ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವಂತೆ ಮಾಡಲು ಸರ್ಕಾರಿ ಕಾಲೇಜಿನ ‘ಪ್ರವೇಶಾತಿ ಆಂದೋಲನ’ದ ಭಾಗವಾಗಿ ನಾವು ಉಪನ್ಯಾಸಕರು, ಸಮೀಪದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪೋಷಕರ ಮನವೊಲಿಸಲು ಯತ್ನಿಸುತ್ತಿದ್ದೆವು. ಬಹುತೇಕ ಮನೆಗಳಲ್ಲಿನ ಹೆಣ್ಣುಮಕ್ಕಳ ಪೋಷಕರು ಹುಡುಗಿಯರನ್ನು ಪಿಯುಸಿ ಬಳಿಕ ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಆ ವಿದ್ಯಾರ್ಥಿನಿಯರಲ್ಲಿ ಹೆಚ್ಚಿನವರು ಶೇಕಡ 70, 80ರಷ್ಟು ಅಂಕಗಳನ್ನು ಗಳಿಸಿದ್ದವರು.

‘ನಿಮ್ಮ ಮಗಳ ಭವಿಷ್ಯ ಕಂಡವರ್‍ಯಾರು? ಅವಳನ್ನು ಓದಲು ಕಳಿಸಿ, ಸ್ವಾವಲಂಬಿಯಾಗಿ ಬದುಕಲು ಉತ್ತೇಜನ ನೀಡಿ’ ಎಂದು ನಾವು ಅಂದ ಕೂಡಲೇ ‘ಮೇಡಮ್ಮೋರೇ, ಈಗಿನ ನ್ಯೂಸ್‍ಗಳನ್ನು ಕೇಳಿದರೆ ಮಕ್ಕಳನ್ನು ಹೊರಗೆ ಕಳಿಸೋಕೇ ಭಯವಾಗುತ್ತೆ. ಹೊರಗೆ ಹೋದ ಮಕ್ಕಳಿಗೆ ಏನಾದರೂ ಆದರೆ ಏನು ಮಾಡುವುದು? ನಾವು ಬಡವರು, ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದೇವೆ. ಹೇಗಾದರೂ ಸರಿ ಅವರು ಸೇಫಾಗಿ ಇದ್ದರೆ ಸಾಕು’ ಎಂಬ ಕುಗ್ಗಿದ ದನಿಯ ಅವರ ಮಾತುಗಳಿಗೆ ನಾವು ಉತ್ತರಿಸಲಾಗದೇ ತತ್ತರಿಸುತ್ತಿದ್ದೆವು.

ಹೌದು, ನಾವು ತುಂಬಾ ಒತ್ತಾಯ ಮಾಡಿ ಹೆಣ್ಣುಮಕ್ಕಳನ್ನು ಕಾಲೇಜಿಗೆ ಕಳಿಸಿ ಎಂದೇನೋ ಹೇಳಿ ಒಪ್ಪಿಸಬಹುದು. ಆದರೆ ನಾಳೆ ಮನೆ ಬಿಟ್ಟ ಅವರು ಸುರಕ್ಷಿತವಾಗಿ ವಾಪಸಾಗುತ್ತಾರೆ ಎಂಬ ಭರವಸೆ ನೀಡುವುದಾದರೂ ಹೇಗೆ? ಇಂದು ಸುತ್ತಮುತ್ತ ಎಗ್ಗಿಲ್ಲದೆ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಗ್ಗೊಲೆ, ಲೈಂಗಿಕ ಹಿಂಸೆಯಂತಹವನ್ನು ನೋಡುವಾಗ, ಸಮಾಜ ಈ ಮಟ್ಟಿಗೆ ಹದಗೆಟ್ಟಿರುವ ಸ್ಥಿತಿಗೆ ನಾವೆಲ್ಲರೂ ಕಾರಣರಲ್ಲವೇ ಎಂದು ವಿಷಾದ ಕವಿಯುತ್ತದೆ.

ಮೊಬೈಲ್ ಫೋನ್‌ಗಳ ಈ ಯುಗದಲ್ಲಿ ದಿಢೀರನೆ ಅರಳುವ ಪ್ರೇಮ, ಅದನ್ನು ನಿರ್ವಹಿಸಲು ಬೇಕಾದ ಪ್ರಬುದ್ಧತೆ ಇಲ್ಲದಿರುವುದು, ಮಕ್ಕಳ ವಯೋಸಹಜ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಾಗದ ಪೋಷಕರು ಮತ್ತು ಸಮಾಜ, ಮಕ್ಕಳ ದುಡುಕು ಪ್ರವೃತ್ತಿ, ಹೆಣ್ಣುಮಕ್ಕಳ ಜೊತೆ ಹೇಗೆ ಬೇಕಾದರೂ ನಡೆದುಕೊಳ್ಳಬಹುದು ಎಂಬ ಉಡಾಫೆ, ಸಾಮಾಜಿಕ ಜಾಲತಾಣಗಳು ಎಲ್ಲವೂ ಈ ಬಗೆಯ ದುಷ್ಕೃತ್ಯಗಳಿಗೆ ದಾರಿ ಮಾಡಿಕೊಟ್ಟಿವೆ.

ಭಾಷಣ ಮಾಡಬಹುದು, ಹೋರಾಟ ಮಾಡಬಹುದು, ಹೊಸ ಕಾನೂನುಗಳನ್ನು ತರಬಹುದು. ಆದರೆ ಇಂದಿಗೂ ತಾವು ತಿಳಿದವರು ಅಂದುಕೊಂಡಿರುವವರೂ ಸೇರಿದಂತೆ ಬಹುತೇಕರು ಅರ್ಥ ಮಾಡಿಕೊಳ್ಳದೇ ಇರುವ ಮಹತ್ವದ ಪ್ರಶ್ನೆ ‘ಸಮ್ಮತಿ’ಯದು. ಒಬ್ಬ ಯುವಕ ಒಂದು ಹುಡುಗಿಯನ್ನು ಪ್ರೀತಿಸಿದ ಕೂಡಲೆ ಅವಳು ಅದನ್ನು ಒಪ್ಪಲೇಬೇಕೆ? ಒಂದು ವೇಳೆ ಒಪ್ಪಿಕೊಂಡ ನಂತರದಲ್ಲಿ ಹೊಂದಾಣಿಕೆ ಆಗುತ್ತಿಲ್ಲ ಎನಿಸಿದರೆ ಹೊರಬರುವ ದಾರಿಯೇ ಇಲ್ಲವೆ? ಮದುವೆ ನಿಶ್ಚಯವಾಗಿದ್ದು, ಯಾವುದೋ ಹಂತದಲ್ಲಿ ಆಗದು ಎನಿಸಿದರೆ ಆ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲವೆ? ದೈಹಿಕ ಸಂಬಂಧಕ್ಕೆ ನಿರಾಕರಿಸಿದರೆ ಆಕೆಯ ಮಾತಿಗೆ ಮನ್ನಣೆಯೇ ಇಲ್ಲವೆ?

‘ಪೆನ್‌ಡ್ರೈವ್’ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗೆ ಬುದ್ಧಿ ಕಲಿಸುವ ಸಲುವಾಗಿ, ಆತ ಎಸಗಿದ ಕೃತ್ಯಗಳನ್ನು ಜಾಹೀರು ಮಾಡಿದವರಿಗೆ, ಆ ವಿಡಿಯೊ ದೃಶ್ಯಗಳಲ್ಲಿರುವ ಹೆಣ್ಣುಮಕ್ಕಳ ಬದುಕು ಕೇವಲವಾಯಿತಲ್ಲವೇ? ಇಂತಹ ಎಷ್ಟೋ ಪ್ರಕರಣಗಳು, ತನಗೆ ದಕ್ಕದ್ದು ಬೇರೆ ಯಾರಿಗೂ ದಕ್ಕಬಾರದು ಎಂಬ ದುಷ್ಟ ಮನಃಸ್ಥಿತಿ, ಬೆದರಿಕೆ, ದೌರ್ಜನ್ಯ, ಕಗ್ಗೊಲೆ, ಮಾನಹಾನಿ, ತೇಜೋವಧೆ, ಆ್ಯಸಿಡ್ ದಾಳಿಯಂತಹ ಬೇರೆ ಬೇರೆ ರೂಪಗಳಲ್ಲಿ ಹೆಣ್ಣುಮಕ್ಕಳ ಅಸ್ತಿತ್ವವನ್ನೇ ಚಿವುಟಿ ಹಾಕುತ್ತಿವೆ. ಅತ್ಯಂತ ಉನ್ನತ ಹುದ್ದೆಯಲ್ಲಿ ಇರುವ ಹೆಣ್ಣುಮಕ್ಕಳಿಂದ ಹಿಡಿದು ಕೊಟ್ಟಕೊನೆಯ ಮಹಿಳೆಯವರೆಗೆ ಹಲವಾರು ಮಂದಿ ಇದನ್ನು ಬೇರೆ ಬೇರೆ ಹಂತದಲ್ಲಿ ಅನುಭವಿಸುತ್ತಿದ್ದಾರೆ. ಮಾತಿಗೆ ಒಪ್ಪದ ಹೆಣ್ಣುಗಳು ಇವರಿಗೆ ಸೊಕ್ಕಿನ ಹೆಣ್ಣುಗಳಂತೆ ಕಾಣುತ್ತಾರೆ. ಅವರ ದಮನ ಹೀಗೆ ಬೇರೆ ಬೇರೆ ನೆಲೆಗಳಲ್ಲಿ ನಡೆಯುತ್ತಿದೆ. ಹೀಗಾಗಿ, ಎಷ್ಟೆಲ್ಲ ಅಭಿವೃದ್ಧಿ ಸಾಧಿಸಿದ್ದೇವೆ ಅಂದುಕೊಳ್ಳುವಾಗಲೂ ನಾವು ಇನ್ನಷ್ಟು ಮುಂದುವರಿಯುವ ಬದಲು ಹಿಮ್ಮುಖವಾಗಿ ಚಲಿಸುತ್ತಿದ್ದೇವೆ ಎನಿಸುತ್ತದೆ.

ಅತ್ಯಾಚಾರ, ದೌರ್ಜನ್ಯ ನಡೆದಾಗ ಬೊಬ್ಬೆ ಹೊಡೆದು, ಉಳಿದಂತೆ ಸಂಸ್ಕೃತಿಯ ಮಂತ್ರ ಪಠಿಸುವ ಆಷಾಢಭೂತಿತನ ಎಷ್ಟೆಲ್ಲ ಪ್ರಕರಣಗಳ ನಂತರವೂ ಮತ್ತೆ ಮತ್ತೆ ಅನುರಣಿಸುತ್ತಲೇ ಇರುತ್ತದೆ. ಈ ಹೊತ್ತಿನಲ್ಲೂ ಮತ್ತೆ ಹೆಣ್ಣುಮಕ್ಕಳನ್ನೇ ಕೂರಿಸಿಕೊಂಡು, ಒಬ್ಬರೇ ಓಡಾಡಬಾರದು, ಫೇಸ್‍ಬುಕ್ ಅಕೌಂಟ್ ಇಟ್ಟುಕೊಳ್ಳಬಾರದು, ಗೆಳೆತನ ಮಾಡಿಕೊಳ್ಳಬಾರದು ಎಂಬಂತಹ ಒತ್ತಡಗಳನ್ನು ಹೇರುತ್ತೇವೆಯೇ ವಿನಾ ಹೆಣ್ಣುಮಕ್ಕಳನ್ನು ವಸ್ತುವನ್ನಾಗಿ ನೋಡುವ, ದೇಹವಾಗಿ ನೋಡುವ ಚಿಂತನಾ ಕ್ರಮವನ್ನು ಒಟ್ಟಾಗಿ ಪ್ರಶ್ನಿಸುವುದಿಲ್ಲ.

ಹೋರಾಟ ನಡೆಯಲಿ, ಆರೋಪಿಗಳಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ ನಮ್ಮ ಗಮನ ಇಂತಹ ಪ್ರಕರಣಗಳು ನಡೆದಾಗೆಲ್ಲ ಮುದುಡುವ ಹೆಣ್ಣುಮಕ್ಕಳ ಬದುಕನ್ನು ಅರಳಿಸುವ ಕಡೆಗೆ, ಭೀತರಾದ ಅವರಲ್ಲಿ ಧೈರ್ಯ ತುಂಬುವ ಕಡೆಗೆ ಇರಬೇಕು. ಅವರ ಬದುಕನ್ನು ಮತ್ತಷ್ಟು ಮುದುಡಿಸುವ ಕ್ರಮಗಳು ದೌರ್ಜನ್ಯ ಮಾಡುವ ಮನಃಸ್ಥಿತಿಗೇ ಬಲ ತುಂಬಿ ದಬ್ಬಾಳಿಕೆ ಇನ್ನಷ್ಟು ಹೆಚ್ಚುವಂತೆ ಮಾಡುತ್ತವೆ. ನಾವು ಸುತ್ತಲಿನ ಹೆಣ್ಣುಮಕ್ಕಳಿಗೆ ಬದುಕು ಕಟ್ಟಿಕೊಳ್ಳುವ ರೀತಿಯಲ್ಲಿ, ದೌರ್ಜನ್ಯವನ್ನು ಪ್ರಶ್ನಿಸುವ ದಿಸೆಯಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.