ಆಗ ತಾನೇ ಶಾಲೆಗೆ ಸೇರಿದ ಮಗುವನ್ನು ‘ನಿಮ್ಮ ತಂದೆ ಏನು ಕೆಲಸ ಮಾಡುತ್ತಾರೆ?’ ಎಂದು ಶಿಕ್ಷಕಿ ಕೇಳುತ್ತಾಳೆ. ಆ ಮಗು ‘ನನ್ನ ತಂದೆ ಹೋಟೆಲೊಂದರಲ್ಲಿ ಪಿಯಾನೋ ನುಡಿಸುತ್ತಾರೆ’ ಎನ್ನುತ್ತದೆ. ಆಗ ಮಗುವಿನೊಂದಿಗೆ ಬಂದಿದ್ದ ತಂದೆಯ ಕಡೆ ತಿರುಗಿದ ಶಿಕ್ಷಕಿ ‘ನೀವು ನಿಮ್ಮ ವೃತ್ತಿಯ ಕುರಿತು ಮಗುವಿಗೆ ಸುಳ್ಳು ಹೇಳಿದ್ದೀರಿ’ ಎನ್ನುತ್ತಾಳೆ. ಆಗ ತಂದೆ ‘ಹೌದು, ಅದಕ್ಕಾಗಿ ಕ್ಷಮೆ ಕೇಳುವೆ. ಆದರೆ ಆರು ವರ್ಷದ ಮಗುವಿಗೆ, ನಿನ್ನ ತಂದೆ ಒಬ್ಬ ರಾಜಕಾರಣಿ ಎಂದು ಹೇಗೆ ಹೇಳಲಿ ಎನ್ನುವ ಭಯ ನನ್ನದು’ ಎನ್ನುತ್ತಾನೆ.

ರಾಜಕಾರಣಿಗಳ ಕುರಿತು ಸಾರ್ವಜನಿಕರಲ್ಲಿ ಇರುವ ನಕಾರಾತ್ಮಕ ಅಭಿಪ್ರಾಯವನ್ನು ಉದಾಹರಿಸುತ್ತಾ, ಇಂಗ್ಲೆಂಡಿನ ಒಬ್ಬ ಸಂಸದ ಬಳಸಿದ ಉಪಮೆ ಇದು! ನಮ್ಮ ನಡುವಿನ ಬಹುತೇಕ ರಾಜಕಾರಣಿಗಳಿಗೆ, ತಮ್ಮ ನಡವಳಿಕೆಯ ಕುರಿತು ಸಾರ್ವಜನಿಕರು ಮತ್ತು ತಮ್ಮ ನಂತರದ ತಲೆಮಾರು ಏನು ಯೋಚಿಸಬಹುದು, ರಾಜಕೀಯ ಮತ್ತು ರಾಜಕಾರಣಿಯ ಕುರಿತು ಯಾವ ಮಾದರಿಯನ್ನು ಸಮಾಜದಲ್ಲಿ ನಾವು ಸೃಜಿಸುತ್ತಿದ್ದೇವೆ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದಿರುವುದು ವಿಷಾದನೀಯ.

ಪ್ರಜಾತಂತ್ರ ವ್ಯವಸ್ಥೆಯ ಮೂಲಕ ಆಯ್ಕೆಯಾದ ಸರ್ಕಾರದ ಮುಖ್ಯ ಕೆಲಸ, ಜನಪರವಾಗಿ ಆಡಳಿತ ನಡೆಸುವುದಾಗಬೇಕಿತ್ತು. ಆದರೆ ಇಂದು, ಆಳುತ್ತಿರುವವರು ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕೆ ನಡೆಸುವ ಕಸರತ್ತೇ ಆಡಳಿತ ಎನ್ನುವಂತಾಗಿದೆ. ವಿರೋಧ ಪಕ್ಷದ ಮುಖ್ಯವಾದ ಕೆಲಸ, ಸರ್ಕಾರದ ನೀತಿಗಳ ಕುರಿತು ಶಾಸನಸಭೆಯಲ್ಲಿ ಕ್ರಿಯಾಶೀಲ ಪ್ರಶ್ನೆಗಳನ್ನು ಕೇಳುವುದಾಗಬೇಕಿತ್ತು. ಬದಲಾದ ಕಾಲದಲ್ಲಿ, ವಿರೋಧ ಪಕ್ಷಗಳು ಅಧಿಕಾರಕ್ಕಾಗಿ ಆಡಳಿತ ಪಕ್ಷಗಳ ಮೇಲೆ ಅನೈತಿಕ ದಾಳಿ ನಡೆಸುವುದೇ ವಿರೋಧ ಎಂಬ ಅರ್ಥವನ್ನು ಪಡೆದುಕೊಂಡಂತಿದೆ.

ಈ ಬೆಳವಣಿಗೆಯ ಪರಿಣಾಮವಾಗಿ, ಪ್ರಾತಿನಿಧಿಕ ಪ್ರಜಾತಂತ್ರದ ಮೂಲ ಧಾತುಗಳಾದ ಪ್ರಜೆ ಮತ್ತು ಪ್ರತಿನಿಧಿ ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರಿಗೆ ಯಾವಹಕ್ಕು, ಬಾಧ್ಯತೆಗಳೂ ಇಲ್ಲದಂತೆ ವರ್ತಿಸುತ್ತಿದ್ದಾರೆ. ವರ್ತಮಾನದ ರಾಜಕೀಯ ಕುರಿತ ಈ ವಿಮರ್ಶೆಗಳ ಹಿನ್ನೆಲೆಯಲ್ಲಿ ನಾವು ಕರ್ನಾಟಕದ ರಾಜಕೀಯ ಅಸ್ಥಿರತೆಯನ್ನು ಅವಲೋಕಿಸಬೇಕಿದೆ. ಈ ಅಸ್ಥಿರತೆಯನ್ನು ಕೆಲವು ಶಾಸಕರು ಮತ್ತು ರಾಜಕೀಯ ನಾಯಕರ ಕಾರಣಕ್ಕೆ ಉದ್ಭವಿಸಿರುವ ಸಮಸ್ಯೆಯಾಗಿ ನೋಡುವುದು ಬಹಳ ಸಂಕುಚಿತ ದೃಷ್ಟಿಕೋನವಾಗುತ್ತದೆ. ಸಮಸ್ಯೆಯ ನಿಜವಾದ ಮೂಲ ಇರುವುದು ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರೂಪಿಸುತ್ತಿರುವ ದೃಷ್ಟಿಕೋನದಲ್ಲಿ. ಪ್ರಜಾಪ್ರಭುತ್ವ ಎಂಬ ಕ್ಲಿಷ್ಟ ರಾಜಕೀಯ ತಾತ್ವಿಕತೆಯನ್ನು ಆರಂಭದಿಂದಲೂ ನಾವು ಉಳ್ಳವರ ದೃಷ್ಟಿಕೋನದಲ್ಲಿ ನಿರೂಪಿಸಿ ಜಾರಿಗೊಳಿಸಿದ್ದೇವೆ. ಈ ಕಾರಣದಿಂದ ಇಂದು ಈ ಸಮಸ್ಯೆ ಉದ್ಭವಿಸಿದೆ. ಹೀಗಾಗಿಯೇ ಈಗ ಲೋಕಸಭಾ ಸದಸ್ಯರು ಮತ್ತು ಕರ್ನಾಟಕದ ಶಾಸಕರಲ್ಲಿ ಬಹುಪಾಲು ಕೋಟ್ಯಧೀಶರೇ ಇದ್ದಾರೆ.

ಸ್ವತಃ ಪ್ರಜಾತಾಂತ್ರಿಕವಾಗಿ ಇಲ್ಲದ, ಶಾಸನಸಭೆಯ ಯಾವುದೇ ಕ್ರಿಯಾಶೀಲ ಚರ್ಚೆಯಲ್ಲಿ ಭಾಗಿಯಾಗದ ಶಾಸಕ ಎಲ್ಲೋ ರೆಸಾರ್ಟಿನಲ್ಲಿ ಕುಳಿತು, ‘ನನ್ನ ಈ ನಡವಳಿಕೆ ಪ್ರಜಾತಾಂತ್ರಿಕವಾದುದು’ ‘ಇದು ನನ್ನ ಕ್ಷೇತ್ರದ ಜನರ ಕಲ್ಯಾಣಕ್ಕಾಗಿ’ ಎಂದೆಲ್ಲ ಮಾಧ್ಯಮಗಳ ಮುಂದೆ ನಿರ್ಭಿಡೆಯಿಂದ ಹೇಳುವಷ್ಟರ ಮಟ್ಟಿಗೆ ಪ್ರಜಾಪ್ರಭುತ್ವವನ್ನು ನಾವು ಉಳ್ಳವರ ದೃಷ್ಟಿಯಿಂದ ನಿರೂಪಿಸಿದ್ದೇವೆ. ಇದು ಒಂದು ರೀತಿ ಪ್ರಜಾಪ್ರಭುತ್ವವನ್ನು ಮುಗಿಸಲು ಪ್ರಜಾಪ್ರಭುತ್ವವನ್ನೇ ಗುರಾಣಿಯಾಗಿ ಬಳಸಿಕೊಳ್ಳುವ ಮಾದರಿ. ಇಲ್ಲಿ, ಮತ ನೀಡಿ ಗೆಲ್ಲಿಸಿದ ಪ್ರಜೆ, ಆತನ ಆಯ್ಕೆಯ ಹಕ್ಕು, ಮತದ ಮೌಲ್ಯ, ರಾಜಕಾರಣಿಗೆ ಇರಲೇಬೇಕಾದ ನೈತಿಕತೆಯ ಪ್ರಶ್ನೆ ಎಲ್ಲವೂ ಗೈರಾಗಿವೆ.

ವರ್ತಮಾನದ ಪ್ರಜಾತಂತ್ರ ವ್ಯವಸ್ಥೆಗೆ ಅಂಟಿರುವ ಈ ರೋಗ ವ್ಯಕ್ತಿಗತವಾದುದಲ್ಲ. ಹಾಗಾಗಿ, ಈ ಕಾಯಿಲೆಯಿಂದ ಬಂಡೆದ್ದ ವ್ಯಕ್ತಿಗಳಿಗೆ ಮಂತ್ರಿ ಪದವಿ, ಮಂಡಳಿ– ನಿಗಮಗಳ ಅಧ್ಯಕ್ಷ ಸ್ಥಾನದಂಥ ವ್ಯಕ್ತಿಗತ ಪರಿಹಾರಗಳು ಔಷಧಿಯಾಗಲಾರವು. ಪಕ್ಷಾಂತರ ನಿಷೇಧ ಕಾಯ್ದೆಯೂ ಇವರನ್ನು ನಿಯಂತ್ರಿಸಲಾರದು. ಭಾರತದ ಪ್ರಸ್ತುತ ರಾಜಕೀಯ, ನಿರ್ದಿಷ್ಟವಾಗಿ ಕರ್ನಾಟಕದ ರಾಜಕೀಯದಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ರೆಸಾರ್ಟ್ ರಾಜಕೀಯ ಬೆಳವಣಿಗೆ ಈ ವಿದ್ಯಮಾನಕ್ಕೆ ಸ್ಪಷ್ಟ ಉದಾಹರಣೆ. ಹಾಗಾಗಿ, ವ್ಯಾಪಾರಿ ಧೋರಣೆಯ ಈ ರಾಜಕೀಯ ಮಾದರಿಯ ಬೆಳವಣಿಗೆಯನ್ನು ಹತ್ತಿಕ್ಕಲು ಒಟ್ಟು ವ್ಯವಸ್ಥೆಯಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರುವ ಕುರಿತು ನಮ್ಮ ನಡುವಿನ ರಾಜಕೀಯ ನಾಯಕತ್ವ, ಚಳವಳಿಗಳು, ನಾಗರಿಕ ಸಮುದಾಯ ಆಲೋಚಿಸಬೇಕಿದೆ. ಪ್ರಜಾಪ್ರಭುತ್ವವನ್ನು ನಿಜವಾದ ಅರ್ಥದ ಜನಾಡಳಿತವಾಗಿ ರೂಪಿಸುವ ಹೊಣೆಗಾರಿಕೆಯನ್ನು ಸಮಾಜದ ಪ್ರಜ್ಞಾವಂತ ವರ್ಗ ವಹಿಸಿಕೊಂಡು, ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾತಂತ್ರವಾಗಿಸಬೇಕಿದೆ. ಇಲ್ಲವಾದರೆ, ಬರಲಿರುವ ದಿನಗಳು ಮತ್ತಷ್ಟು ಭೀಕರವಾಗಿ ಇರಲಿವೆ.

ಇಂದು ಜಗತ್ತಿನ ಸರ್ವಾಧಿಕಾರಿ ದೇಶಗಳಲ್ಲಿನ ಹಿಂಸೆಯಿಂದ ತಪ್ಪಿಸಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹುಡುಕಿಕೊಂಡು ಹೊರಡುವ ಸಾವಿರಾರು ವಲಸಿಗರು ತಮ್ಮ ಪ್ರಯತ್ನದಲ್ಲಿ ವಿಫಲರಾಗಿ ಸಾಯುತ್ತಿದ್ದಾರೆ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇರುವ ನಾವು, ನಮ್ಮ ವ್ಯವಸ್ಥೆಯ ಅಧಃಪತನದ ಕುರಿತು ನಿಸ್ತೇಜವಾಗಿದ್ದೇವೆ. ಪ್ರಜಾಪ್ರಭುತ್ವಕ್ಕಾಗಿ ವಲಸಿಗರು ನಡೆಸುತ್ತಿರುವ ಹೋರಾಟ, ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ನಮ್ಮ ನಿರ್ಲಿಪ್ತತೆ ಎರಡೂ ಆತಂಕ ಹುಟ್ಟಿಸುತ್ತಿವೆ. ಈ ಎಲ್ಲಾ ಅನುಭವಗಳು ನಮ್ಮ ತಲೆಮಾರನ್ನು ಕಲಕಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.