2023ರ ಸಾಲಿಗೆ ಭಾರತ ಸರ್ಕಾರ ಪ್ರಕಟಿಸಿರುವ 106 ಪ್ರತಿಷ್ಠಿತ ‘ಪದ್ಮ ಪ್ರಶಸ್ತಿ’ಗಳಲ್ಲಿ, ಪ್ರಚಾರದ ಹೊನಲು ಬೆಳಕಿನಿಂದ ದೂರವಾಗಿ, ಸದ್ದಿಲ್ಲದೇ ಸಮಾಜಸೇವೆಯಲ್ಲಿತೊಡಗಿರುವ ಹಲವಾರು ಹೆಸರುಗಳಿವೆ. ಅವುಗಳಲ್ಲಿ ಎರಡು, ತಮಿಳುನಾಡಿನ ಚಂಗಲ್‍ಪಟ್ಟುವಿನ ಇರುಳ ಬುಡಕಟ್ಟು ಸಮುದಾಯದ ವಡಿವೇಲು ಗೋಪಾಲ್ ಮತ್ತು ಮಾಸಿ ಸಡೈಯನ್.

‘ವಿಷಸರ್ಪಗಳ ಕಡಿತಕ್ಕೆ ಒಳಗಾದವರ ಪ್ರಾಣ ವುಳಿಸುವ ಪ್ರತಿವಿಷಸಾರದ (ಆ್ಯಂಟಿವೆನಮ್ ಸೀರಮ್) ಉತ್ಪಾದನೆಗೆ ಬೇಕಾದ ಹಾವುಗಳ ವಿಷವನ್ನು ಸಂಗ್ರಹಿಸು ವಲ್ಲಿ, ಪರಂಪರಾನುಗತವಾದ ಸಾಂಪ್ರದಾಯಿಕ ಜ್ಞಾನ ಮತ್ತು ಕೌಶಲಗಳನ್ನು ಸಮರ್ಥವಾಗಿ ಬಳಸುತ್ತಿರುವ ಈ ವ್ಯಕ್ತಿಗಳು ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ’ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ನಮ್ಮ ದೇಶದಲ್ಲಿ ಪ್ರತಿವರ್ಷ ಹಾವುಗಳ ಕಡಿತದಿಂದ ಸಾಯುವವರ ಸಂಖ್ಯೆ ಸರಾಸರಿ 58,000. ಜಾಗತಿಕವಾಗಿ ಸಂಭವಿಸುವ ಸಾವಿನ ಅರ್ಧದಷ್ಟು. ವಿಷಸರ್ಪಗಳ ಕಡಿತದಿಂದಾಗುವ ಅಂಗಹೀನತೆ, ಅಂಗಚ್ಛೇದನಗಳು ಸಾಮಾನ್ಯವಾಗಿ ವರದಿಯಾಗುವುದಿಲ್ಲ, ದಾಖಲೆಗಳಲ್ಲಿ ಸೇರುವುದೂ ಇಲ್ಲ. ವಾರ್ಷಿಕವಾಗಿ ಸಂಭವಿಸುವ ಸಾವುಗಳಲ್ಲಿ ಶೇ 90 ಭಾಗಕ್ಕೆ ಕಾರಣವಾಗುವುದು, ‘ಬಿಗ್ ಫೋರ್’ ಎಂದೇ ಹೆಸರಾಗಿರುವ ನಾಗರಹಾವು, ಕಟ್ಟುಹಾವು (ಕಾಮನ್ ಕ್ರೈಟ್), ಕೊಳಕು ಮಂಡಲ (ರಸೆಲ್ಸ್ ವೈಪರ್) ಮತ್ತು ಗರಗಸ ಮಂಡಲ (ಸಾಸ್ಕೇಲ್ಡ್ ವೈಪರ್). ಸಾವುಗಳನ್ನು ಕಡಿಮೆ ಮಾಡುವುದರಲ್ಲಿರುವ ಅತಿದೊಡ್ಡ ಸವಾಲೆಂದರೆ ಪ್ರತಿವಿಷಸಾರದ ಉತ್ಪಾದನೆ ಯಲ್ಲಿರುವ ಕೊರತೆ.

ತಮಿಳುನಾಡಿನ ಚೆನ್ನೈ, ಕಾಂಚೀಪುರಂ ಮತ್ತು ತಿರುವಲ್ಲೂರು ಜಿಲ್ಲೆಗಳಲ್ಲಿರುವ ಇರುಳ ಬುಡಕಟ್ಟು ಸಮುದಾಯದ ಜನರ ಮುಖ್ಯ ಕುಲಕಸುಬೆಂದರೆ ಹಾವುಗಳನ್ನು ಹಿಡಿಯುವುದು. 60- 70ರ ದಶಕದಲ್ಲಿ ಈ ಸಮುದಾಯದ ಸುಮಾರು 5,000 ಮಂದಿ ಹಾವು ಗಳನ್ನು ಹಿಡಿದು, ಅವುಗಳ ಚರ್ಮವನ್ನು ಚರ್ಮೋದ್ಯಮಕ್ಕೆ
ಒದಗಿಸುತ್ತಿದ್ದರು. 1972ರಲ್ಲಿ ವನ್ಯಜೀವಿ ಸಂರಕ್ಷಣಾ ಅಧಿನಿಯಮದ ಕಾನೂನುಗಳು ಜಾರಿಯಾದಾಗ, ಹಾವುಗಳನ್ನು ಹಿಡಿಯುವುದು ಅಪರಾಧವಾಯಿತು. ಜೀವನೋಪಾಯವನ್ನು ಕಳೆದುಕೊಂಡ ಇರುಳಿಗರ ಬದುಕು ದುರ್ಭರವಾಯಿತು. ಅವರ ನೆರವಿಗೆ ಬಂದ ಭಾರತದ ಪ್ರಸಿದ್ಧ ಉರಗ ವಿಜ್ಞಾನಿ ರೋಮುಲಸ್ ವಿಟೇಕರ್ ಅವರ ಸತತ ಪ್ರಯತ್ನ ಮತ್ತು ಮಾರ್ಗದರ್ಶನ ದಿಂದ 1978ರಲ್ಲಿ ‘ಇರುಳ ಸ್ನೇಕ್ ಕ್ಯಾಚರ್ಸ್ ಇಂಡಸ್ಟ್ರಿ ಯಲ್ ಕೊಆಪರೇಟಿವ್ ಸೊಸೈಟಿ’ ಅಸ್ತಿತ್ವಕ್ಕೆ ಬಂದಿತು.

ಚೆನ್ನೈನಿಂದ 60 ಕಿ.ಮೀ. ದೂರದಲ್ಲಿರುವ ‘ಮದ್ರಾಸ್ ಕ್ರೊಕೊಡೈಲ್ ಪಾರ್ಕ್’ನಲ್ಲಿ ಈ ಸಂಸ್ಥೆಯ ಕೇಂದ್ರವಿದೆ. 366 ಇರುಳಿಗರು ಈ ಸಂಘದ ಸದಸ್ಯತ್ವ ಪಡೆದಿದ್ದಾರೆ. ಅರಣ್ಯದ ಹೊರಭಾಗದಲ್ಲಿ ಕೃಷಿಭೂಮಿ, ಪಾಳುಭೂಮಿ, ಕೈಗಾರಿಕೆ ಮತ್ತು ವಸತಿ ಪ್ರದೇಶಗಳಲ್ಲಿ ಹಿಡಿದ ನಾಲ್ಕು ಪ್ರಭೇದದ ಹಾವುಗಳನ್ನು ಇರುಳಿಗರು ಈ ಕೇಂದ್ರಕ್ಕೆ ತರುತ್ತಾರೆ. ಪ್ರತಿಯೊಂದು ನಾಗರಹಾವು ಮತ್ತು ಕೊಳಕು ಮಂಡಲಕ್ಕೆ ₹ 2,300, ಕಟ್ಟುಹಾವಿಗೆ
₹ 850 ಮತ್ತು ಗರಗಸಮಂಡಲಕ್ಕೆ ₹ 300 ದೊರೆಯುತ್ತದೆ. ಈ ವಿಷಸರ್ಪಗಳಿಂದ ಒಂದು ತಿಂಗಳ ಅವಧಿಯಲ್ಲಿ ನಾಲ್ಕುಬಾರಿ ವಿಷವನ್ನು ಪಡೆಯಲಾಗುತ್ತದೆ. ಅತ್ಯಂತ ಅಪಾಯಕಾರಿಯಾದ ಈ ಕೆಲಸವನ್ನು ವಿಶಿಷ್ಟ ನೈಪುಣ್ಯವಿರುವ, ನುರಿತ ಇರುಳಿಗರು ಸಮರ್ಥವಾಗಿ ನಿರ್ವಹಿಸುತ್ತಾರೆ. ಒಂದು ತಿಂಗಳ ನಂತರ, ಮತ್ತೆ ಹಿಡಿಯದಂತೆ ಗುರುತುಹಾಕಿದ ಈ ಸರ್ಪಗಳನ್ನು ಅವುಗಳ ಆವಾಸದಲ್ಲಿ ಬಿಡಲಾಗುತ್ತದೆ. ಈ ಕೇಂದ್ರದಲ್ಲಿ ಹಾವುಗಳಿಂದ ಪಡೆದ ವಿಷವೇ ‘ಆ್ಯಂಟಿ ವೆನಮ್’ ಉತ್ಪಾದನೆಗೆ ಅಗತ್ಯವಾದ ಮೂಲವಸ್ತು. ನಮ್ಮ ದೇಶದ ಒಟ್ಟು ಬೇಡಿಕೆಯ ಶೇ 80 ಭಾಗದಷ್ಟು ವಿಷಸರ್ಪಗಳ ವಿಷವನ್ನು ಇರುಳ ಸಹಕಾರ ಸಂಘ ಒದಗಿಸುತ್ತದೆ. ಆದರೆ ವರ್ಷಗಳು ಕಳೆದಂತೆ, ಉತ್ಪಾದನೆ ಯಾಗುತ್ತಿರುವ ವಿಷದ ಪ್ರಮಾಣ ಕಡಿಮೆಯಾಗಿ, ಇರುಳಿಗರ ಬದುಕು
ಅತಂತ್ರವಾಗುತ್ತಿದೆ.

ಪ್ರತಿವರ್ಷವೂ ಹಾವುಗಳನ್ನು ಹಿಡಿಯಲು ಇರುಳಿಗರು ಅರಣ್ಯ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಏಪ್ರಿಲ್- ಆಗಸ್ಟ್ ಸರ್ಪಗಳ
ಸಂತಾನೋತ್ಪಾದನೆಯ ಸಮಯವಾದ್ದರಿಂದ ಆ ಅವಧಿ ಯಲ್ಲಿ ಹಾವುಗಳನ್ನು ಹಿಡಿಯುವಂತಿಲ್ಲ. ಆಗಸ್ಟ್‌ನಲ್ಲಿ ಇರುಳಿಗರು ಹಾವು ಹಿಡಿಯಲು ಅರ್ಜಿ ಸಲ್ಲಿಸುತ್ತಾರೆ. ಆ ಋತುವಿನಲ್ಲಿ ಹಿಡಿಯಬಹುದಾದ ಹಾವುಗಳ ಸಂಖ್ಯೆಯನ್ನು ಇಲಾಖೆಯು ನಿರ್ಧರಿಸಿ, ಡಿ. 15ರ ಸುಮಾರಿಗೆ ಪರವಾನಗಿ ನೀಡುತ್ತದೆ. ಮಾರ್ಚ್ ಅಂತ್ಯದ ವೇಳೆಗೆ ಹಾವು ಹಿಡಿಯುವ ಕೆಲಸ ಮುಗಿದಿರಬೇಕು. ಆದರೆ ಅನೇಕ ಸಂದರ್ಭಗಳಲ್ಲಿ ಈ ವೇಳಾಪಟ್ಟಿಯಲ್ಲಿ
ಹೆಚ್ಚುಕಡಿಮೆಯಾಗಿ, ಮಾರ್ಚ್ ಕಡೆಯ ವಾರದಲ್ಲಿ ಪರವಾನಗಿ ದೊರೆತಿರುವುದೂ ಉಂಟು. ಆಗ ಸಂಘ ಉತ್ಪಾದಿಸುವ ವಿಷದ ಪ್ರಮಾಣ ಕಡಿಮೆಯಾಗಿ, ಇರುಳಿಗರ ಆದಾಯವೂ ತೀವ್ರವಾಗಿ ಇಳಿಯುತ್ತದೆ.

ಇರುಳ ಸಹಕಾರ ಸಂಘ ಉತ್ಪಾದಿಸುತ್ತಿರುವ ವಿಷ ಅತ್ಯಮೂಲ್ಯ ಜೈವಿಕ ಸಂಪನ್ಮೂಲ. 2002ರ ಜೈವಿಕ ವೈವಿಧ್ಯ ಅಧಿನಿಯಮದಂತೆ ಈ ಸಂಪನ್ಮೂಲವನ್ನು ಲಾಭದಾಯಕ ವಾಣಿಜ್ಯೋದ್ದೇಶಕ್ಕಾಗಿ ಬಳಸಿಕೊಳ್ಳುವ ಔಷಧ ತಯಾರಿಕಾ ಕಂಪನಿಗಳು, ಆ ಲಾಭಾಂಶದ ನಿರ್ದಿಷ್ಟ ಭಾಗವನ್ನು ಜೈವಿಕ ಸಂಪನ್ಮೂಲದ ಸೃಷ್ಟಿಕರ್ತರು ಅಥವಾ ಸಂರಕ್ಷಕರೊಂದಿಗೆ ಹಂಚಿಕೊಳ್ಳಬೇಕು. ಹಾವಿನ ವಿಷವನ್ನು ಅಧಿಕೃತವಾಗಿ ಸಂಗ್ರಹಿಸಲು ಪರವಾನಗಿ ಇರುವ ದೇಶದ ಏಕಮಾತ್ರ ಸಂಸ್ಥೆಯೆಂದರೆ ಇರುಳ ಸಹಕಾರ ಸಂಘ. ಹೀಗೆ ಸಂಗ್ರಹಿಸಿದ ವಿಷವನ್ನು ಅದು ದೇಶದ ಎಂಟು ಔಷಧ ತಯಾರಿಕಾ ಕಂಪನಿಗಳಿಗೆ ಮಾರುತ್ತದೆ. ಆದರೆ ಇವುಗಳಲ್ಲಿ ಪುಣೆಯಲ್ಲಿರುವ ಒಂದು ಕಂಪನಿ ಮಾತ್ರ, ತಮಿಳುನಾಡು ಜೈವಿಕ ವೈವಿಧ್ಯ ಮಂಡಳಿಯ ಜೊತೆಗೆ ಮೂರು ವರ್ಷಗಳ ಅವಧಿಗೆ 2020ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಇರುಳ ಸಹಕಾರ ಸಂಘದಿಂದ ಪಡೆದ ವಿಷದ ಒಟ್ಟು ಬೆಲೆಯ ಶೇ 5 ಭಾಗವನ್ನು ಪುಣೆ ಕಂಪನಿಯು ಮಂಡಳಿಗೆ ಒಂದು ವರ್ಷ ಮಾತ್ರ ನೀಡಿ ಆನಂತರ ನಿಲ್ಲಿಸಿದೆ.

ಈ ರೀತಿ ಬಂದ ಹಣವನ್ನು ಮಂಡಳಿಯು ಇರುಳ ಸಹಕಾರ ಸಂಘಕ್ಕೆ ವರ್ಗಾಯಿಸಿದೆ. ಆದರೆ ಉಳಿದ ಏಳು ಕಂಪನಿಗಳು ಲಾಭಾಂಶದ ಹಂಚಿಕೆಗೆ ಸಂಬಂಧಪಟ್ಟಂತೆ ಯಾವ ಒಪ್ಪಂದವನ್ನೂ ಮಾಡಿಕೊಂಡಿಲ್ಲ. ಈ ಕಂಪನಿಗಳು ಉತ್ಪಾದಿಸುವ ಆ್ಯಂಟಿ ವೆನಮ್ ಪ್ರಮಾಣ, ಮಾರಾಟದ ಬೆಲೆ, ದೊರೆಯುವ ಲಾಭದಂತಹವುಗಳ ಬಗ್ಗೆ ಮಂಡಳಿಯಲ್ಲಿ ಯಾವ ಮಾಹಿತಿಯೂ ಲಭ್ಯವಿಲ್ಲ. ಆ ಕಂಪನಿಗಳ ವ್ಯಾಪಾರ, ವಹಿವಾಟುಗಳನ್ನು ಗಮನಿಸಿ, ಲಾಭಾಂಶ ಹಂಚಿಕೆಯ ಒಪ್ಪಂದಕ್ಕಾಗಿ ಒತ್ತಾಯಿಸಲು ಬೇಕಾದ ಸಮಯ, ಮಾನವ ಸಂಪನ್ಮೂಲ, ಆರ್ಥಿಕ ಸೌಲಭ್ಯಗಳು ಮಂಡಳಿಗಿಲ್ಲ. ಹೀಗಾಗಿ ಇರುಳಿಗರು ಮತ್ತು ಇರುಳ ಸಹಕಾರ ಸಂಘಕ್ಕೆ, ಜೈವಿಕ ವೈವಿಧ್ಯ ಅಧಿನಿಯಮ ದಡಿಯಲ್ಲಿ ನ್ಯಾಯಬದ್ಧವಾಗಿ ದೊರೆಯಬೇಕಾದ ಪಾಲು ಇನ್ನೂ ಕನಸಿನ ಗಂಟಾಗಿಯೇ ಉಳಿದಿದೆ.

ವಡಿವೇಲು ಗೋಪಾಲ್ ಮತ್ತು ಮಾಸಿ ಸಡೈಯನ್ ಪ್ರಪಂಚದ ವಿವಿಧ ಭಾಗಗಳಲ್ಲಿ ತಮ್ಮ ಅಪರೂಪದ ಕೌಶಲವನ್ನು ಪ್ರದರ್ಶಿಸಿದ್ದಾರೆ. ಅಮೆರಿಕದ ಫ್ಲಾರಿಡಾ ವೈಲ್ಡ್‌ಲೈಫ್ ಕಮಿಷನ್ ಮತ್ತು ಫ್ಲಾರಿಡಾ ವಿಶ್ವ
ವಿದ್ಯಾಲಯದ ಸಹಯೋಗದಲ್ಲಿ ಎವರ್‌ಗ್ಲೇಡ್ಸ್ ರಾಷ್ಟ್ರೀಯ ಉದ್ಯಾನದಲ್ಲಿ 27 ಹೆಬ್ಬಾವುಗಳನ್ನು ಹಿಡಿದಿದ್ದಾರೆ. ಇದೀಗ ಪದ್ಮ ಪ್ರಶಸ್ತಿ ಲಭಿಸಿದೆ. ಅದು ಅವರ ಸಮುದಾಯಕ್ಕೆ, ಇರುಳಿಗರ ಅನನ್ಯ ಕೌಶಲಕ್ಕೆ ಸಂದ ಗೌರವವೆಂಬ ಹೆಮ್ಮೆ ಅವರಿಗಿದೆ. ಆದರೆ ಈ ಯಾವ ಸಾಧನೆಯಿಂದಲೂ ಅವರ ಬಡತನ ದೂರವಾಗಿಲ್ಲ.

‘ಕೆಲವೊಮ್ಮೆ ತಿಂಗಳಿಗೆ 4,000 ರೂಪಾಯಿ ಮಾತ್ರ ದುಡಿಯಲು ಸಾಧ್ಯ. ಅದರಿಂದ ಬದುಕುವುದಾದರೂ ಹೇಗೆ? ಈ ಕಾರಣದಿಂದಲೇ ನನ್ನ ಮೂವರೂ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಸಾಧ್ಯವಾಗಲಿಲ್ಲ.
ಅವರು ಇಂದು ದಿನಗೂಲಿ ಮಾಡುತ್ತಾರೆ. ನಮ್ಮ ಬಡತನದಲ್ಲಿ ನಮಗೆ ಬೇಕಿರುವುದು ನಿಶ್ಚಿತ ಆದಾಯ. ಬದುಕಿಗೊಂದು ಭದ್ರತೆ’ ಎನ್ನುವುದು, ಇಂದು ಇಡೀ ಇರುಳಿಗ ಸಮುದಾಯದ ಕಣ್ಮಣಿಯಾಗಿರುವ ಮಾಸಿ ಸಡೈಯನ್ ಅಳಲು. ಹಾವು ಹಿಡಿಯುವ ವೃತ್ತಿ ನಮ್ಮ ತಲೆಮಾರಿಗೇ ಕೊನೆಗೊಳ್ಳಲಿ ಎಂಬುದು ಬಹುತೇಕ ಇರುಳಿಗರ ಅಭಿಪ್ರಾಯ.

ನಮ್ಮ ದೇಶದ ಆ್ಯಂಟಿ ವೆನಮ್ ಉದ್ಯಮ, ಇರುಳ ಸಹಕಾರ ಸಂಘ ಒದಗಿಸುವ ಸರ್ಪವಿಷದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಇಂದಿನ ಪರಿಸ್ಥಿತಿಯಲ್ಲಿ, ಇರುಳಿಗರು ಮತ್ತು ಅವರ ಅಪೂರ್ವ ಕೌಶಲದ ರಕ್ಷಣೆಗೆ ಅತಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.