‘ಈ ಭೂಪತಿಗಳ ಮೆಚ್ಚಿ ಅರಸುಖಃ ತನಗಾಯ್ತು,
ತಾ ಪೂರ್ಣ ಸುಖ ಇಲ್ಲದೆ ಹೋಯ್ತು,
ಆ ಪರಬ್ರಹ್ಮ ಒಲಿದರೆ ಏನಾಯಿತು
ಈ ಪರಿಭವವೆಲ್ಲ ಹರಹರದ್ಹೋಯ್ತು’
-–ಇದು ೧೮ನೇ ಶತಮಾನದಲ್ಲಿ ಬಾಳಿದ್ದ ಕಲಬುರ್ಗಿ ಜಿಲ್ಲೆಯ ಕಡಕೋಳ ಮಡಿವಾಳಪ್ಪನವರು ಬರೆದ ತತ್ವಪದವೊಂದರ ಪಲ್ಲವಿಯಾಗಿದೆ. ಈ ಸಾಲುಗಳು ಪ್ರಭುತ್ವದ ದಬ್ಬಾಳಿಕೆಯಡಿ ಸಿಲುಕಿ ನಲುಗಿದ ಜನಸಾಮಾನ್ಯರ ಬವಣೆಯನ್ನು ಧ್ವನಿಸುತ್ತವೆ. ಶ್ರಮಪಟ್ಟರೆ ಬ್ರಹ್ಮನಂಥ ಬ್ರಹ್ಮ ಬೇಕಾದರೂ ಒಲಿಯಬಹುದು.

ಆದರೆ ಎಷ್ಟೇ ಓಲೈಸಿದರೂ ಆಳುವ ಭೂಪತಿಗಳು ಮಾತ್ರ ಯಾವತ್ತೂ ಒಲಿಯರು. ಅರ್ಥಾತ್ ಜನರ ಬದುಕಿನ ಒಳಿತಿಗಾಗಿ ಅವರೆಂದೂ ಚಿಂತಿಸುವುದಿಲ್ಲ ಎಂದು ಮಡಿವಾಳಪ್ಪ ನೇರವಾಗಿ ಅಂದಿನ ಪ್ರಭುತ್ವವನ್ನು ಟೀಕಿಸುತ್ತಾರೆ. ಜನ ಬದುಕಲೆಂದು ಕಾವ್ಯ ಕೃಷಿಗೈದವರಲ್ಲಿ ೧೨ನೇ ಶತಮಾನದ ಶಿವಶರಣರ ನಂತರ ಕನ್ನಡದ ತತ್ವಪದಕಾರರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.

ವಚನದಂತೆ ತತ್ವಪದ ಪ್ರಕಾರಕ್ಕೂ ಶಿವಶರಣರೇ ಮೊದಲಿಗರು ಎಂಬ ಅಭಿಪ್ರಾಯ-ವಿದೆಯಾದರೂ ಈ ಪ್ರಕಾರ ವ್ಯಾಪಕವಾದದ್ದು ಹಾಗೂ ಪರಿಣಾಮಕಾರಿಯಾದದ್ದು ೧೭, ೧೮ನೇ ಶತಮಾನಗಳ ಸಂದರ್ಭದಲ್ಲಿ. ಶಿವಶರಣರಲ್ಲಿ ಬೀಜಾಂಕುರವಾಗಿದ್ದದ್ದು, ನಿಜಗುಣ ಶಿವಯೋಗಿ ಮುಂತಾದವರಲ್ಲಿ ಕುಡಿಯೊಡೆದು, ಕಡಕೋಳ ಮಡಿವಾಳಪ್ಪ, ಶಿಶುನಾಳ ಶರೀಫರ ಹೊತ್ತಿಗೆ ದಾಂಗುಡಿಯಿಟ್ಟು ವಸಾಹತುಶಾಹಿ ಕಾಲದಲ್ಲಿ ಭರ್ತಿ ಸುಗ್ಗಿ ಮಾಡಿದ ಈ ತತ್ವಪದ ಪ್ರಕಾರವು ಕನ್ನಡ ಸಾಹಿತ್ಯ ಚರಿತ್ರೆಕಾರರ ಅವಜ್ಞೆಗೆ ಒಳಗಾದದ್ದೂ ಇದೆ. ೧೭ರಿಂದ ೨೦ನೇ ಶತಮಾನದ ಅವಧಿಯಲ್ಲಿ ಕನ್ನಡ ನಾಡು ಮತ್ತು ಗಡಿಭಾಗಗಳುದ್ದಕ್ಕೂ ನೂರಾರು ತತ್ವಪದಕಾರರು ಸಾವಿರಾರು ಕೃತಿಗಳನ್ನು ರಚಿಸಿ ಹರವಿ ಹೋಗಿದ್ದಾರೆ.

ಅನುಭಾವಜನ್ಯ ಹೃತ್ಕಾವ್ಯ ಕಾರಂಜಿಯಂತೆ ಪುಟಿದು ಬಂದ ಈ ಪದಗಳು ಜನಪದರ ನಿಧಿಗಳಾಗಿ ಮೌಖಿಕ ಪರಂಪರೆಯಲ್ಲಿಯೇ ದಾಖಲಾಗುತ್ತ ಪಯಣ ಬೆಳೆಸಿದವು. ಜನಸಾಮಾನ್ಯ ದುಡಿಯುವ ವರ್ಗದ ದೇಣಿಗೆಯಾಗಿ ಸೃಷ್ಟಿಯಾದ ಅವು ತನ್ನಲ್ಲಿ ಗರ್ಭೀಕರಿಸಿಕೊಂಡಿರುವ ಜೀವನಾನುಭವದಿಂದಾಗಿ ಚಲನಶೀಲತೆಯನ್ನು ಮೈಗೂಡಿಸಿಕೊಂಡಿವೆ. ಶಿವಯೋಗಿ, ಸಾಧು, ಸಂತ, ಮೌಲ್ವಿ, ಮುಲ್ಲಾಗಳಾದಿಯಾಗಿ ಸಾಮಾನ್ಯ ಸಂಸಾರಿಗಳು ಕೂಡ ಇವುಗಳನ್ನು ರಚಿಸಿ ಕನ್ನಡ ಸಾಹಿತ್ಯ ಪರಂಪರೆಗೆ ವೈವಿಧ್ಯವನ್ನು ತಂದು ಕೊಟ್ಟರು. ಸಾಮಾನ್ಯ ಲೋಕಾನುಭಾವದಿಂದ ಉನ್ನತ ದಾರ್ಶನಿಕ ನಿಲುವುಗಳವರೆಗೆ ಇದರ ಹರಹು.

ಶರಣ, ಸಂತ, ಆರೂಢ, ನಾಥ, ಸಿದ್ಧ, ಶಾಕ್ತ, ಸೂಫಿ ಮುಂತಾದ ಆಯಾ ಕಾಲದ ಸಂವೇದನೆಗಳನ್ನು ಅನುರಣಿಸುತ್ತಿರುವ ಇವುಗಳ ಕ್ಯಾನವಾಸ್ ತುಂಬಾ ವೈವಿಧ್ಯಪೂರ್ಣವಾಗಿದೆ. ಸ್ಥಗಿತಗೊಂಡಿದ್ದ ಸನಾತನತೆಗೆ ಸೆಡ್ಡು ಹೊಡೆದು ಪರ್ಯಾಯ ದಾರ್ಶನಿಕತೆಯನ್ನು ಅಸ್ತಿತ್ವಗೊಳಿಸಿದ್ದು ಇದೆ. ಇಂಥ ಅಪರೂಪದ ಜೀವಂತ ಪರಂಪರೆಯೊಂದು ಶಿಷ್ಟ ಸಾಹಿತ್ಯ ಚರಿತ್ರೆಯ ಪರಿಧಿಯಿಂದ ದೂರವೇ ಉಳಿದದ್ದು ಚಾರಿತ್ರಿಕ ಪ್ರಮಾದವೇ ಹೌದು. ಉದ್ದೇಶಪೂರ್ವಕವಾಗಿ ಹೀಗಾಗಿರಲಿಕ್ಕಿಲ್ಲವಾದರೂ ವಸಾಹತುಶಾಹಿ ಪ್ರವಾಹದ ಹೊಡೆತದಲ್ಲಿ ಈ ದೇಶಿ ರಚನಾ ಸಮೃದ್ಧತೆಯನ್ನು ತಳಕ್ಕೆ ದೂಡಲಾಯಿತು.

ಆಧುನಿಕ ಯುರೋಪಿನ ಸಾಹಿತ್ಯಕ ವಾದಗಳು, ಸಾಹಿತ್ಯರೂಪ ಮತ್ತು ಪರಿಕಲ್ಪನೆಗಳನ್ನು ಮೈಗೂಡಿಸಿಕೊಳ್ಳುವ ಭರಾಟೆಯಲ್ಲಿ ಜನಪದರ ಜೀವನಾಡಿಯಾಗಿದ್ದ ಗುರು–ಶಿಷ್ಯ ಪರಂಪರೆಯ ಭಜನಾ ಪದಗಳು ಪಾಮರರ ಅಕಾರಣ ಚಟುವಟಿಕೆಗಳೆಂದೇ ಪರಿಗಣಿತವಾದವು. ಕುತೂಹಲ ಕ್ಕಾಗಿ ಅಲ್ಲಲ್ಲಿ ಕ್ವಚಿತ್ ಸಂಪಾದನೆ, ಅಧ್ಯಯನಕ್ಕೆ ಒದಗಿ ಬಂದರೂ ಅವು ಶುದ್ಧ ಜಾನಪದೀಯ ರೂಪವೆಂದೇ ಗುರುತಿಸುವ ಪ್ರಯತ್ನಗಳಾದವು. ಅವುಗಳನ್ನು ಪಾಶ್ಚಾತ್ಯ ಜಾನಪದೀಯ ಸಿದ್ಧಾಂತಗಳ ಅಡಿಯಲ್ಲಿ ನಿಷ್ಕರ್ಷೆ ಮಾಡುವ ಹವ್ಯಾಸವು ಬೆಳೆಯಿತು. ಈ ವಸಾಹತುಶಾಹಿ ಚಿಂತನಾ ಪರಿಪ್ರೇಕ್ಷವು ತತ್ವಪದ ಪರಂಪರೆಯ ವೈವಿಧ್ಯಮಯ ಬಹುಮುಖೀ ನೆಲೆಗಳನ್ನು ಬಗೆಯದೆ ಉಳಿಯಿತು.

ಎಲ್ಲಕ್ಕಿಂತ ಹೆಚ್ಚಾಗಿ ವಸಾಹತು ರಾಜಕಾರಣದ ಸಮ್ಮುಖದಲ್ಲಿ ಅಸೀಮ ಧಾರಣಾಶಕ್ತಿಯನ್ನು ತೋರಿದ್ದ ಇವುಗಳ ರಚನೆಕಾರರ ಬದುಕಿನ ಭಿತ್ತಿಗಳನ್ನು ವಿಸ್ಮೃತಿಗೆ ತಳ್ಳಲಾಯಿತು. ಆಶ್ಚರ್ಯವೆಂದರೆ ಆಧುನಿಕ ಕಾಲಘಟ್ಟವು ಸಂದು ಆಧುನಿಕೋತ್ತರವಾದ ಮತ್ತು ಕಾರ್ಪೊರೇಟ್ ಜೀವನಶೈಲಿಯು ವಿಜೃಂಭಿಸುತ್ತಿರುವ ಹೊತ್ತಲ್ಲೂ ಗುರು–ಶಿಷ್ಯ ಪರಂಪರೆಯ ಆನುಭಾವಿಕ ನೆಲೆಯೊಂದು ನಿತಾಂತ ಬದುಕಿನ ಪಲುಕಾಗಿ ಹರಳುಗಟ್ಟುತ್ತಲೇ ಇದೆ. ಅನುಭಾವಿ ಪದ, ಪದರುಗಳ ಭಜನೆ ಮೇಳಗಳ ಸಖ್ಯದಲ್ಲಿದ್ದವರಿಗೆ ಈ ಮಾತು ಅನುಭವಕ್ಕೆ ಬಂದೀತು.

ಏಕತಾರಿಯ ಶ್ರುತಿ, ಸೋಬತಿಯ ನಿಗಿನಿಗಿ ಕೆಂಡದ ಧುನಿಯ ಬೆಳಕಿನಲ್ಲಿ ಬೆಳ್ಳಂಬೆಳಗಿನವರೆಗೆ ನಡೆಯುವ ಪದ ಸಮಾರಾಧನೆಯ ಲೋಕವೇ ಬೇರೆ. ನಿಸರ್ಗ ನಿರ್ಮಿತ ಎಲ್ಲ ಕಷ್ಟ, ಕಾರ್ಪಣ್ಯ ಮತ್ತು ಮನುಷ್ಯ ಸಮಾಜ ನಿರ್ಮಿತ ದರ್ಪ, ದಬ್ಬಾಳಿಕೆ, ದೌರ್ಬಲ್ಯಗಳ ನಡುವೆಯೂ ಜೀವ ಭಾವವನ್ನು ಕಾಪಿಟ್ಟು ಸುಮ್ಮನೆ ಕರುಣೆಯ ಸಾಗರವಾಗಿ ತುಂಬಿ ಹರಿಯುವ ಲಹರಿಯೇ ಬೇರೆ. ಇಂಥ ಅಮೂಲ್ಯ, ಅಮಿತ ಜೀವನ ಪ್ರೀತಿಯನ್ನು ತಾತ್ವಿಕ ಗಟ್ಟಿತನದೊಂದಿಗೆ ತುಂಬಿ ಕೊಡುವ ಭಜನೆಯ ಸುತ್ತಲಿನ ಬದುಕು ಮತ್ತು ಸಾಹಿತ್ಯ ಎರಡನ್ನೂ ಅನುಸಂಧಾನಗೈಯುವ ಹಿಕ್ಮತ್ತನ್ನು ನಾವು ತೋರದೆ ಇರುವುದು ನಮಗಾದ ಹಾನಿಯೆಂದೇ ಹೇಳಬೇಕು.

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಉಳಿದೆಲ್ಲ ಶಿಷ್ಟ ಸಾಹಿತ್ಯವು ಸಂಪಾದನೆ, ಪರಿಷ್ಕರಣೆ, ಪ್ರಸಾರ, ಅಧ್ಯಯನ, ಅಧ್ಯಾಪನದಂಥ ಅಕಡೆಮಿಕ್ ಶಿಸ್ತಿಗೆ ತೆರೆದುಕೊಂಡಂತೆ ತತ್ವಪದ ರಚನಾ ಪ್ರಕಾರ ತೆರೆದುಕೊಳ್ಳಲೇ ಇಲ್ಲ. ಎರಡನೆಯದಾಗಿ ಪ್ರಚಾರ, ಪ್ರಸಾರಗಳ ಬಗೆಗೆ ದಿವ್ಯ ನಿರ್ಲಕ್ಷ್ಯ, ಸಾಹಿತ್ಯೋದ್ಯಮದಿಂದ ಉದ್ದೇಶಪೂರ್ವಕ ಅಂತರ ಇಟ್ಟುಕೊಳ್ಳುವ ಈ ಮಂದಿ ಪ್ರಧಾನ ಧಾರೆಯಿಂದ ದೂರವೇ ಉಳಿದರು. ಹೀಗಾಗಿ ಆಧುನಿಕ ಚರಿತ್ರೆಕಾರರ ಕೈಗೆ ಇವರು ದಕ್ಕಿದ್ದು ತುಂಬಾ ಕಡಿಮೆ.

ಹಾಗೆ ನೋಡಿದರೆ ವಚನ ಸಾಹಿತ್ಯವೂ ಪ್ರಗತಿಪರ ವಿದ್ವತ್ ಲೋಕಕ್ಕೆ ತುಂಬಾ ತಡವಾಗಿಯೇ ಒದಗಿಬಂದಿದೆ. ಹೀಗಾಗುವುದರ ಹಿಂದೆ ಒಂದಷ್ಟು ಸಾಂಸ್ಕೃತಿಕ ರಾಜಕಾರಣವು ಇಲ್ಲದಿಲ್ಲ. ಅದೇ ಬೇರೆ ಚರ್ಚೆ. ತತ್ವಪದ ರಾಶಿಗೆ ಸಂಬಂಧಿಸಿ ಹೇಳುವುದಾದರೆ ಮುಖ್ಯವಾಗಿ ಇವು ಗುರು– ಶಿಷ್ಯ ಪರಂಪರೆಯ ದೀಕ್ಷೆ, ಭಜನಾ ಲೋಕದ ಹಾಡುಗಾರಿಕೆಯ ಮೇಳದಲ್ಲಿ ಉದ್ಭೋದಗೊಳ್ಳುವಂಥವು. ಹೀಗಾಗಿ ಇವು ಕೇವಲ ಅಧ್ಯಯನ ಕುತೂಹಲಿಗಳಿಗೆ ಸಿಗಲಿಲ್ಲ. ಶಾಸ್ತ್ರೀಯ ಸಂಪಾದನೆ, ಪ್ರಕಟಣೆಗಳಿಗೆ ಒಳಗಾಗಲಿಲ್ಲ. ವಚನಗಳಿಗೆ ಕನಿಷ್ಠಪಕ್ಷ ವೀರಶೈವ ಮಠ–ಮಾನ್ಯಗಳಲ್ಲಿ ಧಾರ್ಮಿಕ ನೆಲೆಗಟ್ಟಾದರೂ ಲಭ್ಯ

ವಾಗಿತ್ತು. ಸಾಂಸ್ಥಿಕ ಧರ್ಮ ಹಿತಾಸಕ್ತಿಯ ಕಾರಣವಾಗಿಯೂ ವಚನ ಸಾಹಿತ್ಯ ಮತ್ತು ಆ ಕುರಿತು ರಚನೆಯಾದ ಪುರಾಣ, ಕಾವ್ಯ, ಸಂಪಾದನಾ ಸಂಕಲನಗಳು ಉಳಿದುಕೊಂಡಿದ್ದವು. ಆದರೆ ತತ್ವಪದ ಸಾಹಿತ್ಯ ಮಾತ್ರ ಇಂಥ ಸಾಂಸ್ಥಿಕ ಮತ, ಧರ್ಮಗಳನ್ನು ಧಿಕ್ಕರಿಸಿ ರಚನೆ ಆಗಿದ್ದೇ ಹೆಚ್ಚು. ಇವು ಮತ, ಧರ್ಮ, ವಾದ, ಸಿದ್ಧಾಂತಗಳಾಚೆ ಜಿಗಿದು ಎಲ್ಲರೊಳಗೆ ಒಂದಾಗಿಯೂ ಒಂದಾಗದಂತೆ ‘ತನ್ನ ತಾನು ತಿಳಿದ ಮೇಲೆ ಇನ್ನೇನ್ನಿನ್ನೆನೋ’ ಎಂಬಂತೆ ಅನಂತಕ್ಕೆ ಚಾಚಿದ್ದವು.

ಆದ್ದರಿಂದ ಈ ಪದರಾಶಿಯು ‘ಹಿಡದೆನೆಂದರೆ ಸಿಗುವುದಿಲ್ಲಪ್ಪ ಭಾಳ ಬೆರಕಿ’ ಆಗಿದ್ದವು. ಆದಾಗ್ಯೂ ಭಜನಾಸಕ್ತರ ಅನುಕೂಲಕ್ಕಾಗಿ ಕೆಲವು ಅನುಭಾವಿಗಳ ಕೃತಿಗಳು ಜನಪ್ರಿಯ ಮಾಲಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಅದು ಕೂಡ ಸಮಗ್ರವಾಗಿರುತ್ತಿರಲಿಲ್ಲ. ತೀರ ಕಳಪೆ ಮುದ್ರಣ, ಕಾಗುಣಿತ ದೋಷ ಇತ್ಯಾದಿಗಳಿಂದಾಗಿ ಅವು ವಿದ್ವತ್ ವಲಯದ ಗಮನ ಸೆಳೆಯಲಿಲ್ಲ. ಇತ್ತೀಚೆಗೆ ಸುತ್ತೂರು ಮಠದಿಂದ ಸಮಗ್ರ ಸ್ವರವಚನ ಸಂಪುಟಗಳಾಗಿ ಕೆಲವು ತತ್ವಪದಕಾರರ ಕೃತಿಗಳು ಬೆಳಕು ಕಂಡಿವೆಯಾದರೂ ಅಲ್ಲಿ ವೀರಶೈವ ಪರಂಪರೆಯ ಆಚೆ ಇರುವ ಕವಿ, ಕೃತಿಗಳನ್ನು ಪರಿಗಣಿಸಿಲ್ಲ.

ಅಷ್ಟಕ್ಕೂ ಅವರು ಸ್ವರವಚನ ಎಂಬುದಕ್ಕೆ ತಮ್ಮದೇ ಭಿನ್ನ ತಾತ್ವಿಕ ಭಿತ್ತಿಯನ್ನಿಟ್ಟುಕೊಂಡು ಸಂಪಾದನೆ ಮಾಡಿದ್ದಾರೆ. ಹೀಗಾಗಿ ಈ ಸಂಪುಟಗಳು ಕನ್ನಡದಲ್ಲಿ ಸೃಷ್ಟಿಯಾದ ಸಮಗ್ರ ತತ್ವಪದಗಳ ಆಕರಗಳಾಗಿ ನಿಲ್ಲುವುದಿಲ್ಲ. ವೀರಶೈವ ತತ್ವ ಸಿದ್ಧಾಂತದ ಆಚೆಗೆ ಅನುಭಾವದ ಭಿತ್ತಿಯನ್ನಿಟ್ಟುಕೊಂಡು ರಚನೆಯಾದ ಸಾವಿರಾರು ಪದಗಳು ಇಂದಿಗೂ ಭಜನಾಸಕ್ತರ ಖಾಸಗಿ ಪುಸ್ತಕ, ಮಸ್ತಕಗಳಲ್ಲಿಯೇ ಉಳಿದುಕೊಂಡಿವೆ. ವಿಶೇಷವಾಗಿ ಸೂಫಿ, ಶರಣ, ಸಿದ್ಧಧಾರೆಗಳನ್ನು ಮೈಗೂಡಿಸಿಕೊಂಡು ಬರೆದ ಪದಗಳ ರಾಶಿಯೇ ಇದೆ. ಉತ್ತರ ಕರ್ನಾಟಕದಲ್ಲಿಯಂತೂ ಪ್ರತಿ ಹಳ್ಳಿಗೂ ಒಬ್ಬಿಬ್ಬರಾದರೂ ತತ್ವಪದಕಾರರು ಆಗಿಹೋಗಿದ್ದಾರೆ. ಹೈದರಾಬಾದ್ ಕರ್ನಾಟಕದಲ್ಲಿ ಮುಸ್ಲಿಂ ತತ್ವಪದಕಾರರ ದೊಡ್ಡ ಸಮೂಹವೇ ಇದೆ.

ಆನುಭಾವಿಕವಾಗಿ ಉತ್ಕೃಷ್ಟವಾದ, ಸಾಹಿತ್ಯಕ ಸತ್ವವುಳ್ಳ ರಚನೆಗಳನ್ನು ನೀಡಿ ಇವರು ನಿಜವಾದ ಅರ್ಥದಲ್ಲಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಇಂಥ ತತ್ವಪದಗಳ ರಾಶಿ ಹೇರಳವಾಗಿ ಹರಡಿಕೊಂಡಿದೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಈಗ ತತ್ವಪದಕಾರರ ಸಮಗ್ರ ಸಾಹಿತ್ಯ ಪ್ರಕಟಿಸುವ ಬೃಹತ್ ಯೋಜನೆಯನ್ನು ಹಾಕಿಕೊಂಡಿದೆ. ನಮ್ಮ ನಾಡಿನ ಹಿರಿಯ ಚಿಂತಕರಾದ ಡಾ.ಕೆ. ಮರುಳಸಿದ್ಧಪ್ಪಅವರ ಅಧ್ಯಕ್ಷತೆಯಲ್ಲಿ, ಪ್ರಧಾನ ಸಂಪಾದಕರಾಗಿ ಕಾ.ತ. ಚಿಕ್ಕಣ್ಣ, ಯೋಜನಾ ಸಂಪಾದಕರಾಗಿ ಡಾ.ಎಸ್. ನಟರಾಜ ಬೂದಾಳ್ ಮತ್ತು ಆರು ಜನ ವಿದ್ವಾಂಸರ ಸದಸ್ಯತ್ವದಲ್ಲಿ ತತ್ವಪದಗಳನ್ನು ಸಂಗ್ರಹಿಸಿ, ಪ್ರಕಟಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ವಿವಿಧ ಸಂಸ್ಥೆ, ಅಕಡೆಮಿಕ್ ವಲಯದಿಂದ ಕೆಲವು ಪ್ರಾತಿನಿಧಿಕ ಸಂಗ್ರಹಗಳು ಬಂದಿವೆ ಯಾದರೂ ಬೆಳಕು ಕಾಣಬೇಕಾದ ಇನ್ನೂ ಹಲವು ರಚನೆಗಳಿವೆ.

ಸಮಗ್ರ ವಚನ ಸಾಹಿತ್ಯ, ಸಮಗ್ರ ದಾಸ ಸಾಹಿತ್ಯ ಹೊರಬಂದಂತೆ ತತ್ವಪದ ಸಾಹಿತ್ಯವು ತಡವಾಗಿಯಾದರೂ ಬೆಳಕು ಕಾಣುತ್ತಿರುವುದು ಸಮಾಧಾನದ ಸಂಗತಿ. ವಚನ, ಕೀರ್ತನೆಗಳಿಗಿಂತ ತತ್ವಪದ ಪ್ರಕಾರದ ಸಂಪಾದನೆ ತುಂಬಾ ತೊಡಕಿನ ಕೆಲಸ. ಏಕೆಂದರೆ ಈ ಪದಗಳ ಶಾಸ್ತ್ರೀಯ ಲಿಖಿತ ಪಠ್ಯಗಳು ಅಷ್ಟಾಗಿ ದೊರೆಯುವುದಿಲ್ಲ. ಹಸ್ತಪ್ರತಿಗಳಿಗಿಂತ ಮೌಖಿಕ ಪಠ್ಯಗಳೇ ಜಾಸ್ತಿ. ಈ ಪ್ರಕಾರವು ಜನಪದರ ಮನೆ ಅಂಗಳದ ಕೂಸು ಇದ್ದಂತೆ. ಕೃತಿ ಯಾರದೇ ಇರಲಿ ಹಾಡುವ ಭಕ್ತರು ಮಾತ್ರ ಅದನ್ನು ತಮ್ಮ ಶೈಲಿಗೆ ಒಗ್ಗಿಸಿಕೊಂಡು ಅಂಕಿತ ವನ್ನು ಸಲೀಸಾಗಿ ಬದಲಿಸಿಕೊಂಡು ಹೊರಡುತ್ತಾರೆ.

ಹೀಗಾಗಿ ಪದಗಳ ಮೂಲಕರ್ತೃ, ಮೂಲ ಪಾಠ ನಿಷ್ಕರ್ಷಿಸುವುದು ತುಂಬಾ ಕಷ್ಟದ ಸಂಗತಿ. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮೀಣರು ಈ ಕ್ಷಣಕ್ಕೂ ಪದಗಳನ್ನು ರಚಿಸುತ್ತಲೇ ಇದ್ದಾರೆ. ಹೀಗಾಗಿ ಕಾಲಮಿತಿ, ಕರ್ತೃ ನಿರ್ಣಯ, ಮೂಲ ಪಠ್ಯ ನಿರ್ಣಯ ಇವೆಲ್ಲ ಸವಾಲಿನ ಕೆಲಸವೇ ಸರಿ. ಪದಗಳ ವಸ್ತು, ಭಾಷೆ, ತಂತ್ರ, ಸಿದ್ಧಾಂತಗಳಿಗೆ ಸಂಬಂಧಪಟ್ಟಂತೆ ತುಂಬಾ ವೈವಿಧ್ಯ, ಸಂಕೀರ್ಣತೆ ಇದೆ. ಯಾವುದನ್ನು ನಿರ್ದಿಷ್ಟವಾಗಿ ತತ್ವಪದ ಎಂದು ಗುರುತಿಸಬೇಕು ಎಂಬುದರ ಬಗೆಗೆ ವಿದ್ವತ್ ವಲಯದಲ್ಲಿ ಗೊಂದಲಗಳಿವೆ. ಆದ್ದರಿಂದ ಈ ಸಂಪಾದಕ ಮಂಡಳಿಯು ತತ್ವಪದಗಳ ತಾತ್ವಿಕತೆ, ರಾಚನಿಕ ಸ್ವರೂಪ, ಕಾಲಘಟ್ಟ, ಭಾಷೆ ಇವುಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಸಮಗ್ರ ತತ್ವಪದಸಾಹಿತ್ಯ ಸಂಪಾದಿಸಿ, ಪ್ರಕಟಿಸುವ ಜವಾಬ್ದಾರಿ ನಿರ್ವಹಿಸಬೇಕಾದದ್ದು ನಮ್ಮ ಈ ಕಾಲದ ಜರೂರಿಯಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.