ಗುರುವಾರ, 29 ಆಗಸ್ಟ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುತ್ತಿನಹಾರದ ಉಡುಗೆ ತೊಡುಗೆ ಕಥನ

Last Updated 16 ಮೇ 2015, 19:30 IST
ಅಕ್ಷರ ಗಾತ್ರ

‘ಮುತ್ತಿನಹಾರ’ದ ಮುಹೂರ್ತ ಆದಮೇಲೆ ಮುಂದಿನ ಕಾರ್ಯ ಗಳಿಗೆ ಸಿದ್ಧ ಮಾಡಿಕೊಳ್ಳತೊಡಗಿದೆ. ಚಿತ್ರೀಕರಣಕ್ಕೆ ಮೊದಲೇ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳುವುದು ನನ್ನ ಜಾಯಮಾನ. ಕೊನೆ ಗಳಿಗೆಯಲ್ಲಿ ಒಂದೊಂದೇ ಹುಡುಕಿಕೊಳ್ಳುತ್ತಾ ಕೂತರೆ ಕೆಲಸ ಸಾಂಗವಾಗಿ ನಡೆಯುವುದಿಲ್ಲ ಎಂದು ನಂಬಿದವನು ನಾನು. ಅದರಲ್ಲೂ ‘ಮುತ್ತಿನಹಾರ’ದಂಥ ವಸ್ತುವಿನ ಸಿನಿಮಾಗೆ ಇನ್ನೂ ಹೆಚ್ಚು ತಯಾರಿಯ ಅಗತ್ಯವಿತ್ತು. ಯಾಕೆಂದರೆ, 1965ರ ಕಾಲಘಟ್ಟದಿಂದ ಸಿನಿಮಾ ಪ್ರಾರಂಭವಾಗುವುದು.

ಉಡುಗೆ-ತೊಡುಗೆ ಎಲ್ಲವನ್ನೂ ಸಿದ್ಧಪಡಿಸುವುದು ದೊಡ್ಡ ಪ್ರಕ್ರಿಯೆಯೇ ಆಗಿತ್ತು. ಅದಕ್ಕೇ ನಾನು ಸುಮಾರು ಏಳು ಸಹಾಯಕ ನಿರ್ದೇಶಕರನ್ನು ನೇಮಿಸಿಕೊಂಡಿದ್ದೆ. ಮುಖ್ಯವಾಗಿ ರಾಮನಾಥ್, ಶ್ರೀನಿವಾಸ್ ಹಾಗೂ ಹ.ಸೂ.ರಾಜಶೇಖರ್. ಈ ಮೂವರು ಹಲವು ಗ್ರಂಥಾಲಯಗಳಿಗೆ ಹೋಗಿ, ಪುಸ್ತಕಗಳಿಂದ ಸಾವಿರಾರು ಫೋಟೊಗಳನ್ನು ಸಂಗ್ರಹಿ ಸಿದರು. ಅವುಗಳಲ್ಲಿ ನಮಗೆ ಬೇಕಾದ, ನಮ್ಮ ಕಥೆಗೆ-ಸನ್ನಿವೇಶಗಳಿಗೆ ಹೊಂದುವಂಥ ಫೋಟೊಗಳನ್ನು ಆಯ್ಕೆ ಮಾಡಿದೆವು. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿಯೇ ಉಡುಗೆ ಮತ್ತಿತರ ಪರಿಕರಗಳನ್ನು ಹೊಂದಿಸಿಕೊಂಡೆವು. ಕಲಾ ನಿರ್ದೇಶಕ ಜಾನ್ ದೇವರಾಜ್ ಹಾಗೂ ಜಯರಾಮು ಎಂಬುವವರು ರಾತ್ರಿ-ಹಗಲು ಕೆಲಸ ಮಾಡಿ ಎಲ್ಲಾ ಪರಿಕರಗಳನ್ನು ಹೊಂದಿಸಿದರು.

ರವಿಚಂದ್ರನ್ ನಾಯಕರಾಗಿದ್ದ ‘ಬಣ್ಣದ ಗೆಜ್ಜೆ’ ಸಿನಿಮಾ ಚಿತ್ರೀಕರಣವನ್ನೂ ಅದೇ ಸಂದರ್ಭದಲ್ಲಿ ನಡೆಸುತ್ತಿದ್ದೆ. ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ಒಟ್ಟಾಗಿ ತಯಾರಾದ ಸಿನಿಮಾ ಅದು. ಆದ್ದರಿಂದ ಎರಡೆರಡು ಕೆಲಸಗಳ ಕಡೆ ಗಮನ ಕೊಡುವ ಉಸಾಬರಿ ಯನ್ನು ಮೈಮೇಲೆ ಎಳೆದುಕೊಂಡಿದ್ದೆ. ನನ್ನ ಆತಂಕವನ್ನೆಲ್ಲಾ ಕಡಿಮೆ ಮಾಡಿದವರು ಸಹಾಯಕ ನಿದೇಶಕರು. ಅವರೆಲ್ಲಾ ತುಂಬಾ ಕಷ್ಟಪಟ್ಟು ಉಡುಗೆ-ತೊಡುಗೆಗಳ ವಿನ್ಯಾಸಕ್ಕೆ ಮಾದರಿಗಳನ್ನು ಹುಡುಕಿದರು. ಮನೆ ದೃಶ್ಯಗಳಿಗೆ ಬರ್ಮಾದಿಂದ ಬಿದಿರಿನ ಕುರ್ಚಿಗಳು ಬಂದವು.

ಪಾತ್ರೆ–ಪಡಗ, ಮೇಜು ಕುರ್ಚಿಗಳನ್ನೂ ಬರ್ಮಾದಿಂದಲೇ ತರಿಸಿದೆವು. 1945ನೇ ಇಸವಿಯಲ್ಲಿ ಯುದ್ಧದಲ್ಲಿ ಕೆಲಸ ಮಾಡಿದ ನರ್ಸ್ ಒಬ್ಬರ ಮನೆಗೆ ಹೋಗಿ, ಅವರ ಫೋಟೊಗಳನ್ನು ತಂದೆವು. ಅವರ ವಸ್ತ್ರವಿನ್ಯಾಸ ನೋಡಿಕೊಂಡೇ ನರ್ಸ್‌ಗಳ ಉಡುಗೆ ತೊಡುಗೆಗಳನ್ನು ಸಿದ್ಧಪಡಿಸಿದೆವು. ಕೊಡಗಿನ ಒಬ್ಬರ ಮನೆಗೆ ಹೋಗಿ, ಅವರ ಬಳಿ ಇದ್ದ 100 ವರ್ಷದಷ್ಟು ಹಳೆಯ ಆಭರಣಗಳನ್ನು ಪತ್ತೆಹಚ್ಚಿದೆವು. ಗುಜರಿ ಅಂಗಡಿಗೆ ಹೋಗಿ ಹಳೆ ಮಂಚಗಳನ್ನು ತಂದು, ಅವಕ್ಕೆ ಬಟ್ಟೆಯಿಂದ ಮಿಲಿಟರಿ ಬಣ್ಣ ಬರುವಂತೆ ಕವಚ ಮಾಡಿಸಿದೆವು. ಬಿಳಿ ಸೊಳ್ಳೆಪರದೆಯನ್ನು ತಂದು, ಅದಕ್ಕೆ ಮಿಲಿಟರಿ ಬಣ್ಣ ಹಾಕಿಸಿದೆವು. ಸುಮಾರು 100 ಮಂಚ, 100 ಸೊಳ್ಳೆಪರದೆಗಳನ್ನು ಸಿದ್ಧಪಡಿಸಿದ್ದೆವು.

ಆ ಕಾಲದ ಬ್ರಿಟಿಷ್ ಧ್ವಜವನ್ನು ಕೂಡ ತಯಾರಿಸಿ, ಯುದ್ಧ ವಿರೋಧಿ ಫೋಟೊಗಳನ್ನು, ಹಿಟ್ಲರ್ ವಿರೋಧಿ ಘೋಷಣೆಗಳನ್ನು ಜೆರಾಕ್ಸ್ ಮಾಡಿಸಿ ತಂದು ಆಸ್ಪತ್ರೆಯ ದೃಶ್ಯಗಳಲ್ಲಿ ಅವನ್ನೆಲ್ಲಾ ಬಿಂಬಿಸಿದೆವು. ಆ ಕಾಲದ ಬ್ರಿಟಿಷ್ ಆಸ್ಪತ್ರೆಗಳು ಹೇಗಿದ್ದವೋ ಹಾಗೆಯೇ ದೃಶ್ಯಗಳಲ್ಲಿ ಮೂಡಿಸಲು ಇಂಥ ಸಣ್ಣಪುಟ್ಟ ಸೂಕ್ಷ್ಮಗಳನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿದ್ದೆವು. ಬ್ರಿಟನ್‌ನ ಕೆಲವು ಪ್ರಜೆಗಳನ್ನು ಕರೆಸಿ, ಅಧಿಕಾರಿಗಳ ಪಾತ್ರಗಳನ್ನು ಸೃಷ್ಟಿಸಿ ಚಿತ್ರೀಕರಣ ನಡೆಸಿದೆವು. ನಮ್ಮ ಕೆಲವು ನಟರನ್ನು ಆಯ್ಕೆ ಮಾಡಿ, ಅವರನ್ನು ಕಾಶ್ಮೀರಕ್ಕೆ ಕರೆದುಕೊಂಡು ಹೋದೆವು. ಅಲ್ಲಿ ಚೀನಾ ಭಾಗದ ಶೂಟಿಂಗ್. ನಮ್ಮ ದೇಶಕ್ಕೆ ಅಪಮಾನ ಮಾಡುವಂಥ ಸಂಭಾಷಣೆ ಯನ್ನು ಹೇಳುವುದಿಲ್ಲ ಎಂದು ಅವರೆಲ್ಲಾ ಪಟ್ಟು ಹಿಡಿದರು. ಕನ್ನಡದ ಸಂಭಾಷಣೆಯನ್ನು ಇಂಗ್ಲಿಷ್‌ನಲ್ಲಿ ಬರೆದು ಕೊಟ್ಟು, ಅವರಿಂದ ಅಭಿನಯ ತೆಗೆಸಲು ಪಡಿಪಾಟಲು ಪಟ್ಟಿದ್ದಾಯಿತು. ಅವರಿಗೆ ಕಾಶ್ಮೀರದಲ್ಲಿ ಊಟ-ವಸತಿ ವ್ಯವಸ್ಥೆ ಮಾಡಿ, ಪಂಚತಾರಾ ಸೌಕರ್ಯ ಕೊಟ್ಟೆವು.

ಸ್ವೆಟರ್‌ಗಳು ಕೂಡ ಮಿಲಿಟರಿ ಬಣ್ಣದವೇ ಬೇಕಿದ್ದವು. 10 ಜನ ಟಿಬೆಟ್ಟಿಯರನ್ನು ಕರೆದುಕೊಂಡು ಬಂದು, ನಮ್ಮ ಆಫೀಸ್ ಮನೆಯಲ್ಲಿಯೇ ಅವರಿಗೆ ಸ್ಥಳಾವಕಾಶ ಮಾಡಿಕೊಟ್ಟು, ಸುಮಾರು 100 ಸ್ವೆಟರ್‌ಗಳನ್ನು ಅವರಿಂದ ತಯಾರು ಮಾಡಿಸಿದೆವು. ಮಿಲಿಟರಿ ಯೋಧರಾಗಿ ಅಭಿನಯಿಸುವ 500 ಮಂದಿಗೆ ಬಟ್ಟೆಗಳನ್ನು ಸಿದ್ಧಪಡಿಸುವ ಕೆಲಸ ನಡೆದದ್ದೂ ಅಲ್ಲಿಯೇ. ಆ ಕಚೇರಿಯಲ್ಲಿ ಜಾತ್ರೆಯ ವಾತಾವರಣ. ಎಲ್ಲರಿಗೂ ಅಲ್ಲಿಯೇ ಊಟ–ತಿಂಡಿ ವ್ಯವಸ್ಥೆ ಮಾಡಿದ್ದೆವು. ಕೆಲವರು ರಾತ್ರಿ ಹೇಳದೆ ಕೇಳದೆ ಕೆಲಸ ಬಿಟ್ಟು ಹೋಗುತ್ತಿದ್ದರು. ಬೈಲುಕುಪ್ಪೆಗೆ ಓಡಿಹೋಗಿದ್ದ ಒಬ್ಬರನ್ನು ಹುಡುಕಿ, ಮತ್ತೆ ಕರೆದುಕೊಂಡು ಬಂದು ಸ್ವೆಟರ್‌ ತಯಾರು ಮಾಡಿಸಿದೆವು. ಇವೆಲ್ಲಾ ‘ಮುತ್ತಿನಹಾರ’ದ ಸಣ್ಣ ಸಣ್ಣ ಸಾಹಸಗಳೇ ಹೌದು.

ಕೊನೆಗೆ ವಿಷ್ಣುವಿಗೆ ಬಟ್ಟೆ ಬರೆ, ಗೆಟಪ್‌ಗಳು ಸಿದ್ಧ ಆಗಬೇಕಿದ್ದವು. ಸುಮಾರು 40 ವರ್ಷದ ಅವಧಿಯ ಕಥೆಯ ಸಿನಿಮಾ ಮಾಡಲು ಹೊರಟಿದ್ದೆವಲ್ಲ; ನಾನಾ ರೀತಿಯ ಗೆಟಪ್‌ಗಳು ಬೇಕಿದ್ದವು. ಬರ್ಮಾ ಯುದ್ಧದಲ್ಲಿ ಒಂದು ರೀತಿ, ಮಡಿಕೇರಿಯಲ್ಲಿ ಸಾಂಪ್ರದಾಯಿಕ ಉಡುಪು, ಮರಳುಗಾಡಿನ ವಸ್ತ್ರ, ಕೊನೆಗೆ ಕೊರೆಯುವ ಮಂಜಿನ ಪ್ರದೇಶಕ್ಕೆ ತಕ್ಕಂಥ ಉಣ್ಣೆಯ ಬಟ್ಟೆಗಳು ಇವನ್ನೆಲ್ಲಾ ಪಟ್ಟಿ ಮಾಡಿ ವಿಷ್ಣು ಹತ್ತಿರ ಹೋದೆ. ಮೊದಲಿನಿಂದಲೂ ವಿಷ್ಣುವಿಗೆ ಮೇಕಪ್‌, ಗೆಟಪ್‌ ಅಂದರೆ ಒಂದು ರೀತಿ ಅಲರ್ಜಿ. ‘ವಿಗ್‌ ಯಾಕೆ ಹಾಕಿಕೊಳ್ಳಬೇಕು, ಹಾಗೆಯೇ ಪಾತ್ರ ಅಭಿನಯಿಸಬಹುದಲ್ಲ’ ಎಂದು ಕೇಳುತ್ತಿದ್ದ. ಸ್ಟಿಲ್‌ ಫೋಟೊಗಳನ್ನು ತೆಗೆಸಿಕೊಳ್ಳುವುದೂ ಅವನಿಗೆ ಇಷ್ಟವಿರಲಿಲ್ಲ.

ಫೋಟೊಗ್ರಾಫರ್‌ ಕ್ಯಾಮೆರಾ ಹಿಡಿದು ನಿಂತರೆ, ‘ಏಯ್‌... ಎಲ್ಲಾ ಆ್ಯಕ್ಷನ್‌ನಲ್ಲಿಯೇ ತೆಗೆಯಬೇಕು. ಹೀಗೆ ನಿಲ್ಲಿಸಿ ಫೋಟೊ ತೆಗೆಯುವುದು ಹಳೆಯ ವಿಧಾನ’ ಎನ್ನುತ್ತಿದ್ದ. ನಾನೇ ಅವನ ಬಳಿ ಹೋಗಿ, ‘ಇಲ್ಲಪ್ಪ, ಪಬ್ಲಿಸಿಟಿಗೆ ಸ್ಟಿಲ್‌ಗಳು ಬೇಕಾಗುತ್ತವೆ. ಒಳ್ಳೆಯ ಸ್ಟಿಲ್‌ಗಳು ಇದ್ದರೆ ಪೋಸ್ಟರ್ಸ್‌ ಚೆನ್ನಾಗಿರುತ್ತವೆ’ ಎಂದು ಪುಸಲಾಯಿಸುತ್ತಿದ್ದೆ. ಡಿ.ವಿ.ರಾಜಾರಾಂ ಶಾಟ್‌ ತೆಗೆಯಲು ಅಣಿಯಾಗಿ ನಿಂತಾಗಲೂ ವಿಷ್ಣು ಅವರನ್ನು ಗೋಳು ಹೊಯ್ದುಕೊಳ್ಳುತ್ತಿದ್ದ. ರಾಜಾರಾಂ ಅವರನ್ನು ಅವನು ಅಣ್ಣ ಎಂದು ತಮಾಷೆಗೆ ಕರೆಯುತ್ತಿದ್ದ. ಅವರನ್ನು ಕಂಡರೆ ಭಯವೂ, ಗೌರವವೂ ಇತ್ತೆನ್ನಿ. ಔಟ್‌ಡೋರ್‌ ಚಿತ್ರೀಕರಣದ ಸಂದರ್ಭದಲ್ಲಿ ಬಿಸಿಲಿನಲ್ಲಿ ರಿಫ್ಲೆಕ್ಟರ್‌ಗಳನ್ನು ಹಾಕಿದರೆ ವಿಷ್ಣು ಕೋಪ ಮಾಡಿಕೊಳ್ಳುತ್ತಿದ್ದ. ನಾನು ಸಮಾಧಾನ ಮಾಡಿ, ನೀನು ಚೆನ್ನಾಗಿ ಕಾಣಬೇಕಲ್ಲಪ್ಪ ಎಂದು ಮನವೊಲಿಸುತ್ತಿದ್ದೆ. ರಾತ್ರಿ ಮಳೆಯಲ್ಲಿ ಚಿತ್ರೀಕರಣ ಎಂದರೂ ಉರಿದು ಬೀಳುತ್ತಿದ್ದ. ಎರಡು ದಿನ ಮುಂಚಿತವಾಗಿಯೇ ಅವನನ್ನು ಚಿತ್ರೀಕರಣಕ್ಕೆ ಅಣಿ ಮಾಡಬೇಕಿತ್ತು.

ಮಾನಸಿಕವಾಗಿ ಅವನನ್ನು ಸಜ್ಜುಗೊಳಿಸುವುದೇ ಸವಾಲಾಗಿತ್ತು. ಒಬ್ಬ ನಿರ್ದೇಶಕ ಕಲಾವಿದರನ್ನು ನಿಭಾಯಿಸುವುದೂ ಒಂದು ಕಲೆ. ಕೋಪ ಮಾಡಿಕೊಂಡರೆ, ಸಮಾಧಾನ ಪಡಿಸುವುದು ಹೇಗೆ ಎಂದು ಗೊತ್ತಿಲ್ಲದೆ ಇದ್ದರೆ ಕೆಲಸವೆಲ್ಲಾ ಹಾಳಾಗಿಬಿಡುತ್ತದೆ.
ವಿಷ್ಣುವಿಗೆ ಅವನ ವಸ್ತ್ರಗಳ ಪಟ್ಟಿ ಕೊಟ್ಟ ಮೇಲೆ, ‘ಇನ್ನೇನೂ ಬಾಕಿ ಇಲ್ಲವೇನೋ?’  ಎಂದು ಕೇಳಿದ. ಹಾಡುಗಳಿಗೆ ಬೇರೆ ಕಾಸ್ಟ್ಯೂಮ್‌ ಗಳು ಬೇಕಿದ್ದು, ಆ ಕುರಿತು ಆಮೇಲೆ ಯೋಚಿಸೋಣ ಎಂದೆ. ಅವನಿಗೆ ಸದಾ ಕಾಸ್ಟ್ಯೂಮ್ಸ್‌ ಒದಗಿಸುತ್ತಿದ್ದವರನ್ನು ಈ ಸಿನಿಮಾಗೆ ನಿಯೋಜಿಸಿಕೊಳ್ಳುವುದು ಬೇಡ, ಮಿಲಿಟರಿ ಕಾಸ್ಟ್ಯೂಮ್ಸ್‌ ಹೊಲಿಯುವವರನ್ನೇ ಕರೆಸೋಣ ಎಂದೂ ಹೇಳಿದೆ. ಗೆಟಪ್‌, ಮೇಕಪ್‌ ಎಲ್ಲವನ್ನೂ ಮುಂಬೈನ ನುರಿತರಿಂದ ಮಾಡಿಸಲು ನಿರ್ಧರಿಸಿದೆ. ಅಮಿತಾಭ್‌ ಬಚ್ಚನ್‌, ಸಂಜೀವ್‌ ಕುಮಾರ್‌ ಮೊದಲಾದವರಿಗೆ ಗೆಟಪ್‌, ಮೇಕಪ್‌ ಮಾಡುತ್ತಿದ್ದವರನ್ನು ಸಂಪರ್ಕಿಸಿ ಟ್ರಯಲ್‌ ನೋಡಿ ಬಂದೆವು. ಆಗ ವಿಷ್ಣುವಿಗೆ ಗೊತ್ತಾಯಿತು ಮೇಕಪ್‌ನ ಕೆಲಸ ಅದ್ಭುತವಾದದ್ದು ಎಂದು.

ಆ ಕಾಸ್ಟ್ಯೂಮ್‌ಗಳು ಹಾಗೂ ವಿಗ್‌ ಅನ್ನು ಹಾಕಿದಾಗ ವಿಷ್ಣು  ಅವನಾಗಿರಲಿಲ್ಲ, ಮೇಜರ್‌ ಕಾವೇರಿಯಪ್ಪ ಆಗಿದ್ದ. ನಟ–ನಟಿಯರಿಗೆ ವಸ್ತ್ರ ಸರಿ ಇದ್ದಾಗ ಅವರವರ ಪಾತ್ರಗಳಲ್ಲಿ ಮುಳುಗಿಹೋಗುತ್ತಾರೆ. ಅದು ಸರಿ ಇಲ್ಲದಿದ್ದರೆ ಮನಸ್ಸಿನಲ್ಲಿ ಒಂದು ರೀತಿಯ ಅಳುಕು ಇರುತ್ತದೆ. ವಿಷ್ಣುವಿನ ಮೇಕಪ್‌ ಮ್ಯಾನ್‌ ಹೆಸರು ಶ್ರೀನಿವಾಸಣ್ಣ. ಅವರು ಬಹಳ ವರ್ಷ ಭಾರತಿಯವರಿಗೆ ಮೇಕಪ್‌ ಮ್ಯಾನ್‌ ಆಗಿದ್ದವರು. ಆಮೇಲೆ ವಿಷ್ಣುವಿಗೂ ಅವರೇ ಮೇಕಪ್‌ ಮಾಡಲು ಆರಂಭಿಸಿದರು. ವಿಷ್ಣು ತಕರಾರು ಮಾಡಿದಾಗಲೆಲ್ಲಾ ಅವರು ನನ್ನ ಬಳಿ ಬಂದು, ‘ಸಾರ್‌ ನೀವು ಒಂದು ಮಾತು ಹೇಳಿ, ಅವರು ಕೇಳುತ್ತಾರೆ’ ಎನ್ನುತ್ತಿದ್ದರು.

‘ಮುತ್ತಿನಹಾರ’ ಸಿನಿಮಾ ಚಿತ್ರೀಕರಣ ಶುರುವಾದ ಮೇಲೆ ವಿಗ್‌ ಹಾಕಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದ. ಆಗ ನಾನು, ಸುಹಾಸಿನಿ ಒಂದು ಗಂಟೆ ಚರ್ಚೆ ನಡೆಸಿದೆವು. ವಿಗ್‌, ಮೇಕಪ್‌ ಎಲ್ಲವೂ ಪಾತ್ರದ ಭಾಗಗಳು. ಅವು ಅನಿವಾರ್ಯ. ವಿಗ್‌ ಹಾಕಿಕೊಂಡರೆ ಒಂದು ತರಹ ಹಿಂಸೆಯಾಗುತ್ತದೆ ಎನ್ನುವುದು ನನಗೂ ಗೊತ್ತಿತ್ತು. ಅದಕ್ಕೆ ಸ್ಪಿರಿಟ್‌ ಗಮ್‌, ಪಿನ್‌ಗಳನ್ನೆಲ್ಲಾ ಹಾಕುವುದರಿಂದ ಕಿರಿಕಿರಿ ಆಗುತ್ತದೆ. ಆದರೆ ಪಾತ್ರದ ನೈಜತೆಯ ದೃಷ್ಟಿಯಿಂದ ಅದು ಬೇಕೇ ಬೇಕು.

ವಿಷ್ಣು ಒಂದು ರೀತಿ ಮಗುವಿನ ತರಹ. ಹಟ ಮಾಡುವ ಮಗುವಿಗೆ ಚಾಕೊಲೇಟ್ ಕೊಟ್ಟರೆ ಅದು ಸುಮ್ಮನಾಗುತ್ತದೆ. ಹಾಗೆಯೇ ಅವನೂ ಸಿಹಿಮಾತು ಹೇಳಿದರೆ, ಮನಸ್ಸು ಬದಲಿಸಿಕೊಳ್ಳುತ್ತಿದ್ದ. ಚಿತ್ರೀಕರಣ ಆದಮೇಲೆ ಬೆಳಿಗ್ಗೆ ನಡೆದ ಎಲ್ಲಾ ಘಟನೆಗಳನ್ನು ಮರೆತು ನಮ್ಮ ಜೊತೆ ಸಂತೋಷದಿಂದ ಸಮಯ ಕಳೆಯುವುದು ವಿಷ್ಣುವಿನ ಇನ್ನೊಂದು ದೊಡ್ಡ ಗುಣ.

ಮುಂದಿನ ವಾರ: ಈ ಬಟ್ಟೆಗಳನ್ನು ಬಾಬುವಿಗೆ ಹಾಕಿ ಎಂದ ವಿಷ್ಣು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT