ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು–28: ಯಾರಿವನು? ಯಾರಿವನು?

Published : 22 ಸೆಪ್ಟೆಂಬರ್ 2024, 18:44 IST
Last Updated : 22 ಸೆಪ್ಟೆಂಬರ್ 2024, 18:44 IST
ಫಾಲೋ ಮಾಡಿ
Comments

ಮನುಷ್ಯನ ಜೀವನ ಅಂದರೆ ಒಂದು ಅನ್ವೇಷಣೆ. ಒಂದು ಹುಡುಕಾಟ. ಅದು ಉತ್ತರವಿಲ್ಲದ ಪ್ರಶ್ನೆ. ಮನುಷ್ಯನ ಮುಖ್ಯ ಪ್ರಶ್ನೆ ಏನು ಅಂದರ ಸೂರ್ಯ, ಚಂದ್ರ, ಸಾವಿರ ಸಾವಿರ ಗ್ರಹಗಳು, ನಕ್ಷತ್ರಗಳು ಅವ್ಯಾಹತವಾಗಿ ತಿರುಗ್ತಾ ಇದಾವೆ. ಇವುಗಳ ನಡುವೆ ಒಂದು ದಿನವೂ ಅಪಘಾತವಾಗದಂತೆ ನೋಡಿಕೊಂಡ ಶಕ್ತಿ ಯಾವುದು? ನಾವು ಅಷ್ಟು ದೂರ ಅಂಗಡಿಗೆ ಹೋಗಿ ಬರೋದರೊಳಗೇ ನಾಲ್ಕು ಸಲ ಬಿದ್ದಿರ್ತೀವಿ. ಆದರೆ, ಸೂರ್ಯ ಚಂದ್ರರನ್ನು ಬೀಳದಂತೆ ಹಿಡಿದಿಟ್ಟ ಶಕ್ತಿ ಯಾವುದು? ಉತ್ತರ ವಿಜ್ಞಾನದ್ದೇ ಇರಬಹುದು, ಧರ್ಮದ್ದೇ ಇರಬಹುದು, ತತ್ವಜ್ಞಾನದ್ದೇ ಇರಬಹುದು. ಆದರೆ ಪ್ರಶ್ನೆ ಒಂದೇ; ಆಕಾಶದಲ್ಲಿ ಸೂರ್ಯ, ಚಂದ್ರ ನಕ್ಷತ್ರಗಳನ್ನು ತಾಳ್ಮೆಯಿಂದ ಕೆತ್ತಿದ ಶಿಲ್ಪಿ ಯಾರಿರಬಹುದು? ಆತನಿಗೆ ಎಷ್ಟು ಸಮಾಧಾನ ಇರಬಹುದು?

ಗಂಡ ಹೆಂಡತಿ ಕೋಣೆಯಲ್ಲಿ ಮಲಗಿರ್ತಾರ. ಫ್ಯಾನ್ ಹಚ್ತಾರ. ಗಂಡನ ಕಡೆ ಫ್ಯಾನ್ ಮುಖ ಮಾಡಿದರೆ ಹೆಂಡತಿಗೆ ಗಾಳಿ ಬರೋದಿಲ್ಲ. ಹೆಂಡತಿ ಕಡೆ ಮುಖ ಮಾಡಿದರೆ ಗಂಡನಿಗೆ ಗಾಳಿ ಬರೋದಿಲ್ಲ. ಜಗಳ ಆಡ್ತಾರ. ಆದರೆ ಸಮುದ್ರದ ಆಳದಲ್ಲಿ ಇರುವ ಮೀನಿನ ಮೂಗಿಗೆ ಗಾಳಿ ತಲುಪಿಸಿ ಬದುಕಿಸಿದವ ಯಾರಿರಬಹುದು? ಬಂಗಾರ ತಯಾರು ಮಾಡುವ ಫ್ಯಾಕ್ಟರಿ ಹಾಕ್ಯಾರ, ಆದರೆ, ರಕ್ತ ತಯಾರು ಮಾಡುವ ಫ್ಯಾಕ್ಟರಿ ಒಬ್ಬರಾರೂ ಹಾಕ್ಯಾರೇನು? ಅನ್ನವನ್ನು ರಕ್ತವನ್ನಾಗಿ ಮಾಡಿದವರು ಯಾರು? ಮಣ್ಣಿನಿಂದ ಸಸಿ ಬರ್ತೈತಿ. ಮಣ್ಣಿಲ್ಲದೆ ಸಸಿ ಬೆಳೆಯಲಿಕ್ಕೇ ಸಾಧ್ಯವಿಲ್ಲ. ಸಸಿ ಗಿಡ ಆಗತೈತಿ. ಹಾಗೆ ನೋಡಿದರೆ, ಗಿಡ ಕೂಡಾ ಮಣ್ಣು. ಗಿಡ ಹೂವು ಬಿಡತೈತಿ. ಹೂವು ಕೂಡಾ ಮಣ್ಣು. ಹಣ್ಣು ಬಿಡತೈತಿ. ಹಣ್ಣೂ ಮಣ್ಣು. ಆದರೆ ಮಜಾ ಏನಂದರ ಮಣ್ಣು ತಿಂದರೆ ಹಣ್ಣು ತಿಂದಂಗೆ ಆಗೋದಿಲ್ಲ. ಹಣ್ಣು ತಿಂದರೆ ಮಣ್ಣು ತಿಂದಂಗೆ ಆಗೋದಿಲ್ಲ. ಅದು ಸೃಷ್ಟಿಯ ವೈಚಿತ್ರ್ಯ. ಇದು ಯಾರ ಮಹಿಮೆ

ನಾವು ಮೊಬೈಲ್‌ನಲ್ಲಿ ಮಾತಾಡ್ತೀವಿ. ಸ್ವಲ್ಪ ದೂರ ಹೋದರೆ ‘ಇಲ್ಲಿ ಟವರ್ ಬರೋದಿಲ್ಲ’ ಅಂತೀವಿ. ಟವರ್ ಇಲ್ಲದ ಜಾಗದಲ್ಲೂ ಹುಲ್ಲು ಬೆಳದಾವ, ಮರಗಿಡ ಅದಾವ, ಪಶುಪಕ್ಷಿಗಳಿದಾವ. ಟವರ್ ಇಲ್ಲದ ಜಾಗದಲ್ಲೂ ತನ್ನ ಪವರ್ ತೋರಿಸ್ಯಾನಲ್ಲ ಅವ ಯಾರಿರಬಹುದು? ಈ ಸರ್ವಜ್ಞ, ಸರ್ವಶಕ್ತಿ, ಸರ್ವ ಕತೃ ಯಾರಿರಬಹುದು? ಆ ಸರ್ವಶಕ್ತಿಗೆ ನಾವು ಐ ಲವ್ ಯು ಅನಬೇಕು. ಸವರ್ವಶಕ್ತವಾದ ಶಕ್ತಿಗೆ ಶರಣಾಗುತೀವಲ್ಲ, ಅದಕ್ಕೆ ಭಕ್ತಿ ಅಂತ ಹೆಸರು. ಅಕ್ಕಮಹಾದೇವಿ ‘ಸಾವಿಲ್ಲದ, ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ, ನನ್ನ ಗಂಡ ಚನ್ನಮಲ್ಲಿಕಾರ್ಜುನ’ ಅಂತಾಳೆ. ದೇವರ ಶಕ್ತಿಗೆ ಶರಣಾಗತನಾಗೋದು ಅಂದರೆ ಇದು.

ನಾನು ಅಣು, ನೀನು ಮಹತ್ ಎಂದು ಸೋಲುತ್ತೇವಲ್ಲ ಅದು ಭಕ್ತಿ. ಭಕ್ತಿ ಅಂದರೆ ಉತ್ತಮ ಭಾವನೆಗಳ ಅವ್ಯಾಹತ ಪ್ರವಾಹ. ಭಕ್ತಿ ಎಂದರೆ ಪ್ರೇಮದ ಸ್ವರೂಪ. ಪವಿತ್ರ ಪ್ರೇಮಕ್ಕೆ ಭಕ್ತಿ ಅಂತಾರೆ. ಆದರೆ, ನಮ್ಮ ಪ್ರೇಮ ಪವಿತ್ರವಾಗಿ ಉಳಿದಿಲ್ಲ. ಪ್ಲಾಸ್ಟಿಕ್ ಹೂವನ್ನು ದೇವರ ತಲೆ ಮೇಲೆ ಇಡೋದಿಲ್ಲ ಯಾಕೆ? ಯಾಕೆಂದರೆ ಅದರಲ್ಲಿ ಮಕರಂದ ಇಲ್ಲ. ಅದಕ್ಕೆ ಅದು ದೇವರ ತಲೆ ಏರಿಲ್ಲ. ಯಾರ ಹೃದಯದಲ್ಲಿ ಪ್ರೇಮ ಇಲ್ಲವೋ ಅವರು ಪ್ಲಾಸ್ಟಿಕ್ ಹೂವು ಇದ್ದಂಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT