗೆ ಬಂದರು. ‘ಏನ್ರೀ... ಇಬ್ಬರೂ ಇಲ್ಲಿ ಜಗಲಿ ಮೇಲೆ ಕುಳಿತುಬಿಟ್ಟಿದ್ದೀರಿ?’ ಎಂದು ಕೇಳಿದರು. ಪಲ್ಲವಿಯ ನಮ್ಮ ಹುಡುಕಾಟದ ವಿಷಯ ಕೇಳಿದ್ದೇ, ‘ನಿಮಗೆ ಡಿಸ್ಟರ್ಬ್‌ ಮಾಡುವುದಿಲ್ಲ’ ಎಂದು ಹೊರಟುಹೋದರು.

ಅಷ್ಟು ಹೊತ್ತಿಗೆ ನನಗೆ ಒಂದು ಐಡಿಯಾ ಹೊಳೆದು, ‘ಈ ಭೂಮಿ ಬಣ್ಣದ ಬುಗುರಿ’ ಮೊದಲ ಸಾಲು ಆಗಬಹುದೇ ಎಂದೆ. ಹಾಗೆ ಹೇಳಿದ್ದೇ ತಡ ಹಂಸಲೇಖ ‘ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ’ ಎಂಬ ಪಲ್ಲವಿ ಬರೆದರು. ನನಗೂ ಕಥೆಗೆ ಆ ಸಾಲುಗಳು ಪೂರಕವಾಗಿವೆ ಎನ್ನಿಸಿತು. ಹಂಸಲೇಖ ಒಳಗೆ ಓಡಿಹೋಗಿ, ಪಲ್ಲವಿಯನ್ನು ಕೊಟ್ಟರು. ಸಂಜೆಯ ಹೊತ್ತಿಗೆ ಹಾಡಿನ ಧ್ವನಿಮುದ್ರಣ ಮುಗಿಯಿತು.

ಕಾರಿನಲ್ಲಿ ಮಡಿಕೇರಿಗೆ ಹೋಗುವಾಗ ಆ ಹಾಡನ್ನು ಕೇಳಿಕೊಂಡೇ ಹೋದೆ. ನಿಧಾನವಾಗಿ ಅದು ನನ್ನನ್ನು ಆವರಿಸಿಕೊಳ್ಳತೊಡಗಿತು. ವಿಷ್ಣು ನನಗಾಗಿ ಕಾಯುತ್ತಾ ಇದ್ದ. ಮರುದಿನ ಬೆಳಿಗ್ಗೆ ಚಿತ್ರೀಕರಣ. ಕೊರಿಯಾಗ್ರಾಫರ್‌ ಯಾರೂ ಇರಲಿಲ್ಲ. ನಾನೇ ಹಾಡನ್ನು ಚಿತ್ರೀಕರಿಸಿದೆ. ಆಗ ಹಾಡು ಕೇಳಿದವರೆಲ್ಲಾ ‘ಸುಮಾರಾಗಿದೆ’, ‘ಓಕೆ’, ‘ಪರವಾಗಿಲ್ಲ’ ಎಂದೆಲ್ಲಾ ಪ್ರತಿಕ್ರಿಯಿಸಿದರು. ವಿಷ್ಣು ಕೂಡ ‘ಓಕೆ’ ಎಂದಷ್ಟೇ ಹೇಳಿದ್ದು. ವಿಧ ವಿಧವಾದ ಶಾಟ್‌ಗಳನ್ನೇ ಇಟ್ಟುಕೊಂಡು ಚಿತ್ರೀಕರಣ ನಡೆಸಿ, ನೃತ್ಯವಿಲ್ಲದೆಯೇ ಹಾಡಿನ ದೃಶ್ಯಗಳನ್ನು ರೂಪಿಸಿದೆವು. ಹಾಡಿನ ಚಿತ್ರೀಕರಣ ಮುಗಿಯುವ ಹೊತ್ತಿಗೆ ನನಗೆ ಆ ಹಾಡು ನಿಧಾನವಾಗಿ ಗುಂಗು ಹತ್ತಿಸುವಂತಿದೆ ಎನ್ನಿಸಿತ್ತು.

ಸಿನಿಮಾ ತೆರೆಕಂಡಿತು. ಅಷ್ಟೇನೂ ಚೆನ್ನಾಗಿ ಓಡಲಿಲ್ಲ. ಆದರೆ, ಈ ‘ಈ ಭೂಮಿ ಬಣ್ಣದ ಬುಗುರಿ’ ಹಾಡು ಬಹಳ ಹಿಟ್‌ ಆಯಿತು.
ಚಿತ್ರ ಬಿಡುಗಡೆಯಾದ ನಂತರ ಒಂದು ಸುದ್ದಿ ಓದಿದೆ. ಯಾರೋ ಗಂಡ–ಹೆಂಡತಿ ಜಗಳವಾಡಿಕೊಂಡು ಪೊಲೀಸ್‌ ಸ್ಟೇಷನ್‌ ಮೆಟ್ಟಿಲು ಹತ್ತಿದ್ದರು. ಅಲ್ಲಿನ ಇನ್ಸ್‌ಪೆಕ್ಟರ್‌ ತುಂಬಾ ಬ್ಯುಸಿ ಇದ್ದು, ಠಾಣೆ ಎದುರಿನ ಚಿತ್ರಮಂದಿರದಲ್ಲಿ ಒಂದು ಸಿನಿಮಾ ನೋಡಿಕೊಂಡು ಬರುವಂತೆ ಆ ದಂಪತಿಗೆ ಸೂಚಿಸಿದರು. ಅಲ್ಲಿ ಇದ್ದದ್ದು ನಮ್ಮದೇ ‘ಮಹಾಕ್ಷತ್ರಿಯ’ ಸಿನಿಮಾ.

ಆ ಸಿನಿಮಾ ನೋಡಿಬಂದ ದಂಪತಿ, ‘ಈ ಭೂಮಿ ಬಣ್ಣದ ಬುಗುರಿ’ ಹಾಡನ್ನು ನೋಡಿದ ಮೇಲೆ ಮನಸ್ಸನ್ನು ಬದಲಿಸಿಕೊಂಡಿದ್ದರು. ಜಗಳ ಮರೆತು, ವಿವಾಹ ವಿಚ್ಛೇದನ ಯೋಚನೆಯನ್ನೇ ಕೈಬಿಟ್ಟು ನಗುನಗುತ್ತಾ ಮನೆಗೆ ಹೋಗಿದ್ದರು. ಅವರ ಆ ನಿರ್ಧಾರವನ್ನು ನೋಡಿ ಥ್ರಿಲ್‌ ಆಗಿ, ಇನ್ಸ್‌ಪೆಕ್ಟರ್‌ ನನಗೊಂದು ಕಾಗದ ಬರೆದಿದ್ದರು. ಒಂದು ಹಾಡು ಹೀಗೂ ಪರಿಣಾಮ ಬೀರಿದ್ದು ನನಗಂತೂ ಸೋಜಿಗ. ‘ಮಹಾಕ್ಷತ್ರಿಯ’ ಸಿನಿಮಾಗೆ ಫಿಲ್ಮ್‌ಫೇರ್‌ ಪ್ರಶಸ್ತಿ ಕೂಡ ಸಂದಿತು.

ವಿಷ್ಣು ವಿಧಿವಶ ಆದಾಗ ಎಲ್ಲೆಡೆ ‘ಈ ಭೂಮಿ ಬಣ್ಣದ ಬುಗುರಿ’ ಹಾಡು ಅನುರಣಿಸಿತು. ಮೈಸೂರಿನಲ್ಲಿ ಈ–ಟಿವಿಯವರು ವಿಷ್ಣು ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಿದರು. ಆಗ ಬಾಲು ಆ ಹಾಡನ್ನು ಹಾಡುವಾಗ ಕಣ್ಣಲ್ಲಿ ನೀರು ತುಂಬಿಕೊಂಡರು. ಆ ದಿನ ಅವರು ನನ್ನನ್ನು ತಬ್ಬಿಕೊಂಡು, ‘ದಿಸ್‌ ಸಾಂಗ್‌ ವಿಲ್‌ ಲಿವ್‌ ಫಾರ್‌ ಇಯರ್ಸ್‌ ಅಂಡ್‌ ವಿಷ್ಣು ವಿಲ್‌ ಬಿ ರಿಮೆಂಬರ್ಡ್‌. ಐ ವಿಲ್‌ ಸಿಂಗ್‌ ದಿಸ್‌ ಟಿಲ್‌ ಐ ಡೈ’ ಎಂದು ಗದ್ಗದಿತರಾದರು. ಒಂದು ಹಾಡಿನ ಪಯಣ ಎಷ್ಟು ಕಷ್ಟಕರವೂ, ಭಾವುಕವೂ ಆಗಿರುತ್ತದೆ ಎಂದು ನಾನು, ಹಂಸಲೇಖ ಆಗಾಗ ಮಾತನಾಡುವಾಗ ‘ಈ ಭೂಮಿ ಬಣ್ಣದ ಬುಗುರಿ’ ಕಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT