ವಿದ್ಯೆ ಎಂಬುದು ಪಡೆಯುವ ಮತ್ತು ಕೊಡುವ ಸಂಗತಿ, ಮನುಷ್ಯ ಪ್ರಾಣಿಗಳನ್ನು ಮಾನವ ಸಮುದಾಯದ ಸದಸ್ಯರನ್ನಾಗಿಸುವುದೇ ವಿದ್ಯೆ ಎಂದು ಶರಣರು 12ನೇ ಶತಮಾನದಲ್ಲಿಯೇ ಹೇಳಿದ್ದರು. ಆ ಮೂಲಕ ಅಕ್ಷರ ಮತ್ತು ಅರಿವು ಪ್ರತಿಯೊಬ್ಬರಿಗೂ ಸಿಗುವಂತಾಗಬೇಕೆಂದು ಆಶಿಸಿದ್ದರು. ಆದರೆ ಹಲವು ಸಂಘರ್ಷಗಳ ಬಳಿಕ ಸಾರ್ವಜನಿಕ ಶಿಕ್ಷಣದ ಪರಿಕಲ್ಪನೆ ಭಾರತದಲ್ಲಿ ಮೂಡಿದ್ದು ಬ್ರಿಟಿಷರ ಕಾಲದಲ್ಲಿಯೇ ಎಂಬುದು ಚಾರಿತ್ರಿಕ ವ್ಯಂಗ್ಯ.

ಮೊದಲು ನಮ್ಮಲ್ಲಿ ನಿರ್ದಿಷ್ಟ ಸಮುದಾಯದವರಿಗೆ ಮೀಸಲಾಗಿದ್ದ ಶಿಕ್ಷಣ, ಲೌಕಿಕ ಬದುಕಿಗಿಂತಲೂ ಹೆಚ್ಚಾಗಿ ಆಧ್ಯಾತ್ಮಿಕ ಅಭೀಪ್ಸೆಯನ್ನು ತಣಿಸುತ್ತಿತ್ತು. ಉಳಿದಂತೆ ಆಯಾ ಕುಲ ಕಸುಬಿನವರು ವ್ಯವಹಾರ ಕೌಶಲವನ್ನು ವಂಶಪಾರಂಪರ್ಯವಾಗಿ ಕಲಿಯುತ್ತಿದ್ದರು. ಹೀಗಿರುವಾಗ ವಿವಿಧ ವಸ್ತು ಉತ್ಪಾದನಾ ಜ್ಞಾನಶಿಸ್ತುಗಳನ್ನು ವಿದ್ಯೆ ಎಂದು ಪರಿಗಣಿಸಲಿಲ್ಲ. ತತ್ಪರಿಣಾಮವಾಗಿ ಅಸಮಾನ ಸಮಾಜ ವ್ಯವಸ್ಥೆಯು ದೈವೀಕರಣಗೊಂಡು ಅದೇ ಸ್ಥಾಯಿಯಾಗಿತ್ತು.

ಬ್ರಿಟಿಷರು ತಮ್ಮ ಸಾಮ್ರಾಜ್ಯದ ಅಭಿವೃದ್ಧಿಗಾಗಿ ಪರಿಚಯಿಸಿದ ಸಾರ್ವಜನಿಕ ಶಿಕ್ಷಣವು ಭಾರತೀಯರ ಬದುಕನ್ನು ಬದಲಿಸಿದ್ದು ಚಾರಿತ್ರಿಕ ಸತ್ಯ. ಬ್ರಿಟಿಷ್ಭಾರತದಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಮಟ್ಟದವರೆಗೆ ಸಂಪೂರ್ಣ ಶಿಕ್ಷಣವನ್ನು ಎಲ್ಲರಿಗೂ ನೀಡಬೇಕೆಂದು ಶಿಫಾರಸು ಮಾಡಲಾಗಿತ್ತು. ಸ್ವತಂತ್ರ ಭಾರತವಂತೂ ಶಿಕ್ಷಣವು ಪ್ರಜೆಗಳ ಮೂಲಭೂತ ಹಕ್ಕಾಗಿಸಿತು. ಜವಾಬ್ದಾರಿಯುತ ಸರ್ಕಾರವು ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ನೀಡುವುದನ್ನು ಕಾಲಬದ್ಧ ಯೋಜನೆಯಾಗಿ ಘೋಷಿಸಿತು.

ವಿಶಾಲವಾದ ದೇಶಕ್ಕೆ ಬೇಕಾದಷ್ಟು ಶಾಲಾ ಕಾಲೇಜುಗಳನ್ನು ತೆಗೆಯುವುದು ಅದೇ ತಾನೆ ಅಸ್ತಿತ್ವಕ್ಕೆ ಬಂದಿದ್ದ ಹೊಸ ಸರ್ಕಾರಕ್ಕೆ ಸಾಧ್ಯವಿರಲಿಲ್ಲ. ಈ ಕೊರತೆಯನ್ನು ನೀಗಿಸಲು ಸ್ವಾತಂತ್ರಪೂರ್ವ ಕಾಲದಿಂದಲೂ ಕ್ರಿಯಾಶೀಲವಾಗಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದೆ ಬಂದವು. ಒಂದು ರೀತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬುನಾದಿ ಹಾಕಿದವು.

೧೮೨೦ರಲ್ಲಿ ಮಹಾರಾಷ್ಟ್ರದಲ್ಲಿ ಬಾಂಬೆ ಎಜುಕೇಷನ್ ಸೊಸೈಟಿ ಎಂಬ ಮೊದಲ ಖಾಸಗಿ ಶಿಕ್ಷಣ ಸಂಸ್ಥೆ ಪ್ರಾರಂಭವಾಯಿತು. ಈ ಸಂಸ್ಥೆ ತುಂಬಾ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲದೇ ಶಿಕ್ಷಣ ಪ್ರಸಾರದಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದ ಅನಿವಾರ್ಯವನ್ನು ಎತ್ತಿ ಹಿಡಿಯಿತು. ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಬಂಡವಾಳ ಕೇಂದ್ರಿತ ಉದ್ಯಮವಾಗಿ ಹೊರಳು ಹಾದಿ ಹಿಡಿದಿವೆ. ಅದಕ್ಕೂ ಸರ್ಕಾರದ ಹೊಸ ಆರ್ಥಿಕ ನೀತಿಗಳೇ ಕಾರಣ.

ಪ್ರಾರಂಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಸೇವಾ ವಲಯವೇ ಆಗಿದ್ದವು. ಶಿಕ್ಷಣ ಪ್ರಸಾರ ಪ್ರಚಾರವೇ ಇವುಗಳ ಗುರಿಯಾಗಿತ್ತು. ಇವು ಕೊಡಮಾಡುವ ಪ್ರಮಾಣ ಮತ್ತು ಗುಣಮಟ್ಟವನ್ನು ಪರಿಗಣಿಸಿಯೇ ಸರ್ಕಾರ ಅನುದಾನ ನೀಡುವ ಪದ್ಧತಿಯನ್ನು ಜಾರಿಯಲ್ಲಿ ತಂದಿತು. ಈ ಅನುದಾನ ನೀಡುವ ಪದ್ಧತಿಯು ೧೮೧೩ರಲ್ಲಿ ಪ್ರಾರಂಭವಾಯಿತು. ಆಗಿನ ಮುಂಬೈ ಸರ್ಕಾರ ಪ್ರಥಮ ಬಾರಿಗೆ ಇಂತಹದೊಂದು ಕಾಯ್ದೆ ಪಾಸು ಮಾಡಿ ಜಾಗತಿಕ ಮಟ್ಟದಲ್ಲಿಯೇ ದೊಡ್ಡ ಕ್ರಾಂತಿ ಮಾಡಿತು.

ಏಕೆಂದರೆ ೧೮೩೩ರವರೆಗೆ ಬ್ರಿಟನ್ನಿನಲ್ಲಿಯೂ ಶಾಲೆಗಳಿಗೆ ಅನುದಾನ ನೀಡುವ ಪದ್ಧತಿ ಇರಲಿಲ್ಲ. ಆದಾಗ್ಯೂ ಭಾರತದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವ ಪದ್ಧತಿಗೆ ಚಾಲನೆ ಸಿಕ್ಕಿದ್ದು ಹಂಟರ್ ಕಮಿಷನ್ನಿಂದಲೇ. ೧೮೮೨ರ ಅಕ್ಟೋಬರ್ ೧೯ ರಂದು ಭಾರತದ ಶೈಕ್ಷಣಿಕ ವ್ಯವಸ್ಥೆಯನ್ನು ಉನ್ನತೀಕರಿಸಲು ನೇಮಿಸಲಾದ ಹಂಟರ್ ಕಮಿಷನ್ಗೆ ತಮ್ಮ ಶಿಫಾರಸುಗಳನ್ನು ನೀಡುವಾಗ ಆಗಿನ ಶಿಕ್ಷಣತಜ್ಞ ಜ್ಯೋತಿರಾವ್ ಫುಲೆ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಇಲಾಖೆಯ ನಿಯಮಗಳ ಪ್ರಕಾರ ನಡೆಯುತ್ತಿದ್ದರೆ ಅವುಗಳಿಗೆ ನಗರಪಾಲಿಕೆ ಅನುದಾನ ನೀಡಬೇಕು (ಆಗ ನಗರಪಾಲಿಕೆ ಮಟ್ಟದಲ್ಲಿ ಶಿಕ್ಷಣ ಇಲಾಖೆ ಇರುತ್ತಿತ್ತು), ಅನುದಾನ ಹಂಚಲು ಸರಿಯಾದ ನಿಯಮಗಳನ್ನು ರಚಿಸಬೇಕು ಎಂದು ಹೇಳಿದ್ದರು.

ಈ ವ್ಯವಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರಿತು. ಆದ್ದರಿಂದಲೇ ಅನುದಾನ ಪದ್ಧತಿಯು ಸ್ವಾತಂತ್ರ್ಯೋತ್ತರ ಕಾಲದಲ್ಲಿಯೂ ಮುಂದುವರಿಯಿತು. ಈ ಅನುದಾನ ವ್ಯವಸ್ಥೆಯಿಂದಾಗಿ ದೇಶದಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಕವಾಗಿ ಹುಟ್ಟಿಕೊಂಡು ಸರ್ಕಾರಕ್ಕೆ ಹೆಗಲೆಣೆಯಾಗಿ ನಿಂತಿದ್ದವು. ಹಾಗೆ ನೋಡಿದರೆ ಸರ್ಕಾರವೇ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂಪೂರ್ಣ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ನಿಭಾಯಿಸಬೇಕಿತ್ತು.

ಭಾರತದಂತಹ ದೊಡ್ಡ ಪ್ರಜಾಪ್ರಭುತ್ವವಾದಿ ದೇಶಕ್ಕೆ ಇದು ಅಸಾಧ್ಯವೇನಾಗಿರಲಿಲ್ಲ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಬೃಹತ್ ಪ್ರಮಾಣದಿಂದ ಮತ್ತು ಗುಣಮಟ್ಟದ ಶಿಕ್ಷಣದ ದಕ್ಕುವಿಕೆಯಿಂದಾಗಿ ಸರ್ಕಾರ– ಖಾಸಗಿ ಸಹಭಾಗಿತ್ವವು ಕಾಯಮ್ಮಾಗಿ ಮುಂದುವರಿದಿತ್ತು. ಈ ಅನುದಾನ, ಭಿಕ್ಷೆಯೂ ಅಲ್ಲ ಯಾರ ಹಂಗೂ ಅಲ್ಲ. ಹೀಗಾಗಿಯೇ ಇಂದು ಒಟ್ಟು ಶಿಕ್ಷಣ ಪ್ರಸಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳದ್ದೇ ಸಿಂಹಪಾಲು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕರ್ನಾಟಕ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಅನುದಾನ ನಿಯಂತ್ರಣ ಎಂಬ ಹೊಸ ಕಾಯ್ದೆ ತಂದಿರುವುದು ಆಘಾತಕಾರಿ.

ಈ ಕಾಯ್ದೆಯ ಅನ್ವಯ ೧೯೯೬ರ ನಂತರ ಅನುದಾನಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಸೇವಾ ಭದ್ರತೆಯನ್ನು ನೀಡಲಾಗುವುದಿಲ್ಲವೆಂದು ವ್ಯಾಖ್ಯಾನಿಸಲಾಗುತ್ತಿದೆ. ‘ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ (ವೇತನ, ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳ ನಿಯಂತ್ರಣ) ಅಧಿನಿಯಮ – ೨೦೧೪’ ಎಂಬ ಹೆಸರಿನ ಈ ಕಾಯ್ದೆಯು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮೇಲೆ ಹದ್ದಿನಂತೆ ಎರಗತೊಡಗಿದೆ.

ಇದರ ಅನ್ವಯ ೧೯೯೬ಕ್ಕಿಂತ ಮೊದಲು ಸೇವೆ ಸಲ್ಲಿಸಿದ ಅವಧಿಯನ್ನು ಅನುದಾನ ರಹಿತವೆಂದು ಹಾಗೂ ಅಲ್ಲಿ ಈಗಾಗಲೇ ನೀಡಲಾದ ವಾರ್ಷಿಕ ಬಡ್ತಿ, ಮುಂಬಡ್ತಿ ಇತ್ಯಾದಿ ಸೌಲಭ್ಯಗಳನ್ನು ಕಾಲ್ಪನಿಕವೆಂದು, ಇವುಗಳನ್ನು ಹಿಂಪಡೆಯಬೇಕೆಂದು ಹೊರಟಿದೆ. ಈ ಕಾಯ್ದೆಯು ಪ್ರಾಥಮಿಕದಿಂದ ಉನ್ನತ ಮಟ್ಟದವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುವುದಾದರೂ ಇದು ಪ್ರಧಾನವಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ವೇತನ ಪಡೆಯುತ್ತಿರುವ ಖಾಸಗಿ ಪದವಿ ಕಾಲೇಜುಗಳ ಸಿಬ್ಬಂದಿಯನ್ನು ಗುರಿ ಮಾಡಿಕೊಂಡಂತಿದೆ.

ಶೈಕ್ಷಣಿಕ ಅನುದಾನ ಪದ್ಧತಿಯನ್ನು ಅನುದಾನರಹಿತ ಅವಧಿಗೂ ಅನ್ವಯಿಸಲಾಗುತ್ತಿತ್ತು. ೧೯೯೬ರ ನಂತರ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ ಎಂಬ ನೆಪವೊಡ್ಡಿ ಅನುದಾನರಹಿತ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳು ತನ್ನ ಸಿಬ್ಬಂದಿಗೆ ನೀಡಿದ ಮೊತ್ತವನ್ನು ಮರಳಿಸಲಾಗದೆಂದು ಷರತ್ತು ವಿಧಿಸಿತ್ತು. ಆದರೆ ಹಿಂದಿನ ಬಾಕಿ ಕೊಡಲಾಗದಿದ್ದರೂ ಸಿಬ್ಬಂದಿಯು ಅನುದಾನರಹಿತ ಅವಧಿಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ವೇತನ ನಿಗದೀಕರಣ, ಮುಂಬಡ್ತಿ ಮತ್ತು ಇತರ ಸೌಲಭ್ಯಗಳನ್ನು ನೀಡಿತ್ತು.

ಈಗ ಜಾರಿ ಮಾಡಲು ಹೊರಟಿರುವ ಹೊಸ ಕಾನೂನಿನ ಪ್ರಕಾರ ಅನುದಾನರಹಿತ ಅವಧಿಯಲ್ಲಿ ಸಲ್ಲಿಸಿದ ಸೇವೆಯನ್ನು ಕಾಲ್ಪನಿಕವೆಂದು ವ್ಯಾಖ್ಯಾನಿಸಿ ಆ ಅವಧಿಯಲ್ಲಿ ನೀಡಲಾದ ಮುಂಬಡ್ತಿ ಹಾಗೂ ಇತರ ಸೌಲಭ್ಯಗಳನ್ನು ಹಿಂಪಡೆಯಲು ಹೊರಟಿದೆ. ಇದು ತೀರಾ ಅವೈಜ್ಞಾನಿಕ ಮತ್ತು ಅತಾರ್ಕಿಕ ನಡೆ ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ ಈ ಕಾಯ್ದೆಯನ್ನು ೧೯೯೫ ರಿಂದಲೇ ಪೂರ್ವಾನ್ವಯಗೊಳಿಸಿ ಈಗಾಗಲೇ ಕೊಡ ಮಾಡಿದ ಸೌಲಭ್ಯಗಳನ್ನು ಕಸಿದುಕೊಳ್ಳಲು ಹೊರಟಿದ್ದು ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ.

ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿರುವ ಕನಿಷ್ಠ ವೆಚ್ಚವನ್ನು ಸರ್ಕಾರ ಆರ್ಥಿಕ ಹೊರೆ ಎಂದು ಪರಿಗಣಿಸುತ್ತಿರುವುದೇ ದುರಂತ. ಹಾಗೆ ನೋಡಿದರೆ ಉನ್ನತ ಶಿಕ್ಷಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈವರೆಗೆ ವಿನಿಯೋಗಿಸಿದ ಹಣ ತೀರ ಅತ್ಯಲ್ಪ. ಅಂಕಿಸಂಖ್ಯೆಗಳು ಇದನ್ನು ಸೂಚಿಸುತ್ತವೆ. ಕೇಂದ್ರ ಸರ್ಕಾರ ಉನ್ನತ ಶಿಕ್ಷಣಕ್ಕಾಗಿ ೧೯೮೦-– ೯೦ರಲ್ಲಿ ಶೇ ೬.೩ರಷ್ಟು ಹಣ ನೀಡಿದರೆ, ೧೯೯೦–-೨೦೦೦ದಲ್ಲಿ ಶೇ ೪.೮ರಷ್ಟು ನೀಡಿದೆ. ೨೦೦೦–-೨೦೧೨ರ ಅವಧಿಯಲ್ಲಿ ಶೇ ೬.೨ ರಷ್ಟು ಹಣ ಖರ್ಚು ಮಾಡಿದೆ.

ರಾಜ್ಯ ಸರ್ಕಾರ ೧೯೮೦–೧೯೯೦ರಲ್ಲಿ ಶೇ ೭ ರಷ್ಟು, ೧೯೯೦–೨೦೦೦ರಲ್ಲಿ ಶೇ ೩.೭ರಷ್ಟು, ನಂತರ ೨೦೦೦–-೨೦೧೨ ರಲ್ಲಿ ಶೇ ೪.೨ರಷ್ಟು ಹಣ ವ್ಯಯಿಸಿವೆ. ತನ್ನ ಒಟ್ಟು ಜಿಡಿಪಿಯಲ್ಲಿ ರಾಜ್ಯಗಳು ದಶಕದಿಂದ ದಶಕಕ್ಕೆ ಶಿಕ್ಷಣಕ್ಕೆ ನೀಡುತ್ತಿರುವ ಹಣದಲ್ಲಿ ಕಡಿತ ಮಾಡುತ್ತಲೇ ಬರುತ್ತಿವೆ. ೧೯೮೦–-೧೯೯೦ರಲ್ಲಿ ಒಟ್ಟು ಜಿಡಿಪಿಯ ಶೇ ೦.೩೨ ರಷ್ಟು ಹಣ ನೀಡಿದರೆ ೧೯೯೦–-೨೦೦೧ರಲ್ಲಿ ಇದರ ಪ್ರಮಾಣ ಶೇ ೦.೩೦ಕ್ಕೆ ಇಳಿದಿದೆ. ೨೦೦೧–-೨೦೧೦ರಲ್ಲಿ ಇದರ ಪ್ರಮಾಣ ಮತ್ತೆ ಶೇ ೦.೨೭ಕ್ಕೆ ಕುಸಿದಿದೆ. ಇದು ಉನ್ನತ ಶಿಕ್ಷಣದ ಬಗೆಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯವನ್ನು ತೋರಿಸುತ್ತಿದೆ.

ಸರ್ಕಾರ ಒಂದೆಡೆ, ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸುವುದಾಗಿ ಘೋಷಿಸುತ್ತಿದೆ. ಇನ್ನೊಂದೆಡೆ ಉನ್ನತ ಶಿಕ್ಷಣವನ್ನು ಅನುತ್ಪಾದಕ ಕ್ಷೇತ್ರ ಅಥವಾ ಗ್ರಾಹಕಸರಕು ಎಂದು ಪರಿಭಾವಿಸುತ್ತದೆ. ಸರ್ಕಾರಕ್ಕೆ ಶಿಕ್ಷಣ ಕುರಿತಂತೆ ಉದ್ದೇಶಪೂರ್ವಕ ಗೊಂದಲಗಳಿವೆ. ವಾಣಿಜ್ಯ, ವಿಜ್ಞಾನ ಮುಂತಾದ ಪದವಿಗಳಲ್ಲದೆ ತಾಂತ್ರಿಕ, ವೈದ್ಯಕೀಯ ಹಾಗೂ ಇತರೆ ವೃತ್ತಿಪರ ಶಿಕ್ಷಣವೂ ಒಂದು ದೇಶದ ಅಭಿವೃದ್ಧಿಗೆ ಅತ್ಯಂತ ಅವಶ್ಯ. ದೇಶವನ್ನು ನಡೆಸಲು ಬೇಕಾದ ಕಾರ್ಯ ಕೌಶಲ, ಮೌಲ್ಯ ಮತ್ತು ಅರಿವು ನೀಡುವುದೇ ಪದವಿ ಶಿಕ್ಷಣ.

ಅಕ್ಷರ ಕಲಿಸುವಷ್ಟಕ್ಕೆ ಶಿಕ್ಷಣ ನಿಂತು ಹೋದರೆ ಅದು ಅನುಪಯುಕ್ತ. ಎಲ್ಲ ಜ್ಞಾನಶಿಸ್ತುಗಳ ತಿಳಿವಳಿಕೆ ಮತ್ತು ಮೌಲ್ಯಗಳ ಸಂವರ್ಧನೆಗೆ ಉನ್ನತ ಶಿಕ್ಷಣವೇ ಏಕೈಕ ದಾರಿ. ಹೀಗಾಗಿ ಸರ್ಕಾರವು ಶಿಕ್ಷಣಕ್ಕಾಗಿ ಮಾಡುವ ವೆಚ್ಚದಲ್ಲಿ ಹಂತದಿಂದ ಹಂತಕ್ಕೆ ಏರಿಕೆಯಾಗಬೇಕೆ ಹೊರತು ಇಳಿಕೆಯಲ್ಲ. ಹಾಗೆಯೇ ಹೆಚ್ಚಾಗುತ್ತಿರುವ ಜನಸಂಖ್ಯೆಯನ್ವಯ ದಶಕದಿಂದ ದಶಕಕ್ಕೆ ಶಿಕ್ಷಣಕ್ಕೆ ನೀಡುವ ಅನುದಾನ ವೃದ್ಧಿಯಾಗಬೇಕು.

ದುರಂತವೆಂದರೆ ನಮ್ಮ ಸರ್ಕಾರ ರಕ್ಷಣಾ ಇಲಾಖೆಗೆ ಬಜೆಟ್ನಲ್ಲಿ ತೆಗೆದಿರಿಸುವ ಹಣದಲ್ಲಿ ಅರ್ಧದಷ್ಟನ್ನೂ ಶಿಕ್ಷಣಕ್ಕಾಗಿ ನೀಡುತ್ತಿಲ್ಲ. ಈ ಎರಡೂ ಇಲಾಖೆಗೂ ಅವಿನಾ ಸಂಬಂಧವಿದೆ. ದೇಶದ ಪ್ರಜೆಗಳು ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಕಾರ್ಯ ಕುಶಲತೆ ಪಡೆದಷ್ಟೂ ಸಂವೇದನಾಶೀಲರಾಗುತ್ತಾರೆ. ಆದ್ದರಿಂದ ಯುವಜನತೆಗೆ ಉನ್ನತ ಮಟ್ಟದ ತಾಂತ್ರಿಕ, ವೈದ್ಯಕೀಯ, ಸಾಮಾನ್ಯ ಪದವಿ, ವೃತ್ತಿಪರ ಹೀಗೆ ಎಲ್ಲ ಶಿಕ್ಷಣ ನೀಡುವುದು ಸರ್ಕಾರದ ಆದ್ಯತೆಯಾಗಬೇಕು.

ಹಣಕಾಸಿನ ಹೊರೆ ಎಂಬ ನೆಪವೊಡ್ಡಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನೀಡಿದ ಸೌಲಭ್ಯಗಳನ್ನು ಹಿಂಪಡೆಯುವುದು ಅಸಂಬದ್ಧ ಅಷ್ಟೇ ಅಲ್ಲ ಅನರ್ಥಕಾರಿ. ಹೊಸ ಶಿಕ್ಷಣ ನೀತಿಯಲ್ಲಿ ಘೋಷಿಸಿಕೊಂಡಿರುವಂತೆ ಉನ್ನತ ಶಿಕ್ಷಣವನ್ನು ಸರ್ಕಾರ ಒಂದೆಡೆ ಸಂಪೂರ್ಣ ಖಾಸಗೀಕರಣ ಮಾಡತೊಡಗಿದರೆ, ಇನ್ನೊಂದೆಡೆ ಅಸ್ತಿತ್ವದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉಸಿರುಗಟ್ಟಿಸುವ ಕಾಯ್ದೆ ತರಲು ಹೊರಟಿದೆ. ಸರ್ಕಾರ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ತನ್ನ ಹೊಣೆಯನ್ನು ಸಂಪೂರ್ಣ ಕಳಚಿಕೊಳ್ಳಲು ಹೊರಟಿದೆ ಎಂಬುದನ್ನು ಈ ದ್ವಂದ್ವ ನೀತಿ ಬಯಲಿಗೆಳೆಯುತ್ತದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ನಿರ್ಬಂಧವೆಂದರೆ ಸಂಪೂರ್ಣ ಖಾಸಗೀಕರಣಕ್ಕೆ ರತ್ನಗಂಬಳಿ ಹಾಸಿದಂತೆ.

ಈ ವಿಷಯವನ್ನು ಕರ್ನಾಟಕ ರಾಜ್ಯ ಖಾಸಗಿ ಕಾಲೇಜು ಅಧ್ಯಾಪಕರ ಒಕ್ಕೂಟವು ಸರ್ಕಾರಕ್ಕೆ ಮನವರಿಕೆ ಮಾಡಲು ಹಲವು ಬಾರಿ ಪ್ರಯತ್ನಿಸಿದೆ. ಇದನ್ನು ಕೇವಲ ಅಧ್ಯಾಪಕರ ಸಂಬಳದ ಪ್ರಶ್ನೆಯಾಗಿ ಪರಿಗಣಿಸದೆ ರಾಜ್ಯಾದಾದ್ಯಂತ ಶಿಕ್ಷಣ ಪಡೆಯುತ್ತಿರುವ ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಜ್ಞಾನದ ಗಳಿಕೆಯಾಗಿ ಪರಿಗಣಿಸಬೇಕಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.