ಗುರುವಾರ, 29 ಆಗಸ್ಟ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಕ್ಕು ಬಿಡಿಸಿಕೊಂಡ ‘ಮುತ್ತಿನ ಹಾರ’

Last Updated 18 ಏಪ್ರಿಲ್ 2015, 20:38 IST
ಅಕ್ಷರ ಗಾತ್ರ

ಮುಂಬೈನಲ್ಲಿ ಕೆಲಸ ಮುಗಿಸಿದ ಮೇಲೆ ನಾನು, ಸುಬ್ಬರಾಯರು ‘ಮುತ್ತಿನಹಾರ’ದ ಎರಡನೇ ವರ್ಷನ್‌  ಅನ್ನು ಮೈಸೂರಿನಲ್ಲಿ ಬರೆದೆವು. ಮತ್ತೆ ನಾಲ್ಕೈದು ತಿಂಗಳು ಅದಕ್ಕೆಂದು ವಿನಿಯೋಗವಾಯಿತು.

ಕಥೆಯನ್ನು ಅಲ್ಲಲ್ಲಿ ತಿದ್ದುವುದು ಮುಂದುವರಿದಿತ್ತು. ಇನ್ನೇನು ಅಂತಿಮ ರೂಪ ಸಿಕ್ಕಿತು ಎಂಬ ಖುಷಿಯಲ್ಲಿ ನಾವಿದ್ದೆವು. ಆಗ ಪತ್ರಿಕೆಯೊಂದರಲ್ಲಿ ಒಂದು ಬರಹ ಪ್ರಕಟಗೊಂಡಿತ್ತು. ಅಬ್ಬಯ್ಯನಾಯ್ಡು ಅವರ ಒಂದು ಸಿನಿಮಾಗೆ ಸುಹಾಸಿನಿ ಸಹಿ ಹಾಕಿದ್ದಾರೆ ಎಂಬ ಸುದ್ದಿ ಅದು. ಅದನ್ನು ಓದಿದ್ದೇ ನನ್ನ ಎದೆ ಒಡೆದುಹೋದಂತಾಯಿತು. ನಿರ್ದೇಶಕನಾಗಿ ನಾನು ‘ಮುತ್ತಿನಹಾರ’ದ  ನಾಯಕಿಯ ಜಾಗದಲ್ಲಿ ಸುಹಾಸಿನಿಯನ್ನೇ ಕಲ್ಪಿಸಿಕೊಂಡು ಚಿತ್ರಕಥೆ ಸಿದ್ಧಪಡಿಸಿದ್ದೆ. ನಾಯಕನ ಸ್ಥಾನದಲ್ಲಿ ವಿಷ್ಣು, ನಾಯಕಿಯಾಗಿ ಸುಹಾಸಿನಿ ಸಾಮರ್ಥ್ಯ ಏನು, ಅವರಿಬ್ಬರ ಪಾತ್ರಗಳನ್ನು ಎಷ್ಟರ ಮಟ್ಟಿಗೆ ಬೆಳೆಸಬೇಕು ಇತ್ಯಾದಿ ಆಯಾಮಗಳನ್ನು ಕುರಿತು ಕಥೆ ಬರೆಯುವಾಗಲೇ ಚರ್ಚಿಸಿದ್ದೆವು. ಆ ಸುದ್ದಿ ಓದಿದ್ದೇ, ಕಥೆಗೆ ಅಂತಿಮ ಸ್ಪರ್ಶ ನೀಡುವ ಕೆಲಸವನ್ನೂ ನಿಲ್ಲಿಸಿಬಿಟ್ಟೆವು. ಸುಹಾಸಿನಿ ಇಲ್ಲದೆ ಈ ಸಿನಿಮಾ ಮಾಡೋದು ಕಷ್ಟ ಎಂದು ಸುಬ್ಬರಾಯರು ಹೇಳಿದರು. ನನ್ನ ಅಭಿಪ್ರಾಯ ಕೂಡ ಅದೇ ಆಗಿತ್ತು.

ಕೆಲಸ ನಿಲ್ಲಿಸಿ, ಬೆಂಗಳೂರಿಗೆ ಹೊರಟೆ. ಸುಹಾಸಿನಿ ನಂಬರ್‌ಗೆ ಫೋನ್‌ ಮಾಡಿದರೆ ಅವಳು ಎತ್ತಲಿಲ್ಲ. ವಿಷ್ಣು ಹತ್ತಿರ ಹೋಗಿ ಹೇಳಿದೆ. ಅವನಿಗೂ ಬಹಳ ಬೇಜಾರಾಯಿತು. ‘ನೀನು ಟೆನ್ಷನ್‌ ಮಾಡಿಕೋಬೇಡ, ನಾನು ಮಾತನಾಡುತ್ತೀನಿ’ ಎಂದು ಅವನು ನನ್ನನ್ನು ಸಮಾಧಾನ ಮಾಡಿದ. ಸಿನಿಮಾದ ನಾಯಕನಾದ ವಿಷ್ಣು, ಸುಹಾಸಿನಿ ಹತ್ತಿರ ಹೋಗಿ ಮಾತನಾಡುವುದು ನಿರ್ದೇಶಕನಾಗಿ ನನಗೆ ಇಷ್ಟವಿರಲಿಲ್ಲ.

ಪ್ರತಿಯೊಬ್ಬರ ಘನತೆಯನ್ನು ಗೌರವಿಸಬೇಕು ಎನ್ನುವುದು ನನ್ನ ನಂಬಿಕೆಯಾಗಿತ್ತು. ರೆಡ್ಡಿ ಎಂಬ ಒಬ್ಬರು ಸುಹಾಸಿನಿಯ ಸೆಕ್ರೆಟರಿ ಇದ್ದರು. ಅವರಿಗೆ ಫೋನ್‌ ಮಾಡಿ, ಸುಹಾಸಿನಿ ಎಲ್ಲಿ ಎಂದು ವಿಚಾರಿಸಿದೆ. ಒಂದು ತೆಲುಗು ಸಿನಿಮಾ ಚಿತ್ರೀಕರಣಕ್ಕೆ ಅವರು ಮೈಸೂರಿಗೆ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ ರೆಡ್ಡಿ, ಅಲ್ಲಿಯೇ ಆಕೆಯನ್ನು ಭೇಟಿ ಮಾಡಬಹುದು ಎಂದು ಹೇಳಿದರು. ಆ ದಿನ ಸರಿಯಾಗಿ ಮೈಸೂರಿನಲ್ಲಿ ಸುಹಾಸಿನಿಯನ್ನು ಭೇಟಿ ಮಾಡಲು ಹೋದೆ.

ಅದುವರೆಗೆ ನಾವು ಸಿದ್ಧಪಡಿಸಿದ್ದ ಸ್ಕ್ರಿಪ್ಟನ್ನು ಅವಳ ಕೈಗೆ ಕೊಟ್ಟು, ನಿನಗೆ ಜೀವನದಲ್ಲಿಯೇ ಇಂಥ ಪಾತ್ರ ಸಿಗುವುದಿಲ್ಲ. ನಾನು ‘ಮುತ್ತಿನಹಾರ’ ಸಿನಿಮಾ ಮಾಡುವುದೇ ಇಲ್ಲ ಎಂದು ಹೇಳೋಣ ಎಂದು ನಿರ್ಧರಿಸಿದೆ. ಅವಳು ಮೈಸೂರಿನ ಚಿತ್ರೀಕರಣ ಸ್ಥಳದಲ್ಲಿ ಇರಲಿಲ್ಲ. ಬೆಂಗಳೂರಿಗೆ ಶೂಟಿಂಗ್‌ ಶಿಫ್ಟ್‌ ಆಗಿತ್ತು. ಹಾಗಾಗಿ ಅಲ್ಲಿಗೆ ಹೋಗಿದ್ದಳು. ಕೈಯಲ್ಲಿ ಇದ್ದ ‘ಮುತ್ತಿನಹಾರ’ರ ಚಿತ್ರಕಥೆ ಮೇಲೆ ಒಮ್ಮೆ ಕಣ್ಣಾಡಿಸಿದೆ. ಅದು ಸಿನಿಮಾ ಆಗುವುದೋ, ಇಲ್ಲವೋ ಎಂಬ ಗೊಂದಲ ಮನಸ್ಸನ್ನು ಆವರಿಸಿತ್ತು.

ಮನೆಗೆ ಹೋಗಿ, ನನ್ನ ಬ್ರೀಫ್‌ಕೇಸ್‌ ತೆಗೆದೆ. ಅದರೊಳಗೆ ಸ್ಕ್ರಿಪ್ಟನ್ನು ಇಟ್ಟೆ. ಮನಸ್ಸಿಗೆ ಬೇಸರವಾಗಿತ್ತು. ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋದೆ. ಸುಬ್ಬರಾಯರನ್ನು ಬೆಂಗಳೂರಿಗೆ ಕಳುಹಿಸಿ, ದೇವರ ಮೇಲೆ ಭಾರ ಹಾಕಿ ಸುಮ್ಮನಾಗಿಬಿಟ್ಟೆ. ವಿಷ್ಣುವಿಗೆ ಒಂದು ಫೋನ್‌ ಮಾಡಿದೆ. ಅವನೂ ‘ಒಳ್ಳೆಯದಾಗುತ್ತದೆ, ಚಿಂತಿಸಬೇಡ’ ಎಂದು ಸಮಾಧಾನಪಡಿಸಿದ. ಚಿತ್ರಕಥೆ ಇದ್ದ ಬ್ರೀಫ್‌ಕೇಸ್‌ ತೆಗೆದುಕೊಂಡು ಮೈಸೂರಿನಿಂದ ಬೆಂಗಳೂರಿಗೆ ಹೊರಟೆ.

ಬೆಂಗಳೂರು ತಲುಪಿದ್ದೇ ಮೊದಲು ವಿಷ್ಣು ಮನೆಗೆ ಹೋಗಿ, ಮನಸ್ಸಿನ ವೇದನೆಯನ್ನು ಹೇಳಿಕೊಂಡೆ. ವಿಷ್ಣು ತಾನೇ ಸುಹಾಸಿನಿ ಜೊತೆ ಮಾತನಾಡುವುದಾಗಿ ಮತ್ತೆ ಹೇಳಿದ. ನನಗೆ ಅದು ಇಷ್ಟವಿರಲಿಲ್ಲ. ಬೇಡ ಎಂದು ಅವನನ್ನು ಸುಮ್ಮನಾಗಿಸಿ, ನಾನೇ ವುಡ್‌ಲ್ಯಾಂಡ್ಸ್‌ ಹೋಟೆಲ್‌ಗೆ ಹೋದೆ.

ಲಿಫ್ಟ್‌ನಲ್ಲಿ ಹೋಗುವಾಗ, ನಾನು ‘ಬಂಧನ’ ಸಿನಿಮಾ ಮೂಲಕ ಮೊದಲ ಸಲ ನಾಯಕಿಯಾಗಿ ನೋಡಿದ ಸುಹಾಸಿನಿಯ ಜೊತೆ ಈಗ ಜಗಳ ಆಡಲು ಹೋಗುತ್ತಿದ್ದೇನಲ್ಲಾ ಎಂದು ಮನಸ್ಸು ಹೇಳಿತು. ಅದೊಂದು ರೀತಿ ಸಿನಿಮೀಯ ಸನ್ನಿವೇಶ. ನಾನು ಮೊದಲೇ ಫೋನ್‌ ಮಾಡಿದ್ದರಿಂದ ಸುಹಾಸಿನಿ ಕೂಡ ನನ್ನ ಬರವಿಗೆ ಸಿದ್ಧಳಾಗಿದ್ದಳು.

ನನ್ನನ್ನು ಅವಳು ಬಹಳ ಅಭಿಮಾನದಿಂದ ಬರಮಾಡಿಕೊಂಡಳು. ನನ್ನ ಮೂಗಿನ ತುದಿಯಲ್ಲಿ ಕೋಪವಿತ್ತು. ಅದನ್ನು ಗ್ರಹಿಸಿದ ಅವಳು, ‘ಬಾಬು, ಆರ್‌ ಯೂ ಆ್ಯಂಗ್ರಿ’ ಎಂದು ಕೇಳಿದಳು. ‘ಹೂ ಆ್ಯಮ್‌ ಐ ಟು ಆ್ಯಂಗರ್‌ ಆನ್‌ ಯೂ... ಬಟ್‌ ಐ ಆ್ಯಮ್‌ ಹರ್ಟ್‌’ ಎಂದು ಇಂಗ್ಲಿಷ್‌ನಲ್ಲಿ, ತುಸು ಖಾರವಾಗಿಯೇ ಪ್ರತಿಕ್ರಿಯಿಸಿದೆ. ‘ವೈ’ ಎಂದು ಅವಳು ಕೇಳಿದಾಗ, ಪರಿಸ್ಥಿತಿಯನ್ನು ಬಿಡಿಸಿ ಹೇಳಿದೆ.

ನನ್ನ, ವಿಷ್ಣು ಸಿನಿಮಾದಲ್ಲಿ ಅಭಿನಯಿಸಿದ ಮೇಲೆ ಬೇರೆ ಚಿತ್ರಕ್ಕೆ ಸಹಿ ಹಾಕುವುದಾಗಿ ಅವಳು ಮಾತು ಕೊಟ್ಟಿದ್ದನ್ನು ನೆನಪಿಸಿದೆ. ಆಗ ಅವಳು ತನ್ನ ಪರಿಸ್ಥಿತಿಯ ವಿವರಣೆ ಕೊಟ್ಟಳು. ಅವಳ ತಂದೆ ಒಪ್ಪಿಕೊಂಡಿದ್ದರಿಂದ ಅನಿವಾರ್ಯವಾಗಿ ಅಬ್ಬಾಯಿನಾಯ್ಡು ಸಿನಿಮಾ ಒಪ್ಪಿಕೊಂಡಿದ್ದಾಗಿ ತಿಳಿಸಿದಳು.

ಅಬ್ಬಾಯಿನಾಯ್ಡು ಮುಂಗಡಹಣವನ್ನೂ ಕೊಟ್ಟಿದ್ದರಿಂದ ಒಂದು ರೀತಿ ಮುಲಾಜಿಗೆ ಸಿಲುಕಿಕೊಂಡ ಸ್ಥಿತಿಯಲ್ಲಿ ತಾನಿರುವುದಾಗಿ ಸಮಜಾಯಿಷಿ ಕೊಟ್ಟಳು. ನಾನು ಹೆಚ್ಚೇನನ್ನೂ ಮಾತನಾಡಲಿಲ್ಲ. ನೀನು ಈ ಸಿನಿಮಾ ಮಾಡುತ್ತೀಯೋ ಇಲ್ಲವೋ ಅಷ್ಟನ್ನು ಮಾತ್ರ ಹೇಳು. ಮಾಡುವುದಿಲ್ಲವಾದರೆ, ಈ ಸಿನಿಮಾ ಪ್ರಾಜೆಕ್ಟನ್ನೇ ಕೈಬಿಡುತ್ತೇನೆ ಎಂದು ಮನಸ್ಸಿನಲ್ಲಿ ಇದ್ದದನ್ನು ನೇರವಾಗಿ ಹೇಳಿಬಿಟ್ಟೆ.

ನೀವು ಒಳ್ಳೆಯ ಡೈರೆಕ್ಟರ್‌. ಬೇರೆ ಯಾರನ್ನಾದರೂ ಹಾಕಿಕೊಂಡು ಈ ಸಿನಿಮಾ ಮಾಡಿ’ ಎಂದು ನನ್ನನ್ನು ಒಪ್ಪಿಸಲು ಯತ್ನಿಸಿದಳು. ಅವಳು ನೂರೆಂಟು ಕಥೆಗಳನ್ನು ಹೇಳಿದಳಾದರೂ ನಾನು ಯಾವುದನ್ನೂ ಕಿವಿಮೇಲೆ ಹಾಕಿಕೊಳ್ಳಲಿಲ್ಲ. ಸರಿ, ಹೊರಡುತ್ತೇನೆ ಎಂದು ಮೇಲೆದ್ದೆ. ಓಕೆ, ಥ್ಯಾಂಕ್ಸ್‌ ಎಂದು ಹೇಳಿ, ಎರಡು ಹೆಜ್ಜೆ ಇಟ್ಟೆ. ಅವಳಿಗೆ ನನ್ನ ಚಿಂತೆ ಅರ್ಥವಾಯಿತೋ ಏನೋ, ‘ಓಕೆ, ಐ ವಿಲ್‌ ಡು ಇಟ್‌’ ಎಂದು ಹೇಳಿದಳು.

‘ನೋ ಫೋರ್ಸ್‌. ಯೂ ಹ್ಯಾವ್‌ ಟು ಆ್ಯಕ್ಟ್‌ ವಿತ್‌ ಯುವರ್‌ ಹಾರ್ಟ್‌’ ಎಂದು ಹೇಳಿದ ನಾನು, ಮತ್ತೆ ಅವಳ ಮನಸ್ಸು ಬದಲಾಗದೇ ಇರಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ಚೆಕ್‌ ಲೀಫ್‌ ಒಂದನ್ನು ತೆಗೆದೆ. ಅದರ ಮೇಲೆ ಮುಂಗಡ ಹಣದ ಮೊತ್ತ ಬರೆದು ಕೈಗಿತ್ತೆ. ಕಥೆಯ ಒಂದು ಸಾಲನ್ನು ಹೇಳಿದೆ. ಅದನ್ನು ಕೇಳಿದ್ದೇ, ‘ಇಟ್ಸ್‌ ಗ್ರೇಟ್‌, ಫೆಂಟಾಸ್ಟಿಕ್‌, ಫ್ಯಾಬ್ಯುಲಸ್‌’ ಎಂದೆಲ್ಲಾ ಹೊಗಳಿದಳು. ಆ ಪಾತ್ರ ಅವಳಿಗೆ ತುಂಬಾ ರುಚಿಸಿತು. ಮುಂದೆ ಅವಳ ಅಭಿನಯಕ್ಕೆ ಫಿಲ್ಮ್‌ಫೇರ್‌ ಪ್ರಶಸ್ತಿ ಬಂತು.  ಅದನ್ನು ಇಡೀ ಚಿತ್ರಕ್ಕೆ ಅರ್ಪಿಸುವುದಾಗಿ ಅವಳು ಹೇಳಿದಳು.

ಕರ್ನಾಟಕ ರಾಜ್ಯ ಸರ್ಕಾರವು ‘ಮುತ್ತಿನಹಾರ’ ಸಿನಿಮಾಗೆ ಸುಮಾರು ಎಂಟು ರಾಜ್ಯ ಪ್ರಶಸ್ತಿಗಳನ್ನು ಪ್ರಕಟಿಸಿತು. ಸುಹಾಸಿನಿಗೂ ಪ್ರಶಸ್ತಿ ಬಂದಿತ್ತಾದರೂ, ಹೊರಗಿನ ಭಾಷೆಯವರಿಗೆ ಪ್ರಶಸ್ತಿ ಕೊಡುತ್ತಿರಲಿಲ್ಲವಾದ್ದರಿಂದ ಅದು ತಪ್ಪಿತೆಂದು ಗೊತ್ತಾಯಿತು. ನಾನು, ವಿಷ್ಣು ಇಬ್ಬರೂ ನಮಗೆ ಬಂದ ಪ್ರಶಸ್ತಿಯನ್ನೇ ಆಕೆಗೆ ಕೊಡಲು ಹೋದೆವು. ಅವಳು ಪ್ರೀತಿಯಿಂದ ‘ನೀವೇ ಇಟ್ಟುಕೊಳ್ಳಿ’ ಎಂದು ಹೇಳಿದ್ದೇ ಅಲ್ಲದೆ ನಮ್ಮ ಜೊತೆ ಪಾರ್ಟಿಯಲ್ಲೂ ಭಾಗಿಯಾದಳು.

ಸುಹಾಸಿನಿ ಸಮಸ್ಯೆ ಬಗೆಹರಿದ ಮೇಲೆ ಅಬ್ಬಾಯಿನಾಯ್ಡು ಅವರು ನನ್ನ ಮೇಲೆ ಮುನಿಸಿಕೊಂಡರು. ಪತ್ರಿಕೆಗಳಿಗೆ ಎರಡು ಮೂರು ವಾರ ಈ ಸುದ್ದಿಯದ್ದೇ ಹಬ್ಬ. ವಿಷ್ಣುವಿಗೆ ತಿಳಿಸಿ, ಮುಂದಿನ ಕ್ರಮಕ್ಕೆ ನಾನು ಮುಂದಾದೆ.

ನಾನು, ಸುಬ್ಬರಾಯರು ಚಿತ್ರಕಥೆಗೆ ಅಂತಿಮ ರೂಪು ನೀಡಿದೆವು. ಸುಬ್ಬರಾಯರೇ  ಸಂಭಾಷಣೆ ಬರೆಯಲಿ ಎನ್ನುವುದು ನನ್ನ ಬಯಕೆ. ಆದರೆ ಅವರಿಗೆ ಆ ಸಂದರ್ಭದಲ್ಲಿ ಆರೋಗ್ಯ ಸರಿ ಇರಲಿಲ್ಲ. ‘ಬೇರೆ ಯಾರಿಂದಲಾದರೂ ಬರೆಸಿ’ ಎಂದರು. ನಾನು ಉದಯಶಂಕರ್‌ ಅವರನ್ನು ಕೇಳಿದೆ. ಆದರೆ, ಅವರು ರಾಜ್‌ ಸಿನಿಮಾಗಳಲ್ಲಿ ಬಿಡುವಿಲ್ಲದೆ ಬರೆಯುತ್ತಿದ್ದರು. ನನ್ನದು ಒಂದು ಕಂಡೀಷನ್‌ ಇತ್ತು–ಸಂಭಾಷಣೆ ಬರೆಯುವವರು 15 ದಿನ ಬೆಂಗಳೂರಿನಿಂದ ಹೊರಗೆ ಹೋಗಿ ಬರೆಯಬೇಕು. ಆಗ ಆರ್‌.ಎನ್‌. ಜಯಗೋಪಾಲ್‌ ಅವರನ್ನು ಸಂಪರ್ಕಿಸಿ, ಅವರಿಗೆ ಸಂಭಾಷಣೆ ಬರೆಯುವ ಜವಾಬ್ದಾರಿಯನ್ನು ಕೊಟ್ಟೆವು.

‘ಬಂಧನ’ ಸಿನಿಮಾಗೆ ಎಲ್ಲಾ ಹಾಡುಗಳನ್ನೂ ಬರೆದಿದ್ದ ಜಯಗೋಪಾಲ್‌ ಅವರ ಮೇಲೆ ನನಗೆ ಅಪಾರ ಗೌರವ ಇತ್ತು. ನಾನು, ಅವರು ಮೈಸೂರಿನಲ್ಲಿ 15 ದಿನ ಸಂಭಾಷಣೆ ಬರೆದೆವು. ಒಂದು ಸಾಲನ್ನು ಎರಡು ಮೂರು ಬಾರಿ ತಿದ್ದಿ ಬರೆದರಷ್ಟೇ ಸಂಭಾಷಣೆ ಚೆನ್ನಾಗಿ ಆಗುವುದು. ಅದಕ್ಕೆ ಜಯಗೋಪಾಲ್‌ ಅವರು ತುಂಬಾ ಚೆನ್ನಾಗಿ ಸ್ಪಂದಿಸಿದರು. ಸುಬ್ಬರಾಯರಿಗೂ ಒಂದು ರೀಡಿಂಗ್‌ ಕೊಟ್ಟೆವು. ಅವರು ಕೊಟ್ಟ ಸಲಹೆಗಳನ್ನು ಜಯಗೋಪಾಲ್‌ ಅವರು ಅತ್ಯಂತ ಸಂತೋಷದಿಂದ ಅಳವಡಿಸಿಕೊಂಡರು.

ವಿಷ್ಣುವಿಗೆ ರೀಡಿಂಗ್‌ ಕೊಡುವ ಸಮಯ ಬಂತು. ಸುಬ್ಬರಾವ್‌ ಅವರೇ ರೀಡಿಂಗ್‌ ಕೊಡಲಿ ಎನ್ನುವುದು ನನ್ನ ಬಯಕೆಯಾಗಿತ್ತು. ಅವರು ಕಣ್ಣಮುಂದೆ ಸಿನಿಮಾ ಮೂಡುವಷ್ಟು ಪರಿಣಾಮಕಾರಿಯಾಗಿ ರೀಡಿಂಗ್‌ ಕೊಡುತ್ತಾರೆ. ಆದರೆ, ಅವರಿಗೆ ಆಗ ಆರೋಗ್ಯ ಅಷ್ಟು ಸರಿ ಇರಲಿಲ್ಲ.  ‘ನಾಗರಹೊಳೆ’, ‘ಅಂತ’, ‘ಕಿಲಾಡಿ ಜೋಡಿ’, ‘ಭರ್ಜರಿ ಬೇಟೆ’, ‘ಬಂಧನ’ ಸಿನಿಮಾಗಳ ರೀಡಿಂಗ್‌ ಕೊಟ್ಟವರು ಸುಬ್ಬರಾವ್‌.

ನಮ್ಮ ಮೈಸೂರಿನ ಮನೆಯಲ್ಲಿ ನನ್ನ ತಂದೆಗೆ ರೀಡಿಂಗ್‌ ಕೊಡುವುದು ಎಂದರೆ ಒಂದು ದೊಡ್ಡ ಪಾರ್ಟಿ ಇದ್ದಂತೆ. ಸುಮಾರು ಐದಾರು ಜನ ಕುಳಿತು ಕಥೆ ಹೇಳುತ್ತಿದ್ದರು. ಆಮೇಲೆ ಚರ್ಚಿಸುತ್ತಾ, ಗುಂಡು ತುಂಡಿನ ಪಾರ್ಟಿ.  ರೀಡಿಂಗ್‌ ಎಂದೊಡನೆ ಅದೆಲ್ಲಾ ನೆನಪಾಗುತ್ತದೆ. ವಿಷ್ಣುವಿಗೆ ಸುಬ್ಬರಾಯರೇ ರೀಡಿಂಗ್‌ ಕೊಟ್ಟರೆ ಒಳ್ಳೆಯದು ಎಂದು ನಾನು ಅಂದುಕೊಂಡಿದ್ದೆ. ಯಾಕೆಂದರೆ, ‘ಫಸ್ಟ್‌ ಇಂಪ್ರೆಷನ್‌ ಈಸ್‌ ದಿ ಬೆಸ್ಟ್‌ ಇಂಪ್ರೆಷನ್‌’ ಅಲ್ಲವೇ? ಕೊನೆಗೂ ಸುಬ್ಬರಾಯರನ್ನು ರೀಡಿಂಗ್‌ ಕೊಡಲು ನಾನು ಒಪ್ಪಿಸಿದೆ.

ವಿಷ್ಣುವಿಗೆ ರೀಡಿಂಗ್‌  ಕೊಡಲು ಹೊರಟೆವು. ಸುಬ್ಬರಾಯರದ್ದೇ ಒಂದು ಸ್ಟೈಲ್‌. ಅವರ ಟೋಪಿ, ಗರಿಗರಿ ಜುಬ್ಬ, ಪಂಚೆ, ಕೈಯಲ್ಲಿ ಸಿಗರೇಟ್‌, ಅದನ್ನು ಸೇದುವ ಅವರದ್ದೇ ಶೈಲಿ ಯಾವುದನ್ನೂ ಮರೆಯಲು ಸಾಧ್ಯವಿಲ್ಲ. ‘ಅಂತ’ ಸಿನಿಮಾದಲ್ಲಿ ಕನ್ವರ್‌ಲಾಲ್‌ ಪಾತ್ರ ಸಿಗರೇಟನ್ನು ಹೇಗೆ ಸೇದಬೇಕು ಎಂದು ಅಂಬರೀಷನಿಗೆ ಹೇಳಿಕೊಟ್ಟವರೇ ಅವರು. ನಾವು ವಿಷ್ಣು ಮನೆಯನ್ನು ತಲುಪಿದಾಗ ಸಂಜೆ ಸುಮಾರು 6 ಗಂಟೆ. ವಿಷ್ಣು ಸಿದ್ಧನಾಗಿದ್ದ. ಅವನು ಕಥೆಗಾರರಿಗೆ ತುಂಬಾ ಗೌರವ ಕೊಡುತ್ತಿದ್ದ. ಸುಬ್ಬರಾಯರ ಕಾಲಿಗೆ ನಮಸ್ಕರಿಸಿದ. ವಿಷ್ಣುವಿನ ತಂದೆ ನಾರಾಯಣ ರಾವ್‌ ಕೂಡ ಸಂಭಾಷಣೆ ಬರೆಯುತ್ತಿದ್ದವರೇ. ಹಾಗಾಗಿ ಸಂಭಾಷಣಕಾರರ ಪ್ರಾಮುಖ್ಯ ಏನು ಎನ್ನುವುದು ವಿಷ್ಣುವಿಗೆ ಚೆನ್ನಾಗಿ ಗೊತ್ತಿತ್ತು. 

ಆ ದಿನ ಸುಬ್ಬರಾಯರು ಸುಮಾರು ಮೂರು ಗಂಟೆ ತಮ್ಮದೇ ಶೈಲಿಯಲ್ಲಿ ರೀಡಿಂಗ್‌ ಕೊಟ್ಟರು. ವಿಷ್ಣು ಕಣ್ಣಲ್ಲಿ ನೀರು, ಸಂತೋಷ. ನನ್ನನ್ನು, ಸುಬ್ಬರಾಯರನ್ನು ಬಿಗಿಯಾಗಿ ಅಪ್ಪಿಕೊಂಡ. ‘ಏನೋ  ಮಗನೇ, ‘ಡಾ. ಜಿವಾಗೊ’ ತರಹ ಇದೆಯಲ್ಲೋ ಕಥೆ... ಅದ್ಭುತ’ ಎಂದು ಹೇಳಿ, ಸ್ಕಾಚ್‌ ಬಾಟಲಿ ತರಿಸಿದ. ನಮಗೆಲ್ಲಾ ಆ ದಿನ ಅಲ್ಲೇ ಪಾರ್ಟಿ.

ಮರುದಿನ ವಿಷ್ಣು ತನ್ನ ಅನೇಕ ನಿರ್ಮಾಪಕರು, ನಿರ್ದೇಶಕರಿಗೆ ‘ಬಾಬು ಅದ್ಭುತವಾದ ಕಥೆ ಮಾಡಿದ್ದಾನೆ’ ಎಂದು ಹೇಳಿ ನನ್ನನ್ನು ಅಟ್ಟಕ್ಕೇರಿಸಿದ್ದ. ಅವನು ಇದ್ದದ್ದೇ ಹಾಗೆ, ಇಷ್ಟವಾದದ್ದನ್ನು ಅನೇಕರಲ್ಲಿ ಹಂಚಿಕೊಳ್ಳುತ್ತಿದ್ದ. ರವಿಚಂದ್ರನ್‌ ‘ಶಾಂತಿ–ಕ್ರಾಂತಿ’ ಸಿನಿಮಾ ಮಾಡಿದಾಗ, ಅದನ್ನು ತುಂಬಾ ಹೊಗಳಿದ್ದ. ಈ ಗುಣ ಚಿತ್ರರಂಗದ ಎಲ್ಲರಿಗೂ ಇರುವುದಿಲ್ಲ. ಆ ದೃಷ್ಟಿಯಿಂದ ನೋಡಿದರೆ ವಿಷ್ಣುವಿನದ್ದು ದೊಡ್ಡ ಮನಸ್ಸು. ಅಲ್ಲಿಂದಾಚೆಗೆ ‘ಮುತ್ತಿನಹಾರ’ ಸಿನಿಮಾ ಸಾಕಾರಗೊಳ್ಳುವ ಪ್ರಕ್ರಿಯೆ ಚುರುಕಾಯಿತು.

ಮುಂದಿನ ವಾರ: ‘ಮುತ್ತಿನಹಾರ’ ಪೋಣಿಸಿದ್ದು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT