ಪ್ರತಿವರ್ಷ ಆಗಸ್ಟ್ ತಿಂಗಳಿನಲ್ಲಿ ದೇಶವು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಇರುವಾಗಲೇ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ನಂತಹ ದೇಶಗಳ ವಿಶ್ವವಿದ್ಯಾಲಯಗಳಿಗೆ ವಿಮಾನ ಏರುತ್ತಾರೆ. ಹಿಂದಿನ ವರ್ಷ ಆಗಸ್ಟ್ನಲ್ಲಿ ಕೇಂದ್ರ ಸರ್ಕಾರವು ಲೋಕಸಭೆಗೆ ನೀಡಿದ ಮಾಹಿತಿಯಂತೆ, 2020, 2021 ಮತ್ತು 2022ರಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ತೆರಳಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಅನುಕ್ರಮವಾಗಿ 4.5 ಲಕ್ಷ, 4.4 ಲಕ್ಷ ಮತ್ತು 7.5 ಲಕ್ಷ. 2024ರಲ್ಲಿ ಈ ಸಂಖ್ಯೆ 18 ಲಕ್ಷ ಆಗಲಿದೆ ಎಂದು ಅಂದಾಜಿಸಲಾಗಿದೆ.

ಡಾಲರ್ ವಿರುದ್ಧ ಭಾರತದ ರೂಪಾಯಿಯ ಮೌಲ್ಯ ಕುಸಿಯುತ್ತಿರುವ ಪರಿಸ್ಥಿತಿಯಲ್ಲೂ ಈ ವಿದ್ಯಾರ್ಥಿಗಳು ಪ್ರಯಾಣ, ದಿನನಿತ್ಯದ ಬದುಕಿನ ಅಗತ್ಯ ಮತ್ತು ಅಧ್ಯಯನಕ್ಕಾಗಿ ಲಕ್ಷಾಂತರ ರೂಪಾಯಿಯ ವೆಚ್ಚವನ್ನು ಭರಿಸುತ್ತಿದ್ದಾರೆ. ಉದಾಹರಣೆಗೆ, 2018ರಲ್ಲಿ ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಮಾಡಿದ ವೆಚ್ಚ 30 ಶತಕೋಟಿ ಡಾಲರ್ಗಳು, ಅಂದಿನ ವಿನಿಮಯ ದರದಲ್ಲಿ ಸುಮಾರು ₹ 2.08 ಲಕ್ಷ ಕೋಟಿ. ಅದೇ ವರ್ಷ ನಮ್ಮ ದೇಶದ ಎಂಟು ಐಐಟಿಗಳ ವಾರ್ಷಿಕ ಬಜೆಟ್ ₹ 13.9 ಸಾವಿರ ಕೋಟಿ! 2024ರ ವೇಳೆಗೆ ವಿದೇಶಗಳಲ್ಲಿ ವ್ಯಾಸಂಗ ಮಾಡಲಿರುವ 18 ಲಕ್ಷ ವಿದ್ಯಾರ್ಥಿಗಳು 80 ಶತಕೋಟಿ ಡಾಲರ್ ಅಥವಾ ಇಂದಿನ ದರದಲ್ಲಿ ಸುಮಾರು ₹ 6.55 ಲಕ್ಷ ಕೋಟಿ ವೆಚ್ಚ ಮಾಡಲಿದ್ದಾರೆ. ಕೇಂದ್ರ ಸರ್ಕಾರವು ಉನ್ನತ ಶಿಕ್ಷಣಕ್ಕೆ 2023- 24ರಲ್ಲಿ ಮೀಸಲಿಟ್ಟಿರುವ ಹಣ ₹ 44.09 ಸಾವಿರ ಕೋಟಿ!

ವಿದೇಶದಲ್ಲಿನ ವ್ಯಾಸಂಗ ಅತಿ ದುಬಾರಿಯಾದರೂ ಅಲ್ಲಿಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿರುವುದಕ್ಕೆ ಮುಖ್ಯ ಕಾರಣ, ಅಲ್ಲಿ ದೊರೆಯುವ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಗುಣಮಟ್ಟದ ಶಿಕ್ಷಣ. ಅಂತಹ ಶಿಕ್ಷಣದಿಂದ ಉತ್ತಮವಾದ ಬದುಕನ್ನು ರೂಪಿಸಿಕೊಳ್ಳಬಹುದೆಂಬ ಭರವಸೆ. ಇದರೊಂದಿಗೆ ಅತ್ಯುತ್ತಮ ಮೂಲ ಸೌಕರ್ಯಗಳು, ಶ್ರೇಷ್ಠ ಪ್ರಾಧ್ಯಾಪಕರು, ನಮ್ಮ ದೇಶದಲ್ಲಿ ಲಭ್ಯವಿರದ ವಿಶಿಷ್ಟ ಕೋರ್ಸುಗಳು, ವಿದ್ಯಾರ್ಥಿವೇತನ, ಆರ್ಥಿಕ ನೆರವಿನ ಅವಕಾಶಗಳು, ಪದವಿ ನಂತರ ನಿರ್ದಿಷ್ಟ ಕಾಲದವರೆಗೆ ಅಲ್ಲಿಯೇ ಉಳಿದು ಕೆಲಸ ಮಾಡಬಲ್ಲ ಅವಕಾಶಗಳು, ಪ್ರಗತಿಪರ ಬಹುಸಂಸ್ಕೃತೀಯ ಪರಿಸರ, ಅಂತರರಾಷ್ಟ್ರೀಯ ಜೀವನಾನುಭವಗಳಿಗೆ ತೆರೆದುಕೊಳ್ಳುತ್ತಲೇ ಆಸಕ್ತಿಯ ಕ್ಷೇತ್ರದಲ್ಲಿ ಪರಿಣತಿ ಪಡೆಯುವ ವಿಶಿಷ್ಟ ಅವಕಾಶ ವಿದ್ಯಾರ್ಥಿಗಳನ್ನು ಇನ್ನಿಲ್ಲದ ಹಾಗೆ ಆಕರ್ಷಿಸುತ್ತದೆ. ರಾಷ್ಟ್ರೀಕೃತ ಹಾಗೂ ಖಾಸಗಿ ವಲಯಗಳ ಬ್ಯಾಂಕ್ಗಳಿಂದ ದೊರೆಯುವ ಶೈಕ್ಷಣಿಕ ಸಾಲವೂ ಮಹತ್ವಾಕಾಂಕ್ಷೆಯುಳ್ಳ ವಿದ್ಯಾರ್ಥಿಗಳಿಗೆ ನೆರವಾಗಿದೆ.

ನಮ್ಮ ದೇಶದಲ್ಲೂ ಈ ಎಲ್ಲ ಗುಣಾತ್ಮಕ ಅಂಶಗಳಿರುವ ಉನ್ನತ ಶಿಕ್ಷಣ ಸಂಸ್ಥೆಗಳಿದ್ದರೂ ಅವುಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಐದಾರು ದಶಕಗಳ ಹಿಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ; ಮದ್ರಾಸ್, ದೆಹಲಿ, ಮುಂಬೈ ಐಐಟಿಗಳಿಗಿದ್ದ ತಮ್ಮದೇ ಆದ ವಿಶಿಷ್ಟ ಬ್ರ್ಯಾಂಡ್ ಮೌಲ್ಯ ಇಂದಿಗೂ ಹಾಗೆಯೇ ಉಳಿದಿದೆ. ಅವುಗಳಲ್ಲಿ ಪ್ರವೇಶ ಪಡೆದು, ಅಲ್ಲಿ ವ್ಯಾಸಂಗ ಮಾಡುವುದು ಇಂದಿಗೂ ಬಹು ಪ್ರತಿಷ್ಠೆಯ ವಿಷಯ. ಆದರೆ ಈ ಐದಾರು ದಶಕಗಳಲ್ಲಿ ಅಂತಹ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ನೂರಾರು ಪಟ್ಟು ಹೆಚ್ಚಿದೆ. ಉದಾಹರಣೆಗೆ, 2022ರಲ್ಲಿ ದೇಶದ 23 ಐಐಟಿಗಳಿಗೆ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 9 ಲಕ್ಷ. ಅಂತಿಮವಾಗಿ ಆಯ್ಕೆಯಾದವರು 16,290. ಶೇ 1.8ರಷ್ಟು ಮಾತ್ರ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ಅಭ್ಯರ್ಥಿಗಳು ಬರೆಯುವ ಕ್ಯಾಟ್ ಪರೀಕ್ಷೆಯ ಕಥೆಯೂ ಇದೇ. ಅತ್ಯಂತ ಕಠಿಣವಾದ, ಅತಿ ತೀವ್ರ ಸ್ಪರ್ಧೆಯಿರುವ ಈ ಪರೀಕ್ಷೆಗಳಲ್ಲಿ ಸಾವಿರಾರು ಪ್ರತಿಭಾವಂತರು ಆಯ್ಕೆಗೊಳ್ಳದೇ ನಿರಾಶರಾಗುತ್ತಾರೆ.

ಹಿಂದಿನ ಐದಾರು ದಶಕಗಳಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ಐಐಟಿ, ಐಐಎಂಗಳಿಗೆ ಇರುವಂತಹ ಬ್ರ್ಯಾಂಡ್ ಮೌಲ್ಯವನ್ನು ಬೆಳೆಸಿಕೊಳ್ಳಲು ಉಳಿದ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಿಗೇಕೆ ಸಾಧ್ಯವಾಗಿಲ್ಲ? ಶೈಕ್ಷಣಿಕ ಬ್ರ್ಯಾಂಡ್ ಎಂಬುದು ಬರೀ ವೈಭವೋಪೇತವಾದ ಕ್ಯಾಂಪಸ್, ದುಬಾರಿ ಸೌಕರ್ಯಗಳು, ಕಣ್ಸೆಳೆಯುವ ಲಾಂಛನ, ಶಬ್ದಾಲಂಕಾರ ಶೋಭಿತ ‘ಮಿಷನ್ ಸ್ಟೇಟ್ಮೆಂಟ್ಸ್’, ಪುಟಗಟ್ಟಲೆ ವರ್ಣರಂಜಿತ ಜಾಹೀರಾತುಗಳಿಂದ ಬರುವಂತಹದಲ್ಲ. ‘ವಿಶ್ವಾಸಾರ್ಹತೆ, ಶ್ರೇಷ್ಠತೆ, ಜ್ಞಾನಾರ್ಜನೆ ಮತ್ತು ನೈತಿಕತೆ’ ಶೈಕ್ಷಣಿಕ ಬ್ರ್ಯಾಂಡ್ನ ನಾಲ್ಕು ಪ್ರಮುಖ ಆಧಾರಸ್ತಂಭಗಳು. ಇವುಗಳನ್ನೇ ಪರಮಾದರ್ಶವನ್ನಾಗಿ ಮಾಡಿಕೊಂಡು, ಅಪಾರ ನಿಷ್ಠೆಯಿಂದ ಶ್ರಮಿಸದಿದ್ದರೆ ಯಾವುದೇ ಸಂಸ್ಥೆ ತನ್ನದೇ ಆದ ವಿಶಿಷ್ಟ ಬ್ರ್ಯಾಂಡನ್ನು ರೂಪಿಸಿಕೊಳ್ಳುವುದು ಸಾಧ್ಯವಿಲ್ಲ.

ನಮ್ಮ ದೇಶದಲ್ಲಿ ಹೊರನೋಟಕ್ಕೆ ಭವ್ಯವೆನಿಸುವ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ, ಸಂಶೋಧನೆ, ಮೂಲಸೌಕರ್ಯ, ಸಂಪನ್ಮೂಲಗಳಲ್ಲಿ ತೀವ್ರ ಕೊರತೆ ಬಹು ಸಾಮಾನ್ಯ. ಪ್ರಾಧ್ಯಾಪಕ, ಸಂಶೋಧಕರ ವಿದ್ಯಾರ್ಹತೆ, ಸಂಶೋಧನಾಸಕ್ತಿ, ಪ್ರಕಟಿತ ಸಂಶೋಧನಾ ಪ್ರಬಂಧಗಳ ಬಗ್ಗೆ ವಿವರಗಳು ಆಸಕ್ತ ಭಾವಿ ವಿದ್ಯಾರ್ಥಿಗಳಿಗೆ ದೊರೆಯುವುದಿಲ್ಲ. ಖಾಸಗಿ ವಲಯದಲ್ಲಿನ ಬಹುತೇಕ ಉನ್ನತ ಶಿಕ್ಷಣ ಸಂಸ್ಥೆಗಳು ವಾಣಿಜ್ಯೋದ್ದೇಶ ಸಂಸ್ಥೆಗಳ, ರಾಜಕಾರಣಿಗಳ ಮಾಲೀಕತ್ವದಲ್ಲಿ ಇರುವುದರಿಂದ ದೀರ್ಘಕಾಲಿಕ ಗುರಿ, ಉದ್ದೇಶ, ನೈತಿಕತೆಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.

ಎಲ್ಲದಕ್ಕಿಂತ ಹೆಚ್ಚಾಗಿ ಜ್ಞಾನಾರ್ಜನೆಗೆ ಅಗತ್ಯವಾದ, ಕ್ಷೋಭೆರಹಿತ ಶಾಂತಿಯುತ ವಿದ್ವತ್ ವಾತಾವರಣವೇ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಇಲ್ಲವೆಂಬುದು ಅನೇಕ ಶಿಕ್ಷಣ ತಜ್ಞರ ಅಭಿಪ್ರಾಯ. ಅಷ್ಟೇ ಅಲ್ಲ, ಭಾರತ ಸರ್ಕಾರದ ಮಹಾಲೇಖಪಾಲರು ತಮ್ಮ ಹಲವಾರು ವರದಿಗಳಲ್ಲಿ, ಉನ್ನತ ಶಿಕ್ಷಣ ಕ್ಷೇತ್ರದ ಶೋಚನೀಯ ಪರಿಸ್ಥಿತಿಯನ್ನು ಮತ್ತೆ ಮತ್ತೆ ಎತ್ತಿ ತೋರಿದ್ದಾರೆ. ಅನೇಕ ವಿಶ್ವವಿದ್ಯಾಲಯಗಳಿಗೆ ಸ್ವಂತ ಕಟ್ಟಡವಿಲ್ಲ, ಪ್ರಯೋಗಶಾಲೆಯಿಲ್ಲ, ಯಾವ ಕೈಗಾರಿಕಾ ಸಂಸ್ಥೆಗಳೂ ಸಂಶೋಧನೆಯನ್ನು ಪ್ರಾಯೋಜಿಸಿಲ್ಲ. ಪೇಟೆಂಟ್ ದೊರೆತಿರುವ ಉದಾಹರಣೆಗಳಂತೂ ಬಹು ಕಡಿಮೆ. ಉನ್ನತ ಶಿಕ್ಷಣ ಕ್ಷೇತ್ರ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ಜಿಡಿಪಿಯ ಶೇ 6ರಷ್ಟು ಹಣ ವಿನಿಯೋಗಿಸಬೇಕೆಂದು ಶಿಕ್ಷಣ ತಜ್ಞರು, ವಿಜ್ಞಾನಿಗಳು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ, ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟ ಹಣವನ್ನು, 2015- 2022ರ ಅವಧಿಯಲ್ಲಿ, ಜಿಡಿಪಿಯ ಶೇ 2.8ರಿಂದ ಶೇ 2.9ಕ್ಕೆ, ಅಂದರೆ ಶೇ 0.1ರಷ್ಟು ಹೆಚ್ಚಿಸಿದೆ!

ವಿದೇಶಿ ವಿಶ್ವವಿದ್ಯಾಲಯಗಳಿಗೆ ನಮ್ಮ ದೇಶದಲ್ಲಿ ಕ್ಯಾಂಪಸ್ಗಳನ್ನು ತೆರೆಯಲು ಅವಕಾಶ ನೀಡಿದಲ್ಲಿ, ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಭಾರತದಲ್ಲಿಯೇ ದೊರೆತು, ನಮ್ಮ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುವುದು ಕಡಿಮೆಯಾಗಿ, ದೇಶದಿಂದ ಹೊರಗೆ ಹರಿದುಹೋಗುತ್ತಿರುವ ಅಪಾರ ಪ್ರಮಾಣದ ಹಣ ಇಲ್ಲಿಯೇ ಉಳಿಯುತ್ತದೆ ಎಂಬುದು ಸರ್ಕಾರದ ಚಿಂತನೆ. ಈ ಪರಿಕಲ್ಪನೆಯು 2005ರಷ್ಟು ಹಿಂದಿನದು. ಗುಜರಾತ್ನ ಗಾಂಧಿನಗರದ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ನಲ್ಲಿ, 359 ಹೆಕ್ಟೇರ್ ಪ್ರದೇಶದಲ್ಲಿ ರೂಪುಗೊಂಡಿರುವ ‘ಗಿಫ್ಟ್ ಸಿಟಿ’ಯಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗೆ ಸಮಸ್ತ ಅನುಕೂಲಗಳನ್ನು ಕಲ್ಪಿಸಿ, ಪ್ರವೇಶಾತಿ, ನೇಮಕಾತಿ, ಶುಲ್ಕ, ಪಠ್ಯ ವಿಷಯ, ಬೋಧನಾ ಕ್ರಮ, ಲಾಭಾಂಶವನ್ನು ತಮ್ಮ ದೇಶಕ್ಕೆ ಕೊಂಡುಹೋಗುವ ಸ್ವಾತಂತ್ರ್ಯದಂತಹವನ್ನು ನೀಡಲಾಗಿದೆಯಾದರೂ ಇದುವರೆವಿಗೂ ಯಾವ ವಿದೇಶಿ ವಿಶ್ವವಿದ್ಯಾಲಯವೂ ಅಲ್ಲಿಗೆ ಬಂದಿಲ್ಲ.

ನಮ್ಮ ದೇಶಕ್ಕಿಂತ ಹೆಚ್ಚು ಆಕರ್ಷಕವಾದ ಆಹ್ವಾನ ನೀಡಿರುವ ಸಿಂಗಪುರ, ಮಲೇಷ್ಯಾ, ವಿಯೆಟ್ನಾಂ 20 ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಹಾರ್ವರ್ಡ್, ಯೇಲ್, ಪ್ರಿನ್ಸ್ಟನ್, ಸ್ಟಾನ್ಫರ್ಡ್ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಹೊರದೇಶಗಳಲ್ಲಿ ಒಂದೇ ಒಂದು ಕ್ಯಾಂಪಸ್ಸನ್ನೂ ಸ್ಥಾಪಿಸಿಲ್ಲ. ಅವುಗಳನ್ನು ಹೊರತುಪಡಿಸಿ, ಮುಂದೊಮ್ಮೆ ಇಲ್ಲಿಗೆ ಬರಬಹುದಾದ ಎರಡನೇ ದರ್ಜೆಯ ವಿದೇಶಿ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡುವ ಬದಲಿಗೆ, ನಮ್ಮಲ್ಲಿನ ಆಯ್ದ ಶಿಕ್ಷಣ ಸಂಸ್ಥೆಗಳಿಗೇ ಪ್ರೋತ್ಸಾಹ ನೀಡಿ ಎಂಬುದು ತಜ್ಞರ ಒತ್ತಾಯ.

ಈ ವರ್ಷ ಆಗಸ್ಟ್ ತಿಂಗಳ ವಲಸೆ ಪ್ರಾರಂಭವಾಗುವ ಸಮಯಕ್ಕಿಂತ ಮುಂಚೆ, ಇದೇ ತಿಂಗಳಿನಲ್ಲಿ ನಮ್ಮ ಪ್ರಧಾನಿಯವರು ಫ್ರಾನ್ಸ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಮಾತುಕತೆಯಂತೆ, ಫ್ರಾನ್ಸ್ನಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ, ಶಿಕ್ಷಣ ಮುಗಿದ ನಂತರ ಐದು ವರ್ಷಗಳ ಕಾಲ ಅಲ್ಲಿಯೇ ನೆಲೆಸಿ, ಉದ್ಯೋಗ ಮಾಡುವ ಅವಕಾಶ ದೊರೆಯಲಿದೆ. ವಿದೇಶಿ ವಿಶ್ವವಿದ್ಯಾಲಯಗಳತ್ತ ಮುಖ ಮಾಡಿರುವ ನಮ್ಮ ವಿದ್ಯಾರ್ಥಿಗಳಿಗೆ ಇದು ಮತ್ತಷ್ಟು ಹುರುಪು ನೀಡುವ ಸಂತೋಷದ ಸುದ್ದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.