ಒಂದು ರಾಜಕೀಯ ಪಕ್ಷದ ಹಿರಿಯ ಪದಾಧಿಕಾರಿಗಳು ತಮ್ಮ ಪ್ರವಾಸ ಕಾಲದಲ್ಲಿ ದಲಿತರ ಮನೆಯಲ್ಲಿ ಉಪಾಹಾರ, ಭೋಜನ ಸೇವಿಸುವುದನ್ನು ಇತ್ತೀಚೆಗೆ ರೂಢಿಸಿಕೊಂಡಿದ್ದಾರೆ. ಅದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ ಕೂಡ. ಅಸ್ಪೃಶ್ಯತೆ ನಿವಾರಣೆಯ ಒಂದು ಸಂಕೇತವಾಗಿ ಅವರು ಹೀಗೆ ಮಾಡುತ್ತಿದ್ದಾರೆನ್ನುವುದು ನಿರ್ವಿವಾದ. ದಲಿತರು ಹೋಟೆಲಿನಿಂದ ಊಟ, ತಿಂಡಿ ತಂದು ಬಡಿಸುತ್ತಾರೆ. ಇನ್ನು ಕೆಲವರ ಮನೆಯಲ್ಲಿ ಬ್ರಾಹ್ಮಣರನ್ನು ಕರೆದು ಅಡುಗೆ ಮಾಡಿಸುತ್ತಾರೆ. ಅದು ಸಹಜವೇ.

ಏಕೆಂದರೆ ದೊಡ್ಡ ರಾಜಕಾರಣಿಯ ಹಿಂದೆ ನಡೆದು ಬರುವ ಹಿಂಬಾಲಕರ ದಂಡಿಗೆ ಮನೆಯಲ್ಲಿ ಅಡುಗೆ ಮಾಡುವಷ್ಟು ಸಾಮರ್ಥ್ಯವಾಗಲೀ ಪರಿಕರಗಳಾಗಲೀ ಕಸುಬುದಾರಿಕೆಯಾಗಲೀ ಅವರಲ್ಲಿ ಇರುವುದಿಲ್ಲ. ಪರಾವಲಂಬಿಯಾಗುವುದು ಅನಿವಾರ್ಯವಾಗುತ್ತದೆ.

ಆದರೆ, ನಮ್ಮ ಮುಖಂಡರಿಗೆ ತಿಳಿಯದೇ ಇರುವ ವಿಷಯವೇನೆಂದರೆ ದಲಿತರ ಮನೆಯಲ್ಲಿ ಅಸ್ಪೃಶ್ಯತೆ ಆಚರಣೆ ಇಲ್ಲ ಎನ್ನುವುದು. ಇವರು ಮಾಡುತ್ತಿರುವುದು ಹೇಗಿದೆಯೆಂದರೆ, ಮುಲ್ಲಾ ನಸುರುದ್ದೀನ್ ಒಮ್ಮೆ ಬೀದಿಯಲ್ಲಿ ನೆಲವನ್ನು ಕೆದಕುತ್ತಾ ಏನನ್ನೋ ಹುಡುಕುತ್ತಿದ್ದನಂತೆ. ದಾರಿಹೋಕನೊಬ್ಬ ‘ಏನನ್ನು ಹುಡುಕುತ್ತಿದ್ದೀಯಾ ಮುಲ್ಲಾ’ ಎಂದು ಕೇಳಿದ. ‘ನನ್ನ ಮನೆಯ ಬೀಗದ ಕೈ ಕಳೆದುಹೋಗಿದೆ’ ಎಂದ ಮುಲ್ಲಾ. ಸರಿ, ಇಬ್ಬರೂ ಮಂಡಿಯೂರಿ ಹುಡುಕುತ್ತಲೇ ಇದ್ದರು. ಸ್ವಲ್ಪ ಹೊತ್ತು ಕಳೆದ ಮೇಲೆ ಆ ಮನುಷ್ಯ ‘ಕೀಲಿ ಕೈ ಎಲ್ಲಿ ಕಳೆಯಿತು ಎಂದು ನಿನಗೆ ನೆನಪಿಲ್ಲವೇ’ ಎಂದ. ಅದಕ್ಕೆ ಮುಲ್ಲಾ ‘ನೆನಪಿದೆ, ನನ್ನ ಮನೆಯಲ್ಲೇ’ ಅಂದ! ‘ಮತ್ತೆ ಇಲ್ಲಿ ಯಾಕೆ ಹುಡುಕುತ್ತಿದ್ದೀಯಾ?’ ಆತ ಕೇಳಿದ. ‘ಇಲ್ಲಿ ಹೆಚ್ಚು ಬೆಳಕಿದೆ ಅದಕ್ಕೆ!’ ಎಂದ ಮುಲ್ಲಾ. ಹೀಗಿದೆ ನಮ್ಮ ನಾಯಕರು ಅಸ್ಪೃಶ್ಯತೆಯನ್ನು ಹುಡುಕುತ್ತಿರುವ ರೀತಿ.

ಅಸ್ಪೃಶ್ಯತೆ ದಲಿತರ ಸಮಸ್ಯೆಯಲ್ಲ. ಅದು ಜಾತಿವಂತರ ಸಮಸ್ಯೆ. ಅದನ್ನು ಗಾಂಧೀಜಿ ಸರಿಯಾಗಿ ಗುರುತಿಸಿದ್ದರು. ಆದ್ದರಿಂದ ಮೇಲ್ವರ್ಗದ ಮನಃಪರಿವರ್ತನೆಗೆ ಸತತ ಪ್ರಯತ್ನ ನಡೆಸಿದ್ದರು. ಈ ವಿಷಯದಲ್ಲಿ ಅವರು ತಮ್ಮ ಪತ್ನಿ ಕಸ್ತೂರಬಾ ಅವರನ್ನು ದಂಡಿಸಲು ಹಿಂಜರಿಯಲಿಲ್ಲ. ಮೇಲ್ವರ್ಗದ ಮನಃಪರಿವರ್ತನೆ ಸುಲಭಸಾಧ್ಯವಲ್ಲ ಎಂದು ಅರಿತಿದ್ದ ಡಾ. ಅಂಬೇಡ್ಕರ್ ಮತಾಂತರದ ಪರಿಹಾರವನ್ನು ಸೂಚಿಸಿದರು.

ಗಾಂಧೀಜಿ ಭಾರತಕ್ಕೆ ಬಂದ ಹೊಸದರಲ್ಲಿ ಅಹಮದಾಬಾದಿನ ಕೋಚ್ರಾಬ್ ಎನ್ನುವಲ್ಲಿ ಸತ್ಯಾಗ್ರಹ ಆಶ್ರಮವನ್ನು ತೆರೆದರು. ಅಲ್ಲಿ ಎಲ್ಲಾ ಜಾತಿಗೆ ಸೇರಿದ 25 ಜನ ಗಂಡಸರು, 25 ಜನ ಹೆಂಗಸರು ಇದ್ದರು. ಒಂದೇ ಅಡುಗೆ ಮನೆ, ಬಚ್ಚಲು, ಬಾವಿಯನ್ನು ಬಳಸುತ್ತಿದ್ದರು. ಗಾಂಧಿಯವರ ಜಾತ್ಯತೀತ ನಡೆಗೆ ಅದು ಅಪೂರ್ಣ ಎನ್ನಿಸಿರಬೇಕು. ಅಲ್ಲಿಗೆ ದಾದಾಬಾಯಿ, ದಾನಿಬೆಹನ್ ಮತ್ತು ಅವರ ಮಗಳು ಲಕ್ಷ್ಮಿ ಅವರಿದ್ದ ಅಸ್ಪೃಶ್ಯ ಕುಟುಂಬವೊಂದನ್ನು ಕರೆತಂದರು. ಆಗ ಶುರುವಾಯಿತು ನೋಡಿ ಅಲ್ಲೋಲ ಕಲ್ಲೋಲ!? ಸವರ್ಣ ಜಾತಿಜನ ಛಿದ್ರವಾದರು. ‘ಅಡುಗೆ ಮಾಡುವುದಿಲ್ಲ’ ಎಂದರು. ಕೆಲವರು ಆಶ್ರಮ ಬಿಟ್ಟು ಹೊರಟರು. ಮಾಲೀಕ ಬಾವಿಯಿಂದ ನೀರು ಕೊಡುವುದಿಲ್ಲ ಎಂದ. ಮುಂದಿನದನ್ನು ಊಹಿಸಬಹುದು. ಶ್ರೀಮಂತ ಉದ್ಯಮಿಯೊಬ್ಬನಿಂದ ಆಶ್ರಮ ಉಳಿಯಿತು. ದಲಿತರೆಂದರೆ ಮೈಮೇಲೆ ಅಮೇಧ್ಯ ಸಿಡಿದಂತೆ ಹೌಹಾರಿ ದೂರಸರಿಯುವ ಈ ಮಾನಸಿಕತೆ (mindset) ಇಂದಿಗೂ ಮುಂದುವರೆದಿರುವುದನ್ನು ದಿನಪತ್ರಿಕೆಗಳ ಸುದ್ದಿ ಸಾರುತ್ತಲೇ ಇದೆ.

ಬಸವಣ್ಣನವರು ನಾಗಿದೇವನ ಮನೆಗೆ ಹೋಗಿದ್ದ ಸಂದರ್ಭವೇ ಬೇರೆ. ಪ್ರಯಾಣದ ಹಾದಿಯಲ್ಲಿ ಕೇಳಿಬರುತ್ತಿದ್ದ ಶಿವಸ್ತೋತ್ರದಿಂದ ಕುತೂಹಲವನ್ನು ತಾಳಿ ಯಾರಿರಬಹುದೆಂದು ನೋಡಲು ಆ ಮನೆಗೆ ಹೋದರು. ಅದು ಹೊಲೆಯ ನಾಗಿದೇವನ ಮನೆ ಎಂದು ತಿಳಿದ ಮೇಲೆ ಅವರ ಸಂತಸ ಇಮ್ಮಡಿಸಿತು. ಅಸ್ಪೃಶ್ಯತೆಯ ನಿವಾರಣೆಗೆ ಅವರು ಕಂಡುಕೊಂಡ ಮಾರ್ಗವೂ ಅನನ್ಯ. ನಮ್ಮ ಮುಖಂಡರು ತಮ್ಮ ಮನೆಗಳಲ್ಲಿ ಅದನ್ನು ಪ್ರಯತ್ನಿಸುವುದಿರಲಿ, ಮಾತಿಗಾದರೂ ಹೇಳಲು ಬಯಸುವುದಿಲ್ಲ (ಪರಸ್ಪರ ಪ್ರೇಮ ಕಾರಣದಿಂದ ನಡೆದುಹೋಗುವ ಮದುವೆಗಳನ್ನು ಬಿಟ್ಟು).

ಆದ್ದರಿಂದ, ನಮ್ಮ ರಾಜಕೀಯ ನಾಯಕರಿಗೆ ಅಸ್ಪೃಶ್ಯತೆ ನಿವಾರಣೆಯ ನಿಜವಾದ ಕಳಕಳಿಯಿದ್ದರೆ ತಾವು ಭೇಟಿ ನೀಡುವ ಊರಿನಲ್ಲಿ ‘ಅಸ್ಪೃಶ್ಯತೆಯು ಹಿಂದೂ ಧರ್ಮಕ್ಕೆ ಅಂಟಿದ ಕಳಂಕ, ಅದನ್ನು ಈಗಲಾದರೂ ಹೋಗಲಾಡಿಸುವುದು ಧರ್ಮಕ್ಕೆ ಶ್ರೇಯ’ ಎಂದು ತಮ್ಮ ತಮ್ಮ ಜಾತಿ ಜನಗಳ ಮನವೊಲಿಸಿ, ತಮ್ಮ ಅಥವಾ ಪಕ್ಷದ ಖರ್ಚಿನಲ್ಲಿಯೇ ಅವರ ಮನೆಗಳಿಗೆ ದಲಿತರನ್ನು ಊಟಕ್ಕೆ, ಉಪಾಹಾರಕ್ಕೆ ಆಹ್ವಾನಿಸಲಿ. ಅವರನ್ನು ನಡುಮನೆಯಲ್ಲಿ ಕುಳ್ಳಿರಿಸಿ (ಅಥವಾ ಊಟದ ಮೇಜಿನಲ್ಲಿ), ಊಟ ಬಡಿಸಿ, ನಾಯಕರೊಂದಿಗೆ ಮನೆಯವರೆಲ್ಲರೂ ಕುಳಿತು ಉಣ್ಣಲಿ. ಆಗ ಶಾಲೆಗೆ ಹೋಗುವ ಆ ಮನೆಯ ಮಗು ಬಿಸಿಯೂಟವನ್ನು ಎಲ್ಲಾ ಮಕ್ಕಳೊಡನೆ ಕೂತು ಮಾಡುತ್ತಾನೆ. ಕಾಲೇಜಿಗೆ ಹೋಗುವ ಮಗಳು ಇತರರೊಡನೆ ಡಬ್ಬಿಯನ್ನು ಹಂಚಿಕೊಳ್ಳುತ್ತಾಳೆ. ಅಂತಹ ಆಹ್ವಾನ ಸಿಕ್ಕರೆ ದಲಿತರು ತಾವಾಗಿಯೇ ಸೋಪು, ಶ್ಯಾಂಪುಗಳನ್ನು ಕೊಂಡು ಮಿಂದು, ಬೇಕಾದರೆ ಪರಿಮಳವನ್ನು ಪೂಸಿಕೊಂಡು ಬಂದಾರು! ಇದು ಅಸ್ಪೃಶ್ಯತೆ ನಿವಾರಣೆ ಕಾಳಜಿ ಇರುವ ಎಲ್ಲ ಸವರ್ಣೀಯ ಬಂಧುಗಳಲ್ಲಿ ನನ್ನ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.