ಗುರುವಾರ, 29 ಆಗಸ್ಟ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿಯಲ್ಲಿ ಸಿಕ್ಕ ಹಾಡು

Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಎರಡು ದಿನಗಳು ಕಳೆದವು. ಕಾಸ್ಟ್ಯೂಮ್ಸ್, ಗೆಟ್‌ಅಪ್ಸ್, ಡೇಟ್ಸ್ ಎಲ್ಲದರ ಬಗ್ಗೆ ಮಾತುಕತೆ ಆಯಿತು. ನಾನು, ವಿಷ್ಣು ಮುಂಬೈಗೆ ಹೋದೆವು. ಅಲ್ಲಿ ಸಂಜೀವ್‌ಕುಮಾರ್, ಅಮಿತಾಭ್‌ಗೆ ಮೇಕಪ್ ಮಾಡುವವರ ಹತ್ತಿರ ಹೋಗಿ, ವಿಗ್‌ಗಳಿಗೆ ಆರ್ಡರ್ ಕೊಟ್ಟೆವು. ಡಿಫರೆಂಟ್ ಗೆಟ್‌ಅಪ್ ಬೇಕು ಎಂದು ಹೇಳಿ, ಯುವಕನಿಂದ ಮುದುಕನವರೆಗೆ ಗೆಟ್‌ಅಪ್ ಸಿದ್ಧಪಡಿಸಿಕೊಡುವಂತೆ ಕೇಳಿಕೊಂಡೆವು.

ಅಲ್ಲಿ ನಾವು ‘ಸನ್ ಅಂಡ್ ಸ್ಯಾಂಡ್ ಹೋಟೆಲ್‌’ನಲ್ಲಿ ಇಳಿದುಕೊಂಡಿದ್ದೆವು. ಒಮ್ಮೆ ವಿಷ್ಣು ನನ್ನ ಜೊತೆ ಏನೋ ಮಾತನಾಡಬೇಕು ಎಂದ. ನನಗೆ ಅವನು ಇನ್ನೇನಾದರೂ ಬಾಂಬ್ ಹಾಕುವನೋ ಎಂದು ಭಯ ಶುರುವಾಯಿತು. ‘ಏನೋ, ಇಷ್ಟು ದೊಡ್ಡ ಸಿನಿಮಾಗೆ ಕೈಹಾಕುತ್ತಾ ಇದ್ದೀಯ. ಅದೂ 70 ಎಂಎಂನಲ್ಲಿ. ನನಗೆ ತಿಳಿದಹಾಗೆ ಇದು ಒಂದೂವರೆ ಕೋಟಿ ರೂಪಾಯಿ ದಾಟಬಹುದು. ನೋಡು... ನಾನು, ನೀನು ನಷ್ಟ ಮಾಡಿಕೊಳ್ಳಬಾರದು’ ಎಂದು ಅವನು ಕಾಳಜಿಯಿಂದ ಹೇಳಿದ. ಆಗ ನಾನು ಅವನಿಗೆ ಹೇಳಿದೆ: ಕನ್ನಡ ಚಿತ್ರರಂಗದಲ್ಲಿ ಸಂಪಾದನೆ ಮಾಡಿದೀನಿ. ಒಂದು ಕೈ ನೋಡಿಯೇ ಬಿಡೋಣ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎನ್ನುತ್ತಾರಲ್ಲ ಹಾಗೆ. ಆಗ ತಾನು ನನ್ನ ಜೊತೆ ಇರುವುದಾಗಿ ಅವನು ಭರವಸೆ ಕೊಟ್ಟ. ಆ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ.

ಬೆಂಗಳೂರಿಗೆ ಬಂದು ಮುಂದಿನ ಕೆಲಸಗಳನ್ನು ಪ್ರಾರಂಭಿಸಿದೆವು. ಹಾಡುಗಳಿಗೆ ಸ್ವರ ಸಂಯೋಜನೆ ಯಾರಿಂದ ಮಾಡಿಸಬೇಕು ಎಂದು ನನ್ನ ತಲೆಯಲ್ಲಿ ಯೋಚನೆ ಮೂಡಿದ ಹೊತ್ತಿನಲ್ಲಿ ರಂಗರಾವ್ ಅವರು ಬಂದು, ಮುತ್ತಿನಹಾರಕ್ಕೆ ತಾವೇ ಸಂಗೀತ ನೀಡುವುದಾಗಿ ನನ್ನನ್ನು ಕೇಳಿದರು. ನನಗೆ ಹಂಸಲೇಖ ಅವರೇ ಬೇಕಾಗಿತ್ತು. ಅಷ್ಟು ಹೊತ್ತಿಗೆ ನಾನು ‘ಬಣ್ಣದಗೆಜ್ಜೆ’ ಸಿನಿಮಾ ಮಾಡಿದ್ದೆ. ಅದರಲ್ಲಿ ಮೊದಲು ಇಳಯರಾಜ ಸಂಗೀತ ನೀಡಲು ನಿಗದಿಯಾಗಿದ್ದರು. ನನಗೂ ಅವರಿಗೂ ಸರಿಹೋಗಲಿಲ್ಲ. ಆಗ ನಾನು ಹಂಸಲೇಖ ಅವರಿಂದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿಸಿದ್ದೆ. ಆದ್ದರಿಂದ ನಮ್ಮ ಸಂಬಂಧ ಗಟ್ಟಿ ಆಗಿತ್ತು. ನನಗೆ ಕನ್ನಡದ ಸೊಗಡಿನ ಹಾಡುಗಳು ಬೇಕಾಗಿದ್ದವು. ಹಂಸಲೇಖ ಅವರನ್ನು ಅದಕ್ಕಾಗಿಯೇ ಆರಿಸಿಕೊಂಡದ್ದು. ನಾನು  ಒಲ್ಲೆ ಎಂದಿದ್ದೇ ರಂಗರಾವ್ ಕೋಪ ಮಾಡಿಕೊಂಡು, ನನಗೆ ಶಾಪ ಹಾಕಿದರು. ಈ ಸಿನಿಮಾ ಆಗದಿರಲಿ ಎಂದು ಪುಟ್ಟಪರ್ತಿ ಸಾಯಿಬಾಬಾನಲ್ಲೂ ಅವರು ಬೇಡಿಕೊಂಡಿದ್ದರಂತೆ. ನಾನು ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅವರಿಗೆ ‘ಕರ್ಣ’, ‘ಪಿತಾಮಹ’ ಮೊದಲಾದ ಸಿನಿಮಾಗಳಿಗೆ ಸಂಗೀತ ನೀಡುವ ಕೆಲಸ ಕೊಟ್ಟೆ.

ಹಿಮಾಲಯದಲ್ಲಿ ಚಿತ್ರೀಕರಣ ನಡೆಸಲು ರಕ್ಷಣಾ ಇಲಾಖೆಯ ಅನುಮತಿ ಪಡೆಯಬೇಕಿತ್ತು. ದೆಹಲಿಯ ಕಾರ್ಯಾಲಯಕ್ಕೆ ಹೋಗಿ, ಅಲ್ಲಿ ಎಲ್ಲಾ ಫಾರ್ಮ್‌ಗಳನ್ನು ತೆಗೆದುಕೊಂಡೆ. ಆಗ ಅಲ್ಲಿನ ಸಿಬ್ಬಂದಿ, ‘ನೀವು ಎಲ್ಲಾ ಸ್ಥಳಗಳನ್ನು ನೋಡಿ, ಯಾವ್ಯಾವ ಜಾಗಗಳಲ್ಲಿ ಚಿತ್ರೀಕರಣ ನಡೆಸುವಿರಿ ಎಂದು ಒಂದು ಪಟ್ಟಿ ಮಾಡಿಕೊಡಿ’ ಎಂದು ಕೇಳಿದರು. ನಾನು ಹಿಮಾಲಯ, ಜೈಪುರ ಎಲ್ಲಾ ಕಡೆ ಹೋಗಿ ಚಿತ್ರೀಕರಣ ನಡೆಸಬೇಕಾದ ಜಾಗಗಳನ್ನು ಪಟ್ಟಿ ಮಾಡಿದೆ. ‘ಇದಕ್ಕೆಲ್ಲ ವಿಮೆ ಆಗಬೇಕು. ಸುಮಾರು 25 ಲಕ್ಷ ರೂಪಾಯಿ ಆಗುತ್ತದೆ’ ಎಂದರು. ನನಗೆ ಸ್ವಲ್ಪ ಭಯ ಆಯಿತು. ಕೊನೆಗೆ ಕನ್ನಡದ ಒಬ್ಬ ಆಫೀಸರ್ ನಮಗೊಂದು ಉಪಾಯ ಹೇಳಿಕೊಟ್ಟು, 10 ಲಕ್ಷ ರೂಪಾಯಿ ಕಡಿಮೆ ಮಾಡಿಸಿದರು. 100 ಟ್ಯಾಂಕ್‌ಗಳು, 2000 ಸೈನಿಕರು, 150 ಟ್ರಕ್‌ಗಳು, 100 ಜೀಪ್‌ಗಳು, ಗನ್‌ಗಳು, ಮಿಲಿಟರಿ ಸಮವಸ್ತ್ರಗಳು ಎಲ್ಲಕ್ಕೂ ದುಡ್ಡು ಕಟ್ಟಿ ಅನುಮತಿಗೆ ಅರ್ಜಿ ಸಲ್ಲಿಸಿ ಬೆಂಗಳೂರಿಗೆ ಬಂದೆ.

ಇಷ್ಟು ದಿನ ಕಥೆ, ಚಿತ್ರಕಥೆ, ತಾರಾಗಣ, ಅನುಮತಿ ಎಂದು ತಲೆ ಕೆಡಿಸಿಕೊಂಡಿದ್ದ ನನಗೆ ಚಿತ್ರದ ದೊಡ್ಡ ಬಜೆಟ್ ಹೊಂದಿಸುವ ಉಸಾಬರಿ ಕಾಡತೊಡಗಿತು. ನನ್ನ ಹಳೆಯ ಚಿತ್ರಗಳ ಎಲ್ಲಾ ಹಂಚಿಕೆದಾರರು ನೆನಪಾದರು. ಪಾಲ್ ಚಂದಾನಿ ‘ಬಂಧನ’ ಸಿನಿಮಾದ ಹಂಚಿಕೆದಾರರು. ಅವರೂ ಸೇರಿದಂತೆ ಅನೇಕರಿಗೆ ‘ಮುತ್ತಿನಹಾರ’ದ ಬಜೆಟ್‌ನ ಬಗ್ಗೆ ಹೇಳಿದೆ. ಯಾರೂ ಹಣ ಸಹಾಯ ಮಾಡಲು ಮುಂದೆ ಬರಲಿಲ್ಲ. ಕೆಲವರು ನನ್ನನ್ನು ಬೈದರು. ‘ಕರ್ಣ ತರಹದ ಯಾವುದಾದರೂ ಸಿನಿಮಾ ಮಾಡುವುದು ಬಿಟ್ಟು, ಈ ಸಾಹಸ ಯಾಕೆ?’ ಎಂದು ಬುದ್ಧಿಮಾತು ಹೇಳಿದರು. ನೆಗೆಟಿವ್ ಮಾತನಾಡುವವರ ಸಹವಾಸವೇ ಬೇಡ ಎಂದುಕೊಂಡು ನಾನು ನನ್ನ ಅಚಲ ನಿರ್ಧಾರಕ್ಕೆ ಅಂಟಿಕೊಂಡೆ. ಈ ಗಾಂಧಿನಗರದ ಪಂಡಿತರು ನನ್ನ ಮನಸ್ಸನ್ನು ಬದಲಾಯಿಸಿಬಿಟ್ಟಾರು ಎಂದುಕೊಂಡು ಅಲ್ಲಿಗೆ ಹೋಗುವುದನ್ನೇ ನಿಲ್ಲಿಸಿದೆ. ಗಾಂಧಿನಗರದಿಂದ ಸ್ವಲ್ಪ ಆಚೆ ಇದ್ದ ಕಚೇರಿಯಲ್ಲೇ ಎಲ್ಲಾ ವ್ಯವಹಾರ ನಡೆಸಲು ತೀರ್ಮಾನಿಸಿದೆ. ಠೇವಣಿ ಇಟ್ಟಿದ್ದೂ ಸೇರಿದಂತೆ ನನ್ನಲ್ಲಿ ಇದ್ದ ಹಣವನ್ನೆಲ್ಲಾ ಸೇರಿಸಿ, ಧೈರ್ಯದಿಂದ ಶಿವಾ ಅಂತ ಮುಂದೆ ಹೋದೆ.

ಹಂಸಲೇಖ ಅವರ ಜೊತೆ ಚರ್ಚಿಸಿದೆ. ಹಾಡುಗಳು ಚೆನ್ನಾಗಿ ಬರಬೇಕೆಂದು ಸಂಕಲ್ಪ ಮಾಡಿದೆವು. ಬೆಂಗಳೂರಿನಲ್ಲಿ ಕಂಪೋಸಿಂಗ್ ಪ್ರಾರಂಭಿಸಿ, ಆಮೇಲೆ ಮೈಸೂರಿಗೆ ಹೋದೆವು. ಅಲ್ಲಿ ದಾಸಪ್ರಕಾಶ್ ಹೋಟೆಲ್‌ನಲ್ಲಿ ಕಂಪೋಸಿಂಗ್ ಮುಂದುವರಿಸಿದೆವು. ಕಂಪೋಸ್ ಮಾಡುವ ಒಂದು ದಿನ ಮೊದಲು ನಾವು ಚಿತ್ರರಂಗದ ಗಾಸಿಪ್‌ಗಳನ್ನು ಚರ್ಚಿಸಿ ಹೊಟ್ಟೆತುಂಬಾ ನಗುತ್ತಿದ್ದೆವು. ಹಂಸಲೇಖ ಜೊತೆಯಲ್ಲಿ ಇದ್ದರೆಂದರೆ ನಗುವಿಗೆ ಇನ್ನಷ್ಟು ಅರ್ಥ. ಮಧ್ಯಾಹ್ನ ನಮ್ಮ ತಾಯಿಯ ಕೈರುಚಿ. ಆ ಊಟ ಮಾಡಿದ ಮೇಲೆ ಹಂಸಲೇಖ, ‘ಏನ್ ಸಾರ್, ಹೊಟ್ಟೆ ತುಂಬಾ ರುಚಿಯಾದ ಊಟ ಹಾಕಿದ್ರೆ ಟ್ಯೂನ್ಸ್ ಎಲ್ಲಿ ಬರುತ್ತವೆ... ಬರೀ ನಿದ್ದೆ ಬರುತ್ತೆ’ ಎಂದು ತಮಾಷೆ ಮಾಡುತ್ತಾ ಇದ್ದರು. ಎರಡು ದಿನ ಏನೆಲ್ಲಾ ಸರ್ಕಸ್ ಮಾಡಿದರೂ ಒಳ್ಳೆ ಹಾಡು ಹುಟ್ಟಲಿಲ್ಲ. ಕೊನೆಗೆ ಹಂಸಲೇಖ ಅವರನ್ನು ಮಡಿಕೇರಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದೆ. ಅದು ಮಡಿಕೇರಿಯ ಕಥೆ ಆದದ್ದರಿಂದ ಅಲ್ಲಿಯೇ ಕಂಪೋಸ್ ಮಾಡೋಣ ಎಂದೆ.

ನಾನು, ಹಂಸಲೇಖ ಹಾಗೂ ಅವರ ಸಹಾಯಕರು ಮಡಿಕೇರಿಗೆ ಪ್ರವಾಸ ಬೆಳೆಸಿದೆವು. ಮಹಾರಾಜ ಕಾಲೇಜಿನಲ್ಲಿ ಓದುವಾಗ ಕೊಡಗಿನ ಕೆಲವು ಸ್ನೇಹಿತರಿದ್ದರು. ಅವರಲ್ಲಿ ಕೆಲವರನ್ನು ಭೇಟಿ ಮಾಡಿ, ಕೊಡಗಿನ ಸಂಸ್ಕೃತಿಯ ಬಗ್ಗೆ ಕೇಳಿದೆವು. ಒಬ್ಬ ಸ್ನೇಹಿತನನ್ನು, ‘ಕೊಡಗಿನ ಹಾಡುಗಳು ಏನಾದರೂ ಇದ್ದರೆ ಹೇಳಪ್ಪಾ’ ಎಂದು ಕೇಳಿದೆವು. ಅವನು ತನ್ನ ಊರಿನ ಮಹಿಳೆಯರನ್ನು ಕರೆದುಕೊಂಡು ಬಂದು, ಆ ನೆಲದ ಕೆಲವು ಹಾಡುಗಳನ್ನು ಹಾಡಿಸಿದ. ಒಂದು ಹಾಡಿನಲ್ಲಿ ‘ಮಡಿಕೇರಿ ಸಿಪಾಯಿ’ ಎಂದು ಇತ್ತು. ನಾನು, ಹಂಸಲೇಖ ತಕ್ಷಣ ಈ ಸಾಲು ಚೆನ್ನಾಗಿದೆ ಎಂದು ಹೆಕ್ಕಿ, ಮಡಿಕೇರಿ ‘ಸಿಪಾಯಿ ಮುತ್ತು ತಾತು ಮರೇಲಿ’ ಎಂದು ಕೊಡಗಿನ ಭಾಷೆಯಲ್ಲಿ ಹಾಡು ಸಿದ್ಧಪಡಿಸಿದೆವು. ಆ ಹಾಡನ್ನು ಕಂಪೋಸ್ ಮಾಡಿದ ಮೇಲೆ ನಮಗೆ ತುಂಬಾ ಸಂತೋಷವಾಯಿತು.

1945ರ ಕಾಲದ ವಾದ್ಯ ಸಂಯೋಜನೆಯ ಹಾಡುಗಳೇ ಇರಬೇಕು ಎಂದು ನಾನು ಪಟ್ಟು ಹಿಡಿದಾಗ, ಹಂಸಲೇಖ ಅದಕ್ಕೂ ಒಲ್ಲೆ ಎನ್ನಲಿಲ್ಲ. ಅದೇ ರೀತಿಯ ಹಾಡನ್ನು ಕಂಪೋಸ್ ಮಾಡಿದರು. ‘ಸಾರ್ ಇನ್ನು ಮೇಲೆ ನಿಮ್ಮ ಸಿನಿಮಾ ಹಾಡುಗಳ ಕಂಪೋಸಿಂಗ್‌ಗೆ ಒಂದು ತಿಂಗಳು ರಿಸರ್ವ್‌ ಮಾಡಿಬಿಡುತ್ತೇನೆ’ ಎಂದರು. ‘ಬಣ್ಣದ ಗೆಜ್ಜೆ’ ಸಿನಿಮಾದ ಹಾಡಿಗಾಗಿ ನಾವು ದೆಹಲಿ, ತಾಜ್‌ಮಹಲ್ ಎಲ್ಲಾ ಅಡ್ಡಾಡಿದ್ದೆವು. ಬಟ್ಟೆಗಳನ್ನೇ ತೆಗೆದುಕೊಳ್ಳದೆ ಬಂದಿದ್ದ ಹಂಸಲೇಖ ಅವರನ್ನು ನಾಲ್ಕೈದು ದಿನ ಅಲ್ಲೆಲ್ಲಾ ಸುತ್ತಾಡಿಸಿದ್ದನ್ನು ನೆನಪಿಸಿಕೊಂಡು ಅವರು ಹಾಗೆ ಹೇಳಿದ್ದರು. ‘ಬಣ್ಣದ ಗೆಜ್ಜೆ’ ಸಿನಿಮಾದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹುಟ್ಟಿದ್ದೇ ದೆಹಲಿ, ಆಗ್ರಾದಲ್ಲಿ. ಹಂಸಲೇಖ ತಮ್ಮ ಹೆಂಡತಿಯ ಜೊತೆಯಲ್ಲಿಯೇ ಆಗ್ರಾ ನೋಡಬೇಕು ಎಂದುಕೊಂಡಿದ್ದರಂತೆ. ನನ್ನ ಕಾರಣಕ್ಕೆ ತಮ್ಮ ನಿರ್ಧಾರವನ್ನು ಅವರು ಮುರಿದಿದ್ದರು. ‘ನೀವೇ ಬಂದು ನನ್ನ ಹೆಂಡತಿಗೆ ಸಮಾಧಾನ ಹೇಳಿ, ಅವಳು ಬೇಜಾರು ಮಾಡಿಕೊಳ್ಳುತ್ತಾಳೆ’ ಎನ್ನುತ್ತಾ ಅವರಾಗ ಜೋರಾಗಿ ನಕ್ಕಿದ್ದರು.

ಬೆಂಗಳೂರಿಗೆ ಬಂದು ‘ಮಡಿಕೇರಿ ಸಿಪಾಯಿ’ ಹಾಡನ್ನು ಧ್ವನಿಮುದ್ರಣ ಮಾಡಿಕೊಳ್ಳಲು ದಿನ ನಿಗದಿಪಡಿಸಿದೆವು. ಆವತ್ತು ನನಗೆ ರೆಕಾರ್ಡಿಂಗ್ ಥಿಯೇಟರ್‌ಗೆ ಹೋಗಲು ಸಾಧ್ಯವಾಗಲಿಲ್ಲ. 104 ಡಿಗ್ರಿ ಜ್ವರ. ನನ್ನ ಮನಸ್ಸೆಲ್ಲಾ ಅಲ್ಲಿಯೇ ಇತ್ತು. ಹಂಸಲೇಖ ರಾತ್ರಿ 10 ಗಂಟೆಗೆ ಟೇಪ್‌ರೆಕಾರ್ಡರ್‌ನಲ್ಲಿ ಆ ಹಾಡನ್ನು ಕೇಳಿಸಿದರು. ನಾನು ಭಾರತದ ಅನೇಕ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೆ. ಆರ್.ಡಿ. ಬರ್ಮನ್, ಲಕ್ಷ್ಮೀಕಾಂತ್ ಪ್ಯಾರೆಲಾಲ್, ಇಳಯರಾಜ ಹೀಗೆ. ಆದರೆ, ‘ಮಡಿಕೇರಿ ಸಿಪಾಯಿ’ ಹಾಡು ಅದ್ಭುತವಾಗಿತ್ತು. ಅದರ ಸ್ವರ ಸಂಯೋಜನೆ, ವಾದ್ಯ ಸಂಯೋಜನೆ, ಲಯ ಎಲ್ಲವೂ ಸೊಗಸಾಗಿದ್ದವು. ವಿಷ್ಣು ಕೂಡ ಆ ಹಾಡು ಕೇಳಿದ್ದೇ ಹಂಸಲೇಖ ಅವರಿಗೆ ಖುಷಿಯಿಂದ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದ್ದ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಮೆರಿಕದಲ್ಲಿ ‘ಒನ್ಸ್ ಮೋರ್’ ಮೊರೆಗೆ ಓಗೊಟ್ಟು ನಾಲ್ಕು ಸಲ ಈ ಹಾಡನ್ನು ಹಾಡಿದ ಸಂಗತಿಯನ್ನು ಈ ಹಿಂದೆಯೂ ನಾನು ಬರೆದಿದ್ದೇನೆ.

ಈ ಹಾಡು ಆದಮೇಲೆ ‘ದೇವರು ಹೊಸೆದ’ ಹಾಡನ್ನು ಕಂಪೋಸ್ ಮಾಡಿದೆವು. ನಾನು, ಹಂಸಲೇಖ ಕೂತು ಸುಮಾರು ಎರಡು ದಿನ ಈ ಹಾಡು ಬರೆದೆವು. ಆಗ ವಿ. ಮನೋಹರ್ ಸಹ ಜೊತೆಯಲ್ಲಿ ಇದ್ದರು. ಸಾಹಿತ್ಯ ಒಂದು ಹದಕ್ಕೆ ಬಂದಮೇಲೆ ಯಾರಿಂದ ಹಾಡಿಸಬಹುದು ಎಂಬ ಯೋಚನೆ ಬಂತು. ಜೇಸುದಾಸ್, ಎಸ್‌ಪಿಬಿ ಬೇಡ, ಮನ್ನಾಡೆ ಇಲ್ಲ ಎಂದೆಲ್ಲಾ ಮಾತನಾಡಿಕೊಂಡೆವು. ನನ್ನ ತಲೆಯಲ್ಲಿ ಬಾಲಮುರಳಿಕೃಷ್ಣ ಅವರ ಹೆಸರು ಹೊಳೆಯಿತು. ಒಂದೇ ಸೆಕೆಂಡ್‌ನಲ್ಲಿ ಹಂಸಲೇಖ ‘ಯೆಸ್’ ಎಂದರು. ಮದ್ರಾಸಿನಲ್ಲಿದ್ದ ಬಾಲಮುರಳಿಕೃಷ್ಣ ಅವರ ಆಪ್ತ ಕಾರ್ಯದರ್ಶಿಯನ್ನು ಸಂಪರ್ಕಿಸಿ ನಮ್ಮ ಹಾಡಿನ ಬಗ್ಗೆ ಹೇಳಿದೆವು. ಆ ದಿನ ಸಂಜೆ ಫೋನ್ ಮಾಡುವಂತೆ ತಿಳಿಸಿದ ಅವರು, ಕೊನೆಗೆ ಸಿನಿಮಾ ಹಾಡನ್ನು ಈಗ  ಬಾಲಮುರಳಿಕೃಷ್ಣ ಅವರು ಹಾಡುವುದಿಲ್ಲ ಎಂದುಬಿಟ್ಟರು. ನಾವಿಬ್ಬರು ಮಾತ್ರ ಪಟ್ಟು ಬಿಡಲಿಲ್ಲ.

ಮುಂದಿನ ವಾರ: ಬೆನ್ನು ತಟ್ಟಿದ ಬಾಲಮುರಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT