ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ವಿದ್ಯಾರ್ಜನೆಯೂ ಸ್ವಕಲಿಕೆಯ ಕ್ಷಾಮವೂ

Published : 5 ಜುಲೈ 2024, 21:19 IST
Last Updated : 5 ಜುಲೈ 2024, 21:19 IST
ಫಾಲೋ ಮಾಡಿ
Comments

ಶಿಕ್ಷಣವು ವೈಯಕ್ತಿಕ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಶಿಕ್ಷಣದ ಮೂಲಕ ವ್ಯಕ್ತಿಯು ತಾನೂ ಬೆಳೆದು ಸಮಾಜಕ್ಕೆ, ದೇಶಕ್ಕೆ ಶಕ್ತ್ಯಾನುಸಾರ ಸೇವೆ ಸಲ್ಲಿಸಬಹುದು. ಶಾಲೆಯ ಮುಖ್ಯಸ್ಥರು ‘ನಿಮ್ಮ ಮಗ ಓದಿನಲ್ಲಿ ಹಿಂದು’ ಎಂದೊಡನೆ ಪೋಷಕರ ಪ್ರತಿಕ್ರಿಯೆ ಏನಿರುತ್ತದೆ?

ಬಹುತೇಕರ ಪ್ರತಿಕ್ರಿಯೆ ‘ಟ್ಯೂಷನ್ನಿಗೆ ಸೇರಿಸೋಣ’ ಎನ್ನುವುದೇ! ‌ಸಾವಧಾನವಾಗಿ ಓದಿ ಮನನ ಮಾಡಿಕೊಳ್ಳಲು ಹೇಳುತ್ತೇನೆ ಎಂಬ ಮಾತು ಅಪರೂಪ. ಶಿಕ್ಷಣದ ಗುರಿ ಜ್ಞಾನಾರ್ಜನೆ; ಪರೀಕ್ಷೆಯಲ್ಲಿ ತೇರ್ಗಡೆಯಲ್ಲ ಎನ್ನುವ ಮನವರಿಕೆಯನ್ನು ಪೋಷಕರಿಗೇ ಮಾಡಿಕೊಡಬೇಕು. ಯಾವುದೇ ಪರಿಣತಿ ಆಕಸ್ಮಿಕವಾಗಿ ಕೈಗೂಡದು. ಉತ್ಸಾಹ ಮತ್ತು ಶ್ರದ್ಧೆಯಿಂದ ಮಾತ್ರ ಅದನ್ನು ಅರಸಲು ಸಾಧ್ಯ. ಕಲಿಕೆಗೆ ಕುತೂಹಲ ಬೇಕು. ಸ್ವಾಧ್ಯಯನದಿಂದ ಕಲಿತದ್ದು ಗಟ್ಟಿಯಾಗಿರುತ್ತದೆ. ಅದು ಅನುಕೂಲಕರವಾದ ಪ್ರಖರ ಕಲಿಕಾ ವಿಧಾನ. ಮಾತ್ರವಲ್ಲ, ಸಾಂಪ್ರದಾಯಿಕ ತರಗತಿ ಬೋಧನೆಗಿಂತ ಉತ್ತಮ. ಬದುಕನ್ನು ಗಾಢವಾಗಿ ಪ್ರೀತಿಸುವವರು ಹೊಸ ವಿಷಯಗಳನ್ನರಿಯಲು ಆಸಕ್ತರಾಗಿರುತ್ತಾರೆ.

ದಾರ್ಶನಿಕ ಕನ್‌ಫ್ಯೂಷಿಯಸ್ ಹೇಳಿದಂತೆ ನಿಜವಾದ ಜ್ಞಾನವೆಂದರೆ ನಮ್ಮ ಅಜ್ಞಾನದ ಪರಿಚಯ. ಮಾರ್ಕ್‌ ಟ್ವೈನ್ ‘ನಾನು ನನ್ನ ಶಾಲೆಯನ್ನು ನನ್ನ ಶಿಕ್ಷಣಕ್ಕೆ ಅಡ್ಡಿಯಾಗಬಿಡೆನು’ ಎನ್ನುತ್ತಿದ್ದರು! ಸ್ವತಃ ಕಲಿಕೆಯು ಯಶಸ್ವಿ ವಿದ್ಯಾರ್ಜನೆಯ ನಿರಾಡಂಬರ ಮಾರ್ಗ. ಅದು ಆತ್ಮವಿಶ್ವಾಸವನ್ನು ಸ್ವಾಭಾವಿಕವಾಗಿ ರೂಢಿಸಿಕೊಳ್ಳುವ ಕ್ರಮ. ಯಾರೇ ವಿದ್ಯಾರ್ಥಿ ಹೋಮ್‌ವರ್ಕ್ ತಂತಾನೇ ಪೂರೈಸಿದರೆ, ಅದು ತರುವ ಹೆಮ್ಮೆ ಮತ್ತು ತೃಪ್ತಿ ಅಷ್ಟಿಷ್ಟಲ್ಲ. ಸ್ವಾಧ್ಯಯನದ ವಿಶೇಷವೆಂದರೆ ವಿದ್ಯಾರ್ಥಿ ಮತ್ತು ಗುರು ಒಬ್ಬರೇ ಆಗಿರುವುದು. ವಿದ್ಯಾರ್ಥಿಗಳು ಸ್ವಯಂ ಅಧ್ಯಯನಕ್ಕೆ ಮುಂದಾದರೆ ಪೋಷಕರಿಗೆ ದೊಡ್ಡ ಮೊತ್ತದ ಆರ್ಥಿಕ ಹೊರೆ ತಪ್ಪೀತು. ಸ್ವ ಅಧ್ಯಯನದಿಂದ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಗುರಿಯನ್ನು ತಾವೇ ನಿಯಂತ್ರಿಸುವ ಅವಕಾಶ ಸಿಗುತ್ತದೆ. ಅವರ ಗುರಿ ಅವರದೇ ಕೈಯಲ್ಲಿರುತ್ತದೆ.

ಮಾಮೂಲಿಯ ಕಲಿಕೆಗಿಂತಲೂ ಸ್ವ ಕಲಿಕೆ ಹೆಚ್ಚು ಸಂತೋಷದಾಯಕ. ಮೇಲಾಗಿ ಅದು ಬದುಕಿನ ಪರ್ಯಂತ ವ್ಯಾಸಂಗದ ಹವ್ಯಾಸವನ್ನು ಕಟ್ಟಿಕೊಡುತ್ತದೆ. ಅದು ನಮಗೆ ನಾವೇ ವಿಧಿಸಿಕೊಳ್ಳುವ ಹೋಮ್‌ವರ್ಕ್. ಅದು ಹೊರೆಯಲ್ಲ, ಸಾಹಸ. ಹೀಗಿರುವಾಗ, ಮಕ್ಕಳನ್ನು ಗ್ರಹಿಕೆಗೆ ಸಿಗದ ಬಾಯಿಪಾಠದಿಂದ ಮುಕ್ತಗೊಳಿಸಿ ಗ್ರಹಿಕೆಯ ಪಾಠದತ್ತ ಒಯ್ಯಬೇಕು. ಅವರಾಗಿಯೇ ಅಧ್ಯಾಯಗಳನ್ನು ಅರ್ಥೈಸಿಕೊಳ್ಳುವಂತೆ ಪ್ರೇರೇಪಿಸುವುದು ಹೆಚ್ಚು ಪರಿಣಾಮಕಾರಿ. ವಿಪರ್ಯಾಸವೆಂದರೆ ಮಕ್ಕಳು ನಿಭಾಯಿಸಬಹುದಾದ ಕಾರ್ಯಗಳಿಗೂ ಹಿರಿಯರು ಕೈಜೋಡಿಸಿರುತ್ತಾರೆ! ಸ್ವನಿರ್ದೇಶಿತ ಅಧ್ಯಯನದಿಂದ ನಕಲು, ಪ್ರಶ್ನೆಪತ್ರಿಕೆಗಳ ಸೋರಿಕೆ, ಪ್ರಶ್ನೆಗಳ ಬೇಟೆ, ಬೇನಾಮಿ ಪರೀಕ್ಷಾರ್ಥಿಯಂತಹ ಪರೀಕ್ಷಾ ಅಕ್ರಮಗಳೂ ಕ್ಷೀಣಿಸುತ್ತವೆ.

ವಿದ್ಯಾರ್ಥಿಗಳಲ್ಲಿ ಸ್ವಾಧ್ಯಯನ ಕ್ಷಾಮ ನೀಗಿದರೆ ಇಡೀ ಶಿಕ್ಷಣ ವ್ಯವಸ್ಥೆ ಗಮನಾರ್ಹವಾಗಿ ಸುಧಾರಿಸುವುದು. ‘ಸ್ವಾಧ್ಯಾಯ ಪ್ರವಚನಾಭ್ಯಂ ನ ಪ್ರಮದಿತವ್ಯಂ’ - ಇದು ತೈತ್ತೀರಿಯ ಉಪನಿಷತ್ತಿನ ನುಡಿ.

ಸ್ವಾವಲಂಬಿಯಾಗಿ ತನ್ನ ಓದಿನ ಹೊಣೆಯನ್ನು ತಾನೇ ಹೊತ್ತಾಗ ಒಂದು ಅಧ್ಯಾಯದ ಸೀಮೆ ಮೀರಿ ಗ್ರಹಿಕೆ, ಚಿಂತನೆಗಳಿಗೆ ಹೆಚ್ಚು ಅವಕಾಶಗಳು ಒದಗುತ್ತವೆ. ಜೊತೆಗೆ ಆತ್ಮಾನಂದ ಮತ್ತು ಕಲಿಕಾ ಅನುಭವವೂ ದಕ್ಕುತ್ತದೆ. ಇಂದು ಎಲ್ಲೆಲ್ಲೂ ಮಾಹಿತಿಗಳ ಕಾರಂಜಿ ಕಾಣಿಸುತ್ತದೆ. ಬೇಕಾದ್ದು ಪರಾಮರ್ಶನ ಗ್ರಂಥಗಳ ಜೊತೆಗೆ ಅಂತರ್ಜಾಲ ಸಂಪರ್ಕಿತ ಕಂಪ್ಯೂಟರ್ ಹಾಗೂ ವಿಶ್ವಾಸಾರ್ಹ ವೆಬ್‌ಸೈಟ್‌ಗಳ ವಿವರ. ತರಗತಿಯ ಅಭ್ಯಾಸಕ್ಕೆ ಪೂರಕವಾಗಿ ಸ್ವಾಧ್ಯಯನವೂ ಒಂದು ಮಹತ್ತರ ಹೆಜ್ಜೆ.

ಬೋಧಕರು ಮತ್ತು ಪೋಷಕರು ತಮ್ಮ ಸಕ್ರಿಯ ಸಹಭಾಗಿತ್ವದ ಮೂಲಕ ತಮ್ಮ ಮಕ್ಕಳಿಗೆ ಸ್ವಾಧ್ಯಯನಕ್ಕೆ ಉತ್ತೇಜನ ನೀಡಬೇಕಿದೆ. ಸಮಯವನ್ನು ಕಿಂಚಿತ್ತೂ ಪೋಲು ಮಾಡದೆ ಸ್ವಾಧ್ಯಯನದಲ್ಲಿ ತೊಡಗುವುದು ಮುಖ್ಯ. ವಿಳಂಬ ಪ್ರವೃತ್ತಿಯು ಸಮಯದ ಚೋರನಂತೆ ಕೆಲಸ ಮಾಡುತ್ತದೆ. ನಾವು ನಿತ್ಯ ಜೀವನದಲ್ಲಿ ಎಷ್ಟೊಂದು ಕಾರ್ಯಗಳನ್ನು ನಾವೇ ತೀರ್ಮಾನಿಸಿಕೊಳ್ಳುತ್ತೇವೆ... ಚಪಾತಿಗೆ ಹಿಟ್ಟು ಲಟ್ಟಿಸುವುದು, ಹರಿದ ಬಟ್ಟೆಗೆ ಹೊಲಿಗೆ ಹಾಕುವುದು, ಅಡುಗೆ ಮಾಡುವುದು, ಉಪ್ಪಿನಕಾಯಿ ತಯಾರಿಸುವುದು... ಒಂದೇ, ಎರಡೇ?

ಒಮ್ಮೆಗೇ ಯಾವ ಕೌಶಲವೂ ಕರಗತವಾಗದು. ಕೌಶಲಗಳೆಲ್ಲವೂ ನಿರಂತರ ಪ್ರಯತ್ನಕ್ಕೆ ಮಾತ್ರ ಒಲಿಯುತ್ತವೆ. ತಾನಾಯಿತು, ತರಗತಿಯಾಯಿತು ಎಂದು ಸಾಧಕರು ತಮ್ಮ ಇತಿಮಿತಿಗಳಲ್ಲಿ ಬಂದಿಗಳಾಗಿದ್ದಿದ್ದರೆ ಮಹಾನ್ ಆವಿಷ್ಕಾರಗಳು ಸಾಧ್ಯವಾಗುತ್ತಿದ್ದವೇ? ದ್ರವಕ್ಕೆ ಮೇಲ್ಮುಖ ಒತ್ತಡವಿದೆ ಎಂಬ ಶೋಧಕ್ಕೆ ಅರ್ಕಿಮಿಡೀಸ್‌ಗೆ ಸ್ಫೂರ್ತಿ ಆಗಿದ್ದು ನೀರಿನ ತೊಟ್ಟಿ. ಕಿಂಚಿತ್ತಾದರೂ ಸ್ವಗ್ರಹಿಕೆ ಇರದೆ ಯಾವುದೇ ಪ್ರಯೋಗಾಲಯ ಅಥವಾ ಪುಸ್ತಕ ಭಂಡಾರವು ಕಲಿಸುವ ಕೆಲಸ ಮಾಡುವುದಿಲ್ಲ. ಪರೀಕ್ಷೆಯ ಫಲಿತಾಂಶ ಹೊರಬಿದ್ದಾಗ ನಪಾಸಾದವರನ್ನು ಉದ್ದೇಶಿಸಿ ಅವರು ಓದಲಿಲ್ಲ ಎನ್ನುವುದು ಸಾಮಾನ್ಯ. ಆದರೆ, ಹಾಗೆನ್ನುವುದಕ್ಕಿಂತಲೂ ಅವರು ಸ್ವಂತವಾಗಿ ಓದಿಕೊಳ್ಳಲಿಲ್ಲ ಎನ್ನುವುದು ಹೆಚ್ಚು ಸಮಂಜಸ. ‘ಟ್ಯೂಷನ್’ಗೆ ಸಾಲುಗಟ್ಟುವ ಬದಲು ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು ಜಮಾಯಿಸುವುದು ಮಾದರಿಯಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT