ಗುರುವಾರ, 29 ಆಗಸ್ಟ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಹಿಮಪಾತ’ ಸಿನಿಮಾನುಭವ

Last Updated 20 ಜೂನ್ 2015, 19:30 IST
ಅಕ್ಷರ ಗಾತ್ರ

ನನಗೂ ರಾಕ್‌ಲೈನ್ ವೆಂಕಟೇಶ್ ಅವರಿಗೂ ಬಹಳ ಸ್ನೇಹ. ಮೊದಲಿನಿಂದಲೂ ನನ್ನ ಸಿನಿಮಾಗಳನ್ನು ಮೆಚ್ಚಿಕೊಂಡವರು ಅವರು. ರವಿಚಂದ್ರನ್ ನಾಯಕರಾಗಿದ್ದ ಸಿನಿಮಾ ಒಂದನ್ನು ದ್ವಾರಕೀಶ್ ನಿರ್ದೇಶಿಸಲು ಗೊತ್ತಾಗಿದ್ದರು. ಅದರ ನಿರ್ಮಾಪಕ ರಾಕ್‌ಲೈನ್. ರವಿಗೂ ದ್ವಾರಕೀಶ್‌ಗೂ ಯಾಕೋ ಸರಿಹೋಗಲಿಲ್ಲ. ನಾನು ಆಗ ನಿರ್ದೇಶಕರ ಸಂಘದ ಅಧ್ಯಕ್ಷ ಆಗಿದ್ದೆ. ಆ ವಿವಾದ ಸಂಘದ ಮೆಟ್ಟಿಲು ಏರಿತು. ದ್ವಾರಕೀಶ್ ನೊಂದು ಆ ಸಿನಿಮಾದಿಂದ ಹೊರಕ್ಕೆ ಬರಲೇಬೇಕಾಯಿತು. ನಿರ್ಮಾಪಕರ ಹಿತದೃಷ್ಟಿಯಿಂದ ಅದು ಅನಿವಾರ್ಯವಾಗಿತ್ತು.

ಅದಕ್ಕೂ ಮೊದಲೇ ರಾಕ್‌ಲೈನ್ ನನಗೆ ತುಂಬಾ ಪರಿಚಿತರು. ಅವರು ಒಂದು ಸಿನಿಮಾ ಮಾಡಿಕೊಡಿ ಎಂದು ನನ್ನನ್ನು ಕೇಳಿದರು. ಟಿ.ಕೆ.ರಾಮರಾವ್ ಅವರ ‘ಹಿಮಪಾತ’ ಕೃತಿಯನ್ನು ಆಧರಿಸಿದ ಸಿನಿಮಾ ಮಾಡೋಣ ಎಂದೆ. ಆ ಕಥೆ ನನಗೆ ತುಂಬಾ ಇಷ್ಟವಾಗಿತ್ತು. ನಾನು, ವಿಷ್ಣು ಆ ಕಥೆಯ ಕುರಿತು ಅನೇಕ ಸಲ ಮಾತನಾಡಿದ್ದೆವು.

ಡೇವಿಡ್ ಲೀನ್ ಅವರ ಡಾ. ‘ಜಿವಾಗೊ’, ಯಶ್ ಚೋಪ್ರಾ ಅವರ ‘ದಾಗ್’, ವಿಟೋರಿಯೊ ಡಿ ಸಿಕಾ ನಿರ್ದೇಶನದ ‘ಸನ್‌ಫ್ಲವರ್’ ನಾನು ವಿಪರೀತ ಇಷ್ಟಪಟ್ಟ ಸಿನಿಮಾಗಳು. ಅವುಗಳೆಲ್ಲದರ ಛಾಯೆ ‘ಹಿಮಪಾತ’ ಕಥೆಯಲ್ಲಿ ಇತ್ತು. ನಾನು, ರಾಕ್‌ಲೈನ್ ಇಬ್ಬರೂ ಟಿ.ಕೆ.ರಾಮರಾವ್ ಅವರ ಬಳಿಗೆ ಹೋಗಿ ಕಥೆಯ ಹಕ್ಕು ಪಡೆದುಕೊಂಡು ಬಂದೆವು. ವಿಷ್ಣು ಅಭಿನಯಿಸಲು ಒಪ್ಪಿದ. ಯೋಗಾ ನರಸಿಂಹ ಹಾಗೂ ಸೆಲ್ವರಾಜ್  ಎಂಬ ದೊಡ್ಡ ಕಥೆಗಾರರಿಂದ ಚಿತ್ರಕಥೆಯನ್ನು ಮಾಡಿಸಿದೆವು. ವಿಷ್ಣು ಕಥೆಯನ್ನು ಕೇಳಿದ ಮೇಲೆ ಥ್ರಿಲ್ ಆದ. ಇಬ್ಬರು ನಾಯಕಿಯರು ಆ ಸಿನಿಮಾಗೆ ಬೇಕಿದ್ದರು. ಸುಹಾಸಿನಿ ಹಾಗೂ ಜಯಪ್ರದಾ ಸೂಕ್ತ ಎಂದು ತೀರ್ಮಾನಿಸಿದೆವು. ವಿಷ್ಣು ಮನೆಗೆ ಹೋಗಿ ಸಿನಿಮಾದ ಗೆಟಪ್‌ಗಳು, ಖರ್ಚು ಎಲ್ಲವನ್ನೂ ಚರ್ಚಿಸಿದೆವು.

ಹಂಸಲೇಖ ಜೊತೆ ಊಟಿಗೆ ಹೋಗಿ, ಅವರಿಂದ ಅನೇಕ ದಿನಗಳ ಕಾಲ ಹಾಡುಗಳನ್ನು ಕಂಪೋಸ್ ಮಾಡಿಸಿದೆವು. ಈಗಿನ

ಜನಪ್ರಿಯ ಸಂಗೀತ ನಿರ್ದೇಶಕ ಹರಿಕೃಷ್ಣ ಆಗ ಹಂಸಲೇಖ ಹೇಳಿದ ಟ್ಯೂನ್‌ಗಳನ್ನು ಕೀಬೋರ್ಡ್‌ನಲ್ಲಿ ನುಡಿಸುತ್ತಿದ್ದರು. ಬೆಳಿಗ್ಗೆ ಎದ್ದು ವಾಯುವಿಹಾರಕ್ಕೆ ಹೋಗಿ ನಡೆಯುತ್ತಲೇ ಹಾಡಿನ ಕುರಿತು ಚರ್ಚಿಸುವುದು. ಮಧ್ಯಾಹ್ನದವರೆಗೆ ಹಾಡುಗಳಿಗೆ ಸ್ವರ ಸಂಯೋಜನೆ ಮಾಡುವುದು- ಇದು ನಮ್ಮ ದಿನಚರಿಯಾಗಿತ್ತು. ಹಾಡುಗಳೆಲ್ಲಾ ಸಿದ್ಧವಾದ ಮೇಲೆ ಬೆಂಗಳೂರಿಗೆ ಮರಳಿದೆವು.

ರಾಕ್‌ಲೈನ್ ಅತ್ಯುತ್ತಮ ನಿರ್ಮಾಪಕ. ನಿರ್ದೇಶಕನಿಗೆ ಏನೆಲ್ಲ ಬೇಕೋ ಅದೆಲ್ಲವನ್ನೂ ಒದಗಿಸುವಷ್ಟು ಔದಾರ್ಯ ಅವರಿಗಿದೆ. ಸಿನಿಮಾ ಚೆನ್ನಾಗಿ ಬರಬೇಕು ಎನ್ನುವುದಷ್ಟೇ ಅವರ ಉಮೇದು. ನಾನು, ರಾಕ್‌ಲೈನ್ ದಿನವೂ ವಿಷ್ಣು ಮನೆಗೆ ಹೋಗಿ ಸಿದ್ಧತೆಗಳನ್ನು ವಿವರಿಸಿ, ಲೊಕೇಷನ್‌ಗಳ ಬಗೆಗೂ ಚರ್ಚಿಸುತ್ತಾ ಇದ್ದೆವು. ಆಗ ಹಿಮಪಾತದ ದೃಶ್ಯವನ್ನು ಹೇಗೆ ಚಿತ್ರೀಕರಿಸುವುದು ಎಂಬ ಮುಖ್ಯ ಸಂಗತಿ ಪ್ರಸ್ತಾಪವಾಯಿತು. ನ್ಯಾಷನಲ್ ಜಿಯಾಗ್ರಫಿ ನಿಯತಕಾಲಿಕದವರು ನಿಸರ್ಗದ ಹಾಗೂ ಪ್ರಕೃತಿ ವಿಕೋಪದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿ, ಬೇಕಾದವರಿಗೆ ಮಾರುತ್ತಾರೆ ಎಂದು ಕೇಳಿದ್ದೆ.

ಅದಕ್ಕೆ ಯತ್ನಿಸೋಣ ಎಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಇದ್ದ ಸಂಬಂಧಪಟ್ಟವರಿಗೆ ಕಾಗದ ಬರೆದೆ. ಅವರು ಕೆಲವು ಟ್ರಯಲ್ ಶಾಟ್ಸ್‌ ಕಳಿಸಿಕೊಟ್ಟರು. ಈಗ ಕಂಪ್ಯೂಟರ್ ಸಾಫ್ಟ್‌ವೇರ್ ಬಳಸಿ ನಮಗೆ ಬೇಕಾದಂತೆ ಆ ಶಾಟ್ಸ್ ಹೊಂದಿಸಿ, ಬಳಸಿಕೊಳ್ಳುವುದು ಅಷ್ಟೇನೂ ಕಷ್ಟವಲ್ಲ. ಗ್ರೀನ್ ಮ್ಯಾಟ್‌ನಲ್ಲಿ ನಮಗೆ ಬೇಕಾದ ದೃಶ್ಯ ಚಿತ್ರೀಕರಿಸಿಕೊಂಡು, ಹಿನ್ನೆಲೆಯಲ್ಲಿ ದೃಶ್ಯಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಬಹುದು. ಆದರೆ, ಆಗ ಅಂಥ ಸೌಕರ್ಯ ಇರಲಿಲ್ಲ. ಆ ಸಿನಿಮಾಗೆ ರಾಜಾರಾಂ ಛಾಯಾಗ್ರಾಹಕರಾಗಿದ್ದರು. ಆ ರೀತಿಯ ‘ಸ್ಟಾಕ್ ಶಾಟ್ಸ್’ ಸಿಕ್ಕರೆ ಅವನ್ನು ಬ್ಯಾಕ್ ಪ್ರೊಜೆಕ್ಷನ್ ಆಗಿ ಚೆನ್ನೈನ ವಾಹಿನಿ ಸ್ಟುಡಿಯೊದಲ್ಲಿ ಚಿತ್ರೀಕರಣ ನಡೆಸಬಹುದು ಎಂದರು. ನನಗೆ ಆ ಸಲಹೆ ಅಷ್ಟೇನೂ ಇಷ್ಟವಾಗಲಿಲ್ಲ. ಹಿಮಪಾತವೇ ಕಥೆಯ ಮುಖ್ಯ ತಿರುವು. ಅದು ಸಹಜವಾಗಿಯೇ ಇರಬೇಕು ಎನ್ನುವುದು ನನ್ನ ಬಯಕೆ. ಕುಲುಮನಾಲಿಯಲ್ಲಿ ಚಿತ್ರೀಕರಣಕ್ಕೆ ಯತ್ನಿಸೋಣ ಎಂದೆ.

ವಿಷ್ಣುವಿಗೆ ಸಂಕಟ ಶುರುವಾಯಿತು. ‘ಲೋ... ಹಿಮ, ಚಳಿಯಲ್ಲಿ ನನ್ನನ್ನು ಸಾಯಿಸುತ್ತೀಯಾ? ನಿನಗೆ ಬಂಧನ ತರಹದ ಕಥೆ ಸಿಗುವುದೇ ಇಲ್ಲವೇನೋ?’ ಎಂದು ಪ್ರಶ್ನೆಗಳ ಮಳೆಗರೆದ. ಡಾ ಜಿವಾಗೊ, ಸನ್‌ಫ್ಲವರ್ ಸಿನಿಮಾಗಳನ್ನು ತೋರಿಸಿದೀನಿ. ಆ ರೀತಿಯ ಸಿನಿಮಾ ಬೇಕು ಅಂತೀಯಾ. ಕಷ್ಟಪಡಬೇಕಪ್ಪ ಎಂದು ನಾನೂ ಪಾಯಿಂಟ್ ಹಾಕಿದೆ. ನಾನು, ರಾಕ್‌ಲೈನ್ ಲೊಕೇಷನ್ ನೋಡಿಕೊಂಡು ಬರಲು ಹೊರಟೆವು. ವಿಷ್ಣು ಯಾವ ಲೊಕೇಷನ್ ಎಂದು ಕೇಳಿದ. ಲಡಾಖ್ ಎಂದದ್ದೇ ಅವನಿಗೆ ಕೋಪ ನೆತ್ತಿಗೇರಿತು. ಅಲ್ಲಿ ಆಮ್ಲಜನಕ ಇರುವುದಿಲ್ಲ. acclimatizationನಿಂದ (ದೇಹವನ್ನು ಆಯಾ ವಾತಾವರಣಕ್ಕೆ ಹೊಂದಿಸಿಕೊಳ್ಳುವ ಪ್ರಕ್ರಿಯೆ) ಎಲ್ಲಾ ಸರಿಹೋಗುತ್ತೆ ಎಂದು ನಾನು ವಾದಿಸಿದೆ. ಮಾರನೇ ದಿನ ನಾವು ದೆಹಲಿಗೆ ಪ್ರಯಾಣ ಮಾಡಿ, ಅಲ್ಲಿಂದ ಕುಲುಮನಾಲಿಗೆ ಹೋಗುವುದು ನಿಶ್ಚಯವಾಯಿತು.

ಹೋಗುವಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಮಣಿರತ್ನಂ ಸಿಕ್ಕಿದರು. ಅವರು ಜೈಪುರದ ಜೈಸಲ್ಮೇರ್‌ನಿಂದ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದರು. ಮಣಿರತ್ನಂ ಅವರೂ ನನಗೆ ಪರಿಚಿತರೇ. ಅವರು ಬೆಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಇಳಿದುಕೊಳ್ಳುತ್ತಿದ್ದಾಗ ನಾನು ಅವರ ಜೊತೆ ಎಷ್ಟೋ ಸಲ ಮಾತುಕತೆ ನಡೆಸಿದ್ದುಂಟು. ಬಿ.ಆರ್.ಪಂತುಲು ಅವರ ಮಗ ಒಂದು ಸಿನಿಮಾ ಮಾಡುತ್ತಿದ್ದರು. ಅದರ ಚಿತ್ರಕಥೆಗೆ ಮಣಿರತ್ನಂ ನೆರವಾಗಿದ್ದರು.

ಅದರ ಚಿತ್ರೀಕರಣ ಕೆ.ಜಿ.ಎಫ್‌ನ ಗೋಲ್ಡ್‌ಫೀಲ್ಡ್‌ನಲ್ಲಿ ಸುಮಾರು 3000 ಅಡಿ ಕೆಳಗೆ ನಡೆಯುತ್ತಿತ್ತು. ಜೂಲಿ ಲಕ್ಷ್ಮಿ ಆ ಸಿನಿಮಾ ನಾಯಕಿ. ಅಂಬರೀಷ್ ಕೂಡ ಆಗ ನಮ್ಮ ಜೊತೆಗಿದ್ದ. ಲಕ್ಷ್ಮಿ ತನಗೆ ಹೃದಯದ ಸಮಸ್ಯೆ ಇದೆ ಎಂದು ಸಬೂಬು ಹೇಳಿ, ಅಷ್ಟು ಆಳದಲ್ಲಿ ಚಿತ್ರೀಕರಣ ಸಾಧ್ಯವಿಲ್ಲ ಎಂದು ತಪ್ಪಿಸಿಕೊಂಡು ಅಂಬಿ ಜೊತೆಯಲ್ಲಿ ಬೆಂಗಳೂರಿಗೆ ಬಂದುಬಿಡುತ್ತಿದ್ದಳು. ಅಲ್ಲಿನ ಪ್ರಸಂಗಗಳನ್ನು ಅಂಬಿ ಅಭಿನಯಿಸಿ ತೋರಿಸುತ್ತಾ, ನಮ್ಮನ್ನು ನಗಿಸುತ್ತಿದ್ದ. ಮಣಿರತ್ನಂ ಅವರನ್ನು ವಿಮಾನ ನಿಲ್ದಾಣದಲ್ಲಿ ನೋಡಿದಾಗ ಅವೆಲ್ಲಾ ನೆನಪಾದವು.

ನಾನು ಅಲ್ಲಿಗೆ ಬಂದಿರುವ ಉದ್ದೇಶ ಹೇಳಿದಾಗ, ಮಣಿರತ್ನಂ ಅವರಿಗೆ ಸಂತೋಷವಾಯಿತು. ‘ಅಲ್ಲಿನ ಲೊಕೇಷನ್‌ಗಳು ಚೆನ್ನಾಗಿವೆ. ದಿನಕ್ಕೆ ಐದು ಗಂಟೆ ಕೆಲಸ ಮಾಡಬಹುದಷ್ಟೆ’ ಎಂದು ಹೇಳಿದರು. ನಾವು ಲಡಾಖ್‌ಗೆ ಹೊರಟೆವು. ಅವರು ಚೆನ್ನೈನತ್ತ ಪಯಣಿಸಿದರು. ಇಂಡಿಯನ್ ಏರ್‌ಲೈನ್ಸ್ ವಿಮಾನ ಹತ್ತಿದೆವು.‌ವಾರಕ್ಕೆ ಎರಡೋ ಮೂರೋ ವಿಮಾನಗಳು ಅಲ್ಲಿಗೆ ಹೋಗುತ್ತಿದ್ದುದು. ಹಿಮಾಲಯ ಪರ್ವತ ಸಾಲಿನ ಮೇಲೆ ವಿಮಾನ ಹಾರಿದಾಗ ಅದೊಂದು ಅದ್ಭುತ ಅನುಭವ. ಅಲ್ಲೆಲ್ಲಾ ಹಾಡುಗಳನ್ನು, ದೃಶ್ಯಗಳನ್ನು ಚಿತ್ರೀಕರಿಸಿದರೆ ಎಷ್ಟು ಚೆನ್ನ ಎನ್ನಿಸಿತು. ನಮ್ಮ ಬಳಿ ಒಂದು ಒಳ್ಳೆಯ ಕ್ಯಾಮೆರಾ ಇತ್ತು. ವಿಮಾನದಿಂದಲೇ ರಾಕ್‌ಲೈನ್ ಒಂದಿಷ್ಟು ಫೋಟೊಗಳನ್ನು ತೆಗೆದರು. ಲಡಾಖ್ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿದ್ದಂತೆ ಗಗನಸಖಿಯು ಹೊರಗೆ ಆಮ್ಲಜನಕ ಕಡಿಮೆ ಇರುತ್ತದೆ ಎಂದು ಎಚ್ಚರಿಸಿದರು.

ನಮಗೆ ಇಳಿಯುತ್ತಿದ್ದಂತೆಯೇ ಅಲ್ಲಿ ಉಸಿರಾಡುವುದು ಎಷ್ಟು ಕಷ್ಟ ಎಂದು ಗೊತ್ತಾಯಿತು. ಟ್ಯಾಕ್ಸಿಯವನು ತುಂಬಾ ಒಳ್ಳೆಯವನು. ‘ಎರಡು ದಿನ ಸುಮ್ಮನೆ ಮಲಗಿ ವಿರಮಿಸಿ. ಹೊರಗೆ ಎಲ್ಲೂ ಹೋಗಬೇಡಿ’ ಎಂದು ಸಲಹೆ ಕೊಟ್ಟ. ಫ್ರೆಷ್ ಆಗಿ, ರೂಮ್‌ನಲ್ಲಿ ಹೀಟರ್ ಹಾಕಿಕೊಂಡು, ಬೆಚ್ಚಗೆ ಹೊದ್ದು ಮಲಗಿದೆವು. ಸೂಪ್ ಕುಡಿದದ್ದಷ್ಟೆ. ಊಟ ಬರಲಿಲ್ಲ. ಆ ವಾತಾವರಣದಲ್ಲಿ ವಿಷ್ಣು ಪ್ರತಿಕ್ರಿಯೆ ಹೇಗಿರಬಹುದು ಎಂದು ನೆನಪಿಸಿಕೊಂಡೆ. ಮುಂದೆ ಗ್ಯಾರಂಟಿ ಅವನ ಸಹಸ್ರನಾಮ ಕೇಳಲೇಬೇಕು ಎಂದು ಒಳಗೊಳಗೇ ಅಂದುಕೊಂಡೆ.

ಮರುದಿನ ಅದೇ ಟ್ಯಾಕ್ಸಿಯವನನ್ನು ಕರೆಸಿ, ಲೊಕೇಷನ್‌ಗಳನ್ನು ನೋಡಿಕೊಂಡು ಬಂದೆವು. ಚಿತ್ರೀಕರಣಕ್ಕೆ ಅವೆಲ್ಲಾ ಸೂಕ್ತ ಎಂದೂ ಅನ್ನಿಸಿತು. ದೆಹಲಿಯಿಂದ ವಾರಕ್ಕೆ ಎರಡೋ ಮೂರೋ ಸಲ ಬರುವ ವಿಮಾನಗಳಲ್ಲಿ ಅಷ್ಟೊಂದು ಕಲಾವಿದರನ್ನು ಸಾಗಿಸುವ ಕಷ್ಟ, ಅಲ್ಲಿನ ವಾತಾವರಣದಲ್ಲಿ ಕೆಲಸಗಾರರಿಗೆ ಬೇಕಾದ ಪರಿಕರಗಳನ್ನೆಲ್ಲಾ ಒದಗಿಸುವ ಉಸಾಬರಿ ಎಲ್ಲವುಗಳ ಬಗ್ಗೆ ಚರ್ಚಿಸಿದೆವು. ಚಿತ್ರೀಕರಣ ತುಂಬಾ ಕಷ್ಟ ಎನ್ನುವುದು ಖಾತರಿಯಾಯಿತು. ರಾತ್ರಿ ಊಟ ಮಾಡುತ್ತಾ ಇದ್ದಾಗ ಹೋಟೆಲ್‌ನ ರಿಸೆಪ್ಷನ್‌ನಲ್ಲಿ ಜನ ಸೇರಿದ್ದರು.

ಜೋರು ಮಾತುಕತೆ ನಡೆಯುತ್ತಿತ್ತು. ನಾವು ಹೋಗಿ ನೋಡಿದರೆ, ಯಾರೋ ಒಬ್ಬರಿಗೆ ಹೃದಯಾಘಾತವಾಗಿ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಅದನ್ನ ನೋಡಿ ನಮ್ಮ ಜಂಘಾಬಲವೇ ಉಡುಗಿಹೋದಂತೆ ಆಯಿತು. ಈ ಲೊಕೇಷನ್‌ನಲ್ಲಿ ಚಿತ್ರೀಕರಣ ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಅಲ್ಲಿಂದ ಹೊರಟೆವು. ಹೊರಡುವ ಮೊದಲು ಏನಾದರೂ ಕೊಂಡುಕೊಳ್ಳೋಣ ಎಂದು ನಾನು, ರಾಕ್‌ಲೈನ್‌ ಲಡಾಖ್‌ ಮಾರುಕಟ್ಟೆಗೆ ಹೋದೆವು. ಅಲ್ಲಿ ಚೆಂದದ ಸ್ವೆಟರ್‌ಗಳು ಇದ್ದವು. ಎಷ್ಟೆಂದು ವಿಚಾರಿಸಿದೆವು. ಅವರು ಹೇಳಿದ ಬೆಲೆ ಕೇಳಿ, ‘ಇಲ್ಲಿ ಎಲ್ಲಾ ಮೋಸ. ಬೆಂಗಳೂರಿನ ರೈಲ್ವೆ ಸ್ಟೇಷನ್‌ನಲ್ಲಿ ಇಂಥವೇ ಸ್ವೆಟರ್‌ಗಳು ಸಿಗುತ್ತವೆ. ಬೋ... ಮಕ್ಕಳು, ಸೂ...ಮಕ್ಕಳು’ ಎಂದೆಲ್ಲಾ ಕನ್ನಡದಲ್ಲಿ ಬೈಯ್ಯಲಾರಂಭಿಸಿದೆವು. ಆಗ ಅಲ್ಲಿದ್ದ ಒಬ್ಬ ಕನ್ನಡದಲ್ಲಿಯೇ ನಮಗೆ ಉತ್ತರ ಕೊಟ್ಟಾಗ ಬೇಸ್ತುಬಿದ್ದೆವು.

ಆ ವ್ಯಕ್ತಿ ಬೆಂಗಳೂರಿನಿಂದಲೇ ಹೋಗಿ ಅಲ್ಲಿ ನೆಲೆಸಿದ್ದ. ಚಳಿಗಾಲದಲ್ಲಿ ಬೆಂಗಳೂರಿಗೆ ಬಂದು, ಸ್ವೆಟರ್‌ಗಳನ್ನು ತಯಾರು ಮಾಡಿ ಆಮೇಲೆ ಲಡಾಖ್‌ಗೆ ತಂದು ಮಾರುವುದು ಅವರ ಹೊಟ್ಟೆಪಾಡಿನ ದಾರಿಯಾಗಿತ್ತು. ಟಿಬೆಟ್‌ನಿಂದ ನಿರಾಶ್ರಿತರಾಗಿ ಅಲೆಮಾರಿ ಜೀವನ ನಡೆಸುತ್ತಿದ್ದ ಆ ವ್ಯಕ್ತಿ ತನ್ನ ಹಾಗೂ ತನ್ನಂತೆಯೇ ಇರುವ ಅನೇಕರ ಕಷ್ಟಗಳನ್ನು ಹೇಳಿಕೊಂಡ. ನಮ್ಮಿಬ್ಬರಿಗೂ ಬಹಳ ಬೇಜಾರಾಯಿತು. ಅವನಲ್ಲಿ ಕ್ಷಮೆ ಕೇಳಿದೆವು. ಅವನು ಸ್ನೇಹಿತನಾದ. ಬೆಂಗಳೂರಿಗೆ ಬಂದಾಗ ಒಮ್ಮೆ ನಮ್ಮ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ಬಂದು ನಮ್ಮ ಜೊತೆ ಊಟ ಮಾಡಿಕೊಂಡು ಹೋದ. ವಿಷ್ಣುವಿಗೂ ಅವನನ್ನು ಪರಿಚಯಿಸಿ, ಬೇರೆ ಊರಿನಲ್ಲಿ ಕನ್ನಡ ಭಾಷೆ ಗೊತ್ತಿರುವುದಿಲ್ಲ ಎಂದು ಭಾವಿಸಿ ಯಾರನ್ನೂ ಬೈಯ್ಯಕೂಡದು ಎಂಬ ಪಾಠ ಕಲಿತ ಪ್ರಸಂಗವನ್ನು ಹೇಳಿದೆ.

ಲಡಾಖ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಸಬೇಕೆಂಬ ಆಸೆಯನ್ನು ಕೈಬಿಟ್ಟಿದ್ದ ನಮಗೆ ಇನ್ನೇನು ಹೊರಡಬೇಕು ಎನ್ನುವಾಗ ದೂರದಲ್ಲಿ ವಾಯುನೆಲೆ ಕಂಡಿತು. ಅಲ್ಲಿಂದ ‘ಬಂಧನ’ ಸಿನಿಮಾದ ಹಾಡು ಕೇಳಿಬರುತ್ತಿತ್ತು. ನಾವು ಅಲ್ಲಿಗೆ ಹೋದೆವು. ಮೂರ್ನಾಲ್ಕು ಜನ ಮಾತನಾಡುತ್ತಾ ಕುಳಿತಿದ್ದರು. ನಮ್ಮನ್ನು ನೋಡಿದ್ದೇ, ‘ಓ ರಾಜೇಂದ್ರ ಸಿಂಗ್‌ ಬಾಬು’ ಎಂದು ಖುಷಿಯಿಂದ ಕೂಗುತ್ತಾ ಬಂದು, ಸ್ವಾಗತಿಸಿದರು. ಅವರೆಲ್ಲರೂ ನಮ್ಮ ಅಭಿಮಾನಿಗಳು. ನಾವು ಹೊಸ ಸಿನಿಮಾ ಚಿತ್ರೀಕರಣದ ಸಿದ್ಧತೆಯ ಬಗ್ಗೆ ಹೇಳಿದ್ದೇ, ಅವರೆಲ್ಲಾ ಎಷ್ಟು ಬೇಕೋ ಅಷ್ಟೂ ವಾಯುನೆಲೆಯ ಪರಿಕರಗಳ, ಹೆಲಿಕಾಪ್ಟರ್‌–ವಿಮಾನಗಳ ನೆರವು ಕೊಡುವುದಾಗಿ ಹೇಳಿದರು. ಅವನ್ನೆಲ್ಲಾ ಬಳಸಿಕೊಳ್ಳಬೇಕಿದ್ದರೆ ನಾನು ಇನ್ನೊಂದು ಮುತ್ತಿನಹಾರ ಮಾಡಬೇಕಿತ್ತು. ಅವರ ಪ್ರೀತಿಗೆ ಧನ್ಯವಾದ ಹೇಳಿ, ಹೊರಟೆವು. ಕನ್ನಡ ಹಾಡುಗಳ ಸಿ.ಡಿ. ಕಳುಹಿಸಿಕೊಡುವಂತೆ ವಿನಂತಿಸಿಕೊಂಡ ಅವರು ನಮಗೆ ವಿಳಾಸ ಬರೆದು ಒಂದು ಚೀಟಿಯನ್ನು ಕೊಟ್ಟರು. ಆಮೇಲೆ ಅವರಿಗೆ ಹಾಡುಗಳ  ಸಿ.ಡಿ. ಕಳುಹಿಸಿಕೊಟ್ಟೆ.

ಮುಂದಿನ ವಾರ:  ಮಣಿರತ್ನಂ ಮನೆಗೆ ಬಾಂಬ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT