ಜನವರಿ 15ರಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ‘ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಎತ್ತುವ ತಾತ್ವಿಕ ಪ್ರಶ್ನೆಗಳು’ ಲೇಖನಕ್ಕೆ ಸುದೀಂದ್ರ ಬುಧ್ಯ ಅವರು ಉತ್ತರ ನೀಡಲು ಪ್ರಯತ್ನಿಸಿ ಇನ್ನಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುವಂತೆ ಮಾಡಿಕೊಂಡಿದ್ದಾರೆ.

ಮೊದಲನೆಯದಾಗಿ, ದ್ವಿಪಕ್ಷೀಯ ಮಾತುಕತೆಯಲ್ಲಿ ದೇಶಗಳ ಆಂತರಿಕ ವಿಷಯಗಳ ಚರ್ಚೆ ನಡೆಯುವುದಿಲ್ಲ ಎಂಬ ಸುದೀಂದ್ರ ಬುಧ್ಯ ಉತ್ತರ ಬಾಲಿಷವಾದುದು ಮಾತ್ರವಲ್ಲ ತಾಂತ್ರಿಕವಾಗಿ ತಪ್ಪು. ಕಾಶ್ಮೀರದ ವಿಷಯ ಆಂತರಿಕ ವಿಚಾರ ಎನ್ನುವುದು ಭಾರತದ ಸ್ಥಾಪಿತ ನಿಲುವು. ಇದನ್ನು ಇಲ್ಲಿಯವರೆಗಿನ ಎಲ್ಲ ಸರ್ಕಾರಗಳೂ ಸಾರುತ್ತಲೇ ಬಂದಿವೆ. ಹೀಗಿದ್ದರೂ ಭಾರತ-ಪಾಕಿಸ್ತಾನದ ನಡುವಿನ ಎಲ್ಲ ಮಾತುಕತೆಗಳು ಇದೇ ಕಾಶ್ಮೀರ ಮತ್ತು ಅದಕ್ಕೆ ಸಂಬಂಧಿಸಿದ ಗಡಿಯಾಚೆಗಿನ ಭಯೋತ್ಪಾದನೆಯ ಸುತ್ತಲೇ ನಡೆದಿವೆ. ಆಂತರಿಕ ವಿಷಯದ ಚರ್ಚೆಯ ಬಗೆಗಿನ ಈ ರೀತಿಯ ನಿರ್ಬಂಧವನ್ನು ಇವರು ಎಲ್ಲಿಂದ ಹುಡುಕಿ ತೆಗೆದದ್ದು ಎಂದು ತಿಳಿಸಬೇಕು. ವಿದೇಶಾಂಗ ಖಾತೆಯ ವೆಬ್‌ಸೈಟ್‌ನಲ್ಲಿ ಮಾತುಕತೆಗಳ ಅಜೆಂಡಾ ಪತ್ರಗಳು ಲಭ್ಯ ಇದೆ, ಪರಿಶೀಲಿಸಬಹುದು.

ಇದನ್ನೂ ಓದಿ:ಪ್ರತಿಕ್ರಿಯೆ: ಸಿಎಎ ಬಗ್ಗೆ ಎತ್ತಿದ ತಾತ್ವಿಕ ಪ್ರಶ್ನೆಗಳು ಘನವಲ್ಲ

ಬುಧ್ಯ ಅವರು ಈ ರೀತಿ ಬೀಸು ಹೇಳಿಕೆ ನೀಡಿದರೆ ಕ್ಷಮೆ ಇರಬಹುದು, ನನಗಿಲ್ಲ. ನಾನು ದೆಹಲಿಯಲ್ಲಿ ವರದಿಗಾರನಾಗಿ ದ್ವಿಪಕ್ಷೀಯ ಮಾತುಕತೆಗಳನ್ನು ಹತ್ತು ವರ್ಷಗಳ ಕಾಲ ವರದಿ ಮಾಡಿದವನು ಮಾತ್ರವಲ್ಲ ಆಗ್ರಾ ಶೃಂಗ ಸಭೆಯನ್ನು (ಪ್ರಜಾವಾಣಿ ಪತ್ರಿಕೆಗೆ) ವರದಿ ಮಾಡಿದ ಕನ್ನಡ ಪತ್ರಿಕೆಯ ಏಕೈಕ ವರದಿಗಾರ. ನನ್ನಿಂದ ತಪ್ಪಾಗಬಾರದು.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಧಾರ್ಮಿಕ ದೌರ್ಜನ್ಯವನ್ನು ಆಂತರಿಕ ವಿಷಯ ಎಂದು ಭಾರತ ಪರಿಗಣಿಸಿದರೆ, ಅದನ್ನೇ ಕೇಂದ್ರವಾಗಿಟ್ಟುಕೊಂಡು ರೂಪಿಸಲಾಗಿರುವ ಈಗಿನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹೇಗೆ ಅನುಷ್ಠಾನಗೊಳಿಸಲು ಸಾಧ್ಯ ಎಂದು ಬಲ್ಲವರು ವಿವರಿಸಬೇಕು.

ಎರಡನೆಯದಾಗಿ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸುಷ್ಮಾ ಸ್ವರಾಜ್ ಒಬ್ಬರೇ ಅಲ್ಲ ಹಿಂದಿನ ವಿದೇಶಾಂಗ ವ್ಯವಹಾರಗಳ ಸಚಿವರೂ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದರ ಪ್ರಸ್ತಾಪ ವಿಶ್ವಸಂಸ್ಥೆಯ ದಾಖಲೆಗಳಲ್ಲಿರುವುದೂ ನಿಜ.

ಆದರೆ ಆ ಪ್ರಸ್ತಾಪ, ಧಾರ್ಮಿಕ ದೌರ್ಜನ್ಯದ ವಿಷಯವನ್ನೇ ಮುಂದಿಟ್ಟುಕೊಂಡು ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಮೂಲಕ ಪ್ರತಿಯೊಬ್ಬ ಭಾರತೀಯನೂ ಪೌರತ್ವ ಸಾಬೀತುಗೊಳಿಸುವಂತೆ ಮಾಡಿ 130 ಕೋಟಿ ಜನರ ನಿದ್ದೆಗೆಡುವಂತೆ ಮಾಡುವಷ್ಟು ಮತ್ತು ಸರ್ಕಾರವೇ ಪತನಗೊಳ್ಳುವ ಸಾಧ್ಯತೆ ಇರುವಂತಹ ಬೃಹತ್ ಕಸರತ್ತು ಮಾಡುವಷ್ಟು ಗಂಭೀರವಾಗಿತ್ತೇ? ಗಂಭೀರ ವಿಷಯವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಅಷ್ಟೇ ಗಂಭೀರವಾಗಿ ಈ ವಿಷಯವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಯಾಕೆ ಪ್ರಸ್ತಾಪಿಸಿಲ್ಲ? ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು, ಕಾಶ್ಮೀರದಲ್ಲಿನ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ನೇರಮಾತುಗಳಲ್ಲಿ ಚುಚ್ಚುತ್ತಿದ್ದಾಗ ಮೌನವಹಿಸಿದ್ದು ಯಾಕೆ?

ಇದನ್ನೂ ಓದಿ:ಸಿಎಎ ಎತ್ತುವ ತಾತ್ವಿಕ ಪ್ರಶ್ನೆಗಳು | ದಿನೇಶ್ ಅಮಿನ್ ಮಟ್ಟು ಬರಹ

ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಭಾರತವೂ ಸೇರಿದಂತೆ ವಿಶ್ವದ 24 ದೇಶಗಳು ಗೊತ್ತುವಳಿ ಅಂಗೀಕರಿಸುವಂತೆ ಮಾಡಿದಂತೆ ಜಾಗತಿಕ ಅಭಿಪ್ರಾಯವನ್ನು ರೂಪಿಸಲು ವಿಶ್ವಗುರುಗಳಿಗೆ ಯಾಕೆ ಸಾಧ್ಯವಾಗಿಲ್ಲ?

ಉತ್ತರ ಬಹಳ ಸರಳವಾಗಿದೆ, ಅಷ್ಟೆಲ್ಲ ತಿಣುಕಾಡಬೇಕಾಗಿಲ್ಲ. ಪ್ರಶ್ನೆ ಹಿಂದೂ, ಮುಸ್ಲಿಮರದ್ದಲ್ಲ, ಪ್ರಶ್ನೆ ಒಂದು ದೇಶ ತನ್ನಲ್ಲಿರುವ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎನ್ನವುದು. ಇದು ಚರ್ಚೆಯಾಗಬೇಕಾದ ಪ್ರಶ್ನೆ. ಭಾರತದ ಅಲ್ಪಸಂಖ್ಯಾತರನ್ನು ಎಂದೂ ಕೂಡಾ ಭಾರತೀಯರು ಎಂದು ಪರಿಗಣಿಸದೆ, ಅವರ ಮೇಲಿನ ದೌರ್ಜನ್ಯಗಳ ಆರೋಪವನ್ನು ಹೊತ್ತುಕೊಂಡೇ ತಿರುಗಾಡುತ್ತಿರುವ ಭಾರತೀಯ ಜನತಾ ಪಕ್ಷದ ಸರ್ಕಾರ ಮತ್ತೊಂದು ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಯಾವ ಮುಖ ಹೊತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಆರೋಪಿಸಲು ಸಾಧ್ಯ? ಮೂರನೆಯದಾಗಿ, ಭಾರತದಲ್ಲಿ ದಲಿತರ ರಕ್ಷಣೆಗೆ ಸಂವಿಧಾನ ಮತ್ತು ಕಾನೂನಿನ ರಕ್ಷಣೆ ಇದೆ, ಪಾಕಿಸ್ತಾನದಲ್ಲಿ ಆ ರಕ್ಷಣೆ ಇಲ್ಲ ಎನ್ನುವ ಕಾರಣಕ್ಕೆ ಅಲ್ಲಿನ ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡಬೇಕೆಂಬ ಸಮರ್ಥನೆ ನೀಡಿ ಸುದೀಂದ್ರ ಬುಧ್ಯ ಅವರು ಹಿಟ್ ವಿಕೆಟ್ ಮಾಡಿಕೊಂಡು ಔಟ್ ಆದಂತಿದೆ. ಪಾಕಿಸ್ತಾನದಲ್ಲಿ ಯಾವುದೇ ಕಾನೂನಿನ ರಕ್ಷಣೆ ಇಲ್ಲದೆ ಇದ್ದಾಗ ನಡೆಸುವ ದೌರ್ಜನ್ಯ ಮತ್ತು ಭಾರತದಲ್ಲಿ ಸಂವಿಧಾನದತ್ತ ರಕ್ಷಣೆ ಇದ್ದಾಗಲೂ ನಡೆಸಲಾಗುತ್ತಿರುವ ದೌರ್ಜನ್ಯಗಳಲ್ಲಿ ಯಾವುದೂ ಹೆಚ್ಚು ಗಂಭೀರವಾದುದು? ಇಷ್ಟು ಮಾತ್ರವಲ್ಲ ಪಾಕಿಸ್ತಾನದಲ್ಲಿರುವ ಒಟ್ಟು ಹಿಂದೂ ಜನಸಂಖ್ಯೆಯೇ ಶೇ 1.6 ಮಾತ್ರ. ಅದರಲ್ಲಿ ಶೇ 50ರಷ್ಟು ದಲಿತರು ಎಂದಿಟ್ಟುಕೊಂಡರೂ ಪ್ರಮಾಣ ಶೇ 0.8ರನ್ನು ಮೀರುವುದಿಲ್ಲ. ಭಾರತದಲ್ಲಿರುವ ದಲಿತ ಜನಸಂಖ್ಯೆ ಶೇ 25. ಕಳವಳ ಪಟ್ಟುಕೊಳ್ಳಬೇಕಾಗಿರುವುದು ಯಾವ ದೇಶದ ದಲಿತರ ಮೇಲೆ? ನಾಚಿಕೆ ಪಟ್ಟುಕೊಳ್ಳಬೇಕಾಗಿರುವುದು ಯಾವ ದೇಶದ ದಲಿತರ ಮೇಲಿನ ದೌರ್ಜನ್ಯದ ಮೇಲೆ?

ನಾಲ್ಕನೆಯದಾಗಿ, ಸಿಎಎ ಉದ್ದೇಶವೇ ನೆರೆಯ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರಾಗಿ ದೌರ್ಜನ್ಯಕ್ಕೆ ಒಳಗಾಗಿರುವವರಿಗೆ ಮಾನವೀಯ ನೆಲೆಯಲ್ಲಿ ಆಶ್ರಯ ಕೊಡಬೇಕು ಎಂದು ಬುಧ್ಯ ಹೇಳಿದ್ದಾರೆ. ಇದೇ ಉದ್ದೇಶವಾಗಿದ್ದರೆ, ಪಾಕಿಸ್ತಾನದಲ್ಲಿರುವ ಶಿಯಾ ಮತ್ತು ಅಹ್ಮದಿಯಾ, ಮ್ಯಾನ್ಮಾರ್‌ನಲ್ಲಿರುವ ರೋಹಿಂಗ್ಯಾ ಮುಸ್ಲಿಮರನ್ನು ಬಿಟ್ಟುಬಿಡಿ, ಕನಿಷ್ಠ ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತರಾಗಿದ್ದುಕೊಂಡು, ಧಾರ್ಮಿಕ ದೌರ್ಜನ್ಯಕ್ಕೊಳಗಾಗಿರುವ ತಮಿಳು ಹಿಂದೂಗಳಿಗಾದರೂ ಪೌರತ್ವ ಪಡೆಯಲು ಸಿಎಎನಲ್ಲಿ ಯಾಕೆ ಅವಕಾಶ ಕೊಟ್ಟಿಲ್ಲ? ಈಗಿನ ಬಹುಚರ್ಚಿತ ಪ್ರಶ್ನೆ ಇದೇ ಅಲ್ಲವೇ?

ಐದನೆಯದಾಗಿ ಕ್ರೈಸ್ತ ಸಮುದಾಯವನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಿರುವುದನ್ನು ಸಮರ್ಥಿಸಿಕೊಂಡಿರುವ ಸುದೀಂದ್ರ ಬುಧ್ಯ ಅವರು ಇಸ್ಲಾಮಿಕ್ ಸ್ಟೇಟ್ಸ್ ಎಂದು ಗುರುತಿಸಿಕೊಂಡಿರುವ ಪಾಕಿಸ್ತಾನ, ಆಫ್ಗಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಮುಸ್ಲಿಮೇತರರೆಲ್ಲರೂ ಅಲ್ಪಸಂಖ್ಯಾತರು ಎಂದು ಹೇಳಿದ್ದಾರೆ. ( ಬಾಂಗ್ಲಾ ದೇಶ ಯಾವಾಗ ‘ಇಸ್ಲಾಮಿಕ್ ಸ್ಟೇಟ್’ ಆಗಿರುವುದು? ಅದು ಇಸ್ಲಾಮನ್ನು ಅಧಿಕೃತ ಧರ್ಮ ಎಂದು ಸ್ವೀಕರಿಸಿದ, ಆದರೆ ಜಾತ್ಯತೀತ ಆಶಯಗಳಿಗೆ ಬದ್ಧವಾಗಿರುವ ದೇಶ. ಅಲ್ಲಿನ ಸಂವಿಧಾನಕ್ಕೆ ಮಾಡಲಾದ ತಿದ್ದುಪಡಿಯನ್ನು ಓದಿಕೊಳ್ಳಿ)

ಪಾಕಿಸ್ತಾನದ ಕ್ರೈಸ್ತರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವುದಾದರೆ ಆ ದೇಶದ ಸಂವಿಧಾನದ ಪ್ರಕಾರ ಮುಸ್ಲಿಮರಲ್ಲದಿರುವ ಅಹ್ಮದೀಯರನ್ನು ಕೂಡಾ ಅಲ್ಪಸಂಖ್ಯಾತ ವರ್ಗಕ್ಕೆ ಯಾಕೆ ಸೇರಿಸಿಕೊಳ್ಳಬಾರದಿತ್ತು?

ಕೊನೆಯದಾಗಿ ಸುದೀಂದ್ರ ಬುಧ್ಯ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ಬಗ್ಗೆ ನನಗೆ ಪೂರ್ವಗ್ರಹ ಇದೆ ಎಂದು ಆರೋಪಿಸಿದ್ದಾರೆ. ಸಕಾರಣವಾದ ಈ ಪೂರ್ವಗ್ರಹವನ್ನು ಒಪ್ಪಿಕೊಳ್ಳುತ್ತೇನೆ. ಅದೇ ರೀತಿ ಈ ಇಬ್ಬರು ನಾಯಕರ ಬಗ್ಗೆ ಬುಧ್ಯ ಅವರಿಗೆ ಕುರುಡು ಭಕ್ತಿ ಇದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.