ನಾನು ಸಂಸ್ಕೃತ ಭಾಷೆ ಹಾಗೂ ಸಾಹಿತ್ಯದ ಪ್ರೇಮಿ. ಸಂಸ್ಕೃತ ಸಾಹಿತ್ಯವನ್ನು ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಮಂತ್ರಭಾಗವೂ ಅಲ್ಪ ಸ್ವಲ್ಪ ಗೊತ್ತಿದೆ. ನಿರೀಕ್ಷಣಾ ಜಾಮೀನಿಗೆ ಇಷ್ಟು ಸಾಕು ಎಂದು ಭಾವಿಸಿ ಮುಂದುವರಿಯಬಹುದು. ಇಂದು ನಮ್ಮ ದೇಶದಲ್ಲಿ 18 ಸಂಸ್ಕೃತ ವಿಶ್ವವಿದ್ಯಾಲಯಗಳಿವೆ. ಪ್ರತಿಯೊಂದಕ್ಕೂ ಸಂಲಗ್ನಗೊಂಡಿರುವ ಹತ್ತಾರು ಸಂಶೋಧನಾ ಕೇಂದ್ರಗಳಿವೆ. ಕರ್ನಾಟಕದಲ್ಲಿಯೇ, ಬೆಂಗಳೂರಿನಲ್ಲಿ ಒಂದು ಸಂಸ್ಕೃತ ವಿಶ್ವವಿದ್ಯಾಲಯವು 2010ರಲ್ಲಿ ಸ್ಥಾಪಿಸಲ್ಪಟ್ಟಿತು. ಈಗ, 2022ರಲ್ಲಿ, ಅದರ ಮೂಲಸೌಕರ್ಯ ಅಭಿವೃದ್ಧಿಗಾಗಿ ₹ 320 ಕೋಟಿ ಅನುದಾನ ಒದಗಿಸುವ ಅವಶ್ಯಕತೆ ಇದೆಯೇ?

ಈಗಾಗುತ್ತಿರುವ ಅಥವಾ ಆಗಬೇಕಾದ ಚರ್ಚೆಯ ಕೇಂದ್ರವು ಸಂಸ್ಕೃತ ಭಾಷೆಯ ಪ್ರಾಚೀನತೆಯಾಗಲಿ, ಸಂಸ್ಕೃತ ಸಾಹಿತ್ಯದ ಸ್ವೋಪಜ್ಞತೆಯಾಗಲಿ, ಅದರ ವಿಷಯ-ವೈಶಾಲ್ಯವಾಗಲಿ ಅಲ್ಲ. ಇವೆಲ್ಲವೂ ಈಗಾಗಲೇ ಎಲ್ಲರೂ ಒಪ್ಪಿಕೊಂಡಿರುವ ಸಂಗತಿಗಳು. ಚರ್ಚೆಯಾಗಬೇಕಾಗಿರುವುದು ಅದರ ಅವಶ್ಯಕತೆ ಇಂದು– ವಿದ್ಯಾರ್ಥಿಗಳಿಗೆ ಹಾಗೂ ಒಟ್ಟಾರೆ ಸಮಾಜಕ್ಕೆ– ಇದೆಯೇ ಎಂಬುದು.

ವಿದ್ಯಾರ್ಥಿಗಳು ಅನೇಕ ಕಾರಣಗಳಿಗಾಗಿ ಒಂದು ವಿಷಯವನ್ನು ಅಧ್ಯಯನಕ್ಕೆ ಆರಿಸಿಕೊಳ್ಳುತ್ತಾರೆ. ಮೊದಲನೆಯದು, ಆ ವಿಷಯದ ಕುರಿತು ಅವರಿಗಿರುವ ಕುತೂಹಲ ಹಾಗೂ ಆಸಕ್ತಿ. ಆದರೆ, ಹೆಚ್ಚಿನ ವಿದ್ಯಾರ್ಥಿಗಳ ಅತಿ ಮುಖ್ಯ ಕಾರಣವೆಂದರೆ, ಅವರು ಕೈಗೊಳ್ಳುವ ಅಧ್ಯಯನ ಒಂದಲ್ಲಾ ಒಂದು ಬಗೆಯಲ್ಲಿ ಅವರಿಗೆ ಜೀವನ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂಬುದು. ಹಾಗಾಗಬೇಕಾದರೆ ಆ ವಿಷಯ ಹಾಗೂ ಭಾಷೆ ಒಂದಲ್ಲಾ ಒಂದು ಬಗೆಯ ಉದ್ಯೋಗಕ್ಕೆ ಅಥವಾ ವೃತ್ತಿಗೆ ಸಂಬಂಧಿಸಿರಬೇಕು. ಕೃಷಿಯಿಂದ ಪ್ರಾರಂಭಿಸಿ, ಹೋಟೆಲ್ ಉದ್ಯಮ, ಪತ್ರಿಕೋದ್ಯಮ, ವೈದ್ಯಕೀಯ, ತಾಂತ್ರಿಕ ಉದ್ಯಮಗಳು ಇತ್ಯಾದಿ ಯಾವ ವೃತ್ತಿಗೂ ಅಥವಾ ಉದ್ಯಮಕ್ಕೂ ಸಂಸ್ಕೃತ ಭಾಷಾ-ಸಾಹಿತ್ಯಗಳ ಅಧ್ಯಯನ ಇಂದು ನೆರವಾಗುವುದಿಲ್ಲ. ಎಂದ ಮೇಲೆ ಯಾವ ವಿದ್ಯಾರ್ಥಿಗಳು– ಪೋಷಕರು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಒಲವು ತೋರಿಸುತ್ತಾರೆ?

ಈ ಸಂದರ್ಭದಲ್ಲಿ ‘ನಿಮ್ಮ ಹೆಸರಿನಲ್ಲಿಯೇ ಸಂಸ್ಕೃತ ಪದವಿದೆಯಲ್ಲಾ! ಅದನ್ನು ಬದಲಾಯಿಸಿ ಕೊಳ್ಳುತ್ತೀರೇನು?’ ಎಂದು ಈ ಚರ್ಚೆಯ ಸಂದರ್ಭದಲ್ಲಿ ಸಂಸತ್ ಸದಸ್ಯರೊಬ್ಬರು ಪ್ರತಿಕ್ರಿಯಿಸಿದರೆಂದು ತಿಳಿದು ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಜೀವನ ನಿರ್ವಹಣೆಗಾಗಿ, ಕೆಲಸಕ್ಕಾಗಿ ಅಲೆಯಬೇಕಾಗಿ ಬಂದಾಗ, ಈ ಸರಳೀಕೃತ- ಚಾತುರ್ಯಭರಿತ ಹೇಳಿಕೆಗಳು ಅರ್ಥಹೀನವೆಂದು ಗೊತ್ತಾಗುತ್ತದೆ.

ಈ ಹೇಳಿಕೆಯ ಒಂದು ಅಸಾಧಾರಣ ಉದಾಹರಣೆಯೆಂದರೆ, ಕಳೆದ ಶತಮಾನದ 70-80ರ ದಶಕದಲ್ಲಿ ಅಮೆರಿಕದಲ್ಲಿ ಇಂಗ್ಲಿಷ್ ಅಧ್ಯಯನಕ್ಕೆ ಇದ್ದ ಸ್ಥಾನ. ಆಗ, ಹೆಚ್ಚಿನ ಅವಕಾಶಗಳಿದ್ದುದು ಉದ್ಯಮ ಕ್ಷೇತ್ರದಲ್ಲಿ. ಹೀಗಾಗಿ, ವಿದ್ಯಾರ್ಥಿಗಳು ಕಾಮರ್ಸ್, ಎಂಜಿನಿಯರಿಂಗ್, ವೈದ್ಯಕೀಯ ಇತ್ಯಾದಿ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇಂಗ್ಲಿಷ್ ಎಂ.ಎ./ ಪಿಎಚ್.ಡಿ ಪದವೀಧರರಿಗೆ ಯಾವ ಕಾಲೇಜಿನಲ್ಲಿಯೂ ವಿಶ್ವವಿದ್ಯಾಲಯದಲ್ಲಿಯೂ ಕೆಲಸ ಸಿಗುತ್ತಿರಲಿಲ್ಲ. ಈ ಪರಿಸ್ಥಿತಿ ಎಷ್ಟು ಉಲ್ಬಣವಾಗಿತ್ತೆಂದರೆ, ಅನೇಕ ಸ್ಟೇಟ್ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್ ವಿಭಾಗಗಳು ಮುಚ್ಚಲ್ಪಟ್ಟವು. ಕೆಲವು ಪದವೀಧರರು ಆತಂಕದಿಂದ ಆದರೆ ಅನಿವಾರ್ಯವಾಗಿ, ಇಂಗ್ಲಿಷ್ ಭಾಷೆಯನ್ನು ಕಲಿಸಲು ತಂಡ ತಂಡವಾಗಿ ಗಲ್ಫ್ ರಾಷ್ಟ್ರಗಳಿಗೆ ಹೋಗುತ್ತಿದ್ದರು. ‘ನ್ಯೂಯಾರ್ಕ್ ಟೈಮ್ಸ್’ನಂತಹ ಖ್ಯಾತ ಪತ್ರಿಕೆಗಳು ‘ಬೋಧನೆಯ ಹೊರತಾಗಿ ಇಂಗ್ಲಿಷ್ ಪದವೀಧರರು ಬೇರೇನು ಮಾಡಬಹುದು?’ ಎಂಬ ವಿಷಯದ ಕುರಿತು ದೀರ್ಘ ಲೇಖನಗಳನ್ನು ಪ್ರಕಟಿಸುತ್ತಿದ್ದವು. ನಾನು ಅಮೆರಿಕದಿಂದ ಕರ್ನಾಟಕಕ್ಕೆ ಮರಳಿದುದೂ ಅಲ್ಲಿ ಅರೆಕಾಲಿಕ ಕೆಲಸವೂ ಸಿಗುವುದಿಲ್ಲ ಎಂಬ ಕಾರಣಕ್ಕೆ.

ಭಾಷಾವಾರು ರಾಜ್ಯಗಳ ಸ್ಥಾಪನೆಯ ಮುಖ್ಯ ಉದ್ದೇಶವೇ ಆಯಾಯ ರಾಜ್ಯಗಳ ಭಾಷೆಯನ್ನು, ಸಾಹಿತ್ಯ-ಸಂಸ್ಕೃತಿಗಳನ್ನು ಅಭಿವೃದ್ಧಿಗೊಳಿಸುವುದು. ಆ ಕಾರ್ಯದಲ್ಲಿ ನಿರತವಾಗಿರುವ ಸಂಸ್ಥೆಗಳಿಗೆ ಅವಶ್ಯಕವಾದ ಆರ್ಥಿಕ- ಸಾಂಸ್ಥಿಕ ನೆರವನ್ನು ನೀಡುವುದು. ಈ ದಿಕ್ಕಿನಲ್ಲಿ ಇತ್ತೀಚೆಗೆ ಅನೇಕ ಕನ್ನಡ ಸಂಸ್ಥೆಗಳು, ವಿಭಾಗಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅನೇಕ ಸರ್ಕಾರಿ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿ ಪೂರ್ಣಪ್ರಮಾಣದ ಅಧ್ಯಾಪಕ-ಪ್ರಾಧ್ಯಾಪಕರಿಲ್ಲ. ಇನ್ನು ಕನ್ನಡಕ್ಕೆಂದೇ ಇರುವ ಕನ್ನಡ ವಿಶ್ವವಿದ್ಯಾಲಯದ ಕಥೆಯನ್ನು ಹೇಳುವುದೇ ಬೇಡ. ಸಂಸ್ಕೃತ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ (ಅದೂ ಈ ಕೋವಿಡ್ ಕಾಲದಲ್ಲಿ) ₹ 320 ಕೋಟಿ ಕೊಡಲು ಕರ್ನಾಟಕ ಸರ್ಕಾರದ ಬಳಿ ಹಣವಿದೆ ಎಂದಾದರೆ, 2020-21ರಲ್ಲಿ, ಕನ್ನಡ ವಿಶ್ವವಿದ್ಯಾಲಯದ ಉದ್ಯೋಗಿಗಳಿಗಾಗಿ ಸಂಬಳ ಕೊಡಲು ಅಲ್ಲಿನ ಕುಲಪತಿಗಳು- ವಿತ್ತಾಧಿಕಾರಿಗಳು ಕೇವಲ ₹ 50 ಲಕ್ಷಕ್ಕಾಗಿ ಮುಖ್ಯಮಂತ್ರಿಯಿಂದ ಹಿಡಿದು ಇತರ ಎಲ್ಲಾ ಮಂತ್ರಿವರೇಣ್ಯರನ್ನು ಹಾಗೂ ಶಾಸಕರನ್ನು ಕಾಡಿ ಬೇಡುವಂತಾದುದು ಹೇಗೆ? ಅಥವಾ ಸಂಸ್ಕೃತ ‘ದೇವ ಭಾಷೆ’ಯಾದುದರಿಂದ, ಆ ಭಾಷೆಯನ್ನು ಆಧರಿಸಿದ ಕಾರ್ಯಕ್ಕಾಗಿ ದೇವಲೋಕದಿಂದಲೇ ಸುವರ್ಣವೃಷ್ಟಿ ಆಗುತ್ತದೆಯೇ?

ಇಂದಿನ ಕಾಲಘಟ್ಟದಲ್ಲಿ, ಪ್ರತಿಯೊಂದು ರಾಜ್ಯ ಸರ್ಕಾರದ ಕರ್ತವ್ಯವೂ ಮೊದಲಿಗೆ ಆಯಾಯ ರಾಜ್ಯಗಳ ರಾಜ್ಯಭಾಷೆಗಳನ್ನು ಹಾಗೂ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವುದು ಮತ್ತು ಎಲ್ಲಾ ವಿಶಿಷ್ಟ ಉದ್ಯಮಗಳು ಬೇಡುವ ಇಂಗ್ಲಿಷ್ ಭಾಷೆಯ ಬೋಧನೆಗೆ ಅನುವು ಮಾಡಿಕೊಡುವುದು. ಈ ಪ್ರಬುದ್ಧತೆಯನ್ನು ಕರ್ನಾಟಕ ಸರ್ಕಾರ ಪ್ರದರ್ಶಿಸುತ್ತದೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.