ಮೊದಲೇ ಸಂಶಯವಿತ್ತು. ಕಳಸಾ– ಬಂಡೂರಿ ಯೋಜನೆಯಲ್ಲಿ ರಾಜಕೀಯ ಹೆಚ್ಚು ಮತ್ತು ಕೃಷಿಕರ ಹಿತ ಕಡಿಮೆ ಎಂದು. ಕರ್ನಾಟಕದ ಸರ್ವಪಕ್ಷ ನಿಯೋಗ ಪ್ರಧಾನಿಯವರನ್ನು ಭೇಟಿ ಮಾಡಿ ಬಂದ ನಂತರ ಅದೀಗ ದೃಢವಾಗಿದೆ.

ನಿಯೋಗ ಹೋಗುವ ಮೊದಲೇ ಹೋಗುವವರಿಗೂ ಮತ್ತು ಅವರನ್ನು ಬರಮಾಡಿಕೊಳ್ಳುವವರಿಗೂ ಅದರ ವಿಫಲತೆಯ ನಿಶ್ಚಿತ ಅರಿವಿತ್ತು. ಏಕೆಂದರೆ ಕರ್ನಾಟಕವೇ ಮಹಾದಾಯಿ ನ್ಯಾಯಮಂಡಳಿ ಮುಂದೆ, ವಿವಾದಕ್ಕೆ ಸಂಬಂಧಿಸಿದ ತೀರ್ಪು ಬರುವತನಕ ಕಳಸಾ–ಬಂಡೂರಿಗಳ ಒಂದು ಹನಿ ನೀರನ್ನೂ ಮಲಪ್ರಭಾ ಕೊಳ್ಳಕ್ಕೆ ಹರಿಸುವುದಿಲ್ಲವೆಂದು ಮುಚ್ಚಳಿಕೆ ಬರೆದು ಕೊಟ್ಟಿದೆ ಎಂದಾಗ ಪ್ರಧಾನಿಯವರಿಂದ ಅಪೇಕ್ಷಿಸುವ ಪರಿಹಾರವಾದರೂ ಏನು? ಅದೂ ಅಲ್ಲದೇ, ನ್ಯಾಯಮಂಡಳಿ ಮುಂದಿರುವ ಪ್ರಕರಣಗಳಲ್ಲಿ ಮೂರನೆಯವರು ಮಧ್ಯಪ್ರವೇಶಿಸಲು ಅವಕಾಶ ಇಲ್ಲದಿರುವಾಗ, ಪ್ರಧಾನಿ ಯಾವ ತರಹದ ಮಧ್ಯಸ್ಥಿಕೆ ಮಾಡಲು ಸಾಧ್ಯ?

ಆದರೂ ನಿಯೋಗ ನವದೆಹಲಿಗೆ ಹೋದುದರ ಹಿನ್ನೆಲೆಯಲ್ಲಿ ರಾಜಕೀಯ ಅಡಗಿದೆ ಎನ್ನುವುದು ಸ್ಪಷ್ಟ. ಕರ್ನಾಟಕದ ಮುಖ್ಯಮಂತ್ರಿಯವರಿಗೆ ಸರ್ಕಾರ ತನ್ನ ಪ್ರಯತ್ನ ತಾನು ಮಾಡುತ್ತಿದೆ ಎನ್ನುವುದನ್ನು ಚಳವಳಿನಿರತ ರೈತರಿಗೆ ತೋರಿಸಬೇಕಾಗಿತ್ತು ಮತ್ತು ಮಧ್ಯಪ್ರವೇಶಿಸಲು ಪ್ರಧಾನಿಯವರಿಗಿರುವ ಅಸಹಾಯಕತೆಯನ್ನು ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಂಡು ಬಿಜೆಪಿಯನ್ನು ಹಣಿಯಲು ಒಂದು ಅಸ್ತ್ರ ಸಂಪಾದಿಸುವುದು ಸಿದ್ದರಾಮಯ್ಯನವರ ಮನಿಷೆ.

ಅದರಲ್ಲಿ ಅವರು ಭಾಗಶಃ ಯಶಸ್ವಿಯಾಗಿದ್ದಾರೆ ಎನ್ನಬಹುದು. ರಾಜಕೀಯದ ಡಾವು ಪೇಚಿ ಆಟದಲ್ಲಿ ಪರಿಣತರಾದ ನರೇಂದ್ರ ಮೋದಿಯವರಿಗೆ ಇದರ ಅರಿವು ಇಲ್ಲದೇ ಇದ್ದೀತೆ? ಮಹಾದಾಯಿ ನದಿ ವಿವಾದ ಪರಿಹರಿಸಲು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕೆಂದು ಸೂಚಿಸುವ ಮೂಲಕ ಪ್ರಧಾನಿಯವರನ್ನು ರಾಜಕೀಯ ಖೆಡ್ಡಾದಲ್ಲಿ ಕೆಡವಲು, ಸಿದ್ದರಾಮಯ್ಯನವರು ಪ್ರಯತ್ನಿಸಿದರೆ, ಅಷ್ಟೇ ಸರಳವಾಗಿ ಮೋದಿಯವರು ಅದರಿಂದ ಪಾರಾಗಿ, ಮೂರು ರಾಜ್ಯಗಳ ರಾಜಕೀಯ ಪಕ್ಷಗಳಲ್ಲಿ ಮೊದಲು ಒಮ್ಮತ ಮೂಡಿಸಲು ಸಲಹೆ ಮಾಡುತ್ತ ಸಿದ್ದರಾಮಯ್ಯನವರ ಅಂಗಳದಲ್ಲಿ ಚೆಂಡು ತಿರುಗಿ ಎಸೆದರು. ಅವರೇನೋ ಪಾರಾದರು. ಆದರೆ ಸಿಕ್ಕಿಬಿದ್ದವರು ಕರ್ನಾಟಕದ ಬಿಜೆಪಿ ಧುರೀಣರು.

ಪ್ರಧಾನಿ ಮೋದಿಯವರಿಗೆ ಕಳಸಾ– ಬಂಡೂರಿ ಯೋಜನೆಗೆ ಸಹಾಯ ಮಾಡುವ ಮನಸ್ಸಿಲ್ಲ ಮತ್ತು ಬಿಜೆಪಿಯ ಕರ್ನಾಟಕದ ಧುರೀಣರಾದ ಜಗದೀಶ ಶೆಟ್ಟರ್ ಹಾಗೂ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿಯವರು ನಿಯೋಗದ ಭೆಟ್ಟಿಯ ಕಾಲದಲ್ಲಿ ಒಂದೂ ಮಾತು ಆಡಲಿಲ್ಲವೆಂದು ಕಾಂಗ್ರೆಸ್ ವ್ಯಾಪಕವಾಗಿ ಪ್ರಚಾರ ಮಾಡಿದ್ದರ ಪರಿಣಾಮವಾಗಿ, ಚಳವಳಿನಿರತ ರೈತರ ಕೋಪ ಬಿಜೆಪಿ ಧುರೀಣರ ವಿರುದ್ಧ ತಿರುಗುತ್ತಿದೆ.

ಶೆಟ್ಟರ್, ಜೋಶಿ ಮತ್ತು ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರ ಹುಬ್ಬಳ್ಳಿ ನಿವಾಸಗಳ ಮುಂದೆ ಪ್ರತಿಭಟನೆ ನಡೆದಿದೆ. ಮೋದಿಯವರ ಹೇಳಿಕೆಯನ್ನು ಅನವಶ್ಯಕವಾಗಿ ತಿರುಚಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ, ಪ್ರಚೋದಿಸುತ್ತಿದ್ದಾರೆ ಎಂದು ಬಿಜೆಪಿಯವರು ತಿರುಗೇಟು ನೀಡುವಲ್ಲಿ ತಲ್ಲೀನರಾಗಿದ್ದಾರೆ. ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಚಳವಳಿಗಾರರು ಇಲ್ಲ. ಸಾಗುವಾನಿ ಕೊರೆಯುವಾಗ ಅದರಲ್ಲಿ ಬಾಲ ಸಿಕ್ಕ ಮಂಗದಂತಾಗಿದೆ ಬಿಜೆಪಿ ಪರಿಸ್ಥಿತಿ.

ಕಳಸಾ– ಬಂಡೂರಿ ವಿಷಯದಲ್ಲಿ ರಾಜಕೀಯ ನುಸುಳಿದ್ದು ಇದೇ ಮೊದಲ ಬಾರಿ ಅಲ್ಲ. ಕಳೆದ ಎರಡು ದಶಕಗಳ ಅವಧಿಯಲ್ಲಿ, ತಮ್ಮ ನೇತೃತ್ವದ ಸರ್ಕಾರಗಳ ಅವಧಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ರಾಜಕೀಯ ಹಾವು– ಏಣಿಯ ಆಟ ಆಡುತ್ತಲೇ ಬಂದಿವೆ. ಒಬ್ಬರ ಕಾಲದಲ್ಲಿ ಮಾಡಿದ ತಪ್ಪನ್ನು ಇನ್ನೊಬ್ಬರು ಹೊರಹಾಕದಂತೆ ಒಂದು ಅಲಿಖಿತ ಒಪ್ಪಂದವಿದ್ದಂತೆ ಕಾಣಿಸುತ್ತದೆ. ಆದುದರಿಂದ ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದಕ್ಕೆ ಪಕ್ಷಾತೀತ ಪ್ರಯತ್ನ ಅವಶ್ಯವೆನ್ನುವದರ ಬಗೆಗೆ ಯಾವ ರಾಜಕೀಯ ಪಕ್ಷವೂ ತಲೆಕೆಡಿಸಿಕೊಂಡಿಲ್ಲ.

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ, ಈ ಯೋಜನೆ ರೂಪಿಸಿ ಕಾರ್ಯಗತಗೊಳಿಸಬಯಸಿದವರು ಅಂದಿನ ಜಲಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲರು. 2002ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ತಾತ್ವಿಕ ಅನುಮತಿ ಬರುವ ತನಕ ಎಲ್ಲವೂ ಸರಿಯಾಗಿತ್ತು ಎನ್ನುವುದರೊಳಗೇ ದೊಡ್ಡ ಆಘಾತ ಎದುರಾಯಿತು. ಗೋವಾದ ಒತ್ತಡಕ್ಕೆ ಒಳಗಾಗಿ ಬಿಜೆಪಿ ನೇತೃತ್ವದ ಕೇಂದ್ರದ ಅಂದಿನ ಎನ್‌ಡಿಎ ಸರ್ಕಾರವು ಐದು ತಿಂಗಳೊಳಗಾಗಿ ತಾನು ಕೊಟ್ಟ ತಾತ್ವಿಕ ಅನುಮತಿಗೆ ತಡೆಯಾಜ್ಞೆ ವಿಧಿಸಿತು.

ಅಂದಿನ ಎನ್‌ಡಿಎ ಸರ್ಕಾರದ ಏಕಪಕ್ಷೀಯ ಕ್ರಮವನ್ನು ಪಕ್ಷಾತೀತವಾಗಿ ಪ್ರತಿಭಟಿಸಿ, ರಾಜ್ಯದ ರೈತರ ಹಿತ ಕಾಪಾಡುವುದನ್ನು ಬಿಟ್ಟು ಆಡಳಿತ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ತಮ್ಮದೇ ರಾಜಕೀಯವನ್ನು ಮಾಡಿದವು. ಎಚ್.ಕೆ. ಪಾಟೀಲರ ಖಾತೆ ಪಲ್ಲಟವಾಯಿತು. ಇದಕ್ಕೆ ಮುಖ್ಯ ಕಾರಣ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರ ಎಡಗೈ ಬಲಗೈ ಎಂದು ಹೆಸರಾದ ಡಿ.ಕೆ.ಶಿವಕುಮಾರ್ ಮತ್ತು ಪಾಟೀಲರ ನಡುವೆ ನಡೆಯುತ್ತಿದ್ದ ಪೈಪೋಟಿ. ಈ ಮುಸುಕಿನ ಯುದ್ಧದಲ್ಲಿ ಶಿವಕುಮಾರ್ ಕೈಮೇಲಾದzಪರಿಣಾಮವಾಗಿ ಕೃಷ್ಣರು ಪಾಟೀಲರಿಂದ ಜಲಸಂಪನ್ಮೂಲ ಖಾತೆಯನ್ನು ಕಸಿದುಕೊಂಡು ಅದನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಿಕೊಟ್ಟರು.

ಪಕ್ಷದಲ್ಲಿನ ಅಂತಃಕಲಹ ಶಮನಕ್ಕೆ ಕೃಷ್ಣ ಈ ಕ್ರಮ ಕೈಗೊಂಡರೂ ಅದರ ಪರಿಣಾಮವಾದುದು ಕಳಸಾ–ಬಂಡೂರಿ ಯೋಜನೆ ಮೇಲೆ. ಮುಖಂಡನ ಅವಜ್ಞೆಗೆ ಒಳಗಾದವರನ್ನು ಉಳಿದವರು ದೂರವಿಡುವಂತೆ ಪಾಟೀಲರ ಶಾಖಾ ಪಲ್ಲಟದ ಪರಿಣಾಮ ಕಳಸಾ– ಬಂಡೂರಿಯು ಸರ್ಕಾರಿ ವಲಯದಲ್ಲಿ ತನಗಿದ್ದ ಮಹತ್ವ ಮತ್ತು ಪ್ರಾಶಸ್ತ್ಯ ಕಳೆದುಕೊಂಡಿತು. ಇದರ ಪರಿಣಾಮವಾಗಿ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ತಕ್ಕ ಪ್ರತಿಭಟನೆಯು ಕರ್ನಾಟಕದಿಂದ ಆಗಲೇ ಇಲ್ಲ.

ಕಾಂಗ್ರೆಸ್ ಮುಗ್ಗರಿಸಿದ್ದು ಇಲ್ಲಿಯೇ. ಆಂಧ್ರಪ್ರದೇಶಕ್ಕೆ ದಕ್ಷಿಣ ಕರ್ನಾಟಕದ ಭಾಗದಿಂದ ಹರಿಯುವ ಒಂದು ಹಳ್ಳದ ನೀರಿನ ಸಲುವಾಗಿ ದಂಡೆತ್ತಿ ದೆಹಲಿಗೆ ಹೋಗಿ ಪ್ರಧಾನಮಂತ್ರಿಯಾಗಿದ್ದ ವಾಜಪೇಯಿ ಅವರನ್ನು ಭೆಟ್ಟಿಯಾದ ಮುಖ್ಯಮಂತ್ರಿ, ಕಳಸಾ–ಬಂಡೂರಿ ಬಗ್ಗೆ ಒಂದು ಚಕಾರ ಎತ್ತಲಿಲ್ಲ. ಅವರಷ್ಟೇ ಅಲ್ಲ, ಅವರ ನಂತರ ಬಂದ ಯಾವ ಮುಖ್ಯಮಂತ್ರಿಯೂ ಕಳಸಾ– ಬಂಡೂರಿ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

ಗೋವಾದ ತಕರಾರಿನ ಹಿನ್ನೆಲೆಯಲ್ಲಿ, ಕರ್ನಾಟಕಕ್ಕೆ ಇದ್ದ ಮಾರ್ಗಗಳು ಎರಡು. ಮಹಾದಾಯಿ ನೀರನ್ನು ಗೋವಾ ಮತ್ತು ಕರ್ನಾಟಕದ ನಡುವೆ ಹಂಚಲು ನ್ಯಾಯಮಂಡಳಿ ರಚನೆಗೆ ಅಗತ್ಯವಾದ ಪ್ರಯತ್ನ ಮಾಡುವುದು. ಪಾಲು ನಿರ್ಧಾರವಾಗುವ ಮುನ್ನವೇ ಬರಬಹುದಾದ ಪಾಲಿನ ನೀರಿನಲ್ಲಿ ಒಂದು ಭಾಗವನ್ನು ಕಳಸಾ– ಬಂಡೂರಿಗೆ ಕೊಟ್ಟು ಯೋಜನೆಗೆ ಹಸಿರು ನಿಶಾನೆ ಕೊಡಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು. ಇವೆರಡೂ ಕೆಲಸಗಳನ್ನು ಮಾಡಲು ಕೃಷ್ಣ ನೇತೃತ್ವದ ಅಂದಿನ ಸರ್ಕಾರ, ನಂತರ ಬಂದ ಧರ್ಮಸಿಂಗ್ ಮತ್ತು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಎರಡು ಸಮ್ಮಿಶ್ರ ಸರ್ಕಾರಗಳು ಮತ್ತು ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಲೇ ಇಲ್ಲ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬರುವುದರೊಳಗೆ ನ್ಯಾಯಮಂಡಳಿ ರಚನೆಯಾಗಿ, ಹಿಂದಿನ ತಡೆಯಾಜ್ಞೆ ಮುಂದುವರಿದಿತ್ತು. ಈ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಬೇಕು ಎಂದು ಈಗ ಹೇಳುತ್ತಿರುವ ಖರ್ಗೆ ಅವರು ತಮ್ಮ ನಾಲ್ಕು ವರ್ಷದ (2002–2006) ನೀರಾವರಿ ಖಾತೆಯ ನಿರ್ವಹಣೆ ಸಂದರ್ಭದಲ್ಲಿ ಏಕೆ ಇದನ್ನು ಮಾಡಲಿಲ್ಲ? ವಿರೋಧಿ ಬೆಂಚುಗಳಿಂದ ಕ್ರಮೇಣ ಸರ್ಕಾರಿ ಬೆಂಚುಗಳಿಗೆ ಹೋಗಿ ಜರುಗಿದ ಬಿಜೆಪಿಯ ವರ್ತನೆಯೂ ಇದಕ್ಕಿಂತ ಭಿನ್ನವಾಗಿಲ್ಲ.

ಬಿಜೆಪಿ ಕೈಯಲ್ಲಿ ಅಧಿಕಾರ ಚುಕ್ಕಾಣಿ ಇದ್ದದ್ದು ಸಮ್ಮಿಶ್ರ ಮತ್ತು ಸ್ವಂತ ಸರ್ಕಾರದ ಅವಧಿ ಸೇರಿ ಸುಮಾರು ಏಳು ವರ್ಷ (2006–2013). ಕಳಸಾ–ಬಂಡೂರಿಗೆ ಕೇಂದ್ರದಲ್ಲಿ ತಮ್ಮ ಪಕ್ಷದ ನೇತೃತ್ವದ ಸರ್ಕಾರವೇ ಮೊದಲ ತಡೆಯಾಜ್ಞೆ ಕೊಟ್ಟಾಗ ಬಿಜೆಪಿಯು ಕರ್ನಾಟಕದಲ್ಲಿ ವಿರೋಧ ಪಕ್ಷವಾಗಿತ್ತು. ತಮ್ಮನ್ನು ಒಂದು ಮಾತು ಕೇಳದೇ ತಮ್ಮ ರಾಜ್ಯದ ಹಿತಕ್ಕೆ ವಿರೋಧಿಯಾದ ನಿಲುಮೆಯನ್ನು ಕೇಂದ್ರ ಸರ್ಕಾರ ತಡೆಯಾಜ್ಞೆಯ ಮೂಲಕ ತೆಗೆದುಕೊಂಡಾಗ ಇದರಿಂದ ಕರ್ನಾಟಕದ ರೈತರಿಗೆ ಅನ್ಯಾಯವಾಗುತ್ತದೆ ಎಂದು ತಮ್ಮ ಪಕ್ಷದ ವರಿಷ್ಠರ ಹತ್ತಿರ ಅವರು ಹೇಳಲಿಲ್ಲವೆಂದಾಗ ಅವರಿಗೆ ಮನವರಿಕೆ ಮಾಡುವ ಕಾರ್ಯವಂತೂ ದೂರವುಳಿಯಿತು.

ಅನಂತಕುಮಾರ್‌ರನ್ನು ಅಂದಿನ ಕಾಲದ ಒಬ್ಬ ಪ್ರಭಾವಿ ಕೇಂದ್ರ ಮಂತ್ರಿ ಎಂದು ಬಣ್ಣಿಸಲಾಗುತ್ತಿತ್ತು. ದೆಹಲಿಯಲ್ಲಿ ಏನೂ ಮಾಡದೆ ಕರ್ನಾಟಕದಲ್ಲಿ ಕಳಸಾ– ಬಂಡೂರಿ ಯೋಜನೆಗಳ ಅನುಷ್ಠಾನಕ್ಕೆ ಪ್ರತಿಭಟನಾ ಹೋರಾಟಕ್ಕೆ ಬಿಜೆಪಿ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸಿತ್ತು. ಕೇಂದ್ರದ ಮನವೊಲಿಸಿ, ತಡಯಾಜ್ಞೆಯಲ್ಲಿ ಬದಲಾವಣೆ ತಂದರೆ ಕಾಂಗ್ರೆಸ್ಸಿಗೆ ಶ್ರೇಯಸ್ಸು ಬರಬಹುದೆಂಬ ಅಳುಕೇ? ಈ ಸ್ಥಳೀಯ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಪ್ರಹ್ಲಾದ ಜೋಶಿ ಇಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ. ಅಂದು ಜೆಡಿಯುದಲ್ಲಿ ಇದ್ದು ಪಾದಯಾತ್ರೆ ಮಾಡಿ ಮೈಲುಗಟ್ಟಲೆ ಪ್ರಚಾರ ತೆಗೆದು ಕೊಂಡ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಮಂತ್ರಿ.

ಬಿಜೆಪಿ ನೇತೃತ್ವದ ಸರ್ಕಾರದ ಕಾಲದಲ್ಲಿಯೇ ಮಹಾದಾಯಿ ನ್ಯಾಯಮಂಡಳಿ ರಚನೆಯಾದದ್ದು ಮತ್ತು ಮೂಲ ಸೌಕರ್ಯಗಳ ಅಭಾವದಿಂದ ನ್ಯಾಯಮಂಡಳಿ ಕಾರ್ಯನಿರ್ವಹಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾದದ್ದು. ಅದನ್ನು ಪ್ರತಿಭಟಿಸಿದವರು ಮತ್ತು ಅದನ್ನು ಸುಪ್ರೀಂಕೋರ್ಟ್ ಗಮನಕ್ಕೆ ತಂದು ಸೂಕ್ತ ನಿರ್ದೇಶನ ಕೊಡಿಸಿದವರು ಗೋವಾ ಸರ್ಕಾರವೇ ಹೊರತು ಕರ್ನಾಟಕದ ಬಿಜೆಪಿ ನೇತೃತ್ವದ ಸರ್ಕಾರವಾಗಲೀ ಅಥವಾ ಬಿಜೆಪಿ ಧುರೀಣರಾಗಲೀ ಅಲ್ಲ. ಅವರು ಮಾಡಿದ ಒಂದೇ ಕೆಲಸವೆಂದರೆ ತಡೆಯಾಜ್ಞೆಯ ತೆರವಿಗೆ ಪ್ರಯತ್ನಿಸದೇ ಕಳಸಾ– ಬಂಡೂರಿ ನೀರನ್ನು ಮಲಪ್ರಭಾಕ್ಕೆ ಹರಿಸಲು ಬೇಕಾದ ಕಾಲುವೆಗಳ ನಿರ್ಮಾಣಕ್ಕೆ ಕೈಹಾಕಿದ್ದು.

ಇಲ್ಲಿಯವರೆಗೆ 200 ಕೋಟಿ ರೂಪಾಯಿ ಖರ್ಚಾಗಿದ್ದರೂ ಆ ಕೆಲಸ ಪೂರ್ಣವಾಗಿಲ್ಲ. ಈ ಅಪೂರ್ಣ ಕಾಲುವೆಯಲ್ಲಿ ನೀರು ಹರಿಸುವದಿಲ್ಲವೆಂಬ ಮುಚ್ಚಳಿಕೆ ಕೊಟ್ಟದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆ. ಕಾಲುವೆಗಳಲ್ಲಿ ನೀರು ಬರದಂತೆ ತಡೆಗೋಡೆಯನ್ನೂ ಕಟ್ಟಿದೆ. ನೀರು ಹರಿಯದ ಕಾಲುವೆಗಳಲ್ಲಿ ಹೂಳು ತುಂಬಿಕೊಳ್ಳುತ್ತಿದೆ. ಸೋಜಿಗವೆಂದರೆ ವರ್ಷದ ಹಿಂದೆ ಬರೆದು ಕೊಟ್ಟ ಈ ಮುಚ್ಚಳಿಕೆಯನ್ನು ರಹಸ್ಯವಾಗಿ ಇಡಲಾಗಿದೆ. ಬಹಳಷ್ಟು ಜನರಿಗೆ ಗೊತ್ತಿಲ್ಲ.

ಗೊತ್ತಿದ್ದವರು ಮಾತನಾಡುತ್ತಿಲ್ಲ. ತಮ್ಮ ಸರ್ಕಾರವೇ ತಮ್ಮ ಆಸೆ ಮೇಲೆ ಚಪ್ಪಡಿ ಎಳೆದುದನ್ನು ಅರಿಯದ ರೈತರು ಚಳವಳಿ ಮಾಡುತ್ತಿದ್ದಾರೆ. ಆಗುತ್ತಿರುವ ವಿಳಂಬದಿಂದ ಅವರು ತಾಳ್ಮೆಗೆಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ಇದ್ದಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಕರ್ನಾಟಕದ ಕಾಂಗ್ರೆಸ್ ಧುರೀಣರು ಕಳಸಾ– ಬಂಡೂರಿಗೆ ಕೇಂದ್ರದ ಅನುಮತಿ ಕೊಡಿಸಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ ಎನ್ನುವುದು ಇನ್ನೊಂದು ವಿಶೇಷ.

editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.