ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಪಡೆಯುವ ಕೆಲವು ಪ್ರಭಾವಿ ಜಾತಿಗಳ ಶಿಕ್ಷಣ ಸಂಸ್ಥೆಗಳು, ಪ್ರತಿಭೆಗಳನ್ನು ಪೋಷಿಸದೆ ತಮ್ಮವರ ಜೇಬು ತುಂಬಿಸುತ್ತಿವೆ

ಅನುದಾನಿತ ಸಂಸ್ಥೆಗಳಲ್ಲಿ ಮೀಸಲಾತಿ ಕಡ್ಡಾಯ (ಪ್ರ.ವಾ., ಜೂನ್ 7) ಕುರಿತ ಯುಜಿಸಿ ಸುತ್ತೋಲೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಸಾಮಾಜಿಕ ನ್ಯಾಯಪಾಲನೆ ಕಡೆಗಿನ ಒಂದು ಸಕಾರಾತ್ಮಕ ನಡೆ ಎಂದು ಪರಿಗಣಿಸಬಹುದಾಗಿದೆ.

ಯುಜಿಸಿ ಹೊರಡಿಸಿರುವ ಈ ಸುತ್ತೋಲೆ ಕಾರ್ಯರೂಪಕ್ಕೆ ಬಂದರೆ, ಕೆಲವೇ ಜಾತಿಗಳ ಸಾಮ್ರಾಜ್ಯದಂತಾಗಿರುವ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಸಾಮಾಜಿಕ ನ್ಯಾಯದ ಬಾಗಿಲು ತೆರೆದಂತಾಗುತ್ತದೆ.

‘ಸಮಾಜದ ಅನಾರೋಗ್ಯಕ್ಕೆ ಶಿಕ್ಷಣವೇ ಮದ್ದು’ ಎಂಬ ಆಶಯದಂತೆ ಕಳೆದ ಒಂದು ಶತಮಾನದಲ್ಲಿ ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆ ಸಾವಿರಾರು ಧಾರ್ಮಿಕ ಸಂಸ್ಥೆಗಳು, ವಿವಿಧ ಸಾಮಾಜಿಕ ಸಂಘಟನೆಗಳು ಹಾಗೂ ಮಠಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದವು. ಒಂದಷ್ಟು ವರ್ಷಗಳ ಕಾಲ ಈ ಶಿಕ್ಷಣ ಸಂಸ್ಥೆಗಳ ಎಲ್ಲಾ ಖರ್ಚುಗಳನ್ನೂ ಆ ಸಂಸ್ಥೆಗಳೇ ಭರಿಸುತ್ತಿದ್ದವು.

ಬದಲಾದ ಕಾಲಘಟ್ಟದಲ್ಲಿ ಈ ಸಂಸ್ಥೆಗಳ ಸಮಾಜೋಪಯೋಗಿ ಕಾರ್ಯವನ್ನು ಮನಗಂಡ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವೇತನಾನುದಾನಕ್ಕೆ ಒಳಪಡಿಸಿಕೊಂಡು ಆ ಸಂಸ್ಥೆಗಳ ಶಿಕ್ಷಕರ ವೇತನ, ಮೂಲ ಸೌಕರ್ಯಗಳಾದ ಕಟ್ಟಡ ನಿರ್ಮಾಣವೂ ಸೇರಿದಂತೆ ಬಹಳಷ್ಟು ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡಿಕೊಂಡು ಬಂದಿದೆ.

ಖಾಸಗಿ ಆಡಳಿತ ಮಂಡಳಿಗಳ ಮುತುವರ್ಜಿಯಿಂದ, ಸರ್ಕಾರದ ಹಣಕಾಸಿನ ಬೆಂಬಲ ದೊಂದಿಗೆ ಇಂತಹ ಶಿಕ್ಷಣ ಸಂಸ್ಥೆಗಳು ನಾಡಿನ ಪ್ರತಿಷ್ಠಿತ ಸಂಸ್ಥೆಗಳಾಗಿ ಬೆಳೆದು ನಿಂತದ್ದು ಇತಿಹಾಸ.

ಒಂದೊಮ್ಮೆ ಸಂಸ್ಥೆಯ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯ ವೇತನವನ್ನು ಸರ್ಕಾರವೇ ನೀಡಲು ಆರಂಭಿಸಿದ ಮೇಲೆ ಖಾಸಗಿ ಆಡಳಿತ ಮಂಡಳಿಗಳ ಹೊರೆ ಕಡಿಮೆಯಾಯಿತು.

ವೇತನಾನುದಾನಕ್ಕೆ ಒಳಪಡುವುದೆಂದರೆ ಆ ಉದ್ಯೋಗಿ ಸರ್ಕಾರಿ ಉದ್ಯೋಗಿಯೇ ಆಗಿ ಕಾಯಂಗೊಳ್ಳುವುದು. ಸರ್ಕಾರ ತಾನೇ ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುವಾಗ ಪ್ರವೇಶ ಪರೀಕ್ಷೆ, ಮೀಸಲಾತಿ ನಿಗದಿ, ಜಾತಿ, ಲಿಂಗ, ಪ್ರದೇಶಗಳ ತಾರತಮ್ಯ ರಹಿತವಾದ ನೇಮಕಾತಿ ಪ್ರಕ್ರಿಯೆಯನ್ನು ಪಾಲಿಸಲೇಬೇಕು.

ಆದರೆ ಖಾಸಗಿ ಸಂಸ್ಥೆಗಳು ಅನುದಾನಕ್ಕೆ ಒಳಪಟ್ಟ ಸಂದರ್ಭದಲ್ಲಿ ಇಂತಹ ಪ್ರಕ್ರಿಯೆಯ ಪಾಲನೆ ಕಡ್ಡಾಯವಾಗದೆ, ಆಡಳಿತ ಮಂಡಳಿಗಳು ತಮ್ಮಲ್ಲಿ ಲಭ್ಯರಾದವರ ಹೆಸರನ್ನು ಸಂಬಂಧಿಸಿದ ಪ್ರಾಧಿಕಾರದ ಮುಂದೆ ಮಂಡಿಸಿದಾಗ ಅಂಥ ಹೆಸರುಗಳನ್ನೇ ಅಂತಿಮಗೊಳಿಸಲಾಗುತ್ತಿತ್ತು.

ಈಗ ಯುಜಿಸಿ ಹೊರಡಿಸಿರುವ ಸುತ್ತೋಲೆಯ ಮಹತ್ವ ಅರಿವಾಗಬೇಕಾದರೆ ಅನುದಾನಿತ ಸಂಸ್ಥೆಗಳ ಉದ್ಯೋಗಿಗಳ ಸಾಮಾಜಿಕ ಪ್ರತಿನಿಧೀಕರಣವನ್ನು ದಾಖಲಿಸಿಕೊಳ್ಳಬೇಕು.

ಉದಾಹರಣೆಗೆ ನಮ್ಮ ರಾಜ್ಯದ ಪ್ರತಿಷ್ಠಿತ ಮಠಗಳಿಂದ, ಜಾತಿ ಸಂಘಗಳಿಂದ ನಡೆಯುತ್ತಿರುವ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿ ಇರುವವರು ಯಾರು ಎಂದು ಗಣತಿ ಮಾಡಿದರೆ ಆಯಾ ಮಠದ, ಜಾತಿ ಸಂಘಗಳ ಶಾಲಾ ಕಾಲೇಜುಗಳಲ್ಲಿ ಅದೇ ಜಾತಿಯವರು ಶೇ 90ಕ್ಕಿಂತಲೂ ಹೆಚ್ಚಿದ್ದಾರೆ.

ಅನುದಾನಕ್ಕೆ ಒಳಪಟ್ಟ ಕಳೆದ 40-50 ವರ್ಷಗಳಲ್ಲಿ ಆ ವಿದ್ಯಾಸಂಸ್ಥೆಗಳಲ್ಲಿ ಅವರದೇ ಜಾತಿಯವರನ್ನು ಹೊರತುಪಡಿಸಿ ಬೇರೆ ಯಾರೂ ಸಂಸ್ಥೆಯ ಮುಖ್ಯಸ್ಥರಾಗಿ ಚುಕ್ಕಾಣಿ ಹಿಡಿದಿಲ್ಲ. ಯಾಕೆಂದರೆ ಆ ಸ್ಥಾನಗಳಿಗೆ ತಮ್ಮ ಜಾತಿಯವರನ್ನು ಹೊರತುಪಡಿಸಿ ಸಾಮಾಜಿಕ ನ್ಯಾಯ ಪಾಲನೆಯಾಗುವಂತೆ ನೇಮಕಾತಿ ಪ್ರಕ್ರಿಯೆಯನ್ನೇ ನಡೆಸಿಲ್ಲ.

ಅನುದಾನಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿಯಿಂದ ಬೋಧಕರ ವೇತನ, ಕಟ್ಟಡ ನಿರ್ಮಾಣ ಮೊದಲಾದ ಕೆಲಸ ಕಾರ್ಯಗಳಿಗೆ ವಾರ್ಷಿಕವಾಗಿ ಹತ್ತಾರು ಕೋಟಿ ರೂಪಾಯಿ ಅನುದಾನದ ರೂಪದಲ್ಲಿ ಹರಿದು ಬರುತ್ತದೆ.

ಜನರ ತೆರಿಗೆಯಿಂದ ಪಾವತಿಯಾಗುವ ಈ ಹಣದಲ್ಲಿ, ಪ್ರಭಾವಿ ಜಾತಿಗಳು ತಮ್ಮ ಜಾತಿ ಹೆಸರಲ್ಲಿ ಕಟ್ಟಿಕೊಂಡ ಸಂಸ್ಥೆಗಳಿಗೆ ತಮ್ಮವರನ್ನೇ ನೇಮಿಸಿಕೊಂಡು ಅವರ ಕಿಸೆಯನ್ನೇ ತುಂಬಿಸುವ ಕಾರ್ಯದಲ್ಲಿ ನಿರತವಾಗಿವೆ.

ತಮ್ಮ ಸ್ಥಳೀಯ ಪರಿಸರದ ವಿವಿಧ ಜಾತಿ ವಲಯಗಳ ಪ್ರತಿಭೆಗಳನ್ನು ಅನ್ವೇಷಿಸಬಹುದಾಗಿದ್ದ ಮೀಸಲಾತಿಯ ಸುಳಿವನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ, ಜಾತಿಯ ಮಹಾ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿವೆ.

ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕವಾಗಿ ಇರಿಸಬೇಕಾಗಿದ್ದ ಸರ್ಕಾರಕ್ಕೂ ಇದು ಬೇಕಾಗಿರಲಿಲ್ಲ. ಜಾತಿಯ ಮಾನದಂಡವನ್ನು ಹೊರತುಪಡಿಸಿ ಬೇರಾವ ಅರ್ಹತೆ ಇಲ್ಲದವರೂ ಇಲ್ಲಿ ಭದ್ರವಾಗಿ ಬೇರೂರಿಬಿಟ್ಟರು. ಸಮಾಜಕ್ಕೆ ಮದ್ದಾಗಬೇಕಾಗಿದ್ದ ಶಿಕ್ಷಣ ಕ್ಷೇತ್ರವೂ ಪಟ್ಟಭದ್ರರ ಹಿಡಿತದಲ್ಲಿದೆ.

ಒಂದೆಡೆ ಖಾಸಗಿ ರಂಗದಲ್ಲೂ ಮೀಸಲಾತಿಯನ್ನು ನಿಗದಿಪಡಿಸಬೇಕು ಎಂಬ ಚರ್ಚೆ ರೂಪುಗೊಳ್ಳುತ್ತಿರುವ ಹೊತ್ತಿಗೆ, ಕನಿಷ್ಠ ಸರ್ಕಾರದ ಅನುದಾನವನ್ನು ಕೋಟಿ ಕೋಟಿ ರೂಪಾಯಿಗಳಲ್ಲಿ ಪಡೆದುಕೊಳ್ಳುವ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಾದರೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದೇ ಹೋದರೆ ಸಾಮಾಜಿಕ ಅನ್ಯಾಯವಷ್ಟೇ ಅಲ್ಲ, ಕ್ರೌರ್ಯ ಎಂದೇ ಪರಿಗಣಿಸಬೇಕಾಗುತ್ತದೆ.

ಯುಜಿಸಿಯ ಈ ಸುತ್ತೋಲೆ ಕೇವಲ ಉನ್ನತ ಸಂಸ್ಥೆಗಳಿಗೆ ಅನ್ವಯವಾಗುತ್ತದಾದರೂ ಅನುದಾನಕ್ಕೊಳಪಟ್ಟ ಎಲ್ಲಾ ಹಂತದ ಸಂಸ್ಥೆಗಳಿಗೂ ಅದನ್ನು ವಿಸ್ತರಿಸಬೇಕಾದ ಜವಾಬ್ದಾರಿ ಸರ್ಕಾರದ್ದೇ ಆಗಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಶಿಕ್ಷಣ ಸಂಸ್ಥೆಗಳ ಮೂಲಕ ನಿರ್ಮಾಣವಾಗುತ್ತಿರುವ ನವ ವರ್ಣಾಶ್ರಮ ಪದ್ಧತಿಯನ್ನು ತಡೆಯಬೇಕಾಗಿದೆ. ಪ್ರಸ್ತುತ ಈ ಸುತ್ತೋಲೆಯಿಂದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರಗಿಟ್ಟಿದ್ದು, ಆ ಸಂಸ್ಥೆಗಳೂ ಮೀಸಲಾತಿಯ ರೋಸ್ಟರ್ ಅನ್ವಯವೇ ನೇಮಕಾತಿ ನಡೆಸುವಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆಯ ಈ ಹೊತ್ತಿಗಾದರೂ ಅವರ ಸಾಮಾಜಿಕ ಸಮಾನತೆಯ ಆಶಯವನ್ನು ಕಾರ್ಯರೂಪಕ್ಕೆ ತರುವ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ.

ಸಾಮಾಜಿಕ ಅಸಮಾನತೆ ನಿವಾರಣೆಯ ದೃಷ್ಟಿಯಿಂದ ಬಹು ಮಹತ್ವದ ನಿರ್ಧಾರವಾದ ಈ ಸುತ್ತೋಲೆಯನ್ನು ಕೇಂದ್ರ ಮಾನವ ಸಂಪನ್ಮೂಲ ಹಾಗೂ ಉನ್ನತ ಶಿಕ್ಷಣ ಇಲಾಖೆಗಳು ಕಚೇರಿ ಕಡತದ ಒಂದು ಹಾಳೆಯನ್ನಾಗಿ ಮಾತ್ರ ಪರಿಗಣಿಸದೆ, ಕಾಲಕಾಲಕ್ಕೆ ಸೂಕ್ತ ಮಾಹಿತಿಯನ್ನು ಸಂಗ್ರಹಿಸಿ, ಇದರ ಜಾರಿಯಲ್ಲಿರುವ ತೊಡಕುಗಳನ್ನು ನಿವಾರಿಸುವಲ್ಲಿಯೂ ಪ್ರಯತ್ನಶೀಲವಾಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.